ಸಣ್ಣ ಕಲ್ಲು ಉರುಳಿದರೆ ಏನೂ ಆಗಲ್ಲ

7

ಸಣ್ಣ ಕಲ್ಲು ಉರುಳಿದರೆ ಏನೂ ಆಗಲ್ಲ

Published:
Updated:

ತುಮಕೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್‌ಯಡಿಯೂರಪ್ಪ ಪಕ್ಷಕ್ಕೆ ಕೊಟ್ಟಿರುವ   `ಡೇಟ್~ ಮುಗಿಯುವವರೆಗೂ ಅವರೇ ನಮ್ಮ ನಾಯಕರು. ಈ ಕ್ಷಣಕ್ಕೂ ಯಡಿಯೂರಪ್ಪ ನಮ್ಮ ಮುಖಂಡರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಶಿವಣ್ಣ ಹೇಳಿದರು.ಯಡಿಯೂರಪ್ಪ ಪಕ್ಷ ತೊರೆದರೆ ನೋವಾಗುತ್ತದೆ. ಬಿಜೆಪಿ ತೊರೆದ ನಾಯಕರ ಗತಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಬಿಜೆಪಿ ಕಟ್ಟಿದ ಎ.ಕೆ.ಸುಬ್ಬಯ್ಯ ಪಕ್ಷ ತೊರೆದು ಏನಾದರು. ಅವರ ಬಗ್ಗೆ ಈಗಲೂ ಗೌರವವಿದೆ ಎಂದು ಮಾರ್ಮಿಕವಾಗಿ ಹೇಳಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಯಡಿಯೂರಪ್ಪ ಪಕ್ಷ ತೊರೆಯುವ ಕುರಿತು ಪತ್ರಕರ್ತರ ಪ್ರಶ್ನೆಗಳಿಗೆ ವ್ಯಂಗ್ಯಭರಿತ, ಪೂರ್ಣಗೊಳಿಸದ ವ್ಯಾಕ್ಯಗಳಲ್ಲೇ ನವಿರು, ಒಗಟುಶೈಲಿಯಲ್ಲಿ ಉತ್ತರಿಸಿದರು.`ಅನುಕರಣೆ, ಅನುಸರಣೆ ಇಲ್ಲದ ಜನರು ಎಲ್ಲೂ ಸಲ್ಲುವುದಿಲ್ಲ ಎಂದು ಜನರಿಗೆ ಗೊತ್ತಿದೆ. ಅಂಥವರ ಕೈ ಜನರು ಹಿಡಿಯುವುದಿಲ್ಲ. ಪಕ್ಷ ಹಿಮಾಲಯ ಪರ್ವತ ಇದ್ದಂತೆ. ಬಿರುಗಾಳಿಗೆ ಪರ್ವತದಲ್ಲಿ ಒಂದು ಸಣ್ಣ ಕಲ್ಲು ಅಲುಗಾಡಿ ಬಿದ್ದರೆ ಪರ್ವತಕ್ಕೆ ಏನಾದರೂ ಆಗಲು ಸಾಧ್ಯವೆ?~ ಎಂದು ಯಡಿಯೂರಪ್ಪ ಪಕ್ಷ ತೊರೆಯುವುದನ್ನು ವಿಶ್ಲೇಷಿಸಿದರು.ಚುನಾವಣೆ- ಸಂಘಟನೆ: ಪಕ್ಷ ಸಂಘಟನೆ ಮತ್ತು ಕಾರ್ಯಕರ್ತರ ಜೊತೆ ನಿರಂತರ ಸಂಪರ್ಕದಲ್ಲಿರುವಂತೆ ಪಕ್ಷ ಸೂಚಿಸಿದ್ದು, ವಿಧಾನಸಭಾ ಚುನಾವಣೆ ಎದುರಿಸಲು ಜಿಲ್ಲೆಯಲ್ಲಿ ಪಕ್ಷ ಸನ್ನದ್ಧವಾಗಿದೆ ಎಂದು ಹೇಳಿದರು.

ಜಿಲ್ಲೆಯ ಹಾಲಿ ಮೂವರು ಶಾಸಕರಿಗೆ ಮತ್ತೆ ಟಿಕೆಟ್ ನೀಡಲಾಗುವುದು. ಆದರೆ ಕಳೆದ ಸಲ ಸೋತವರಿಗೆ ಟಿಕೆಟ್ ನೀಡಬೇಕೆ, ಬೇಡವೇ ಎಂಬುದು ಇನ್ನೂ ತೀರ್ಮಾನವಾಗಿಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಕ್ಷ ತೊರೆದು ಹೊಸ ಪಕ್ಷ ಕಟ್ಟಿದರೆ ಆ ಪಕ್ಷಕ್ಕೆ ಹೋಗುವುದಿಲ್ಲ ಎಂದು ಶಾಸಕ ಸುರೇಶ್‌ಗೌಡ ತಮಗೆ ತಿಳಿಸಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.20ರಂದು ಪ್ರತಿಭಟನೆ: ಕೇಂದ್ರ ಸರ್ಕಾರದ ಭ್ರಷ್ಟಾಚಾರಗಳ ವಿರುದ್ಧ ಅ. 20ರಂದು ಹುಬ್ಬಳಿಯಲ್ಲಿ ರಾಜ್ಯಮಟ್ಟದ ಯುವ ಮೋರ್ಚಾ ಕಾರ್ಯಕರ್ತರ ರ‌್ಯಾಲಿ ಸಂಘಟಿಸಲಾಗಿದೆ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಎನ್.ಬಿ.ನಂದೀಶ್ ಇದಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಈ ಸಮಾವೇಶದ ಮೂಲಕ ಚುನಾವಣೆಗೆ ಪಕ್ಷದ ಕಾರ್ಯಕರ್ತರನ್ನು ತಯಾರು ಮಾಡಲು ಚಾಲನೆ ನೀಡಲಾಗುವುದು. ರಾಷ್ಟ್ರೀಯ ನಾಯಕ ಧರ್ಮೇಂದ್ರ ಪ್ರದಾನ್, ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸೇರಿದಂತೆ ಪಕ್ಷದ ಮುಖಂಡರು ಸಮಾವೇಶದಲ್ಲಿ ಭಾಗವಹಿಸುವರು ಎಂದರು.ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೂ ಆಹ್ವಾನ ನೀಡಲಾಗಿದೆ. ಬರುವುದು, ಬಿಡುವುದು ಅವರಿಗೆ ಬಿಟ್ಟದ್ದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಶಿವಪ್ರಸಾದ್, ಗ್ರಾಮಾಂತರ ಘಟಕದ ಅಧ್ಯಕ್ಷ ಲಕ್ಷ್ಮೀಶ್, ಎಪಿಎಂಸಿ ಅಧ್ಯಕ್ಷ ಓಂ ನಮೋ ನಾರಾಯಣ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry