ಸಚಿವರಾಗಿ ಡಿಕೆಶಿ, ಬೇಗ್‌

7
ಇಬ್ಬರಿಗೆ ಇನ್ನೂ ಹಂಚಿಕೆಯಾಗದ ಖಾತೆ

ಸಚಿವರಾಗಿ ಡಿಕೆಶಿ, ಬೇಗ್‌

Published:
Updated:

ಬೆಂಗಳೂರು: ಕನಕಪುರ ಶಾಸಕ ಡಿ.ಕೆ.ಶಿವಕುಮಾರ್‌ ಮತ್ತು ಶಿವಾಜಿನಗರ ಶಾಸಕ ಆರ್‌.ರೋಷನ್ ಬೇಗ್‌ ಅವರು ಸಂಪುಟ ದರ್ಜೆ ಸಚಿವರಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು.ಅವರಿಗೆ ಇನ್ನೂ ಖಾತೆ ಹಂಚಿಕೆ ಮಾಡಿಲ್ಲ. ಗುರುವಾರ ಈ ಕುರಿತು ತೀರ್ಮಾನ ಆಗಲಿದೆ ಎಂದು ಮೂಲಗಳು ತಿಳಿಸಿವೆ.ಶಿವಕುಮಾರ್‌ ಅವರಿಗೆ ಇಂಧನ, ಬೇಗ್‌ ಅವರಿಗೆ ಸಣ್ಣ ಕೈಗಾರಿಕೆ ಅಥವಾ ವಾರ್ತಾ ಇಲಾಖೆ ನೀಡುವ ಸಾಧ್ಯತೆ ಇದೆ.ರಾಜಭವನದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಎಚ್‌.ಆರ್‌.­ಭಾರದ್ವಾಜ್ ಅವರು  ಪ್ರಮಾಣ ವಚನ ಬೋಧಿಸಿದರು. ಸಂಜೆ 5.15ಕ್ಕೆ ಸರಿಯಾಗಿ ಆರಂಭವಾದ ಕಾರ್ಯಕ್ರಮ ಕೇವಲ ಐದು ನಿಮಿಷಗಳಲ್ಲಿ ಮುಕ್ತಾಯಗೊಂಡಿತು.ಇನ್ನೂ ಖಾಲಿ: ಈ ವಿಸ್ತರಣೆ ನಂತರವೂ ಸಂಪುಟದಲ್ಲಿ ಮೂರು ಸ್ಥಾನಗಳು ಖಾಲಿ ಇವೆ.ಮುಖ್ಯಮಂತ್ರಿ ಸಿದ್ದರಾಮಯ್ಯ,  ವಿಧಾನಸಭಾ­ಧ್ಯಕ್ಷ ಕಾಗೋಡು ತಿಮ್ಮಪ್ಪ, ಸಚಿವರಾದ ಕೆ.ಜೆ.­ಜಾರ್ಜ್‌, ರಾಮಲಿಂಗಾರೆಡ್ಡಿ, ವಿ.ಶ್ರೀನಿವಾಸ ಪ್ರಸಾದ್‌, ಟಿ.ಬಿ.ಜಯಚಂದ್ರ, ಖಮರುಲ್‌ ಇಸ್ಲಾಂ, ಕೃಷ್ಣ ಬೈರೇಗೌಡ, ಡಾ.ಶರಣ ಪ್ರಕಾಶ ಪಾಟೀಲ್‌ ಮತ್ತಿತರರು ಹಾಜರಿದ್ದರು.ಸಚಿವ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನ­ಗೊಂಡಿದ್ದ ಡಾ.ಎ.ಬಿ.ಮಾಲಕರಡ್ಡಿ, ಕೆ.ಬಿ.­ಕೋಳಿವಾಡ, ಬಸವ­ರಾಜ ರಾಯರಡ್ಡಿ ಕೂಡ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಬೇಗ್‌ ಮತ್ತು ಶಿವಕುಮಾರ್‌ ಕುಟುಂಬದ ಸದಸ್ಯರು ಸಮಾರಂಭಕ್ಕೆ ಸಾಕ್ಷಿಯಾದರು.‘ಅವರು’ ಸಚಿವರಾಗಿದ್ದು ಸಂತಸ ತಂದಿದೆ

ರಾಜ್ಯಪಾಲ:
‘ಡಿ.ಕೆ.ಶಿವಕುಮಾರ್‌ ಮತ್ತು ರೋಷನ್‌ಬೇಗ್‌ – ಇಬ್ಬರೂ ಅನೇಕ ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿರುವುದು ನನಗೆ ಚೆನ್ನಾಗಿ ಗೊತ್ತಿದೆ. ಅವರು ಸಚಿವರಾಗಿದ್ದು ನನಗೆ ಸಂತಸ ತಂದಿದೆ...’ ಹೀಗೆ ಹೇಳಿದ್ದು ರಾಜ್ಯಪಾಲ ಎಚ್‌.ಆರ್‌. ಭಾರದ್ವಾಜ್‌.ವಿವಿಧ ರೀತಿಯ ಆರೋಪಗಳು ಇರುವ ಈ ಇಬ್ಬರು ಸಚಿವ ಸಂಪುಟ ಸೇರಿದ್ದರ ಕುರಿತು ಕೇಳಿದ ಪ್ರಶ್ನೆಗೆ ಅವರು ಈ ರೀತಿಯ  ಪ್ರತಿಕ್ರಿಯೆ ನೀಡಿದರು.

ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ಬಳಿಕ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜತೆ ಅವರು ಮಾತನಾಡಿದರು.‘ಎಲ್ಲಿ ತಂಡದ ನಾಯಕ ಸರಿ ಇರುತ್ತಾನೋ ಅಲ್ಲಿ ಇಡೀ ತಂಡ ಚೆನ್ನಾಗಿರುತ್ತದೆ. ರಾಜ್ಯದ ನಾಯಕ (ಮುಖ್ಯಮಂತ್ರಿ) ಒಳ್ಳೆಯವರು. ಅವರು ಇರುವವರೆಗೂ ಸಮಸ್ಯೆ ಇಲ್ಲ’ ಎಂದು ಅವರು ಹೇಳಿದರು. ತಂಡದ ಎಲ್ಲ 11 ಆಟಗಾರರೂ ಒಂದೇ ರೀತಿ ಇರುವುದಿಲ್ಲವಲ್ಲ ಎಂದು ಕೇಳಿದ ಪ್ರಶ್ನೆಗೆ ‘ಸರಿ ಇಲ್ಲದವರನ್ನು ಸರಿ ಮಾಡುವ ಕೆಲಸವನ್ನು ನಾಯಕ ಮಾಡುತ್ತಾನೆ’ ಎಂದು ಪ್ರತಿಕ್ರಿಯೆ ನೀಡಿದರು.ಮುಖ್ಯಮಂತ್ರಿ ಬಗ್ಗೆ ಒಳ್ಳೆಯ ಮಾತನಾಡುವ ತಮಗೆ ಕೆಲವು ಸಚಿವರ ವಿರುದ್ಧ ಏಕೆ ಸಿಟ್ಟು ಎಂದು ಕೇಳಿದ ಪ್ರಶ್ನೆಗೆ ‘ನಾನು ಹಿರಿಯ. ನನಗೆ ತಿಳಿದಿದ್ದನ್ನು ಸಲಹೆ ರೂಪದಲ್ಲಿ ಹೇಳಿದ್ದೇನೆ. ಅಷ್ಟು ಬಿಟ್ಟರೆ ನನಗೇನೂ ಸಿಟ್ಟು ಇಲ್ಲ’ ಎಂದರು. ಈ ಸಂದರ್ಭದಲ್ಲಿ ಪಕ್ಕದಲ್ಲೇ ಇದ್ದ ಮುಖ್ಯಮಂತ್ರಿ­ಯವರು, ರಾಜ್ಯಪಾಲರ ಸಲಹೆ­ಯಂತೆ ತಾವು ಕಾರ್ಯನಿರ್ವಹಿಸುವುದಾಗಿ ಹೇಳಿದರು.ಯಾವ ಕೇಸ್‌: ಸಿಎಂ ಪ್ರಶ್ನೆ

ಯಾವ ಕೇಸ್‌? ಎಲ್ಲಿದೆ...? ಸಚಿವ ಸಂಪುಟ ಸೇರಿದ ಇಬ್ಬರ ವಿರುದ್ಧವೂ ಕ್ರಿಮಿನಲ್‌ ಪ್ರಕರಣ­ಗಳು ಇವೆಯಲ್ಲ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಸಿ.ಎಂ ಸಿದ್ದರಾಮಯ್ಯ ಹೀಗೆ ಹೇಳಿದರು.

‘ಯಾವ ಕೇಸೂ ಇಲ್ಲ’ ಎಂದು ಮೊದಲಿಗೆ ಹೇಳಿದ ಅವರು ನಂತರ ಆ ಕುರಿತು ವಿವರಣೆ ನೀಡಿದರು. ‘ಶಿವಕುಮಾರ್‌ ವಿರುದ್ಧ  ಒಂದು ಎಫ್‌ಐಆರ್‌ ಇತ್ತು. ಈಗ ಅದಕ್ಕೆ ಕೋರ್ಟ್ ತಡೆಯಾಜ್ಞೆ ಕೊಟ್ಟಿದೆ. ರೋಷನ್‌ ಬೇಗ್‌ ವಿರುದ್ಧ ಇರುವುದು ಖಾಸಗಿ ದೂರು’ ಎಂದು ಮುಖ್ಯಮಂತ್ರಿ ಸಮರ್ಥಿಸಿಕೊಂಡರು.

‘ಸಂಪುಟ ವಿಸ್ತರಣೆ ಕುರಿತು ಹೈ­ಕಮಾಂಡ್‌ ನನ್ನ ಮೇಲೆ ಒತ್ತಡ ಹೇರಿಲ್ಲ. ವರಿಷ್ಠರ ಜತೆ ಸಮಾಲೋಚನೆ ನಡೆಸಿಯೇ ಈ ಕುರಿತ ತೀರ್ಮಾನಗಳನ್ನು ತೆಗೆದುಕೊಳ್ಳ­ಲಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.‘ಶಿವಕುಮಾರ್‌ ಮತ್ತು ಬೇಗ್‌ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದಕ್ಕೆ ನನ್ನ ವಿರೋಧ ಇರಲಿಲ್ಲ. ಸರ್ಕಾರ ರಚನೆಯಾದ ಸಂದರ್ಭದಲ್ಲಿ 30 ಮಂದಿಯನ್ನು ಸಂಪುಟಕ್ಕೆ ತೆಗೆದುಕೊಂಡಿದ್ದೆ. ಆಗ ಆಗದಿದ್ದನ್ನು ಈಗ ಮಾಡಿದ್ದೇನೆ. ಇನ್ನೂ 3 ಸ್ಥಾನ ಖಾಲಿ ಇದ್ದು, ಅವುಗಳನ್ನೂ ಮುಂದಿನ ದಿನಗಳಲ್ಲಿ ಭರ್ತಿ ಮಾಡ­ಲಾಗುವುದು’ ಎಂದು ವಿವರಿಸಿದರು. ‘ಕೆಲವೊಮ್ಮೆ ರಾಜಕೀಯ ಕಾರಣಗಳಿಗಾಗಿ ಸಂಪುಟ ವಿಸ್ತರಣೆಯಂತಹ ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾಗುತ್ತದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry