ಸಜ್ಜಾಗದ ಕ್ರೀಡಾಂಗಣ; ಆತಂಕ ಬೇಡ

7

ಸಜ್ಜಾಗದ ಕ್ರೀಡಾಂಗಣ; ಆತಂಕ ಬೇಡ

Published:
Updated:

ಮುಂಬೈ (ಪಿಟಿಐ): ವಿಶ್ವಕಪ್ ಆರಂಭಕ್ಕೆ 30 ದಿನಗಳು ಮಾತ್ರ ಬಾಕಿ; ಆದರೂ ಪಂದ್ಯಗಳು ನಡೆಯುವ ಎಲ್ಲ ಕ್ರೀಡಾಂಗಣಗಳು ಸಂಪೂರ್ಣವಾಗಿ ಸಜ್ಜಾಗಿಲ್ಲ. ಅದರಲ್ಲಿಯೂ ಭಾರತದ ಎರಡು ಕ್ರಿಕೆಟ್ ಕೇಂದ್ರಗಳಲ್ಲಿ ಆಗಿರುವ ಕಾರ್ಯ ಪ್ರಗತಿಯ ಬಗ್ಗೆ ಸವಾಲುಗಳು ಎದ್ದಿವೆ.ಆದರೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ವಿಶ್ವಕಪ್‌ನ ಟೂರ್ನಿ ನಿರ್ದೇಶಕ ರತ್ನಾಕರ್ ಶೆಟ್ಟಿ ಅವರು ‘ಆತಂಕಪಡುವ ಅಗತ್ಯವಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.‘ಪಂದ್ಯಗಳ ಹೊತ್ತಿಗೆ ಎಲ್ಲವೂ ವ್ಯವಸ್ಥಿತವಾಗಿರುತ್ತದೆ’ ಎಂದಿರುವ ಅವರು ‘ವಾಂಖೇಡೆ ಕ್ರೀಡಾಂಗಣವೂ ಯಾವುದೇ ಕೊರತೆಗಳು ಇಲ್ಲದಂತೆ ಸಜ್ಜಾಗಿರುತ್ತದೆ.ಈಡನ್ ಗಾರ್ಡನ್ ಕುರಿತು ಕೂಡ ಮಾಧ್ಯಮಗಳಲ್ಲಿ ಅನುಮಾನ ವ್ಯಕ್ತವಾಗಿದೆ. ಆದರೆ ಅಲ್ಲಿನ ಕಾರ್ಯ ಪ್ರಗತಿಯು ಅಷ್ಟೇನು ಚಿಂತಾಜನಕವಾಗಿಲ್ಲ’ ಎಂದು ಬುಧವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.‘ಭಾರತದಲ್ಲಿ ಪಂದ್ಯಗಳು ನಡೆಯುವ ಎಲ್ಲ ಕ್ರೀಡಾಂಗಣಗಳ ಪರಿಶೀಲನೆಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತಂಡವು ಎರಡನೇ ಬಾರಿಗೆ ನಡೆಸಲಿದೆ.ಈಡನ್ ಗಾರ್ಡನ್‌ಗೆ ಜನವರಿ 25ರಂದು ಭೇಟಿ ನೀಡಲಿದೆ. ಆನಂತರ ಮಾಧ್ಯಮಗಳಿಗೆ ಎಲ್ಲ ಕ್ರೀಡಾಂಗಣಗಳಲ್ಲಿನ ವ್ಯವಸ್ಥೆಯ ಬಗ್ಗೆ ಪೂರ್ಣ ಮಾಹಿತಿಯನ್ನು ನೀಡಲಾಗುತ್ತದೆ’ ಎಂದರು.ಐಸಿಸಿ ತಂಡವು ಕೊನೆಯಲ್ಲಿ ವಾಂಖೇಡೆ ಹಾಗೂ ಈಡನ್ ಗಾರ್ಡನ್ ನೋಡುವುದಾಗಿ ತಿಳಿಸಿದೆ. ಇದಕ್ಕಾಗಿ ಕ್ರಮವಾಗಿ ಜ. 24 ಹಾಗೂ 25ರಂದು ದಿನ ನಿಗದಿ ಮಾಡಲಾಗಿದೆ. ಅಷ್ಟರಲ್ಲಿ ಕೊರತೆಗಳನ್ನೆಲ್ಲಾ ನೀಗಿಸಿಕೊಂಡು ಕ್ರೀಡಾಂಗಣಗಳು ಪಂದ್ಯಗಳಿಗಾಗಿ ಸಜ್ಜಾಗಿರುತ್ತವೆ ಎನ್ನುವ ವಿಶ್ವಾಸವಿದೆ ಎಂದು ಹೇಳಿದ ಶೆಟ್ಟಿ ‘ಈ ಎರಡು ಕ್ರೀಡಾಂಗಣಗಳಲ್ಲಿ ಅಂತಿಮ ಹಂತದ ಕೆಲಸ ನಡೆಯುತ್ತಿದೆ. ಶ್ರೀಲಂಕಾದ ಮೂರು ಕ್ರಿಕೆಟ್ ಕೇಂದ್ರಗಳಲ್ಲಿಯೂ ಚುರುಕಿನಿಂದ ನವೀಕರಣ ನಡೆದಿದ್ದು, ಕೊನೆಗೊಳ್ಳುವ ಹಂತದಲ್ಲಿದೆ’ ಎಂದು ಹೇಳಿದರು.ವಾಂಖೇಡೆ ಕ್ರೀಡಾಂಗಣದ ಕುರಿತು ಮಾಧ್ಯಮಗಳಲ್ಲಿ ಪ್ರಸಾರವಾದ ವರದಿಗಳನ್ನು ಅಲ್ಲಗಳೆದ ಅವರು ‘ಹಿಂದಿಗಿಂತ ಅತ್ಯಂತ ಆಕರ್ಷಕವಾದ ಕ್ರೀಡಾಂಗಣವಾಗಿ ರೂಪಗೊಂಡಿದೆ. ವಿಶ್ವ ದರ್ಜೆಯ ಕ್ರೀಡಾಂಗಣವಾಗಿಸಲು ಶ್ರಮಿಸಿದ ಮುಂಬೈ ಕ್ರಿಕೆಟ್ ಸಂಸ್ಥೆಗೆ ನಾನು ಅಭಿನಂದಿಸುತ್ತೇನೆ’ ಎಂದು ನುಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry