ಶುಕ್ರವಾರ, ನವೆಂಬರ್ 22, 2019
27 °C
`ಕಾವೇರಿ ಕುಡಿಯುವ ನೀರಿನ ಯೋಜನೆ ಬಗ್ಗೆ ಬಹಿರಂಗ ಚರ್ಚೆಯಾಗಲಿ'

ಸಚಿವ ಸುರೇಶಕುಮಾರ್‌ಗೆ ದೇವೇಗೌಡರ ಸವಾಲು

Published:
Updated:
ಸಚಿವ ಸುರೇಶಕುಮಾರ್‌ಗೆ ದೇವೇಗೌಡರ ಸವಾಲು

ಬೆಂಗಳೂರು: `ನಗರಕ್ಕೆ ಕುಡಿಯುವ ನೀರು ಪೂರೈಸುವ ಹೊಸ ಯೋಜನೆಗಳಿಗೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಸಚಿವ ಸುರೇಶಕುಮಾರ್ ಅವರು ಕೈಗೊಂಡಿರುವ ಕ್ರಮಗಳ ಬಗ್ಗೆ ಬಹಿರಂಗ ಚರ್ಚೆ ನಡೆಯಲಿ' ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಆಗ್ರಹಿಸಿದರು.ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಸೋಮವಾರ ಜೆಡಿಎಸ್ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ನಡೆಸಿದ ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, `ತಮ್ಮನ್ನು ಆಧುನಿಕ ಭಗೀರಥ ಎಂದು ಬಿಂಬಿಸಿಕೊಳ್ಳುತ್ತಿರುವ ಸುರೇಶಕುಮಾರ್, ಬೆಂಗಳೂರು ನಗರಕ್ಕೆ ಕುಡಿಯಲು ಕಾವೇರಿ ನೀರನ್ನು ಪೂರೈಸುವ ಸಂಬಂಧ ಬಿಜೆಪಿ ಸರ್ಕಾರ ಹಮ್ಮಿಕೊಂಡಿರುವ ಹೊಸ ಯೋಜನೆಗಳನ್ನು ಜನತೆಯ ಮುಂದೆ ಇಟ್ಟರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ' ಎಂದು ಸವಾಲು ಹಾಕಿದರು.`ನಾನು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರು ನಗರಕ್ಕೆ ಕಾವೇರಿ ನಾಲ್ಕನೇ ಹಂತದ ಕುಡಿಯುವ ನೀರಿನ ಯೋಜನೆಯನ್ನು ರೂಪಿಸಲಾಯಿತು. ಈ ಯೋಜನೆಗಾಗಿ ಕೇಂದ್ರ ಸರ್ಕಾರದಿಂದ ರೂ 380 ಕೋಟಿ ಮೊತ್ತದಷ್ಟು ಅನುದಾನ ಮಂಜೂರು ಮಾಡಿಸಿದ್ದೆ. ಆದರೆ, ಕೇಂದ್ರ ಸರ್ಕಾರ ಹಲವು ಒತ್ತಡಗಳಿಂದ ನೀರಿನ ಬಳಕೆಯ ಪ್ರಮಾಣವನ್ನು ಕಡಿತಗೊಳಿಸಿತ್ತು. ನಾನು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಬೆಂಗಳೂರು ನಗರಕ್ಕೆ ಕುಡಿಯಲು 9 ಟಿಎಂಸಿ ಅಡಿ ನೀರನ್ನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ಈ ಯೋಜನೆಯನ್ನು ಉದ್ಘಾಟಿಸಿದ ಬಿಜೆಪಿ ಸರ್ಕಾರ, ಇದು ತನ್ನ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದೆ' ಎಂದು ವ್ಯಂಗ್ಯವಾಡಿದರು.`ಈ ಹಿಂದೆ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡದ ಕಾರಣ ನಮ್ಮನ್ನು `ವಚನ ಭ್ರಷ್ಟ' ಎಂದು ಅಪಪ್ರಚಾರ ಮಾಡಲಾಯಿತು. ಆದರೆ ನಾವು ವಚನ ಭ್ರಷ್ಟರಲ್ಲ. ಅದು ಅಧಿಕಾರ ಹಸ್ತಾಂತರದ ವಿಷಯಕ್ಕಿಂತ ಯಡಿಯೂರಪ್ಪ ಹಾಗೂ ಅನಂತಕುಮಾರ್ ನುಡುವಿನ ಸಂಘರ್ಷವಾಗಿ ಮಾರ್ಪಟ್ಟಿತ್ತು' ಎಂದು ಆರೋಪಿಸಿದರು.`ಕುಮಾರಸ್ವಾಮಿ ಸಂಪುಟದಲ್ಲಿ ಮಂತ್ರಿಯಾಗಿದ್ದವರೇ ಅವರ ವಿರುದ್ಧ ಲಂಚದ ಆರೋಪ ಮಾಡಿದ್ದರು. ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಬಿಜೆಪಿಯ ಕೇಂದ್ರ ನಾಯಕರು ಹಾಗೂ ನಮ್ಮ ನಡುವೆ ಒಪ್ಪಂದ ಪತ್ರಕ್ಕೆ ಸಹಿ ಹಾಕುವ ಸಂಬಂಧ ಚರ್ಚೆ ನಡೆದಿತ್ತು. ಇದೇ ವೇಳೆಗೆ ಕೆಲವು ಬಿಜೆಪಿ ನಾಯಕರು ರೆಸಾರ್ಟ್ ರಾಜಕಾರಣದ ಮೂಲಕ ನಮ್ಮ ಪಕ್ಷದ 30 ಶಾಸಕರನ್ನು ಬಿಜೆಪಿಗೆ ಸೆಳೆಯಲು ಯತ್ನಿಸಿದರು. ಈ ಘಟನೆಯಿಂದ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡಲಿಲ್ಲ' ಎಂದು ದೇವೇಗೌಡ ಸ್ಪಷ್ಟಪಡಿಸಿದರು.`ಕಾಂಗ್ರೆಸ್‌ನವರು ಜೆಡಿಎಸ್ ಪಕ್ಷವನ್ನು ಒಡೆಯಲು ಯತ್ನಿಸಿದ ಕಾರಣ ಬಿಜೆಪಿ ಜೊತೆ ಕೈ ಜೋಡಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಿಂದುಳಿದ ವರ್ಗದ ಒಬ್ಬ ನಾಯಕ ಹಾಗೂ ಲಿಂಗಾಯತ ವರ್ಗದ ಒಬ್ಬ ನಾಯಕರನ್ನು ತನ್ನತ್ತ ಸೆಳೆದ ಕಾಂಗ್ರೆಸ್, ನನಗೆ ಕೇವಲ `ಒಕ್ಕಲಿಗರ ಮುಖಂಡ' ಎಂಬ ಹಣೆಪಟ್ಟಿ ಹಚ್ಚಿತು. ಆ ನೋವನ್ನೆಲ್ಲಾ ಸಹಿಸಿಕೊಂಡಿದ್ದೇನೆ. ಜೆಡಿಎಸ್ ಸಮಸ್ತ ಜನರಿಗೆ ಮೀಸಲಾದ ಪಕ್ಷ' ಎಂದು ಅವರು ಹೇಳಿದರು.ಜೆಡಿಎಸ್‌ಗೆ ಸೇರ್ಪಡೆ

ಬೆಂಗಳೂರು:
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಸೈಯದ್ ಅಹಮದ್ ಸೋಮವಾರ ಜೆಡಿಎಸ್ ಸೇರಿದರು. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಸೈಯದ್ ಜೆಡಿಎಸ್ ಸೇರಿದರು.

ಪ್ರತಿಕ್ರಿಯಿಸಿ (+)