ಮಂಗಳವಾರ, ಅಕ್ಟೋಬರ್ 22, 2019
22 °C

ಸಚಿವ ಸಂಪುಟ ಒಪ್ಪಿಗೆ ಸಾಧ್ಯತೆ

Published:
Updated:

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಮಿಸಲು ಉದ್ದೇಶಿಸಿರುವ ಪೆರಿಫೆರಲ್ ವರ್ತುಲ ರಸ್ತೆಗೆ ಸಚಿವ ಸಂಪುಟದ ಒಪ್ಪಿಗೆ ದೊರೆಯುವ ನಿರೀಕ್ಷೆ ಇದ್ದು, ರಸ್ತೆ ನಿರ್ಮಾಣಕ್ಕೆಂದು ಸ್ವಾಧೀನಪಡಿಸಿಕೊಂಡಿರುವ ಭೂಮಿಗೆ ಪರಿಹಾರ ಧನ ನಿಗದಿಯಾಗಲಿದೆ.ತುಮಕೂರು ಮತ್ತು ಹೊಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ 65 ಕಿ.ಮೀ ಉದ್ದದ ರಸ್ತೆ ಬಳಸಲು ವಾಹನ ಚಾಲಕರು ಟೋಲ್ ನೀಡಬೇಕಾಗುತ್ತದೆ. `ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಮಾನದಂಡದ ಅನ್ವಯ ಟೋಲ್ ದರ ನಿಗದಿಪಡಿಸಲಾಗುತ್ತದೆ. ಒಟ್ಟು ಹತ್ತು ಟೋಲ್ ಬೂತ್‌ಗಳನ್ನು ನಿರ್ಮಿಸಲಾಗುತ್ತದೆ. ರಸ್ತೆ ಬಳಕೆದಾರರು ಟೋಲ್ ನೀಡಬೇಕಾಗುತ್ತದೆ~ ಎಂದು ರಾಜ್ಯ ಸರ್ಕಾರದ ಮೂಲಗಳು ತಿಳಿಸಿವೆ.ಸಾರ್ವಜನಿಕ ಮತ್ತು ಖಾಸಗಿ (ಪಿಪಿಪಿ) ಸಹಭಾಗಿತ್ವದಲ್ಲಿ ಈ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಟೆಂಡರ್ ಪಡೆಯುವ ಕಂಪೆನಿಗೆ 20 ವರ್ಷಗಳ ಅವಧಿಗೆ ಭೂಮಿಯನ್ನು ಹಸ್ತಾಂತರಿಸಲಾಗುತ್ತದೆ. ಟೆಂಡರ್ ಪಡೆದ ಕಂಪೆನಿ ರಸ್ತೆ ನಿರ್ಮಿಸಲಿದ್ದು, ನಿರ್ದಿಷ್ಟ ಅವಧಿಗೆ ಮಾಲೀಕತ್ವ ಪಡೆಯಲಿದೆ. ಅವಧಿ ಮುಗಿದ ನಂತರ ರಸ್ತೆಯನ್ನು ಬಿಡಿಎಗೆ ಹಸ್ತಾಂತರಿಸಬೇಕಾಗುತ್ತದೆ.ಭೂಮಿ ಹಸ್ತಾಂತರ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಟೆಂಡರ್ ಪ್ರಕ್ರಿಯೆ ಮುಗಿದ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಎನ್‌ಎಚ್‌ಎಐ ಮಾನದಂಡದ ಅನ್ವಯ ಟೋಲ್ ದರ ನಿಗದಿಯಾಗಲಿದೆ. ಈಗಾಗಲೇ ರಾಜ್ಯ ಹಾಗೂ ರಾಷ್ಟ್ರದಲ್ಲಿ ಈ ದರಗಳನ್ನೇ ವಿಧಿಸಲಾಗುತ್ತಿದೆ. ರಸ್ತೆ ನಿರ್ಮಾಣ ಪೂರ್ಣಗೊಂಡ ನಂತರ ದರ ನಿಗದಿಯಾಗುತ್ತದೆ.ಕೆಲ ವಿವಾದಗಳಿಂದಾಗಿ ಈ ಯೋಜನೆ ಏಳು ವರ್ಷಗಳಿಂದ ತೂಗುಯ್ಯಾಲೆಯಲ್ಲಿತ್ತು. ತುಮಕೂರು ರಸ್ತೆಯಿಂದ ಹೊಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ವಾಹನ ದಟ್ಟಣೆ ತೀವ್ರವಾಗಿದ್ದು, ಜನತೆ ತೊಂದರೆ ಅನುಭವಿಸುತ್ತಿದ್ದಾರೆ. ಪರಿಣಾಮವಾಗಿ ನಗರದ ಮಧ್ಯದಲ್ಲೇ ಸಂಚರಿಸಬೇಕಾದ ಅನಿವಾರ್ಯತೆ ಇದೆ. ಆ ಹಿನ್ನೆಲೆಯಲ್ಲಿ ಸರ್ಕಾರ ಪೆರಿಫೆರಲ್ ರಸ್ತೆ ನಿರ್ಮಾಣಕ್ಕೆ ಮುಂದಾಗಿತ್ತು.ರಸ್ತೆ ನಿರ್ಮಾಣ ಮತ್ತು ನಿರ್ವಹಣೆ ಜವಾಬ್ದಾರಿಯನ್ನು ಎನ್‌ಎಚ್‌ಎಐಗೆ ನೀಡಲು ಬಿಡಿಎ ಮೊದಲು ನಿರ್ಧರಿಸಿತ್ತು. ಆದರೆ ಕಾರಣಾಂತರಗಳಿಂದ ಈ ಯೋಜನೆ ಜಾರಿ ಸಾಧ್ಯವಾಗಿರಲಿಲ್ಲ. ಆದ್ದರಿಂದ ಬಿಡಿಎ ಪಿಪಿಪಿ ಮಾದರಿಯಲ್ಲಿ ಸ್ವತಃ ರಸ್ತೆ ನಿರ್ಮಾಣ ಯೋಜನೆ ಕೈಗೆತ್ತಿಕೊಂಡಿದೆ. ನೂರು ಮೀಟರ್ ಅಗಲ ಮತ್ತು ಅರವತ್ತೈದು ಮೀಟರ್ ಅಗಲದ ರಸ್ತೆ ನಿರ್ಮಾಣ ಮಾಡಲು ನಿರ್ಧರಿಸಲಾಗಿದ್ದು, ಸುಮಾರು 1,988 ಎಕರೆ ಭೂಮಿ ಬಳಕೆಯಾಗುವ ಸಾಧ್ಯತೆ ಇದೆ.ರಸ್ತೆ ನಿರ್ಮಾಣದಲ್ಲಿ ಅನುಭವ ಇರುವ ಒಂಬತ್ತು ಕಂಪೆನಿಗಳು ಟೆಂಡರ್ ಪಡೆಯಲು ಮುಂದೆ ಬಂದಿವೆ. ಒಂದೇ ಕಂಪೆನಿ ರಸ್ತೆ ನಿರ್ಮಾಣ ಕಾಮಗಾರಿ ಮಾಡಲಿದೆಯೇ ಅಥವಾ ಕಂಪೆನಿಗಳ ಒಕ್ಕೂಟ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ ಎಂದು ಮೂಲಗಳು ಹೇಳಿವೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)