ಶನಿವಾರ, ಫೆಬ್ರವರಿ 27, 2021
29 °C

ಸಡನ್ ಡೆತ್: ಏನಿದರ ಹಕೀಕತ್ತು; ವಿಧಿಯ ಮಸಲತ್ತು

ನಿರೂಪಣೆ: ಪ್ರವೀಣ ಕುಲಕರ್ಣಿ Updated:

ಅಕ್ಷರ ಗಾತ್ರ : | |

ಸಡನ್ ಡೆತ್: ಏನಿದರ ಹಕೀಕತ್ತು; ವಿಧಿಯ ಮಸಲತ್ತು

ಕ್ರೀಡಾಪಟುಗಳು ಆಡುವಾಗ ಮೇಲಿಂದ ಮೇಲೆ ಸಂಭವಿಸುತ್ತಿರುವ ಏಕಾಏಕಿ ಸಾವಿನ (ಸಡನ್ ಡೆತ್) ಪ್ರಕರಣಗಳು ಜನಸಾಮಾನ್ಯರ ಮನಸ್ಸನ್ನು ಕಲಕಿಬಿಟ್ಟಿದ್ದು, ವ್ಯಾಕುಲವನ್ನೂ ಹೆಚ್ಚಿಸಿವೆ. ಇಂತಹ ಅಪಾಯವನ್ನು ತಪ್ಪಿಸಲು ಮಾರ್ಗಗಳೇ ಇಲ್ಲವೆ ಎಂಬ ನೋವು ಎಲ್ಲೆಡೆ ಕೇಳುವಂತಾಗಿದೆ.

 

ಖ್ಯಾತನಾಮ ಆಟಗಾರರೇ ಹೀಗೆ ಅಪಾಯಕ್ಕೆ ಒಳಗಾಗುವುದಾದರೆ ನಮ್ಮ ಮಕ್ಕಳು ಆಡುವಾಗಲೂ ಅನಾಹುತ ಸಂಭವಿಸುವ ಸಾಧ್ಯತೆಯನ್ನು ಹೇಗೆ ಇಲ್ಲವೆನ್ನುವುದು ಎಂಬ ಚಿಂತೆ ಪಾಲಕರನ್ನು ಬಲವಾಗಿ ಕಾಡಲು ಆರಂಭಿಸಿದೆ. ಕ್ರೀಡೆ ಹಾಗೂ ದೈಹಿಕ ಕಸರತ್ತಿನಿಂದ ಸಿಗುವ ಲಾಭಕ್ಕಿಂತ ಅದು ಉಂಟುಮಾಡುವ ಅಪಾಯವೇ ದೊಡ್ಡದಾಗಿ ಕಾಣತೊಡಗಿದ್ದು, ವಿಷಾದದ ಛಾಯೆ ಆವರಿಸಿದೆ.ಹೊನ್ನಾವರದಲ್ಲಿ ಕಳೆದ ವರ್ಷ ನಡೆದ ಕ್ರೀಡಾಕೂಟವೊಂದರಲ್ಲಿ ವಿನಯಕುಮಾರ್ ಎಂಬ 15 ವರ್ಷದ ಹುಡುಗ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾಗಲೇ ಕುಸಿದು ಸಾವನ್ನಪ್ಪಿದ. ಕಳೆದ ವಾರ ಲಂಡನ್ನಿನಲ್ಲಿ 23 ವರ್ಷದ ಫುಟ್‌ಬಾಲ್ ಆಟಗಾರ ಫ್ಯಾಬ್ರಿಕ್ ಮುವಾಂಬಾ ಎಂಬಾತ ಕೂಡ ಮೈದಾನದಲ್ಲೇ ಕುಸಿದುಬಿದ್ದ. ತಕ್ಷಣ ವೈದ್ಯಕೀಯ ನೆರವು ಆ ಹುಡುಗನಿಗೆ ಸಿಕ್ಕಿತಾದರೂ ಆಸ್ಪತ್ರೆಯಲ್ಲಿ ಇನ್ನೂ ಸಾವು-ಬದುಕಿನ ಮಧ್ಯೆ ಆತನ ಹೋರಾಟ ನಡೆದಿದೆ.ಬೆಂಗಳೂರಿನಲ್ಲಿ ಓದುತ್ತಿದ್ದ ಐವರಿ ಕೋಸ್ಟ್ ದೇಶದ 26 ವರ್ಷದ ಆಟಗಾರ ಅಲ್ಬರ್ಟ್ ಆಗಸ್ಟಿ ಎಂಬಾತ ಕಳೆದ ವರ್ಷ ಆಗಸ್ಟ್ 21ರಂದು ನಡೆದಿದ್ದ ಅಂತರ ಕಾಲೇಜು ಫುಟ್‌ಬಾಲ್ ಪಂದ್ಯವೊಂದರಲ್ಲಿ ಆಡುವಾಗ ತೀವ್ರ ಹೃದಯಾಘಾತದಿಂದ ಮೈದಾನದಲ್ಲೇ ಸಾವನ್ನಪ್ಪಿದ.

 

ಸೆಪ್ಟಂಬರ್ 1ರಂದು ಚೆನ್ನೈನಲ್ಲಿ ನಡೆದ ಹಾಫ್ ಮ್ಯಾರಥಾನ್ ಸ್ಪರ್ಧೆಯಲ್ಲಿ ಅಣ್ಣಾ ವಿಶ್ವವಿದ್ಯಾಲಯದ 22ರ ಹರೆಯದ ವಿದ್ಯಾರ್ಥಿ ಸಂತೋಷ್, ಮುಕ್ತಾಯದ ಗೆರೆ ಬಳಿಯೇ ಕುಸಿದು ಬಿದ್ದಿದ್ದ. ಆಸ್ಪತ್ರೆಗೆ ಕರೆದೊಯ್ದರೆ ಆತ ಆಗಲೇ ಸಾವನ್ನಪ್ಪಿದ್ದಾನೆ ಎಂಬ ಘೋಷಣೆ ವೈದ್ಯರಿಂದ ಹೊರಬಿತ್ತು.ಕ್ರಿಸ್ತಪೂರ್ವ 490ರಲ್ಲಿ ಫಿಡಿಪ್ಪೈಡ್ಸ್ ಎಂಬ ಗ್ರೀಕ್ ದೇಶದ ಓಲೆಕಾರ ಮ್ಯಾರಥಾನ್‌ನಿಂದ ಅಥೆನ್ಸ್‌ವರೆಗೆ 26.2 ಮೈಲುಗಳ ದೂರ ಬಿಟ್ಟೂಬಿಡದೆ ಓಡಿದ್ದ. ಪರ್ಷಿಯನ್ನರ ಎದುರು ಗ್ರೀಕ್ ಗೆಲುವಿನ ಸಂದೇಶವನ್ನು ಸಾರುವ ಆತುರ ಅವನಲ್ಲಿತ್ತು. ಅಥೆನ್ಸ್‌ನಲ್ಲಿ ಗೆಲುವಿನ ಸಂದೇಶ ಸಾರುತ್ತಲೇ ಕುಸಿದುಬಿದ್ದ ಆತ, ಮರುಕ್ಷಣವೇ ಕೊನೆಯುಸಿರೆಳೆದ.ಕ್ರೀಡಾಕ್ಷೇತ್ರದಲ್ಲಿ ದಾಖಲಾದ ದುರಂತ ಘಟನೆಗಳ ಪೈಕಿ ವ್ಯಕ್ತಿಯೊಬ್ಬ ಏಕಾಏಕಿ ಸಾವನ್ನಪ್ಪಿದ ಮೊದಲ ಪ್ರಕರಣ ಪ್ರಾಯಶಃ ಇದೇ ಆಗಿದೆ.ಸಾಕಷ್ಟು ತರಬೇತಿ ಪಡೆದ ತರುಣ ಆಟಗಾರನೊಬ್ಬ ಏಕಾಏಕಿ ಮೃತಪಟ್ಟ ಸಂಗತಿ ಅಪಾರ ವೇದನೆಯನ್ನು ಕೊಡುವಂತಹದ್ದು. ಅತ್ಯಂತ ನಾಟಕೀಯ ಹಾಗೂ ದುಃಖಾಂತ್ಯದ ಇಂತಹ ಘಟನೆಗಳು ಆ ಕ್ರೀಡಾಪಟುಗಳ ಕುಟುಂಬ ಮತ್ತು ಸಮುದಾಯದಲ್ಲಿ ಅಲ್ಲೋಲ-ಕಲ್ಲೋಲವನ್ನೇ ಉಂಟು ಮಾಡುತ್ತವೆ. ಕ್ರೀಡೆಗಳದ್ದು ವಾಸ್ತವಿಕವಾಗಿ ಕೊಲ್ಲುವ ಪ್ರವೃತ್ತಿಯಲ್ಲ. ಆದರೆ, ಅವುಗಳು ಹೃದಯ ಇಲ್ಲವೆ ರಕ್ತನಾಳದ ಅಸಹಜ ಸಮಸ್ಯೆಗಳನ್ನು ಸಾವನ್ನಾಗಿ ಪರಿವರ್ತಿಸುವಲ್ಲಿ ತಮ್ಮ ಕೊಡುಗೆ ನೀಡುತ್ತಿರುವುದು ಸುಳ್ಳಲ್ಲ.ಫುಟ್‌ಬಾಲ್ ಮತ್ತು ಬ್ಯಾಸ್ಕೆಟ್‌ಬಾಲ್ ಆಟಗಾರರೇ ಈ ರೀತಿಯ ಸಾವಿಗೆ ತುತ್ತಾಗುವುದು ಹೆಚ್ಚು. ಇದುವರೆಗೆ ಸಂಭವಿಸಿದ ಏಕಾಏಕಿ ಸಾವುಗಳ ಮೂರನೇ ಎರಡರಷ್ಟು ಪ್ರಮಾಣದ ಅಂತ್ಯಗಳು ಈ ಎರಡು ಕ್ರೀಡೆಗಳ ಆಟಗಾರರಲ್ಲೇ ಸಂಭವಿಸಿವೆ. ಸಡನ್ ಡೆತ್ ಜೊತೆ ಅತ್ಯಂತ ಗಾಢ ಸಂಬಂಧ ಹೊಂದಿದ ಕ್ರೀಡೆಯೆಂದರೆ ಅದು ಫುಟ್‌ಬಾಲ್.ಪ್ರತಿವರ್ಷ ಎರಡು ಲಕ್ಷ ಕ್ರೀಡಾಪಟುಗಳಿಗೆ ಸರಾಸರಿ ಇಬ್ಬರಂತೆ ಏಕಾಏಕಿ ಸಾವಿಗೆ ತುತ್ತಾಗುತ್ತಿದ್ದಾರೆ. ಅದರಲ್ಲೂ ಪುರುಷ ಕ್ರೀಡಾಪಟುಗಳದ್ದೇ ಈ ದಾಖಲೆಯಲ್ಲಿ ಏಕಸ್ವಾಮ್ಯ. ಏಕಾಏಕಿ ಸಾವಿಗೆ ಬಲಿಯಾದ ಖ್ಯಾತನಾಮ ಕ್ರೀಡಾಪಟುಗಳ ಪೈಕಿ ಮ್ಯಾರಾಥಾನ್ ಓಟಗಾರ ಜಿಮ್ ಫಿಕ್ಸ್ (1984), ಒಲಿಂಪಿಕ್ ವಾಲಿಬಾಲ್ ತಾರೆ ಫ್ಲೋ ಹೈಮ್ಯಾನ್ (1986), ಎನ್‌ಬಿಎ ಬ್ಯಾಸ್ಕೆಟ್‌ಬಾಲ್ ಆಟಗಾರ ಹ್ಯಾಂಕ್ ಗ್ಯಾದರ್ಸ್‌ (1990), ಒಲಿಂಪಿಕ್ ಕ್ರೀಡೆಯಲ್ಲಿ ಗಮನಸೆಳೆದ ಸ್ಕೇಟರ್ ಸರ್ಗಾಯ್ ಗ್ರಿಂಕೋವ್ (1995), ಎನ್‌ಎಫ್‌ಎಲ್ ಆಟಗಾರ ಮಿನ್ನೆಸೋಟಾ ವಿಕಿಂಗ್ಸ್ (2001), ಡೆರಿಲ್ ಕೈಲ್ (2002), ಕೋಲಂಬಸ್ ವಿಶ್ವವಿದ್ಯಾಲಯದ ಬ್ಯಾಸ್ಕೆಟ್‌ಬಾಲ್ ಆಟಗಾರ ಜೆಡ್ ಬೆಡ್‌ಫೋರ್ಡ್ (2003), ಫುಟ್‌ಬಾಲ್ ಆಟಗಾರ ಮಾರ್ಕ್ ಫೋ (2003) ಅವರೆಲ್ಲ ಸೇರಿದ್ದಾರೆ.ಬಹುತೇಕ ಸಡನ್ ಡೆತ್ ಪ್ರಕರಣಗಳಿಗೆ ಜನ್ಮಜಾತವಾಗಿ ಬಳವಳಿಯಾಗಿ ಬಂದ ಹೃದಯ ಮತ್ತು ರಕ್ತನಾಳಗಳ ಅಸಹಜ ಬೆಳವಣಿಗೆಯೇ ಕಾರಣವಾಗಿದೆ. ಇಂತಹ ಅಸಹಜ ಸಮಸ್ಯೆಗಳು ಯಾವುದೇ ಲಕ್ಷಣಗಳನ್ನು ಹೊರಗೆಡುವುದಿಲ್ಲ. ಆಫ್ರಿಕನ್-ಅಮೆರಿಕನ್ ಕ್ರೀಡಾಪಟುಗಳಲ್ಲಿ ಈ ತೊಂದರೆ ವ್ಯಾಪಕವಾಗಿ ಕಂಡು ಬರುತ್ತದೆ.ಬಹುತೇಕ ಸಾವುಗಳು ಹೃದಯದ ಸ್ನಾಯು ಮತ್ತು ಮಾಂಸಖಂಡಗಳ ಅಸಹಜವಾದ ಆಕುಂಚನದಿಂದ ಸಂಭವಿಸುತ್ತವೆ. ಹೃದಯದ ಸ್ನಾಯು ಮತ್ತು ಮಾಂಸಖಂಡಗಳ ಅಂತಹ ಆಕುಂಚನದಿಂದ ಹೃದಯ ಬಡಿತದ ಲಯವೇ ತಪ್ಪಿಹೋಗುತ್ತದೆ.ಹೃದಯ ಮತ್ತು ಅದರ ಕ್ರಿಯೆ ಮಧ್ಯೆ ಸಮನ್ವಯವನ್ನು ತಪ್ಪಿಸುವಂತಹ ಈ ಸಮಸ್ಯೆಗೆ ವೈದ್ಯಕೀಯ ಪರಿಭಾಷೆಯಲ್ಲಿ `ವೆಂಟ್ರಿಕ್ಯುಲರ್ ಫಿಬ್ರಿಲೇಷನ್~ ಎಂದು ಹೇಳಲಾಗುತ್ತದೆ. `ವೆಂಟ್ರಿಕ್ಯುಲರ್ ಫಿಬ್ರಿಲೇಷನ್~ ಸಮಸ್ಯೆ ಉದ್ಭವಿಸಿದಾಗ ಹೃದಯದ ಕೋಣೆಯಲ್ಲಿ ಸಿಕ್ಕಾಪಟ್ಟೆ ಇಲೆಕ್ಟ್ರಿಕಲ್ ತರಂಗಗಳು ಉಂಟಾಗಿ (ಪ್ರತಿ ನಿಮಿಷಕ್ಕೆ 300ಕ್ಕೂ ಅಧಿಕ) ಹೃದಯ ರಕ್ತವನ್ನು ಪಂಪ್ ಮಾಡುವ ಕೆಲಸವನ್ನೇ ನಿಲ್ಲಿಸಿಬಿಡುತ್ತದೆ.ಕ್ರೀಡಾಪಟುಗಳು ಏಕಾಏಕಿ ಸಾವಿನ ಆಲಿಂಗನ ಮಾಡಲು ಇನ್ನೊಂದು ಪ್ರಮುಖ ಕಾರಣ ಹೃದಯದ ಮಾಂಸ ಖಂಡಗಳಿಗೆ ಆಮ್ಲಜನಕ ಪೂರೈಸುವಂತಹ ರಕ್ತನಾಳಗಳ ಅಸಹಜ ಸ್ಥಿತಿ. ಇದರಿಂದ ರಕ್ತದ ಚಲನೆ ಮೇಲೆ ಗಂಭೀರ ಪರಿಣಾಮ ಉಂಟಾಗಿ ಅನಾಹುತಗಳಿಗೆ ದಾರಿ ಮಾಡಿಕೊಡುತ್ತದೆ. ಸಮಸ್ಯೆಗೆ ಒಳಗಾದ ಹೃದಯ ಕವಾಟ. ಹೃದಯದ ಅಗತ್ಯಗಳಿಗೆ ಸರಿಯಾಗಿ ಸ್ಪಂದಿಸದ ಜೈವಿಕ ತಾಪಮಾನ ಮತ್ತು ಹೃದಯದಿಂದ ದೇಹಕ್ಕೆ ರಕ್ತವನ್ನು ಪೂರೈಸುವ ಪ್ರಧಾನ ನಾಳದ ತೊಂದರೆ ಇವೇ ಮೊದಲಾದವು ಏಕಾಏಕಿ ಸಾವಿಗೆ ಕಾರಣವಾಗುತ್ತವೆ.ಮಾರ್ಫನ್ ಸಿಂಡ್ರೋಮ್‌ನಿಂದ (ವಂಶವಾಹಿನಿಯಾಗಿ ಬಂದ ಅಂಗಾಂಶ ಸಮಸ್ಯೆ) ಸಹ ಸಾವುಗಳು ಸಂಭವಿಸುತ್ತವೆ. ಜನಸಾಮಾನ್ಯರಲ್ಲಿ ಪ್ರತಿ 20 ಸಾವಿರದಲ್ಲಿ ಒಬ್ಬರಿಗೆ ಈ ಸಮಸ್ಯೆ ಕಾಡುತ್ತದೆ. ಈ ತೊಂದರೆ ಹೊಂದಿರುವ ರೋಗಿ ಸಾಮಾನ್ಯವಾಗಿ ಎತ್ತರವಾಗಿದ್ದು, ಕೃಶ ಶರೀರ ಹೊಂದಿರುತ್ತಾನೆ. ಹೃದಯದ ಕವಾಟ, ರಕ್ತನಾಳ ಇಲ್ಲವೆ ಹೃದಯದ ಇತರ ಯಾವುದೇ ಭಾಗದಲ್ಲಿ ಇದರಿಂದ ತೊಂದರೆ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ.

 

ಅಂಗಳದಲ್ಲೇ ಸಾವನ್ನಪ್ಪಿದ ಒಲಿಂಪಿಕ್ ವಾಲಿಬಾಲ್ ಆಟಗಾರ ಫ್ಲೊ ಹೈಮ್ಯಾನ್ ಅವರಿಗೆ ಮಾರ್ಫನ್ ಸಿಂಡ್ರೋಮ್ ಸಮಸ್ಯೆ ಇತ್ತು. ಬ್ಯಾಸ್ಕೆಟ್‌ಬಾಲ್ ಆಟಗಾರ ರೊನಾಲ್ಡ್ ಪಿಯರ್ಸ್ ಸಾವನ್ನಪ್ಪಿದ್ದು ಕೂಡ ಇದೇ ಕಾರಣದಿಂದ.30 ವರ್ಷದೊಳಗಿನ ಕ್ರೀಡಾಪಟುಗಳ ಬಹುತೇಕ ಸಡನ್ ಡೆತ್‌ಗಳು ಪ್ರಧಾನ ರಕ್ತನಾಳ ಬ್ಲಾಕ್ ಆಗುವುದರಿಂದ ಸಂಭವಿಸುತ್ತವೆ. ಇಲ್ಲದಿದ್ದರೆ ಇತರ ರಕ್ತನಾಳಗಳು ಕೊಬ್ಬಿನಾಂಶ ತುಂಬಿಕೊಂಡು ಬಂದ್ ಆಗಿರುತ್ತವೆ. 30 ವರ್ಷಕ್ಕಿಂತ ಹೆಚ್ಚಿನ ವಯೋಮಾನದವರು ಧೂಮಪಾನ ಮಾಡುತ್ತಿದ್ದರೆ ಅವರಿಗೆ ಹೃದಯಾಘಾತ ಆಗುವ ಸಂಭವ ಹೆಚ್ಚು.ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಅಸಹಜ ಅಂಗಾಂಶಗಳು ಇಲ್ಲವೆ ಕುಟುಂಬದಲ್ಲಿ ಅತ್ಯಧಿಕ ಹೃದಯ ಕಾಯಿಲೆ ಹೊಂದಿದ ಹಿನ್ನೆಲೆ ಹೊಂದಿದವರಿಗೆ ಈ ಸಮಸ್ಯೆ ಕಾಡುವುದು ಸಾಮಾನ್ಯ.ಹೃದಯದ ಭಾಗದಲ್ಲಿ ಎದೆ ಊದಿಕೊಂಡರೆ ಅಂತಹ ಸಮಸ್ಯೆಯನ್ನು `ಕೊಮಾಟಿಯೊ ಕಾರ್ಡಿಸ್~ ಎಂಬುದಾಗಿ ಗುರುತಿಸಲಾಗುತ್ತದೆ. ಹೃದಯದ ಯಾವುದೇ ಸಮಸ್ಯೆ ಇಲ್ಲದವರೂ ಇಂತಹ ತೊಂದರೆಗೆ ಬಲಿಯಾಗುವುದಿದೆ. ಈ ಸಮಸ್ಯೆ ಸಾಮಾನ್ಯವಾಗಿ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

 

ಎದೆಗೆ ಬಲವಾಗಿ ಚೆಂಡು ಬಡಿದಾಗ, ಕರಾಟೆ ಪಂಚ್ ಬಿದ್ದಾಗ ಇಂತಹ ಸಾವುಗಳು ಸಂಭವಿಸುತ್ತವೆ. ಬೆಂಗಳೂರಿನಲ್ಲಿ ಬ್ರೆಜಿಲ್‌ನ ಯುವ ಫುಟ್‌ಬಾಲ್ ಆಟಗಾರ ಕ್ರಿಸ್ಟಿನೊ ಜೂನಿಯರ್ ಅವರ ಸಾವು ಇದಕ್ಕೊಂದು ಉದಾಹರಣೆ.ಪ್ರೌಢಶಾಲೆ ಮತ್ತು ಕಾಲೇಜು ಕ್ರೀಡಾಕೂಟಗಳಲ್ಲಿ ಆಟಗಾರರು ಸ್ಪರ್ಧೆಯಲ್ಲಿ ಭಾಗವಹಿಸುವ ಮೊದಲು ಅವರ ದೈಹಿಕ ಪರೀಕ್ಷೆ ನಡೆಸಲಾಗುತ್ತದೆ. ಹೃದಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯ ಹಿನ್ನೆಲೆ ಹೊಂದಿದವರನ್ನು ಹೃದಯ ತಜ್ಞರಿಂದ ಇನ್ನಷ್ಟು ತಪಾಸಣೆಗೆ ಒಳಪಡಿಸುವುದು ಅಗತ್ಯವಾಗಿದೆ. ಸರಿಯಾದ ತಪಾಸಣೆಯಿಂದ ಶೇ 3ರಿಂದ 15ರಷ್ಟು ಅಪಾಯ ತಪ್ಪಿಸಬಹುದು.ಎದೆನೋವು, ಅಶಕ್ತತನ, ತಲೆ ತಿರುಗುವುದು, ಅತಿಯಾದ ಹೃದಯ ಬಡಿತ, ಆಯಾಸ, ಉಸಿರಾಟದಲ್ಲಿ ಏರು-ಪೇರು ಸಾಮಾನ್ಯವಾಗಿ ಮೇಲ್ನೋಟಕ್ಕೆ ಕಂಡುಬರುವ ಲಕ್ಷಣಗಳು. ಹೃದಯ ಹಾಗೂ ಶ್ವಾಸಕೋಶ ಸಂಬಂಧಿ ಏರು-ಪೇರುಗಳನ್ನು ತಜ್ಞ ವೈದ್ಯರಿಂದಲೇ ಪರೀಕ್ಷೆಗೆ ಒಳಪಡಿಸಬೇಕು.ಕ್ರೀಡಾಪಟುಗಳ ಏಕಾಏಕಿ ಸಾವು ಅಂತಃಕರಣವನ್ನೇ ಕಲಕುವಂತೆ ಸಂಗತಿಯಾದರೂ ಇಂತಹ ಘಟನೆಗಳು ಅಪರೂಪಕ್ಕೊಮ್ಮೆ ನಡೆಯುವಂತಹದ್ದು. ಶಾರೀರಿಕ ವ್ಯಾಯಾಮದಿಂದ ಅಂಗಾಂಶಕ್ಕೆ ಮರುಚೇತನ ಸಿಗುವುದು, ರೋಗ ನಿರೋಧಕ ಶಕ್ತಿ ಹೆಚ್ಚುವುದು, ಎಲುಬುಗಳು ಬಲಗೊಳ್ಳುವವು ಹಾಗೂ ಒಟ್ಟಾರೆಯಾಗಿ ಜೀವನದ ಗುಣಮಟ್ಟ ಹೆಚ್ಚುವುದು ಎಂಬುದು ನಿರೂಪಿತವಾಗಿದೆ.ಅಸಹಜವಾದ ಸಾವು ಹಾಗೂ ಅನಾರೋಗ್ಯದಿಂದ ರಕ್ಷಣೆ ಪಡೆಯಲು ಬೇಕಾದಷ್ಟು ಮಾರ್ಗಗಳಿವೆ. ಬೆಳಿಗ್ಗೆ ಇಲ್ಲವೆ ಸಂಜೆ ವಾಕಿಂಗ್ ಮಾಡುವುದು, ದ್ರವಾಹಾರವನ್ನು ಹೆಚ್ಚಾಗಿ ಸೇವಿಸುವುದು, ಮದ್ಯವನ್ನು ವರ್ಜಿಸುವುದು, ಕಾಫಿ, ಚಹಾ ಸೇವನೆ ಕಡಿಮೆ ಮಾಡುವುದು ಅವುಗಳಲ್ಲಿ ಮುಖ್ಯವಾದವು.

 

ಕುಟುಂಬದಲ್ಲಿ ಹೃದ್ರೋಗದ ಹಿನ್ನೆಲೆ ಇದ್ದರೆ ವೈದ್ಯರಿಗೆ ಮಾಹಿತಿ ನೀಡಬೇಕು. 30 ವರ್ಷಕ್ಕಿಂತ ಅಧಿಕ ವಯೋಮಾನ ನಿಮಗಾಗಿದ್ದೆ ಶಾರೀರಿಕ ವ್ಯಾಯಾಮ ಆರಂಭಿಸುವ ಮುಂಚೆ ವೈದ್ಯರ ಸಲಹೆ ಪಡೆಯಬೇಕು.ಧೂಮಪಾನ ಯಾವುದೇ ಕಾರಣಕ್ಕೂ ಮಾಡಬಾರದು. ಅನಾಬೊಲಿಕ್ ಸ್ಟೆರಾಯ್ಡಗಳ ಬಳಕೆ ಅಪಾಯಕಾರಿ ಎಂಬುದನ್ನು ಸದಾ ನೆನಪಿಡಬೇಕು. ಎದೆನೋವಿನಂತಹ ಯಾವುದೇ ಸಮಸ್ಯೆ ಗೋಚರಿಸಿದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.