ಶನಿವಾರ, ಮೇ 15, 2021
25 °C

ಸಚಿವರ ಸ್ವಾಗತಕ್ಕೆ ಸಜ್ಜಾದ `ಮಹಾಮಾರಿ ಡೆಂಗೆ'

ವಿಜಯ್ ಹೂಗಾರ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಡೆಂಗೆ ಮಹಾಮಾರಿಗೆ ಮೃತಪಟ್ಟವರ ಸೂತಕದ ಮನೆಗಳು... ಮಣ್ಣಲ್ಲಿ ಆಟವಾಡಬೇಕಿದ್ದ ಮಕ್ಕಳನ್ನು ಮಣ್ಣಲ್ಲಿ ಇಟ್ಟುಬಂದ ಕುಟುಂಬಗಳ ಗೋಳಾಟ... ಜ್ವರದಿಂದ ಬಳಲಿ ಆಸ್ಪತ್ರೆಯಲ್ಲಿ ಮಲಗಿರುವ ನೂರಾರು ಜನರ ನರಳಾಟ... ಸರಿಯಾದ ಚಿಕಿತ್ಸೆಗಾಗಿ ಹುಬ್ಬಳ್ಳಿ, ದಾವಣಗೆರೆ, ಮಣಿಪಾಲ ಆಸ್ಪತ್ರೆಗಳಿಗೆ ರೋಗಿಗಳ ಅಲೆದಾಟ...!ಮಂಗಳವಾರ ಜಿಲ್ಲೆಗೆ ಪ್ರಥಮ ಬಾರಿಗೆ ಆಗಮಿಸುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಪ್ರಕಾಶ ಹುಕ್ಕೇರಿ ಅವರನ್ನು ಸ್ವಾಗತಿಸಲು `ಮಹಾಮಾರಿ ಡೆಂಗೆ' ತನ್ನ ರುದ್ರನರ್ತನದೊಂದಿಗೆ ಜಿಲ್ಲೆಯ ಜನರನ್ನು ಸಜ್ಜಗೊಳಿಸಿದ ಪರಿಯಿದು.ಕಳೆದ ಎರಡ್ಮೂರು ತಿಂಗಳಿಂದ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡಿರುವ ಡೆಂಗೆ ದಿನದಿಂದ ದಿನಕ್ಕೆ ತನ್ನ ಕದಂಬಬಾಹುಗಳನ್ನು ವಿಸ್ತರಿಸುತ್ತಾ ಹೊರಟಿದೆ ಹೊರತೂ ಕಡಿಮೆ ಮಾಡಿಲ್ಲ. ಈಗಾಗಲೇ 10 ಜನ ಮೃತಪಟ್ಟು, 350ಕ್ಕೂ ಹೆಚ್ಚು ರೋಗಿಗಳು ಈ ಜ್ವರದಿಂದ ಬಳಲಿ ಹಾಸಿಗೆ ಹಿಡಿದಿದ್ದಾರೆ.ಹೊಸ ಸರ್ಕಾರ ರಚನೆಯಾದ ಮೇಲೆಯಾದರೂ ಜಿಲ್ಲೆಯಲ್ಲಿ ಉಲ್ಬಣಿಸಿರುವ ಡೆಂಗೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬಹುದೆಂಬ ನಿರೀಕ್ಷೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ನೇಮಕದ ನಂತರ ಪ್ರಕಾಶ ಹುಕ್ಕೇರಿ ಅವರು ಜಿಲ್ಲೆಗೆ ಆಗಮಿಸಿ ಈ ಬಗ್ಗೆ ಕ್ರಮ ಕೈಗೊಳ್ಳಬಹುದೆಂಬ ಜಿಲ್ಲೆಯ ಜನರ ನಿರೀಕ್ಷೆಯೂ ಹುಸಿಯಾಗಿದೆ.ಮಣ್ಣಾದ 10 ಮಕ್ಕಳು: ಈಗಾಗಲೇ ಜಿಲ್ಲೆಯಲ್ಲಿ ಹತ್ತು ಮಕ್ಕಳು ಡೆಂಗೆ ಜ್ವರದಿಂದ ಮೃತಪಟ್ಟಿದ್ದಾರೆ. ಅವರಲ್ಲಿ ಹಿರೇಕೆರೂರ ತ್ಲ್ಲಾಲೂಕಿನ ಹಿರೇಮೊರಬ, ಗುಂಡಗಟ್ಟಿಯಲ್ಲಿ ಇಬ್ಬರು ಡೆಂಗೆಯಿಂದ ಮೃತಪಟ್ಟಿದ್ದರೆ, ಗೊಡಚಿಗೊಂಡ, ಯಲಿವಾಳ, ಕಳಗೊಂಡದಲ್ಲಿ ಮೂವರು ಶಂಕಿತ ಡೆಂಗೆಗೆ ಮೃತಪಟ್ಟಿದ್ದಾರೆ. ಬ್ಯಾಡಗಿ ತಾಲ್ಲೂಕಿನ ಮೊಟೆಬೆನ್ನೂರ, ಚಿಕ್ಕಬಾಸೂರ ಹಾಗೂ ಬ್ಯಾಡಗಿ ಪಟ್ಟಣದಲ್ಲಿ ತಲಾ ಒಬ್ಬೊಬ್ಬರು ಸೇರಿದಂತೆ ಮೂವರು ಬಾಲಕರು, ರಾಣೆಬೆನ್ನೂರನಲ್ಲಿ ಒಬ್ಬ ಬಾಲಕಿ ಹಾಗೂ ಹಾವೇರಿ ತಾಲ್ಲೂಕಿನಲ್ಲಿ ಒಬ್ಬ ಬಾಲಕ ಮೃತಪಟ್ಟಿದ್ದಾರೆ.ಸಾವಿನ ಸಂಖ್ಯೆ ಏರುತ್ತಿರುವಂತೆ ಡೆಂಗೆ ಜ್ವರದಿಂದ ಬಳಲುವವರ ಸಂಖ್ಯೆಯೂ ಹೆಚ್ಚಾಗುತ್ತಲೇ ಸಾಗುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ 270ಕ್ಕೂ ಹೆಚ್ಚು ಜನರು ಶಂಕಿತ ಡೆಂಗೆಯಿಂದ ಬಳಲುತ್ತಿದ್ದರೆ, ಅದರಲ್ಲಿ 80ಕ್ಕೂ ಹೆಚ್ಚು ಜನರಲ್ಲಿ ಡೆಂಗೆ ಜ್ವರ ಖಚಿತಪಟ್ಟಿರುವ ಬಗ್ಗೆ ಆರೋಗ್ಯ ಇಲಾಖೆಯೇ ಖಚಿತ ಪಡಿಸಿದೆ.ಡೆಂಗೆ ನಿಯಂತ್ರಣಕ್ಕೆ ಜಿಲ್ಲಾಡಳಿತವಾಗಲಿ, ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳಾಗಲಿ ಜಿಲ್ಲೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಜಾಥಾ ನಡೆಸಿರುವುದನ್ನು ಬಿಟ್ಟರೆ, ಉಳಿದೆಲ್ಲ ಕ್ರಮಗಳು ಕೇವಲ ಕಾಗದಲ್ಲಿ ಮಾತ್ರ ಎಂಬಂತಾಗಿವೆ.ಮನೆಯಲ್ಲಿನ ತೊಟ್ಟಿಗಳಲ್ಲಿ ಸಂಗ್ರಹಿಸಿರುವ ನೀರನ್ನು ವಾರದಲ್ಲಿ ಎರಡು ಬಾರಿ ಖಾಲಿ ಮಾಡಿ ತೊಳೆದು ನಂತರ ನೀರು ತುಂಬಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಸಲಹೆ ಮಾಡುತ್ತಾರೆ. ಆದರೆ, ಹಾವೇರಿಯಂತಹ ಜಿಲ್ಲಾ ಕೇಂದ್ರದಲ್ಲಿ 10-15 ದಿನಕ್ಕೊಮ್ಮೆ ನೀರು ಬಿಡುತ್ತಾರೆ. ಇದೇ ಪರಿಸ್ಥಿತಿ ಜಿಲ್ಲೆಯ ಇತರ ತಾಲ್ಲೂಕುಗಳಲ್ಲಿದೆ. ಇಂತಹದರಲ್ಲಿ ವಾರದಲ್ಲಿ ಎರಡು ಬಾರಿ ನೀರು ಖಾಲಿ ಮಾಡಲು ಹೇಗೆ ಸಾಧ್ಯ ಎನ್ನುವುದು ಸಾರ್ವಜನಿಕರ ಪ್ರಶ್ನೆ.ಆಸ್ಪತ್ರೆಯಲ್ಲಿ ಕಿಟ್ ಇಲ್ಲ: ಜಿಲ್ಲಾ ಆಸ್ಪತ್ರೆಯಲ್ಲಿ ಡೆಂಗೆ ಪತ್ತೆ ಹಚ್ಚುವ ಕಿಟ್ ಇಲ್ಲ. ಹೀಗಾಗಿ ಜ್ವರದಿಂದ ಬಳಲುತ್ತಿರುವವರು ತಮಗೆ ತಗಲಿದ ಜ್ವರ ಡೆಂಗೆ ಹೌದೋ ಅಲ್ಲವೋ ಎಂಬುದನ್ನು ಪತ್ತೆ ಹಚ್ಚಲು ಖಾಸಗಿ ಆಸ್ಪತ್ರೆಯನ್ನು ಅವಲಂಬಿಸಬೇಕಾಗಿದೆ. ಖಾಸಗಿ ಆಸ್ಪತ್ರೆಗಳು ಜ್ವರದಿಂದ ಬಳಲುವ ರೋಗಿಗಳಿಂದ ತುಂಬಿ ತುಳುಕುತ್ತಿವೆ. ಕೆಲವು ಕಡೆಗಳಲ್ಲಿ ಜನರು ಹೆಚ್ಚಾಗಿರುವುದರಿಂದ ಸರದಿಯಲ್ಲಿ ನಿಂತು ಚಿಕಿತ್ಸೆ ಪಡೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.ಸಮರೋಪಾದಿಯಲ್ಲಿ...: ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡಿರುವ ಡೆಂಗೆ ನಿಯಂತ್ರಣಕ್ಕೆ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ಇದು ಹೀಗೆ ಬಿಟ್ಟರೆ, ಹಿಂದಿನ ಕಾಲದಲ್ಲಿ ಪ್ಲೇಗ್, ಕಾಲರಾ ಬಂದಾಗ ಜನರು ಊರು ಬಿಟ್ಟು ಹೋಗುತ್ತಿದ್ದಂತೆ, ಡೆಂಗೆಗೂ ಹೆದರಿ ಊರು ಬಿಡುವ ಪರಿಸ್ಥಿತಿ ಎದುರಾಗಬಹುದು ಎಂದು ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಆತಂಕ ವ್ಯಕ್ತಪಡಿಸಿದ್ದಾರೆ.ಜಿಲ್ಲೆಗೆ ಪ್ರಥಮವಾಗಿ ಆಗಮಿಸುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಪ್ರಕಾಶ ಹುಕ್ಕೇರಿ ಅವರ ಮೇಲೆ ಡೆಂಗೆ ನಿಯಂತ್ರಣ ಮಾಡುವಂತಹ ಗುರುತರ ಜವಾಬ್ದಾರಿ ಇದ್ದು, ಅವರು ಜಿಲ್ಲೆಗೆ ಆಗಮಿಸಿ ಕೇವಲ ಅಧಿಕಾರಿಗಳ ಸಭೆ ನಡೆಸಿ ಹೋದರೆ ಸಾಲದು, ಅದನ್ನು ನಿರ್ಮೂಲನೆ ಮಾಡಲು ಬೇಕಾದ ಅಗತ್ಯ ಕ್ರಮಗಳನ್ನು ತೆಗೆದುಕೊಂಡು ಡೆಂಗೆ ಮುಕ್ತ ಜಿಲ್ಲೆಯನ್ನಾಗಿ ಮಾಡಬೇಕೆಂದು ಸಂಯುಕ್ತ ಜನತಾದಳ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಕೋರಿಶೆಟ್ಟರ ಒತ್ತಾಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.