ಸಚಿನ್ ವಿಶ್ವ ಕಂಡ ಶ್ರೇಷ್ಠ ಬ್ಯಾಟ್ಸ್‌ಮನ್:ಡೆನಿಸ್ ಲಿಲ್ಲಿ

7

ಸಚಿನ್ ವಿಶ್ವ ಕಂಡ ಶ್ರೇಷ್ಠ ಬ್ಯಾಟ್ಸ್‌ಮನ್:ಡೆನಿಸ್ ಲಿಲ್ಲಿ

Published:
Updated:
ಸಚಿನ್ ವಿಶ್ವ ಕಂಡ ಶ್ರೇಷ್ಠ ಬ್ಯಾಟ್ಸ್‌ಮನ್:ಡೆನಿಸ್ ಲಿಲ್ಲಿ

ಚೆನ್ನೈ (ಪಿಟಿಐ): `ಸಚಿನ್ ತೆಂಡೂಲ್ಕರ್ ವಿಶ್ವ ಕಂಡ ಶ್ರೇಷ್ಠ ಬ್ಯಾಟ್ಸ್‌ಮನ್. ಅವರ ಕ್ರಿಕೆಟ್ ಜೀವನ ನನ್ನಲ್ಲಿ ಅಚ್ಚರಿ ಮೂಡಿಸುತ್ತದೆ. ಆಟದ ಮೇಲಿನ ಆ ಪ್ರೀತಿ, ಯಶಸ್ಸಿಗಾಗಿನ ಆ ಹಸಿವು, ಆ ತದೇಕಚಿತ್ತತೆ ಅದ್ಭುತ~

-ಈ ರೀತಿ ಹೇಳಿದ್ದು ಆಸ್ಟ್ರೇಲಿಯಾ ತಂಡದ ಮಾಜಿ ವೇಗದ ಬೌಲರ್ ಡೆನಿಸ್ ಲಿಲ್ಲಿ.ಎಂಆರ್‌ಎಫ್ ವೇಗದ ಬೌಲಿಂಗ್ ಪ್ರತಿಷ್ಠಾನದ ಕೋಚಿಂಗ್ ನಿರ್ದೇಶಕರಾಗಿದ್ದ ಅವರು ಮಂಗಳವಾರ ಆ ಜವಾಬ್ದಾರಿಗೆ ವಿದಾಯ ಹೇಳಿದರು. ಹಾಗಾಗಿ ಈ ಪ್ರತಿಷ್ಠಾನ ಹಾಗೂ ಲಿಲ್ಲಿ ನಡುವಿನ 25 ವರ್ಷಗಳ ಸಂಬಂಧಕ್ಕೆ ತೆರೆ ಬಿದ್ದಿದೆ.1980ರ ದಶಕದಲ್ಲಿ ತಮ್ಮನ್ನು ಮುಜುಗರಕ್ಕೆ ಒಳಪಡಿಸಿದ ಘಟನೆಯೊಂದನ್ನು ಅವರು ಈ ಸಂದರ್ಭದಲ್ಲಿ ವಿವರಿಸಿದರು. ಸಚಿನ್ 14 ವರ್ಷ ವಯಸ್ಸಿನ ಹುಡುಗನಾಗಿದ್ದಾಗ ವೇಗದ ಬೌಲರ್ ಆಗುವ ಆಸೆ ಹೊತ್ತು ಇವರ ಬಳಿ ಬಂದಿದ್ದರಂತೆ. ಆದರೆ ಅದನ್ನು ಒಪ್ಪದ ಲಿಲ್ಲಿ ಕ್ರಿಕೆಟ್ ಆಟಕ್ಕೆ ದೊಡ್ಡ ಉಪಕಾರ ಮಾಡಿದರಂತೆ.`ವೇಗದ ಬೌಲರ್ ಆಗಲು ಬಂದಿದ್ದ ಅವರನ್ನು ನಾನು ತಿರಸ್ಕರಿಸಿದ್ದೆ. ಇದು ನನ್ನನ್ನು ಮುಜುಗರಕ್ಕೆ ಒಳಪಡಿಸಿತು. ಆದರೆ ನಾನು ಕ್ರಿಕೆಟ್ ಆಟಕ್ಕೆ ದೊಡ್ಡ ಉಪಕಾರ ಮಾಡಿದೆ. ಈ ಮಾತನ್ನು ನಾನು ತಮಾಷೆಗೆ ಹೇಳಿದೆ. ಆದರೆ ಆ ಘಟನೆಯನ್ನು ನಾನು ಯಾವತ್ತೂ ಮರೆಯಲಾರೆ~ ಎಂದು ಲಿಲ್ಲಿ ನುಡಿದರು.ಆಗ ಎಂಆರ್‌ಎಫ್ ಬೌಲಿಂಗ್ ಪ್ರತಿಷ್ಠಾನದ ಕೋಚಿಂಗ್ ನಿರ್ದೇಶಕರಾಗಿದ್ದ ಅವರು ಬೌಲಿಂಗ್ ಬದಲು ಬ್ಯಾಟಿಂಗ್‌ನತ್ತ ಗಮನ ನೀಡುವಂತೆ ತೆಂಡೂಲ್ಕರ್‌ಗೆ ಸಲಹೆ ನೀಡಿದ್ದರಂತೆ. `ಸಚಿನ್ ಒಂದು ವರ್ಷದ ನಂತರ ಮತ್ತೆ ನನ್ನ ಬಳಿ ಬಂದರು. ಆಗ ಅವರಿಗೆ 15 ವರ್ಷ ವಯಸ್ಸಿರಬಹುದು.ಅವರು ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿರುವಾಗ ನಾನು ಹಿಂಬದಿ ನಿಂತಿದ್ದೆ. ಎದುರಿಸಿದ ಮೊದಲ ಎಸೆತವನ್ನು ಅವರು ಬೌಂಡರಿ ಬಾರಿಸಿದರು. ನಂತರದ ಎಸೆತವನ್ನೂ ಬೌಂಡರಿಗೆ ಕಳುಹಿಸಿದರು. ಅವರನ್ನು ಔಟ್ ಮಾಡಲು ಬೌಲರ್‌ಗಳಿಗೆ ಸಾಧ್ಯವಾಗಲಿಲ್ಲ~ ಎಂದು ಡೆನಿಸ್ ವಿವರಿಸಿದರು.`ಅವರು 12 ಎಸೆತಗಳಲ್ಲಿ 48 ರನ್ ಗಳಿಸಿದ್ದಾಗ ಆತ ಯಾರು ಎಂದು ಅಂದಿನ ಮುಖ್ಯ ಕೋಚ್ ಟಿ.ಎ.ಶೇಖರ್ ಬಳಿ ಕೇಳಿದೆ. ವರ್ಷದ ಹಿಂದೆ ವೇಗದ ಬೌಲರ್ ಆಗಲು ಬಂದಿದ್ದು ಇದೇ ಹುಡುಗ ಎಂದು ಅವರು ನಗು ಬೀರಿದರು. ನನಗೆ ಒಮ್ಮೆಲೇ ಅಚ್ಚರಿ~ ಎಂದು 62 ವರ್ಷ ವಯಸ್ಸಿನ ಲಿಲ್ಲಿ ಆ ಘಟನೆ ನೆನಪಿಸಿಕೊಂಡರು.ಆದರೆ ಸಚಿನ್ ಅಂತರರಾಷ್ಟ್ರೀಯ ಕ್ರಿಕೆಟ್ ಆಡುವ ಮೊದಲೇ ನಾನು ಅವರಾಟ ನೋಡಿದ್ದೆ. ಇದು ನನ್ನ ಅದೃಷ್ಟವೆಂದು ಭಾವಿಸುತ್ತೇನೆ. ಹಾಗಾಗಿ ಅವರು ವಿಶ್ವ ಶ್ರೇಷ್ಠ ಆಟಗಾರ ಎಂದು ಹೇಳಲು ನನಗೆ ಈಗ ಖುಷಿಯಾಗುತ್ತಿದೆ ಎಂದೂ ತಿಳಿಸಿದರು.ಎಂಆರ್‌ಎಫ್ ವೇಗದ ಬೌಲಿಂಗ್ ಪ್ರತಿಷ್ಠಾನದಲ್ಲಿ ತಮ್ಮ ಸಾಧನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, `ನನ್ನ ಪ್ರಕಾರ ಜಹೀರ್ ಖಾನ್ ಅತ್ಯುತ್ತಮ ಬೌಲರ್. ನಂತರದ ಸ್ಥಾನದಲ್ಲಿ ಜಾವಗಲ್ ಶ್ರೀನಾಥ್ ಬರುತ್ತಾರೆ. ವೆಂಕಟೇಶ್ ಪ್ರಸಾದ್   ಟೆಸ್ಟ್ ಕ್ರಿಕೆಟ್ ಆಡುತ್ತಾರೆ ಎಂಬ ವಿಶ್ವಾಸ ನನ್ನಲ್ಲಿತ್ತು~ ಎಂದರು.`ಇರ್ಫಾನ್ ಪಠಾಣ್, ಆರ್.ಪಿ.ಸಿಂಗ್ ಹಾಗೂ ಎಸ್.ಶ್ರೀಶಾಂತ್ ಅವರು ಭರವಸೆ ಮೂಡಿಸಿದ ಬೌಲರ್‌ಗಳು. ಆದರೆ ಮುನಾಫ್ ಪಟೇಲ್ ಬಗ್ಗೆ ನನಗೆ ತುಂಬಾ ನಿರಾಸೆಯಾಯಿತು. ಮುನಾಫ್ ಗಂಟೆಗೆ 150 ಕಿ.ಮೀ.ವೇಗದಲ್ಲಿ ಬೌಲ್ ಮಾಡುತ್ತಿದ್ದರು. ಆದರೆ ಅದನ್ನು ಕಡಿಮೆ ಮಾಡಿಕೊಳ್ಳಲು ಯಾರೊ ಅವರಿಗೆ ಹೇಳಿದರು~ ಎಂದೂ ನುಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry