ಸಚಿವರ ಬೆದರಿಕೆ

7

ಸಚಿವರ ಬೆದರಿಕೆ

Published:
Updated:

ಸರಿಯಾಗಿ ಕೆಲಸ ಮಾಡದಿದ್ದರೆ `ಕತ್ತರಿಸಿ ಹಾಕುತ್ತೇನೆ~ ಎಂದು ರಾಜ್ಯದ ಸಮಾಜ ಕಲ್ಯಾಣ ಇಲಾಖೆ ಸಚಿವ ಎ. ನಾರಾಯಣಸ್ವಾಮಿ ಅವರು ಅಧಿಕಾರಿಗಳಿಗೆ ಹಾಕಿದ ಬೆದರಿಕೆ ರಾಜ್ಯದ ಸಚಿವರ ಸಾರ್ವಜನಿಕ ವರ್ತನೆಯನ್ನು ನೋಡುತ್ತ ಬಂದವರಿಗೆ ಅನಿರೀಕ್ಷಿತವಲ್ಲ.  ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ಕೆಲವು ಸಚಿವರು ಅಧಿಕಾರಿಗಳನ್ನು ಏಕವಚನದಲ್ಲಿಯೇ ಮಾತನಾಡಿಸುತ್ತಾರೆ ಎಂಬ ಆರೋಪಗಳಿವೆ.

 

ಅಂಥ ಸಭೆಯೊಂದರಲ್ಲಿ ಮೊಬೈಲ್‌ನಲ್ಲಿ ಚಿತ್ರ ವೀಕ್ಷಿಸಿ ಸಿಕ್ಕಿಬಿದ್ದ ಅಧಿಕಾರಿಯೊಬ್ಬರ ಅಮಾನತು ಮಾಡಿದ ಘಟನೆ ಇದೆ. ಕಾಮಗಾರಿ ಪರಿಶೀಲಿಸುವಾಗ ಅಧಿಕಾರಿಯ ಕೆನ್ನೆ ಬಿಸಿ ಮಾಡಿದ ಘಟನೆಯೂ ನಡೆದಿದೆ.

 

ಸರ್ಕಾರ ಕೈಗೊಂಡ ಭಗವದ್ಗೀತೆಯ ಅಭಿಯಾನದ ಬಗ್ಗೆ ಸಹಮತ ಇಲ್ಲದವರು `ದೇಶ ಬಿಟ್ಟು ಹೋಗಬೇಕು~ ಎಂದು ರಾಜ್ಯದ ಶಿಕ್ಷಣ ಸಚಿವರೇ `ಗಡೀಪಾರಿನ ಆದೇಶ~ ಹೊರಡಿಸಿದ್ದೂ ಇದೆ. ಆಡಳಿತ ಪಕ್ಷದ ಅಧ್ಯಕ್ಷರೇ ರಾಜಕೀಯ ವಿರೋಧಿಗಳ `ನಾಲಿಗೆ, ಕೈ ಕತ್ತರಿಸುವ~ ಎಚ್ಚರಿಕೆಯನ್ನು ಸಾರ್ವಜನಿಕವಾಗಿ ನೀಡಿರುವುದನ್ನೂ ಜನ ಮರೆತಿಲ್ಲ.ತಮ್ಮನ್ನು ಅಧಿಕಾರಕ್ಕೆ ತಂದ ಜನತೆಯ ಬಗ್ಗೆ ಪಕ್ಷದ ಅಧ್ಯಕ್ಷರೇ ತಾಳಿದ ಈ ಪ್ರಮಾಣದ ಅಸಹನೆಯ ಮೇಲ್ಪಂಕ್ತಿ ಇರುವಾಗ, ಸರ್ಕಾರದ ಕೆಲಸಗಳಿಗೆ ನಿರ್ಲಕ್ಷ್ಯ ತೋರಿಸುತ್ತಿರುವ ಸಿಬ್ಬಂದಿಗೆ ಚುರುಕು ಮುಟ್ಟಿಸುವುದಕ್ಕೆ ಜಿಲ್ಲೆಯ ಉಸ್ತುವಾರಿ ಸಚಿವರು ಕಠೋರ ಭಾಷೆಯನ್ನು ಬಳಸಿರುವುದು ಆಶ್ಚರ್ಯದ ಸಂಗತಿ ಅಲ್ಲ. ಆದರೆ ಇದು ನಾಗರಿಕವಲ್ಲದ ನಡವಳಿಕೆ.ಸಾರ್ವಜನಿಕ ಸೇವೆಗಾಗಿ ಜನರಿಂದ ಆಯ್ಕೆಯಾದ ಪ್ರತಿನಿಧಿಗಳ ನಡವಳಿಕೆಯನ್ನು ಅವಲಂಬಿಸಿ ಅಧಿಕಾರಿಗಳ ವರ್ತನೆ ಇರುತ್ತದೆ. ಕಾಯ್ದೆಗಳನ್ನು  ರೂಪಿಸುವ ಪರಮಾಧಿಕಾರ ಇರುವ ಶಾಸಕರು ಕಾನೂನು ಪಾಲನೆಯ ವಿಷಯದಲ್ಲಿ ನಿಷ್ಠುರವಾಗಿದ್ದರೆ ಅಂಥವರ ಎದುರು ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುವುದು ಸುಲಭವಲ್ಲ.

 

ಸಾರ್ವಜನಿಕರ ಅಗತ್ಯ ಪೂರೈಸುವ ಬದ್ಧತೆ, ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಪ್ರಾಮಾಣಿಕತೆ, ಜನರ ತೆರಿಗೆಯ ಹಣವನ್ನು ಧರ್ಮದರ್ಶಿಯ ನ್ಯಾಯಪರತೆಯಿಂದ ಬಳಸಿಕೊಳ್ಳುವ ವಿವೇಕವನ್ನು ತಮ್ಮ ನಡವಳಿಕೆಯಲ್ಲಿ ಅಳವಡಿಸಿಕೊಂಡ ಜನಪ್ರತಿನಿಧಿಗಳನ್ನು ಅಧಿಕಾರಿಗಳು ಕಡೆಗಣಿಸುವುದು ಸಾಧ್ಯವಿಲ್ಲ. ಅಧಿಕಾರಿಗಳನ್ನು ಹದ್ದುಬಸ್ತಿನಲ್ಲಿಡುವುದಕ್ಕೆ ಜನಪ್ರತಿನಿಧಿಗಳಿಗೆ ಆಡಳಿತದ ಅರಿವು ಇರಬೇಕು.ಆದರೆ, ರಾಜಕೀಯ ಅಧಿಕಾರವನ್ನು ಹಣ ಮಾಡುವುದಕ್ಕೆ ಮತ್ತು ಸಾರ್ವಜನಿಕ ಹಣದಿಂದ ಐಷಾರಾಮಿ ಜೀವನ ನಡೆಸುವುದಕ್ಕೆ ದುರುಪಯೋಗಪಡಿಸಿಕೊಳ್ಳುವವರ ಮಾತನ್ನು ನೌಕರಶಾಹಿ ಲಕ್ಷಿಸುವುದಿಲ್ಲ.

 

ಆಡಳಿತದ ಅರಿವಿಲ್ಲದೆ, ಅದನ್ನು ತಿಳಿದುಕೊಳ್ಳುವ ಮನಸ್ಸೂ ಇಲ್ಲದೆ, ಅಧಿಕಾರವಿರುವುದೇ ಹಣ, ಆಸ್ತಿ ಗಳಿಸುವುದಕ್ಕೆ ಎಂಬಂಥ ನಿರಂಕುಶ ಧೋರಣೆಯಿಂದ ಜನಪ್ರತಿನಿಧಿ ವರ್ತಿಸುತ್ತಿದ್ದರೆ ಅದಕ್ಕೆ ನೌಕರಶಾಹಿ ತನ್ನದೇ ರೀತಿಯಲ್ಲಿ ಪ್ರತಿ ತಂತ್ರ ರೂಪಿಸಿಕೊಳ್ಳುತ್ತದೆ.ಜನಪ್ರತಿನಿಧಿ ಭ್ರಷ್ಟನಾದರೆ, ಅದನ್ನ ಮೀರಿದ ಭ್ರಷ್ಟತೆಯನ್ನು ನೌಕರರು ಅಳವಡಿಸಿಕೊಳ್ಳುತ್ತಾರೆ. ಈ ಧೋರಣೆ ಆಡಳಿತದಲ್ಲಿ ಬಹುಕಾಲದಿಂದ ಆಳವಾಗಿ ಬೇರೂರಿದೆ. ಇದು ಸರ್ಕಾರದ ಕಾರ‌್ಯಕ್ರಮಗಳ ಅನುಷ್ಠಾನದಲ್ಲಿ ಪ್ರತಿಫಲಿತವಾಗುತ್ತದೆ.ಈ ಪರಿಸ್ಥಿತಿಗೆ ಸಾರ್ವಜನಿಕ ಸಮಸ್ಯೆಗಳಿಗೆ ಸಂಪೂರ್ಣ ಜಡವಾಗಿರುವ ಅಧಿಕಾರಶಾಹಿಯಂತೆಯೇ, ಭ್ರಷ್ಟಾಚಾರಕ್ಕೆ ಹೊಸ ಆಯಾಮಗಳನ್ನು ಒದಗಿಸುತ್ತಿರುವ ಜನಪ್ರತಿನಿಧಿಗಳೂ ಕಾರಣ. ಈ ಎರಡೂ ಅತಿರೇಕಗಳನ್ನು ಮೌನವಾಗಿ ಸಹಿಸಿಕೊಳ್ಳುವ ಅಸಹಾಯಕತೆ ಜನತೆಯದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry