ಬುಧವಾರ, ಏಪ್ರಿಲ್ 21, 2021
23 °C

ಸಚಿವ ಅಶೋಕ ವಿರುದ್ಧ ತನಿಖೆಗೆ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭೂಹಗರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರ್.ಅಶೋಕ ಅವರ ವಿರುದ್ಧ ಎಂ. ಮಂಜುನಾಥ ಎನ್ನುವವರು ದಾಖಲು ಮಾಡಿರುವ ಖಾಸಗಿ ದೂರನ್ನು ವಿಚಾರಣೆಗೆ ಅಂಗೀಕರಿಸಿರುವ ಲೋಕಾಯುಕ್ತ ವಿಶೇಷ ಕೋರ್ಟ್ ಆದೇಶಕ್ಕೆ ಹೈಕೋರ್ಟ್ ಶುಕ್ರವಾರ ತಡೆ ನೀಡಿದೆ.ಈ ಆದೇಶದ ಹಿನ್ನೆಲೆಯಲ್ಲಿ, ಇವರ ವಿರುದ್ಧ ವಿಶೇಷ ಕೋರ್ಟ್ ನಡೆಸುತ್ತಿರುವ ವಿಚಾರಣೆಗೂ ತಡೆ ನೀಡಿದಂತಾಗಿದೆ. ಈ ತಡೆಯಾಜ್ಞೆಯು ಇದೇ 5ರವರೆಗೆ ಇರಲಿದ್ದು, ವಿಚಾರಣೆಯನ್ನು ಅಂದಿಗೆ ಮುಂದೂಡಲಾಗಿದೆ.ನಗರದ ಆರ್‌ಎಂವಿ ಬಡಾವಣೆಯ ಬಳಿ ಡಿನೋಟಿಫಿಕೇಷನ್ ವಿವಾದಕ್ಕೆ ಸಂಬಂಧಿಸಿದಂತೆ ವಿಜಯನಗರದ ನಿವಾಸಿ ಎಂ.ಮಂಜುನಾಥ ಎನ್ನುವವರು ದಾಖಲು ಮಾಡಿದ್ದ ಖಾಸಗಿ ದೂರನ್ನು ವಿಶೇಷ ಕೋರ್ಟ್ ವಿಚಾರಣೆಗೆ ಅಂಗೀಕರಿಸಿದ್ದು ಅದನ್ನು ಅಶೋಕ ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.ರಾಜ್ಯಪಾಲರ ಅನುಮತಿ ಇಲ್ಲ: ಸಾರ್ವಜನಿಕ ಸೇವಕರ ವಿರುದ್ಧ ದೂರು ದಾಖಲು ಮಾಡುವ ಪೂರ್ವದಲ್ಲಿ ರಾಜ್ಯಪಾಲರ ಅನುಮತಿ ಕಡ್ಡಾಯ. ಆದರೆ ಅಶೋಕ ವಿರುದ್ಧ ಮಂಜುನಾಥ ಅವರು ರಾಜ್ಯಪಾಲರ ಅನುಮತಿ ಪಡೆದುಕೊಳ್ಳದೇ ಖಾಸಗಿ ದೂರು ದಾಖಲು ಮಾಡಿದ್ದರೂ ಅದನ್ನು ಕೋರ್ಟ್ ವಿಚಾರಣೆಗೆ ಅಂಗೀಕರಿಸಿದ್ದು, ಅದು ಕಾನೂನು ಬಾಹಿರ. ‘ರಾಜ್ಯಪಾಲರ ಅನುಮತಿಯನ್ನು ಮುಂದೆ ನೀಡಲಾಗುವುದು’ ಎಂದು ದೂರಿನಲ್ಲಿ ತಿಳಿಸಲಾಗಿದ್ದು ಅದರ ಆಧಾರದ ಮೇಲೆ ಕೋರ್ಟ್ ವಿಚಾರಣೆ ಕೈಗೊಂಡಿರುವುದು ಸರಿಯಲ್ಲ ಎಂದು ಅವರ ಪರ ವಾದಿಸುತ್ತಿರುವ ಮಾಜಿ ಅಡ್ವೊಕೇಟ್ ಜನರಲ್ ಬಿ.ವಿ.ಆಚಾರ್ಯ ತಿಳಿಸಿದರು. ಅಶೋಕ ಅವರ ವಿರುದ್ಧದ  ದೂರಿನಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಕಾಯ್ದೆ ಉಲ್ಲಂಘನೆ ಆಗಿದೆ ಎಂಬ ಬಗ್ಗೆ ಯಾವುದೇ ರೀತಿಯ ಉಲ್ಲೇಖವಿಲ್ಲ ಎಂದು ವಾದಿಸಿದರು.ಇದು ರಾಜಕೀಯ ದುರುದ್ದೇಶದಿಂದ ಮಾಡಿರುವ ಆರೋಪ. ಅಷ್ಟೇ ಅಲ್ಲದೇ ಅಶೋಕ ಅವರ ವಿರುದ್ಧ ಬೇರೊಬ್ಬರು ಇದೇ ಆರೋಪ ಮಾಡಿ ದೂರು ದಾಖಲಿಸಲು ಕೋರಿದ್ದ ಅನುಮತಿಯನ್ನು ರಾಜ್ಯಪಾಲರು ತಿರಸ್ಕರಿಸಿದ್ದರು ಎಂದು ಅವರು ತಿಳಿಸಿದರು.ಸಿಎಂ ಇನ್ನೂ ನಿರಾಳ

ಭೂಹಗರಣಕ್ಕೆ ಸಂಬಂಧಿಸಿದಂತೆ ವಕೀಲ ಸಿರಾಜಿನ್ ಬಾಷಾ ಅವರು ದಾಖಲು ಮಾಡಿರುವ ಎಲ್ಲ ದೂರುಗಳ ಅನ್ವಯ ಮುಂದಿನ ಪ್ರಕ್ರಿಯೆಗೆ ಹೈಕೋರ್ಟ್ ಶುಕ್ರವಾರ ತಡೆ ನೀಡಿದ್ದು, ಇದರಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇನ್ನಷ್ಟು ನಿರಾಳರಾಗಿದ್ದಾರೆ.ಬಾಷಾ ಅವರು ಐದು ಪ್ರತ್ಯೇಕ ದೂರು ದಾಖಲಿಸಿದ್ದರು. ಅದರಲ್ಲಿ ಯಡಿಯೂರಪ್ಪ ಸೇರಿದಂತೆ ಅವರ ಅಳಿಯ ಸೋಹನ್‌ಕುಮಾರ್, ಅವರ ಕುಟುಂಬದ ಒಡೆತನದ ಧವಳಗಿರಿ ಪ್ರಾಪರ್ಟೀಸ್ ಹಾಗೂ ಇತರರು ಆರೋಪಿಗಳು. ಕಳೆದ ಬಾರಿ ವಿಚಾರಣೆ ವೇಳೆ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತ್ರ ಹೈಕೋರ್ಟ್ ತಡೆ ನೀಡಿತ್ತು. ಉಳಿದ ನಾಲ್ಕು ಪ್ರಕರಣಗಳ ತನಿಖೆಗೆ ತಡೆ ಕೋರಿ ಸೋಹನ್‌ಕುಮಾರ್ ಹಾಗೂ ಇತರರು ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ. ಕೆ.ಎನ್.ಕೇಶವನಾರಾಯಣ ಎಲ್ಲ ಪ್ರಕರಣಗಳಿಗೆ ಮಧ್ಯಂತರ ತಡೆ ನೀಡಿ ವಿಚಾರಣೆ ಮುಂದೂಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.