ಸಚಿವ ಅಶೋಕ್ ವಿರುದ್ಧ ಮತ್ತೆ ದೂರು

7

ಸಚಿವ ಅಶೋಕ್ ವಿರುದ್ಧ ಮತ್ತೆ ದೂರು

Published:
Updated:

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವಶಪಡಿಸಿಕೊಂಡಿದ್ದ ಭೂಮಿಯನ್ನು ಕಾನೂನುಬಾಹಿರವಾಗಿ ಖರೀದಿಸಿ, ನಂತರ ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವ ಆರೋಪಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರ್.ಅಶೋಕ ವಿರುದ್ಧ ಜಯಕುಮಾರ್ ಹಿರೇಮಠ ಎಂಬುವರು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಬುಧವಾರ ಖಾಸಗಿ ದೂರು ಸಲ್ಲಿಸಿದ್ದಾರೆ. ದೂರಿನ ಬಗ್ಗೆ ಗುರುವಾರ ನ್ಯಾಯಾಲಯ ತನ್ನ ನಿರ್ಧಾರ ಪ್ರಕಟಿಸಲಿದೆ.ನಗರದ ಲೊಟ್ಟೆಗೊಲ್ಲಹಳ್ಳಿಯ ಎರಡು ಪ್ರತ್ಯೇಕ ಸರ್ವೆ ನಂಬರ್‌ಗಳ 23 ಗುಂಟೆ ಭೂಮಿಯನ್ನು ಖರೀದಿಸಿ, ನಂತರ ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವ ಆದೇಶ ಪಡೆದ ಆರೋಪ ಈ ದೂರಿನಲ್ಲಿದೆ. ಹಿಂದೆ ಇದೇ ಆರೋಪದ ಮೇಲೆ ವಿಜಯನಗರದ ಮಂಜುನಾಥ್ ಎಂಬುವರು ಅಶೋಕ ವಿರುದ್ಧ `ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ~ (ಲೋಕಾಯುಕ್ತ) ವಿಶೇಷ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ಕೆಲ ದಿನಗಳಲ್ಲೇ ದೂರನ್ನು ಹಿಂದಕ್ಕೆ ಪಡೆದಿದ್ದರು. ಎರಡನೇ ಬಾರಿ ದೂರು ದಾಖಲಾಗಿದೆ.ಹಿರಿಯ ವಕೀಲ ಎ.ಕೆ.ಸುಬ್ಬಯ್ಯ ಅವರೊಂದಿಗೆ ಬುಧವಾರ ಬೆಳಿಗ್ಗೆ ವಿಶೇಷ ನ್ಯಾಯಾಲಯಕ್ಕೆ ಬಂದ ಹಿರೇಮಠ, 17 ಪುಟಗಳ ದೂರು ಮತ್ತು 30 ಪುಟಗಳಷ್ಟು ದಾಖಲೆಗಳನ್ನು ಸಲ್ಲಿಸಿದರು. ದೂರನ್ನು ಸ್ವೀಕರಿಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್, ವಿಚಾರಣೆಗೆ ಅಂಗೀಕರಿಸುವ ಬಗ್ಗೆ ಗುರುವಾರ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದರು.ಅಶೋಕ ಅವರನ್ನು ಮೊದಲನೇ ಆರೋಪಿಯನ್ನಾಗಿ ದೂರಿನಲ್ಲಿ ಹೆಸರಿಸಲಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎರಡನೇ ಆರೋಪಿ. ಅಶೋಕ ಖರೀದಿಸಿದ ಭೂಮಿ ಮೂಲ ಮಾಲೀಕರಾದ ಶಾಮಣ್ಣ ಮತ್ತು ರಾಮಸ್ವಾಮಿ ಅವರನ್ನು ಮೂರನೇ, ನಾಲ್ಕನೇ ಆರೋಪಿಗಳನ್ನಾಗಿ ಹೆಸರಿಸಲಾಗಿದೆ.ದೂರಿನಲ್ಲಿ ಏನಿದೆ?:ರಾಜಮಹಲ್ ವಿಲಾಸ್ ಎರಡನೇ ಹಂತದ ಬಡಾವಣೆ ನಿರ್ಮಾಣಕ್ಕಾಗಿ ಬಿಡಿಎ ರೈತರಿಂದ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡು, ಭೂಮಿ ಸಂಪೂರ್ಣವಾಗಿ ಪ್ರಾಧಿಕಾರದ ವಶದಲ್ಲಿತ್ತು.ಆದರೆ, ಸತ್ಯಾಂಶವನ್ನು ಮರೆಮಾಚಿ ಅಶೋಕ ಅವರು ಲೊಟ್ಟೆಗೊಲ್ಲಹಳ್ಳಿಯ ಸರ್ವೆ ನಂಬರ್ 10/1ರ ಒಂಬತ್ತು ಗುಂಟೆ ಮತ್ತು 10/11 ಎಫ್‌ನ 14 ಗುಂಟೆಯನ್ನು ಖರೀದಿಸಿದ್ದರು. 2003 ಮತ್ತು 2007ರಲ್ಲಿ ಕಾನೂನುಬಾಹಿರವಾಗಿ ಒಟ್ಟು 23 ಗುಂಟೆ ಭೂಮಿಯನ್ನು ಖರೀದಿಸಲಾಗಿತ್ತು ಎಂಬ ಆರೋಪ ದೂರಿನಲ್ಲಿದೆ.`ಬಿಜೆಪಿ ಸರ್ಕಾರದಲ್ಲಿ ಅಶೋಕ ಅವರು ಸಚಿವರಾದರು. ಅವರು ಈ ಸರ್ಕಾರದಲ್ಲಿ ಪ್ರಭಾವಿ ಸಚಿವರೂ ಹೌದು. ಭೂಮಿಯ ಮೂಲ ಮಾಲೀಕರಾದ ಶಾಮಣ್ಣ ಮತ್ತು ರಾಮಸ್ವಾಮಿ ಅವರ ಹೆಸರಿನಲ್ಲಿ 2009ರಲ್ಲಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿ, ಲೊಟ್ಟೆಗೊಲ್ಲಹಳ್ಳಿಯ 23 ಗುಂಟೆ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವಂತೆ ಕೋರಿದ್ದರು. ಅದರ ಆಧಾರದಲ್ಲೇ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾನೂನುಬಾಹಿರವಾಗಿ ಆದೇಶ ಹೊರಡಿಸಿದ್ದರು~ ಎಂದು ಆರೋಪಿಸಲಾಗಿದೆ.ಸುತ್ತಮುತ್ತ ಬಿಡಿಎ ಅಭಿವೃದ್ಧಿಪಡಿಸಿದ ಸ್ವತ್ತುಗಳು ಇರುವ ಪ್ರದೇಶದಲ್ಲಿ ಅಶೋಕ ಅವರು ಕಾನೂನುಬಾಹಿರವಾಗಿ ಭೂಮಿ ಖರೀದಿಸಿ, ನಂತರ ಅದನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವ ಆದೇಶ ಪಡೆದಿದ್ದಾರೆ.

 

ಇದರಿಂದ ಸರ್ಕಾರದ ಬೊಕ್ಕಸಕ್ಕೆ 30 ಕೋಟಿ ರೂಪಾಯಿಗೂ ಹೆಚ್ಚು ನಷ್ಟವಾಗಿದ್ದು, ಅಶೋಕ ಅವರಿಗೆ ಲಾಭವಾಗಿದೆ ಎಂದು ದೂರಿದ್ದು, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.ಗುರುವಾರ ನಿರ್ಧಾರ: ಅಶೋಕ ವಿರುದ್ಧ ದೂರು ಸಲ್ಲಿಸುವ ಮುನ್ನ ಹಿರೇಮಠ ಅವರು ರಾಜ್ಯಪಾಲರು ಅಥವಾ ಮುಖ್ಯಮಂತ್ರಿಯಿಂದ ಅನುಮತಿ ಪಡೆದಿಲ್ಲ. ದೂರಿನಲ್ಲಿರುವ ಆರೋಪಗಳು ಮತ್ತು ಕಾನೂನಿನ ಅಂಶಗಳನ್ನು ಪರಿಶೀಲಿಸಿ ಗುರುವಾರ ನಿರ್ಧಾರ ಪ್ರಕಟಿಸುವುದಾಗಿ ನ್ಯಾಯಾಧೀಶರು ತಿಳಿಸಿದ್ದಾರೆ.ಗೃಹ ಸಚಿವರ ವಿರುದ್ಧ ದೂರು ಸಲ್ಲಿಸಿರುವ ಹಿರೇಮಠ ಜನಸಂಘದ ಸದಸ್ಯರಾಗಿದ್ದರು. ಮೂಲತಃ ಉತ್ತರ ಕರ್ನಾಟಕದವರಾದ ಇವರು, ಹಲವು ವರ್ಷಗಳಿಂದ ಬೆಂಗಳೂರಿನಲ್ಲೇ ನೆಲೆಸಿದ್ದಾರೆ. ಮಾಹಿತಿ ಹಕ್ಕು ಆಂದೋಲನ, ಮಾನವ ಹಕ್ಕು ಚಳವಳಿಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry