ಶನಿವಾರ, ಮೇ 28, 2022
25 °C
ಕ್ರೀಡಾ ಸಂವಾದ

ಸಚಿನ್-ಲಾರಾ ಹೋಲಿಕೆ ಅನಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ರಿಕೆಟ್ ಲೋಕದಲ್ಲಿ ಸಚಿನ್ ತೆಂಡೂಲ್ಕರ್ ಅವರಿಗೆ ಅವರೇ ಸರಿಸಾಟಿ. ಸಾಧನೆ, ಸಾಮರ್ಥ್ಯ, ಉತ್ತಮ ನಡವಳಿಕೆ, ಕ್ರೀಡಾ ಸ್ಫೂರ್ತಿ ಇತ್ಯಾದಿ ಅಂಶಗಳನ್ನು ಗಣನೆಗೆ ತೆಗೆದುಕೊಂಡರೆ ಸಚಿನ್ ಅವರ ವ್ಯಕ್ತಿತ್ವಕ್ಕೆ ಸರಿಸಮರಾದ ಇನ್ನೊಬ್ಬ ವ್ಯಕ್ತಿ ಪ್ರಸಕ್ತ ಸಂದರ್ಭದಲ್ಲಿಯೇ ಆಗಲಿ, ಕ್ರಿಕೆಟ್ ಚರಿತ್ರೆಯಲ್ಲೇ ಆಗಲಿ ಕಾಣಸಿಗುವುದಿಲ್ಲ.ಇಂತಹ ಕ್ರಿಕೆಟಿಗನ ಬಗ್ಗೆ ಜಗತ್ತಿನಾದ್ಯಂತ ಮೆಚ್ಚುಗೆ ಇರುವುದು ಸಹಜ. ಜತೆಗೆ ಅವರ ಸಮಕಾಲೀನರಲ್ಲಿ ಅಸೂಯೆಯೂ ಇದ್ದರೆ ಅಚ್ಚರಿ ಪಡುವಂತಹದ್ದೇನಿಲ್ಲ. ಸಚಿನ್ ಟೀಕಾಕಾರರು ಆಗಿಂದಾಗ್ಗೆ ಕಲ್ಲೆಸೆಯುತ್ತಲೇ ಇರುತ್ತಾರೆ. ಆದರೆ ಸಚಿನ್ ಮಾತ್ರ ಹಿಮಾಲಯದಂತೆ ಸ್ಥಿತಪ್ರಜ್ಞ. ಯಾವುದೇ ತೆರನಾದ ಟೀಕೆ, ಆರೋಪಗಳಿಗೆ ಅವರು ವಿಚಲಿತರಾಗಿಲ್ಲ. ಕಲ್ಲಿನಂತೆ ನಿಂತು ದೇಶಕ್ಕಾಗಿ ಆಡುತ್ತಲೇ ಇದ್ದಾರೆ.

ಅವರ ದೇಶಪ್ರೇಮ ಅನನ್ಯ. ಅವರು ಇತರ ಕ್ರೀಡಾಪಟುಗಳಂತೆ ಐಷಾರಾಮದಿಂದ ಬದುಕುತ್ತಾ, ಬಾಲಿವುಡ್, ಹಾಲಿವುಡ್ ವೇದಿಕೆಗಳಲ್ಲಿ ಕಾಣಿಸಿಕೊಳ್ಳುತ್ತಾ ನೃತ್ಯ ಸಂಗೀತ ಲೋಕದಲ್ಲಿ ಹೆಜ್ಜೆ  ಹಾಕುತ್ತ ಇರಬಹುದಿತ್ತು. ಆದರೆ ಸಚಿನ್ ಅವರದು ಸಂತನಂತಹ ವ್ಯಕ್ತಿತ್ವ. ದೇಶದ ಘನತೆಯನ್ನು ಎತ್ತಿ ಹಿಡಿಯಲು ತಮ್ಮ ಶಕ್ತಿ ಮೀರಿ ಆಡುತ್ತಲೇ ಇದ್ದಾರೆ.ಇಂತಹ ಸಚಿನ್ ಬಗ್ಗೆ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಮಾತನಾಡುತ್ತಾ “ವೆಸ್ಟ್ ಇಂಡೀಸ್‌ನ ಬ್ರಯಾನ್ ಲಾರಾ ನಿಜಕ್ಕೂ ಯಶಸ್ವಿ ಆಟಗಾರ ಮತ್ತು ಸಚಿನ್‌ಗಿಂತಲೂ ಅಪ್ರತಿಮ ಕ್ರಿಕೆಟಿಗ. ಸಚಿನ್ ಭಾರತಕ್ಕೆ ಅದೆಷ್ಟು ಪಂದ್ಯಗಳನ್ನು ಗೆಲ್ಲಿಸಿ ಕೊಟ್ಟಿದ್ದಾರೆ ಎಂದು ಯಾರಾದರೂ ಲೆಕ್ಕ ಹಾಕಿದ್ದಾರಾ. ಹಾಗೆ ನೋಡಿದರೆ ಸಚಿನ್‌ಗಿಂತ ವೆಸ್ಟ್ ಇಂಡೀಸ್‌ನ ಬ್ರಿಯಾನ್ ಲಾರಾ ಅವರೇ ಅದ್ಭುತ ಆಟಗಾರ...” ಎಂದಿರುವುದು ನನ್ನಂತಹ ಕ್ರಿಕೆಟ್‌ಪ್ರಿಯರೆಲ್ಲರ ಮನಸ್ಸಿಗೆ ನೋವುಂಟು ಮಾಡಿದೆ.  ಮರುದಿನವೇ ಲಾರಾ ಮತ್ತು ಸಚಿನ್ ಅವರ ಸಾಧನೆಗೆ ಸಂಬಂಧಿಸಿದ ಅಂಕಿ-ಅಂಶಗಳು ಮಾಧ್ಯಮಗಳಲ್ಲಿ ದೊಡ್ಡ ಮಟ್ಟದಲ್ಲಿಯೇ ಪ್ರವಹಿಸಿದವು. ಸಚಿನ್ ಎದುರು ಲಾರಾ ಏನೇನೂ ಅಲ್ಲ ಎಂಬುದು ಸಾಬೀತಾಯಿತು ಬಿಡಿ. ಆದರೆ ರಿಕಿ ಪಾಂಟಿಂಗ್ ಅವರಂತಹ ಪ್ರಸಿದ್ಧ ಆಟಗಾರ ಈ ತೆರನಾದ ಹೇಳಿಕೆ ನೀಡಿರುವುದು ಯಾವುದೇ ಕಾರಣಕ್ಕೂ ಸರಿಯಲ್ಲ. ಭಾರತದ ಮಟ್ಟಿಗೆ ಹೇಳುವುದಿದ್ದರೆ ಸಚಿನ್ ನಮ್ಮ ಯುವಜನರ ಆರಾಧ್ಯ ದೈವ. ಭಾರತೀಯರ ಪಾಲಿಗೆ `ಕ್ರೀಡಾಂಗಣದಲ್ಲಿ ನಡೆದಾಡುವ ದೇವರು' ಆಗಿರುವ ಸಚಿನ್ ಅವರನ್ನು ಅವಗಣನೆ ಮಾಡಿರುವ ಪಾಂಟಿಂಗ್  ಮಾತುಗಳು ಖಂಡನಾರ್ಹ.

-ಎನ್.ವಸುಂದರಾ ಶೆಟ್ಟಿ, ಪ್ರಗತಿ ಕಾಲೋನಿ, ಬಿಜೈ, ಮಂಗಳೂರು ನಗರ .                                                                                  ***


ರಿಕಿ ಪಾಂಟಿಂಗ್ ಅವರು ಸಚಿನ್ ತೆಂಡೂಲ್ಕರ್ ಕುರಿತು ಈಚೆಗೆ  ನೀಡಿದ ವಿವಾದಾತ್ಮಕ ಹೇಳಿಕೆ ಭಾರತದಾದ್ಯಂತ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಗ್ರಾಸ ಒದಗಿಸಿದೆ. ಈ ಬಗ್ಗೆ ಓದುಗರೊಬ್ಬರು ಬರೆದ ಪತ್ರವನ್ನು ಇಲ್ಲಿ ನೀಡುತ್ತಿದ್ದೇವೆ. ನೀವೂ ಚರ್ಚೆಯಲ್ಲಿ ಪಾಲ್ಗೊಳ್ಳಬಹುದು.

ನಿಮ್ಮ ಅನಿಸಿಕೆಯನ್ನು ಈ ವಿಳಾಸಕ್ಕೆ ಬರೆಯಿರಿ

ಸಂಪಾದಕರು, ಕ್ರೀಡಾ ಸಂವಾದ,ನಂ: 75, ಎಂ.ಜಿ. ರಸ್ತೆ, ಬೆಂಗಳೂರು 560001

email: kreede@ prajavani.co.in

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.