ಸಚಿವ ಕತ್ತಿ ಉಚ್ಚಾಟನೆಗೆ ಒತ್ತಾಯ

7

ಸಚಿವ ಕತ್ತಿ ಉಚ್ಚಾಟನೆಗೆ ಒತ್ತಾಯ

Published:
Updated:

ರಾಜ್ಯ ವಿಭಜನೆ ಕುರಿತ ಹೇಳಿಕೆಗೆ ಭಾರಿ ವಿರೋಧಬೆಂಗಳೂರು: ರಾಜ್ಯ ವಿಭಜನೆಯ ಕುರಿತು ಕೃಷಿ ಸಚಿವ ಉಮೇಶ ಕತ್ತಿ ನೀಡಿರುವ ಹೇಳಿಕೆಗೆ ಸಮಾಜದ ವಿವಿಧ ವಲಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.`ರಾಜ್ಯದ ಐಕ್ಯತೆಗೆ ಭಂಗ ತರುವಂತಹ ಹೇಳಿಕೆಯನ್ನು ನೀಡುತ್ತಿರುವ ಸಚಿವ ಉಮೇಶ್ ಕತ್ತಿ ಅವರನ್ನು ಕೂಡಲೇ ಪಕ್ಷದಿಂದ ಉಚ್ಚಾಟನೆ ಮಾಡಬೇಕು~ ಎಂದು ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ರಾಜ್ಯ ವಕ್ತಾರ ಪ್ರೊ.ರವೀಂದ್ರ ರೇಷ್ಮೆ ಹೇಳಿದರು.ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, `ಕರ್ನಾಟಕದ ಏಕೀಕರಣಕ್ಕೆ ಉತ್ತರ ಕರ್ನಾಟಕದ ಜನತೆಯ ಕೊಡುಗೆ ಮಹತ್ವವಾದದ್ದು. ಉಮೇಶ್ ಕತ್ತಿ ಈ ವಿಚಾರವನ್ನು ಅರಿಯಬೇಕು, ರಾಜ್ಯದ ಹಿತವನ್ನು ಹಾಳು ಮಾಡುವ ಕೆಲಸವನ್ನು ಮಾಡಬಾರದು~ ಎಂದು ಹೇಳಿದರು.`ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧದ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ  ಪ್ರತ್ಯೇಕ ರಾಜ್ಯವಾಗಬೇಕು ಎಂಬ ಕತ್ತಿಯವರ ಹೇಳಿಕೆಯನ್ನು ನಮ್ಮ ಪಕ್ಷ ವಿರೋಧಿಸುತ್ತದೆ~ ಎಂದರು.ಕನ್ನಡ ಸಂಘಟನೆಗಳಿಂದ ವಿರೋಧ:

ಕರ್ನಾಟಕ ಗಡಿ ಹೋರಾಟ ಸಮಿತಿಯ ಅಧ್ಯಕ್ಷ ಪ್ರೊ.ಬಿ.ಕೆ.ರಾ.ರಾವ್‌ಬೈಂದೂರ್, `ಏಕೀಕೃತ ಕರ್ನಾಟಕವನ್ನು ತಮ್ಮ ಸ್ವಾರ್ಥಕ್ಕಾಗಿ ಒಡೆದಾಳುವ ಬಗ್ಗೆ ಹೇಳಿಕೆ ನೀಡಿರುವ ಉಮೇಶ್ ಕತ್ತಿ ಅವರನ್ನು ಗಡಿಪಾರು ಮಾಡಬೇಕು~ ಎಂದು ಆಗ್ರಹಿಸಿದ್ದಾರೆ.`ರಾಜ್ಯವನ್ನು ಕಟ್ಟುವ ಸಲುವಾಗಿ ಅನೇಕ ಮಹನೀಯರು ಹೋರಾಟ ಮತ್ತು ತ್ಯಾಗ ಮಾಡಿದ್ದಾರೆ.ಜನಪ್ರತಿನಿಧಿಯಾಗಿ ಈ ರೀತಿ ಹೇಳಿಕೆ ನೀಡುವ ಮೂಲಕ ಕತ್ತಿ ಜನರಿಗೆ ಅವಮಾನ ಮಾಡಿದ್ದಾರೆ. ಈ ಕೂಡಲೇ ತಪ್ಪು ಒಪ್ಪಿಕೊಂಡು ಜನರ ಕ್ಷಮೆ ಯಾಚಿಸಬೇಕು~ ಎಂದು ತಿಳಿಸಿದ್ದಾರೆ.ಕನ್ನಡ ಗೆಳೆಯರ ಬಳಗದ ಅಧ್ಯಕ್ಷ ರಾ.ನಂ.ಚಂದ್ರಶೇಖರ್, `ರಾಜ್ಯವನ್ನು ಉತ್ತರ, ದಕ್ಷಿಣವೆಂದು ವಿಭಜಿಸಿದರೆ ಕನ್ನಡದ ಸಂಸ್ಕೃತಿಯ ಉಳಿಯಲು ಹೇಗೆ ಸಾಧ್ಯವಿದೆ. ಹಾಗಾಗಿ ಸರ್ಕಾರ ಕತ್ತಿಯ ಮಾತನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಅವರಿಗೆ ನೋಟಿಸ್ ಜಾರಿಗೊಳಿಸಬೇಕು~ ಎಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry