ಮಂಗಳವಾರ, ನವೆಂಬರ್ 19, 2019
29 °C
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ

ಸಚಿವ ಬೆಳಮಗಿಗೆ ದಂಡ

Published:
Updated:

ಕೊಪ್ಪಳ: ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ 2011ರಲ್ಲಿ ನಡೆದ ಉಪ ಚುನಾವಣೆ ಸಂದರ್ಭದಲ್ಲಿ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಪಶು ಸಂಗೋಪನಾ ಸಚಿವ ರೇವೂ ನಾಯಕ ಬೆಳಮಗಿ ಅವರಿಗೆ ಕೇಂದ್ರ ಚುನಾವಣಾ ಆಯೋಗವು ರೂ 25,820 ದಂಡ ವಿಧಿಸಿದೆ.ಈ ಮೂಲಕ ಚುನಾವಣಾ ನೀತಿ ಸಂಹಿತೆ ಪಾಲಿಸದ ರಾಜಕೀಯ ಮುಖಂಡರಿಗೆ ಆಯೋಗವು ಚಾಟಿ ಬೀಸಿದೆ. ಅಲ್ಲದೇ, ವಿಧಾನಸಭೆ ಚುನಾವಣಾ ಕಾವು ಏರುತ್ತಿರುವ ಈ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಸಚಿವರೊಬ್ಬರಿಗೆ ದಂಡ ವಿಧಿಸಿರುವುದು ಸಹ ಎಲ್ಲ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆಯ ಗಂಟೆಯೂ ಆಗಿದೆ.ಈ ವಿಷಯವನ್ನು ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ತುಳಸಿ ಮದ್ದಿನೇನಿ ಅವರು `ಪ್ರಜಾವಾಣಿ'ಗೆ ಖಚಿತಪಡಿಸಿದ್ದಾರೆ.2011ರ ಸೆಪ್ಟೆಂಬರ್‌ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಾಸಕ ಸಂಗಣ್ಣ ಕರಡಿ ಪರ ಪ್ರಚಾರಕ್ಕಾಗಿ ಸಚಿವ ಬೆಳಮಗಿ ಜಿಲ್ಲೆಗೆ ಆಗಮಿಸಿದ್ದರು. ನೀತಿ ಸಂಹಿತೆ  ಉಲ್ಲಂಘಿಸಿ ಸಚಿವರು ಸರ್ಕಾರಿ ವಾಹನದ ಮೂಲಕ ಜಿಲ್ಲೆಯ ಗಡಿ ಪ್ರವೇಶ ಮಾಡಿದ್ದರು.ಈ ಹಿನ್ನೆಲೆಯಲ್ಲಿ ಕೊಪ್ಪಳದಿಂದ ಹೊಸಪೇಟೆ ರಸ್ತೆಯಲ್ಲಿ 15 ಕಿ.ಮೀ. ದೂರದಲ್ಲಿ ಸಚಿವರ ಕಾರನ್ನು ಜಪ್ತಿ ಮಾಡಿದ್ದ ಚುನಾವಣಾ ಸಿಬ್ಬಂದಿ, ಅವರ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದರು.ಪ್ರತಿ ಕಿ.ಮೀ. ಗೆ ರೂ 20 ರಂತೆ 1,291 ಕಿ.ಮೀ.ಗೆ ಒಟ್ಟು ರೂ 25,820  ದಂಡ ವಿಧಿಸಲಾಗಿದೆ. 2011ರ ಸೆ. 30ರಂದು ದಂಡ ಪಾವತಿಗೆ ಸೂಚಿಸಲಾಗಿತ್ತು. ಸಚಿವ ಬೆಳಮಗಿ ಅವರು ಈ ದಂಡದ ಮೊತ್ತವನ್ನು 2013ರ ಏ. 2ರಂದು ಬೆಂಗಳೂರಿನಲ್ಲಿ ಪಾವತಿಸಿದ್ದಾರೆ ಎಂದೂ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)