ಸಚಿವರು `ಜಿಲ್ಲಾ ಸ್ನೇಹಿ' ಆಗರೇ?

7
ಜನಸ್ನೇಹಿ ಕೇಂದ್ರ ಉದ್ಘಾಟನೆಗೂ ಗೈರು

ಸಚಿವರು `ಜಿಲ್ಲಾ ಸ್ನೇಹಿ' ಆಗರೇ?

Published:
Updated:

ಕೊಪ್ಪಳ: ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರು ಬರೋಬ್ಬರಿ 3 ತಿಂಗಳು 8 ದಿನಗಳ ಹಿಂದೆ ಜಿಲ್ಲೆಗೆ ಭೇಟಿ ನೀಡಿದ್ದರು. ಸೆ. 17ರಂದು ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಉಸ್ತುವಾರಿ ಸಚಿವ ನಿರಾಣಿ ಅವರು ನಗರಕ್ಕೆ ಬಾರದೇ ಇರುವುದು ಚರ್ಚೆಗೆ ಗ್ರಾಸವಾಗಿದೆ.ಆದರೆ, ಬಿಜೆಪಿಯ ಪರಮೋಚ್ಚ ನಾಯಕ ಹಾಗೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿನಲ್ಲಿ ಸ್ಥಾಪಿಸಲಾಗಿರುವ `ಅಟಲ್‌ಜಿ ಜನಸ್ನೇಹಿ ಕೇಂದ್ರ'ದ (ಈ ಮೊದಲು ನೆಮ್ಮದಿ ಕೇಂದ್ರಗಳು ಎಂದು ಕರೆಯಲಾಗುತ್ತಿತ್ತು) ಉದ್ಘಾಟನೆಗಾಗಿಯಾದರೂ ಉಸ್ತುವಾರಿ ಸಚಿವ ನಿರಾಣಿ ಅವರು ನಗರಕ್ಕೆ ಭೇಟಿ ನೀಡಬಹುದು ಎಂಬ ಜನರ ನಿರೀಕ್ಷೆಯೂ ಹುಸಿಯಾಗಿದೆ.ಕಳೆದ ಅಕ್ಟೋಬರ್ 16ರಂದು ತಾಲ್ಲೂಕಿನ ಬೂದಗುಂಪಾ ಗ್ರಾಮದಲ್ಲಿ ಕೆಎಂಎಫ್ ಆಶ್ರಯದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಚಿವ ನಿರಾಣಿ, ನಂತರ ಕೊಪ್ಪಳಕ್ಕೆ ಬರುವ ಗೋಜಿಗೂ ಹೋಗಲಿಲ್ಲ. ಅಲ್ಲದೇ, ನ. 1ರಂದು ಕನ್ನಡ ರಾಜ್ಯೋತ್ಸವ ದಿನದಂದು ಸಹ ಸಚಿವ ನಿರಾಣಿ ಧ್ವಜಾರೋಹಣ ನೆರವೇರಿಸಲು ಆಗಮಿಸಲಿಲ್ಲ. ಇದು ಸಚಿವ ನಿರಾಣಿ ಕನ್ನಡಕ್ಕೆ ಬಗೆದ ದ್ರೋಹವೇ ಸರಿ ಎಂದು ಎಸ್‌ಎಫ್‌ಐ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಗುರುರಾಜ ದೇಸಾಯಿ ಹೇಳುತ್ತಾರೆ.ಫೆಬ್ರುವರಿಯಲ್ಲಿ ರಾಜ್ಯದ ಬಜೆಟ್ ಮಂಡಿಸುವುದಾಗಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳುತ್ತಿದ್ದಾರೆ. ಹೀಗಾಗಿ ಜಿಲ್ಲೆಯ ಬೇಡಿಕೆಗಳ ಕುರತು ಬಜೆಟ್ ಪೂರ್ವ ಸಭೆಗಳನ್ನು ಮಾಡುವ ಬಗ್ಗೆಯೂ ಜಿಲ್ಲಾ ಉಸ್ತುವಾರಿ ಸಚಿವ ನಿರಾಣಿ ಅವರಿಗೆ ಆಸಕ್ತಿ ಇದ್ದಂತೆ ಕಾಣುತ್ತಿಲ್ಲ. ಜಿಲ್ಲೆಯ ವಿವಿಧ ರಂಗಗಳ ಜನರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಚರ್ಚಿಸಬೇಕಾದ ಉಸ್ತುವಾರಿ ಸಚಿವರೇ ಜಿಲ್ಲೆಗೆ ಆಗಮಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ.ಉಸ್ತುವಾರಿ ಸಚಿವರು ಜಿಲ್ಲೆಗೆ ಬಾರದೇ ಇರುವುದರಿಂದ ಆಡಳಿತಕ್ಕೆ ತೊಂದರೆ ಆಗುವುದು ಸಹಜ. ಜಿಲ್ಲಾ ಪಂಚಾಯಿತಿಯ ಕೆಡಿಸಿ ಸಭೆಗೆ ಹಾಜರಾಗಿಲ್ಲ. ಅಲ್ಲದೇ, ವಾರ್ಷಿಕ 60 ಕೋಟಿ ರೂಪಾಯಿಗೂ ಅಧಿಕ ಅನುದಾನ ಬರುವ ಸರ್ವ ಶಿಕ್ಷಣ ಅಭಿಯಾನದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಬೇಕಾದ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷರೂ ಆಗಿರುವ ನಿರಾಣಿ ಜಿಲ್ಲೆಗೆ ಭೇಟಿಯನ್ನೇ ನೀಡಿಲ್ಲ ಎಂದರೆ ಹೇಗೆ ಎಂದು ಜಯ ಕರ್ನಾಟಕ ಸಂಘಟನೆಯ ಉತ್ತರ ಕರ್ನಾಟಕ ಭಾಗದ ಕಾರ್ಯಾಧ್ಯಕ್ಷ ವಿಜಯಕುಮಾರ ಕವಲೂರು ಪ್ರಶ್ನಿಸುತ್ತಾರೆ.ಬಹುತೇಕ ಇಲಾಖೆಗಳ ಪ್ರಮುಖ ಕಡತಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರ ಸಹಿ ಪಡೆಯಲು ಅಧಿಕಾರಿಗಳು ಬೆಂಗಳೂರಿಗೇ ಹೋಗಿ ಬರುತ್ತಿದ್ದಾರೆ ಎನ್ನಲಾಗುತ್ತಿದೆ. ಎಷ್ಟೇ ಒತ್ತಡವಿದ್ದರೂ ಉಳಿದ ಜಿಲ್ಲೆಗಳ ಉಸ್ತುವಾರಿ ಸಚಿವರು ಆಯಾ ಜಿಲ್ಲೆಗಳಿಗೆ ಭೇಟಿ ನೀಡುತ್ತಿರುವಾಗ ನಿರಾಣಿ ಅವರು ಏಕೆ ಜಿಲ್ಲೆಗೆ ಭೇಟಿ ನೀಡುತ್ತಿಲ್ಲ. ಈ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳು ಸಹ ಚಕಾರ ಎತ್ತದೇ ಇರುವುದು ವಿಚಿತ್ರವಾಗಿದೆ ಎಂದೂ ಅವರು ಅಚ್ಚರಿ ವ್ಯಕ್ತಪಡಿಸುತ್ತಾರೆ.`ಅಟಲ್‌ಜಿ ಜನಸ್ನೇಹಿ ಕೇಂದ್ರ'ದ ಉದ್ಘಾಟನೆಗೆ ಸಂಬಂಧಿಸಿದಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಿ.ಲತಾ ಕೃಷ್ಣರಾವ್ ಅವರು ಡಿ. 14ರಂದು ಎಲ್ಲ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಕಳಿಸಿದ್ದಾರೆ. ಈ ಕೇಂದ್ರಗಳ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರೇ ನೆರವೇರಿಸುವರು ಎಂದೂ ಸುತ್ತೋಲೆಯಲ್ಲಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry