ಗುರುವಾರ , ನವೆಂಬರ್ 21, 2019
21 °C

ಸಡಗರದಲ್ಲಿ `ಕರ್ನಾಟಕದ ತಿರುಪತಿ'

Published:
Updated:

ತಿರುಪತಿಗೆ ಸಮನಾದ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿರುವ, ಕರ್ನಾಟಕದ ತಿರುಪತಿಯೆಂದೇ ಖ್ಯಾತವಾದ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಮಂಜುಗುಣಿ ಕ್ಷೇತ್ರದಲ್ಲಿ 25ರಂದು ಮಹಾರಥೋತ್ಸವದ ವೈಭವ. ದೂರದ ತಿರುಪತಿಗೆ ಹೋಗಿ ಬರಲು ಆಗದಿದ್ದವರು ಮಂಜುಗುಣಿಯ ಶ್ರೀವೆಂಕಟರಮಣನ ದರ್ಶನ ಮಾಡಿ ಪುನೀತರಾಗುವ ದಿನ.ಈ ದೇಗುಲದಲ್ಲಿ ಅತ್ಯಂತ ಎತ್ತರದ ಕಾಷ್ಟಶಿಲ್ಪದ ಮಹಾರಥವಿದ್ದು, ರಾಜ್ಯದಲ್ಲಿಯೇ ಪ್ರಸಿದ್ಧವಾಗಿದೆ. ಈ ರಥ ಸುಮಾರು 300 ವರ್ಷಗಳಷ್ಟು ಹಳೆಯದಾಗಿದ್ದು ಅಲಂಕೃತಗೊಂಡಾಗ 64 ಅಡಿ ಎತ್ತರವಾಗಿ ಕಂಗೊಳಿಸುತ್ತದೆ. ರಥದ ಮೂಲ ಅಂತಸ್ತು 22 ಅಡಿ ಎತ್ತರವಿದೆ. ಅದರ ಮೇಲೆ 100 ಜನರು ನಿಲ್ಲಲು ಜಾಗವಿದ್ದು ರಥೋತ್ಸವದ ದಿನ ಎತ್ತರದ ಏಣಿ ಹಾಕಿ ಭಕ್ತರು ದೇವರ ದರ್ಶನ ಪಡೆದು ಇಳಿದು ಬರುವಂತೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಇಲ್ಲಿರುವ ರಥದ ವಿನ್ಯಾಸ ಭಾರತದಲ್ಲಿಯೇ ಅಪರೂಪದ್ದು ಎನ್ನಲಾಗಿದೆ.ಸ್ಥಳ ಪುರಾಣ

ಒಂಬತ್ತನೇ ಶತಮಾನದಲ್ಲಿ ತಿರುಮಲ ಯೋಗಿಗಳು ಮಂಜುಗುಣಿಯಿಂದ 8 ಕಿ.ಮೀ.ದೂರದ ಗಿಳಲಗುಂಡಿ ಎಂಬ ಊರಿನ ಸನಿಹದ `ಕಂಕಹೃದ' ಎಂಬ ಕೊಳದ ಸನಿಹ ತಪಸ್ಸಿಗೆ ಕುಳಿತಿದ್ದರು. ಅವರಿಗೆ ಅಲ್ಲಿ ಶಂಖ, ಚಕ್ರ, ಧನುರ್ಬಾಣಗಳನ್ನು ಧರಿಸಿ ನಿಂತ ವೆಂಕಟೇಶನ ವಿಗ್ರಹ ಗೋಚರಿಸಿತು. ಈ ವಿಗ್ರಹಕ್ಕೆ ಬ್ರಹ್ಮ ಮತ್ತು ಮಹೇಶ್ವರರು ಆಕಳು ಮತ್ತು ಕರುವಿನ ರೂಪದಲ್ಲಿ ಬಂದು ಹಾಲುಣಿಸಿ ಹೋಗುತ್ತಿದ್ದರಂತೆ.ಈ ವಿಗ್ರಹವನ್ನು ಮಂಜುಗುಣಿಯಲ್ಲಿ ಪ್ರತಿಷ್ಠಾಪಿಸಿ ಪೂಜಿಸಿದರೆ ಅಲ್ಲಿಯೇ ತಾನು ನೆಲೆಸಿರುತ್ತೇನೆ ಎಂದು ತಿರುಪತಿ ತಿಮ್ಮಪ್ಪ ಅಶರೀರ ವಾಣಿ ಮೂಲಕ ಯೋಗಿಗಳಿಗೆ ತಿಳಿಸಿದನಂತೆ. ಅಂತೆಯೇ ತಿರುಮಲ ಯೋಗಿಗಳು ಚೈತ್ರ ಮಾಸದ ಹುಣ್ಣಿಮೆಯಂದು ಈ ವಿಗ್ರಹವನ್ನು ಮಂಜುಗುಣಿಯಲ್ಲಿ ಪ್ರತಿಷ್ಠಾಪಿಸಿ ಪೂಜಿಸಿದರು. ಪ್ರತಿ ವರ್ಷ ಇದೇ ದಿನದಂದು ಮಹಾರಥೋತ್ಸವ ಜರುಗುತ್ತದೆ. ಆ ದಿನ ತಿರುಪತಿ ತಿಮ್ಮಪ್ಪನೇ ಸ್ವತಃ ಆಗಮಿಸುತ್ತಾನೆ ಎಂಬ ನಂಬಿಕೆ.ದೇಗುಲದ ನವರಂಗ, ಮುಖಮಂಟಪ, ಅರ್ಧಮಂಟಪ ಮತ್ತು ಗರ್ಭಗೃಹಗಳು ವಿಶಿಷ್ಟ ರಚನೆ ಹೊಂದಿವೆ. ಕಂಬಗಳ ಮೇಲೆ ಉಡುಪಿಯ ಕಡಗೋಲು ಕೃಷ್ಣ ಹಾಗೂ ಹಯಗ್ರೀವ ದೇವರ ಮೂರ್ತಿಗಳಿವೆ. ಶೇಷಶಯನ ಮತ್ತು ಬಲಮುರಿ ಗಣಪತಿಯ ಆಕರ್ಷಕ ವಿಗ್ರಹಗಳಿವೆ.ನವರಂಗದ ಮೊಗಸಾಲೆಯ ಹೊರ ಪ್ರಾಕಾರದಲ್ಲಿ ರಾಮಾಯಣದ ಕೆತ್ತನೆ, ಕಂಬಗಳ ಮೇಲೆ ಕೃಷ್ಣನ ಹಾಗೂ ಲಕ್ಷ್ಮಿಯ ವಿವಿಧ ರೂಪಗಳ ಕೆತ್ತನೆ ಇವೆ. ಗರ್ಭಗುಡಿಯ ಎದುರು ಚತುಷ್ಕೋನ ಪೀಠದ ಮೇಲೆ ಭದ್ರವಾಗಿ ನಿಂತ 35 ಅಡಿ ಎತ್ತರದ ಏಕ ಶಿಲೆಯ ಗರುಡಗಂಬವಿದೆ. ವೆಂಕಟೇಶ್ವರ ದೇವರ ಬಲಭಾಗದಲ್ಲಿ ಪ್ರತ್ಯೇಕ ಗುಡಿಯಲ್ಲಿ ಪದ್ಮಾವತಿ ನೆಲೆಸಿದ್ದಾಳೆ. ರಥಬೀದಿಯ ಆದಿಯಲ್ಲಿ ಹಲವು ವಿಶಿಷ್ಟ ಔಷಧ ಗುಣಗಳನ್ನು ಒಳಗೊಂಡ ಚಕ್ರತೀರ್ಥವಿದೆ.

 

ಪ್ರತಿಕ್ರಿಯಿಸಿ (+)