ಸಚಿವ ಸಂಪುಟದ ಅನುಮೋದನೆ: ಪ್ರಮೋದ್‌

7
ಕುಡಿಯುವ ನೀರು ಪೂರೈಕೆ, ಒಳ ಚರಂಡಿ ಕಾಮಗಾರಿ

ಸಚಿವ ಸಂಪುಟದ ಅನುಮೋದನೆ: ಪ್ರಮೋದ್‌

Published:
Updated:

ಉಡುಪಿ: ‘ಕುಡ್ಸೆಂಪ್‌ ಎರಡನೇ ಹಂತದ ಯೋಜನೆಯ ಮೂಲಕ ಉಡುಪಿ ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡಲು ಮತ್ತು ಒಳ ಚರಂಡಿ ಕಾಮಗಾರಿ ಕೈಗೊಳ್ಳಲು ಸಚಿವ ಸಂಪುಟದ ಅನುಮೋದನೆ ಸಿಕ್ಕಿದೆ. ಅಧಿಕಾರಿಗಳ ತಂಡ ಉಡುಪಿಗೆ ಬಂದು ಸರ್ವೆ ಮಾಡಿದ ನಂತರ ಯೋಜನೆ ಅನುಷ್ಠಾನವಾಗಲಿದೆ. ಈ ಹಿಂದೆ ನಡೆಸಿದ ಕೆಲವು ಒಳಚರಂಡಿ ಕಾಮಗಾರಿಗಳಲ್ಲಿ ಲೋಪ ಇದೆ’ ಎಂದು ಶಾಸಕ ಪ್ರಮೋದ್‌ ಮಧ್ವರಾಜ್‌ ಹೇಳಿದರು.ಉಡುಪಿ ನಗರಸಭೆಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಕೇಳಿದ ಪ್ರಶ್ನೆಗೆ ಅವರು ಉತ್ತರ ನೀಡಿದರು.

ಉಡುಪಿ ನಗರದಲ್ಲಿ ತಳ್ಳುಗಾಡಿ ಮತ್ತು ರಸ್ತೆಯಲ್ಲಿ ಅನಧಿಕೃತ ಗೂಡಂಗಡಿಗಳು ಆರಂಭವಾಗುತ್ತಿರುವುದರಿಂದ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಕೆಲವರು ತಳ್ಳುಗಾಡಿಗಳಿಂದ ಅನಧಿಕೃತವಾಗಿ ಶುಲ್ಕ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳಿವೆ ಎಂದು ವಿರೋಧ ಪಕ್ಷದ ನಾಯಕ ಡಾ. ಎಂ.ಆರ್‌. ಪೈ ಹೇಳಿದರು.

ಇದಕ್ಕೆ ಉತ್ತರ ನೀಡಿದ ಅಧ್ಯಕ್ಷ ಪಿ. ಯುವರಾಜ, ನಮ್ಮ ಆಡಳಿತ ಅವಧಿಯಲ್ಲಿ ಹೊಸ ಪರವಾನಗಿಗಳನ್ನು ನೀಡಿಲ್ಲ ಎಂದರು. ಅನಧಿಕೃತ ತಳ್ಳುಗಾಡಿಗಳನ್ನು ಮತ್ತು ಗೂಡಂಗಡಿಗಳನ್ನು ತೆರವು ಮಾಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ‘ತಳ್ಳುಗಾಡಿಗಳಿಂದ ಅನಧಿಕೃತವಾಗಿ ಶುಲ್ಕ ವಸೂಲಿ ಮಾಡುತ್ತಿರುವ ಬಗ್ಗೆ ಗುತ್ತಿಗೆದಾರರಿಗೆ ಶೋಕಾಸ್‌ ನೋಟಿಸ್‌ ನೀಡಲಾಗಿದೆ. ಅವರಿಂದ ಉತ್ತರ ಬಂದ ನಂತರ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಪೌರಾಯುಕ್ತ ಶ್ರೀಕಾಂತ್ ರಾವ್‌ ಹೇಳಿದರು.ಅಂಬಲಪಾಡಿ ಹಾಗೂ ನಗರದ ವಿವಿಧ ಸ್ಥಳಗಳಲ್ಲಿ ಅಳವಡಿಸಿದ ಬ್ಯಾನರ್‌ ಕಟೌಟ್‌ಗಳಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಸದಸ್ಯೆ ವಸಂತಿ ಶೆಟ್ಟಿ ದೂರಿದರು. ‘ಅವಧಿ ಮುಗಿದರೂ ತೆರವು ಮಾಡದ ಬ್ಯಾನರ್‌, ಕಟೌಟ್‌ಗಳ ಬಗ್ಗೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ಯುವರಾಜ ಸೂಚನೆ ನೀಡಿದರು.ಉಡುಪಿ ಉತ್ಸವದ ಟಿಕೆಟ್‌ನಲ್ಲಿ ನ್ಯಾಷನಲ್‌ ಕನ್ಸೂಮರ್‌ ಫೇರ್‌ ಎಂದು ನಮೂದಿಸಲಾಗಿದೆ. ಆದರೆ ವಾಹನ ನಿಲ್ದಾಣ ಸ್ಥಳದಲ್ಲಿ ಉಡುಪಿ ಉತ್ಸವ ಸಮಿತಿ ಎಂದು ನಮೂದಾಗಿದೆ. ಏನಾದರೂ ಅವಘಡ ಸಂಭವಿಸಿದರೆ ಅದಕ್ಕೆ ಉಡುಪಿ ಉತ್ಸವ ಸಮಿತಿ ಅಥವಾ ಕನ್ಸೂಮರ್ ಫೇರ್‌ ಇವರಿಬ್ಬರಲ್ಲಿ ಯಾರು ಹೊಣೆ ಎಂದು ಎಂ.ಆರ್‌. ಪೈ ಪ್ರಶ್ನಿಸಿದರು.ಮಧ್ಯಪ್ರವೇಶಿಸಿದ ಸದಸ್ಯ ರಮೇಶ್‌ ಕಾಂಚನ್‌ ಅವರು ‘ಉಡುಪಿ ಉತ್ಸವದ ಬಗ್ಗೆ ಪ್ರಶ್ನೆ ಕೇಳಲು ನಿಮಗೆ ನೈತಿಕ ಹಕ್ಕಿಲ್ಲ. ಈ ಹಿಂದೆ ಸಭೆ ನಡೆದಾಗಲೇ ನೀವು ಈ ಬಗ್ಗೆ ಸಲಹೆ ನೀಡಬಹುದಿತ್ತಲ್ಲ’ ಎಂದು ಹೇಳಿದರು. ಈ ಸಂದರ್ಭದಲ್ಲಿ ಸದಸ್ಯರ ಮಧ್ಯೆ ವಾಗ್ವಾದ ನಡೆಯಿತು.

‘ಸುರಕ್ಷತಾ ಕ್ರಮಗಳ ಬಗ್ಗೆ ನಿರಾಕ್ಷೇಪಣಾ ಪತ್ರವನ್ನು ನ್ಯಾಷನಲ್‌ ಕನ್ಸೂಮರ್‌ ಫೇರ್‌ನವರು ಪಡೆದು­ಕೊಂಡಿ­ದ್ದಾರೆ.

ಅಗತ್ಯ ಪರವಾನಗಿಯನ್ನು ಜಿಲ್ಲಾಧಿ­ಕಾರಿ ಕಚೇರಿಯಿಂದಲೂ ಪಡೆದು­ಕೊಂಡಿದ್ದಾರೆ’ ಎಂದು ಶ್ರೀಕಾಂತ್‌ ರಾವ್‌ ಸ್ಪಷ್ಟಪಡಿಸಿದರು.

ಉಪಾಧ್ಯಕ್ಷೆ ಅಮೃತಾ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry