ಸಚಿವರ ವಿರುದ್ಧ ಹರಿಹಾಯ್ದ ಡಾ.ಜಿ. ಪರಮೇಶ್ವರ್

7
ಅರ್ಧದಲ್ಲೇ ನಿರ್ಗಮಿಸಿದ ಮಹದೇವಪ್ಪ, ಶ್ರೀನಿವಾಸಪ್ರಸಾದ್

ಸಚಿವರ ವಿರುದ್ಧ ಹರಿಹಾಯ್ದ ಡಾ.ಜಿ. ಪರಮೇಶ್ವರ್

Published:
Updated:

ಬೆಂಗಳೂರು: ಪಕ್ಷದ ಕಾರ್ಯಕ್ರಮ­ಗ­ಳಲ್ಲಿ ಭಾಷಣ ಮುಗಿಸಿ ತಕ್ಷಣವೇ ನಿರ್ಗ­ಮಿಸುವ ಸಚಿವರ ವರ್ತನೆಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್  ಬಹಿರಂಗ­ವಾಗಿಯೇ ಅಸಮಾ­ಧಾನ ಹೊರಹಾಕಿ­ದರು. ‘ಸಚಿವರಿಗೆ ಪುರುಸೊತ್ತು ಇಲ್ಲ­ದಿ­ದ್ದರೆ ಪಕ್ಷದ ಕಾರ್ಯ­ಕ್ರಮಗಳಿಂದ ದೂರ ಇರಲಿ’ ಎಂದು ನೇರವಾಗಿ ಹೇಳಿದರು.ಕೆಪಿಸಿಸಿ ಪರಿಶಿಷ್ಟ ಜಾತಿಗಳ ವಿಭಾಗವು ಸೋಮವಾರ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಬೃಹತ್‌ ಸಮಾವೇಶದಲ್ಲಿ ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಮತ್ತು ಕಂದಾಯ ಸಚಿವ ವಿ.ಶ್ರೀನಿವಾಸ ಪ್ರಸಾದ್‌ ಮಾತು ಮುಗಿಸಿ ವೇದಿಕೆ­ಯಿಂದ ನಿರ್ಗಮಿಸಿದರು. ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ   ಪೂರ್ವನಿಗ­ದಿತ ಕಾರ್ಯಕ್ರಮಕ್ಕೆ ತೆರಳಿದರು.ಬಳಿಕ ಮಾತನಾಡಿದ ಪರಮೇಶ್ವರ್‌, ಸಚಿವರ ನಡವಳಿಕೆಗೆ ಆಕ್ಷೇಪ ವ್ಯಕ್ತಪಡಿ­ಸಿದರು. ‘ಇದು ಒಂದು ಮಹತ್ವದ ಕಾರ್ಯ­ಕ್ರಮ. ಸಚಿವರು ಮಧ್ಯದಲ್ಲೇ ವೇದಿಕೆಯಿಂದ ನಿರ್ಗಮಿಸುವುದನ್ನು ನಾನು ಒಪ್ಪುವುದಿಲ್ಲ. ಅವರಿಗೆ ಇಲ್ಲಿ ಸಮಯ ನೀಡಲು ಆಗದಿದ್ದರೆ, ಪಕ್ಷದ ಕಾರ್ಯಕ್ರಮಗಳಿಂದ ದೂರ ಇರಲಿ. ಬಿಟ್ಟುಬಿಡಿ’ ಎಂದು ಯಾರ ಹೆಸರನ್ನೂ ಪ್ರಸ್ತಾಪಿಸದೆ ಹರಿಹಾಯ್ದರು.‘ದಲಿತರ ಅಹವಾಲು ಅರಿಯಲು ಎರಡು ಗಂಟೆ ಮೀಸಲಿಡಲು ಸಚಿ­ವರಿಗೆ ಸಾಧ್ಯವಿಲ್ಲವೇ. ನಾವು (ದಲಿತರು) ನಿಮ್ಮ ಮಾತನ್ನು ಕೇಳಲು ಇಲ್ಲಿಗೆ ಬಂದಿಲ್ಲ. ನಮ್ಮ ಅಹವಾಲು­ಗಳನ್ನು ನಿಮ್ಮ ಮುಂದಿ­ಡಲು ಬಂದಿ­ದ್ದೇವೆ’ ಎಂದು ಸಿಟ್ಟಿನಿಂದ ಹೇಳಿದರು.ಇಬ್ಬಗೆ ವಾದ: ದಲಿತರಿಗೆ ಮೀಸಲಾತಿ ಒದಗಿಸುವ ಸಂಬಂಧ ಮಲ್ಲಿಕಾರ್ಜುನ ಖರ್ಗೆ ಮತ್ತು ಪರಮೇಶ್ವರ್‌  ವ್ಯಕ್ತಪಡಿ­ಸಿದ ವಿಭಿನ್ನ ಅಭಿಪ್ರಾಯ­ಗಳಿಗೂ ವೇದಿಕೆ ಸಾಕ್ಷಿಯಾಯಿತು. ಪರಿ­ಶಿಷ್ಟರಿಗೆ ಅವರ ಜನಸಂಖ್ಯೆಗೆ ಅನುಗುಣ­ವಾಗಿ ಮೀಸ­ಲಾತಿ ದೊರೆಯಬೇಕು ಎಂದು ಪ್ರತಿಪಾ­ದಿಸಿದ ಖರ್ಗೆ, ಈ ದಿಸೆಯಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.ಆದರೆ, ಖರ್ಗೆ ಅವರ ವಾದಕ್ಕೆ ವಿರು­ದ್ಧ­ವಾಗಿ ಮಾತನಾಡಿದ ಪರ­ಮೇಶ್ವರ್‌, ‘ದಲಿತರು ಮತಬ್ಯಾಂಕ್‌­ಗಳಾಗಿದ್ದಾರೆ. ನಮಗೆ ಮೀಸಲಾತಿ ಬೇಡ, ನಮ್ಮನ್ನು ಸಶಕ್ತಗೊಳಿಸಿ’ ಎಂದರು.‘ದಲಿತರಿಗೆ ಖಾಸಗಿ ವಲಯದಲ್ಲೂ ಮೀಸಲಾತಿ ದೊರೆಯಬೇಕು. ಅರ್ಹತೆ ಇರುವವರಿಗೆ ವಿಶ್ವವಿದ್ಯಾಲಯದ ಕುಲ­ಪತಿ ಹುದ್ದೆಗಳೂ ಲಭಿಸಬೇಕು’ ಎಂದ ಅವರು, ಪ್ರೊ.ಗೋಮತಿ ದೇವಿ ಅವರಿಗೆ ದಾವಣಗೆರೆ ವಿ.ವಿ ಕುಲಪತಿ ಹುದ್ದೆ ಕೈತಪ್ಪಿರುವುದನ್ನು ಪ್ರಸ್ತಾಪಿ­ಸಿದರು.ಸಚಿವರ ಸಮರ್ಥನೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡುವಾಗ ಸಚಿವರು ಬೇಗ ನಿರ್ಗಮಿಸಿದ್ದನ್ನು ಸಮ­ರ್ಥಿಸಿಕೊಂಡರು. ಮಹತ್ವದ ಕೆಲಸ ಇರುವುದರಿಂದ ಅವರು ವೇದಿಕೆಯಿಂದ ತೆರಳಿರಬಹುದು ಎಂದರು.ಜನಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರಿಗೆ ಮೀಸಲಾತಿ ಸೌಲಭ್ಯ ಒದಗಿಸುವ ಕುರಿತು ಸರ್ಕಾರ ಪರಿಶೀಲನೆ ನಡೆಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry