ಸಚಿವ ಸಲ್ಮಾನ್ ಖುರ್ಷಿದ್ ಕರೆ:ಪ್ರತಿಭಾವಂತರು ವಕೀಲಿ ವೃತ್ತಿಗೆ ಬರಲಿ

7

ಸಚಿವ ಸಲ್ಮಾನ್ ಖುರ್ಷಿದ್ ಕರೆ:ಪ್ರತಿಭಾವಂತರು ವಕೀಲಿ ವೃತ್ತಿಗೆ ಬರಲಿ

Published:
Updated:
ಸಚಿವ ಸಲ್ಮಾನ್ ಖುರ್ಷಿದ್ ಕರೆ:ಪ್ರತಿಭಾವಂತರು ವಕೀಲಿ ವೃತ್ತಿಗೆ ಬರಲಿ

ಬೆಂಗಳೂರು: ಪ್ರತಿಭಾವಂತ ಕಾನೂನು ಪದವೀಧರರು ವಕೀಲಿ ವೃತ್ತಿ ಆರಂಭಿಸದೆ, ಕಾರ್ಪೊರೇಟ್ ಸಂಸ್ಥೆಗಳನ್ನು ಸೇರುತ್ತಿದ್ದಾರೆ ಎಂದ ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ವಿಷಾದಿಸಿದರು.`ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕಾಗಿ ಮಿಷನ್ ಮೋಡ್~ ಕಾರ್ಯಕ್ರಮಕ್ಕೆ ಹೈಕೋರ್ಟ್‌ನಲ್ಲಿ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, `ಯವ, ಪ್ರತಿಭಾವಂತ ಕಾನೂನು ಪದವೀಧರರನ್ನು ವಕೀಲಿ ವೃತ್ತಿಯೆಡೆಗೆ ಆಕರ್ಷಿಸುವ ಅವಶ್ಯಕತೆ ಇದೆ~ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.`ನ್ಯಾಯಾಧೀಶರು ವಿದೇಶಗಳಿಗೆ ಅಧ್ಯಯನ ಪ್ರವಾಸ ಕೈಗೊಳ್ಳುವುದನ್ನು ಕೆಲವರು ವಿರೋಧಿಸುತ್ತಾರೆ. ಆದರೆ ಜಾಗತಿಕ ಮಟ್ಟದಲ್ಲಿ ನ್ಯಾಯದಾನ ವ್ಯವಸ್ಥೆಯಲ್ಲಿ ಆಗಿರುವ ಬದಲಾವಣೆಗಳು ಹಾಗೂ ಬೆಳವಣಿಗೆಗಳನ್ನು ಅರ್ಥ ಮಾಡಿಕೊಳ್ಳಲು ನ್ಯಾಯಾಧೀಶರು ವಿದೇಶಕ್ಕೆ ತೆರಳುವುದನ್ನು ನಾನು ಬೆಂಬಲಿಸುತ್ತೇನೆ~ ಎಂದು ಹೇಳಿದರು.ಆರ್ಥಿಕ ವಿಷಯಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಜಾಗತಿಕ ಮಟ್ಟದಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ದೇಶದ ನ್ಯಾಯದಾನ ವ್ಯವಸ್ಥೆ ತೆರೆದುಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ತಮ್ಮ ಮುಂದಿರುವ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವ ಭರದಲ್ಲಿ ನ್ಯಾಯ ತೀರ್ಮಾನದ ಗುಣಮಟ್ಟಕ್ಕೆ ಧಕ್ಕೆ ಆಗಬಾರದು. ನ್ಯಾಯಾಲಯಗಳ ಸುಧಾರಣಾ ಪ್ರಕ್ರಿಯೆಯ ಭಾಗವಾಗಿ ರಾಜ್ಯದ ಹೈಕೋರ್ಟ್ ಹಾಗೂ ಇತರ ಎಲ್ಲ ನ್ಯಾಯಾಲಯಗಳನ್ನೂ ಗಣಕೀಕರಣಗೊಳಿಸಬೇಕು ಎಂದು ಅವರು ಕಿವಿಮಾತು ಹೇಳಿದರು.ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸನ್ನು ಈಗಿರುವ 62 ವರ್ಷದಿಂದ 65ಕ್ಕೆ ಹೆಚ್ಚಿಸುವ ಪ್ರಸ್ತಾವ ಕೇಂದ್ರ ಸರ್ಕಾರದ ಮುಂದಿದೆ ಎಂದು ಖುರ್ಷಿದ್ ತಿಳಿಸಿದರು.

ಅರ್ಜಿದಾರರ ಮಾನಸಿಕ ಸ್ಥಿತಿ, ಸಾಮಾಜಿಕ ಹಿನ್ನೆಲೆಯನ್ನು ಅರಿಯಲು ನ್ಯಾಯಾಧೀಶರು ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಮನೋವಿಜ್ಞಾನದ ಕುರಿತು ಅಧ್ಯಯನ ನಡೆಸಬೇಕು. ಬಡತನ ತಂದೊಡ್ಡುವ ಸಮಸ್ಯೆ, ರೈತರನ್ನು ಕಾಡುತ್ತಿರುವ ಸಮಸ್ಯೆಗಳನ್ನು ನ್ಯಾಯಾಧೀಶರು ತಿಳಿದಿರಬೇಕು ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಪಿ. ಸದಾಶಿವಂ ಹೇಳಿದರು.ನ್ಯಾಯಾಲಯಗಳಲ್ಲಿ ದಾಖಲಾಗುತ್ತಿರುವ ದೂರುಗಳ ಸಂಖ್ಯೆ ಹೆಚ್ಚುತ್ತಿದೆ. ಅವುಗಳ ತ್ವರಿತ ಇತ್ಯರ್ಥಕ್ಕೆ ನ್ಯಾಯಾಧೀಶರ ಸಂಖ್ಯೆಯೂ ಹೆಚ್ಚಬೇಕು ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹೇಳಿದರು.ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್. ಸುರೇಶ್‌ಕುಮಾರ್, ಹೈಕೋರ್ಟ್ ನ್ಯಾಯಮೂರ್ತಿ ಕೆ. ಶ್ರೀಧರ ರಾವ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry