ಸಡಗರದ ಕೊರತೆ: ಬತ್ತಿದ ಸಾಹಿತ್ಯದ ಒರತೆ

ಬುಧವಾರ, ಜೂಲೈ 17, 2019
28 °C

ಸಡಗರದ ಕೊರತೆ: ಬತ್ತಿದ ಸಾಹಿತ್ಯದ ಒರತೆ

Published:
Updated:

 

ಬಂಗಾರಪೇಟೆ: ಸಭಿಕರ ಕೊರತೆ, ನಿರ್ವಹಣೆಯ ಅವ್ಯವಸ್ಥೆ, ಗೊಂದಲಗಳ ನಡುವೆ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ತಿನ 11 ನೇ ಜಿಲ್ಲಾ ಮಟ್ಟದ ಸಮ್ಮೇಳನ ಆರಂಭವಾಯಿತು. ಸಮ್ಮೇಳನಕ್ಕೆ ಸಡಗರದ ಬಟ್ಟೆ ಹೊದಿಸುವ ವಿಫಲ ಯತ್ನ ನಡೆಯಿತು. ಅದನ್ನು ಕಂಡ ಹಲವು ಕನ್ನಡಾಭಿಮಾನಿಗಳು ಮುಜುಗರ ಪಟ್ಟದ್ದೂ ಕಂಡುಬಂತು.ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಏರ್ಪಡಿಸಿರುವ 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪೂಜಾ ಕುಣಿತ, ಡೊಳ್ಳು ಕುಣಿತ, ರಾಜಾರಾಣಿ ಬೊಂಬೆ, ಕೀಲುಗೊಂಬೆ ಕುಣಿತ ಏರ್ಪಡಿಸಿ ಕಾರ್ಯಕ್ರಮಕ್ಕೆ ಸಡಗರ ಮೂಡಿಸುವ ಪ್ರಯತ್ನ ನಡೆದರೂ, ಸ್ಥಳೀಯರು ನೀರಸ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಶಾಲಾ ಮಕ್ಕಳನ್ನು ಹೊರತುಪಡಿಸಿ ಕೇವಲ ನೂರಿನ್ನೂರು ಜನ ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮೆರವಣಿಗೆ ಮುಗಿದು ಶಾಲಾ ಮಕ್ಕಳೂ ಅಲ್ಲಿಂದ ಹೊರಟ ನಂತರ ಸಭಿಕರಿಲ್ಲದೇ ಇಡೀ ಸಭಾಂಗಣ ಭಣಗುಟ್ಟುತ್ತಿತ್ತು. ಶಾಲಾಮಕ್ಕಳನ್ನು ಕರೆತಂದಿದ್ದ ಶಿಕ್ಷಕರು ಮಾತ್ರ ಅಲ್ಲಿದ್ದರು. ಸಮ್ಮೇಳನ ಉದ್ಘಾಟನೆಯಾಗಿ ಹಲವು ಗಂಟೆಗಳಾದರೂ, ಶಾಲೆಯ ಕಾಂಪೌಡ್‌ಗೋಡೆ ಮೇಲೆ ಪೇಂಟರ್ ಒಬ್ಬರು `11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ~ ಬರಹ ಬರೆಯುತ್ತಿದ್ದರು!ಜಿಲ್ಲಾಧಿಕಾರಿ ಮನೋಜ್‌ಕುಮಾರ್ ಮೀನಾ ಸಮ್ಮೇಳನ ಸ್ಥಳಕ್ಕೆ ಬಂದು ಧ್ವಜಾರೋಹಣೆ ನಿರ್ವಹಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರೂ ಸಮ್ಮೇಳನಾಧ್ಯಕ್ಷ ಕೋಟಿಗಾನಹಳ್ಳಿ ರಾಮಯ್ಯ ಅವರನ್ನು ಕರೆ ತರುವ ಪ್ರಯತ್ನವನ್ನು ಸಂಘಟಕರು ಮಾಡಿರಲಿಲ್ಲ. ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಆಹ್ವಾನಿಸುವ ಪ್ರಯತ್ನವೂ ನಡೆಯಲಿಲ್ಲ. ಆ ಕುರಿತು ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ನಡುವೆ ವಾಗ್ವಾದವೂ ತೆರೆಯ ಹಿಂದೆ ನಡೆಯಿತು.ಸಮ್ಮೇಳನಾಧ್ಯಕ್ಷರ ಅನುಪಸ್ಥಿತಿಯಲ್ಲಿಯೇ ಮೆರವಣಿಗೆಗೆ ವಿಧಾನ ಪರಿಷತ್ ಸದಸ್ಯೆ ಪ್ರೊ.ಎಸ್.ಆರ್.ಲೀಲಾ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಅಧ್ಯಕ್ಷ ಕೆ.ಪ್ರಹ್ಲಾದರಾವ್ ಚಾಲನೆ ನೀಡಿದರು.ಮೆರವಣಿಗೆಯು ಪೂರ್ಣಗೊಳ್ಳುವ ಹಂತದಲ್ಲಿರುವಾಗ ಪಟ್ಟಣದ ಕೆಲವು ಯುವಕರು ಸಮ್ಮೇಳನಾಧ್ಯಕ್ಷ ಕೆ.ರಾಮಯ್ಯ ಅವರನ್ನು ಕರೆ ತಂದಿದ್ದರು.ಉಪಹಾರವಿಲ್ಲ:

ತಿಂಡಿಯನ್ನು ಕಾರ್ಯಕ್ರಮದಲ್ಲಿಯೇ ವಿತರಿಸುವುದಾಗಿ ತಿಳಿಸಿದ್ದರಿಂದ ಸಾಕಷ್ಟು ಮಕ್ಕಳು ಉಪಾಹಾರ ಸೇವಿಸದೇ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮೆರವಣಿಗೆ ಸಂದರ್ಭದಲ್ಲಿ ಸಾಕಷ್ಟು ಮಕ್ಕಳು ಬಸವಳಿದು ಅಲ್ಲಲ್ಲಿ ಕುಸಿಯುತ್ತಿದ್ದರು.ಆದರೂ ಇದನ್ನು ಸಂಘಟಕರು ಗಂಭೀರವಾಗಿ ಪರಿಗಣಿಸಲಿಲ್ಲ. ಮೆರವಣಿಗೆಯಲ್ಲಿ ಬ್ಯಾಂಡ್‌ಸೆಟ್ ಶಬ್ಧಕ್ಕೆ ಲಯವಾಗಿ ಹೆಜ್ಜೆ ಹಾಕುತ್ತಾ ಶಾಲಾ ಮಕ್ಕಳು ನಡೆದು ಬಂದ ಪರಿಣಾಮ ಅವರ ಹಿಂದೆ ನಿಧಾನವಾಗಿ ಬರುತ್ತಿದ್ದ ಕನ್ನಡಮ್ಮನ ತೇರು ಮೆರವಣಿಗೆಗೆ ಸಂಬಂಧವೇ ಇಲ್ಲದಂತೆ ಅನತಿ ದೂರದಲ್ಲಿ ಬರುತ್ತಿತ್ತು. ಅದರ ಅಕ್ಕಪಕ್ಕದಲ್ಲಿ ಯಾರೊಬ್ಬರೂ ಇರಲಿಲ್ಲ! ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜೈಕಾರದೊಂದಿಗೆ ಮೆರವಣಿಗೆ ನಡೆಯುತ್ತಿದ್ದ ಸಂದರ್ಭದಲ್ಲಿ ಪಟ್ಟಣದ ಕುವೆಂಪು ವೃತ್ತದಲ್ಲಿರುವ ರಾಷ್ಟ್ರಕವಿ ಕುವೆಂಪು ಪ್ರತಿಮೆ ಅನಾಥವಾಗಿತ್ತು. ಪಟ್ಟಣದ ಶಕ್ತಿ ಕೇಂದ್ರವಾದ ಕನ್ನಡ ಭವನದ ಬಾಗಿಲೂ ತೆರೆಯಲಿಲ್ಲ. ಪಟ್ಟಣದಲ್ಲಿ ಸಾಹಿತ್ಯ ಸಮ್ಮೇಳನ ಹೀಗೆ ನಡೆದಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry