ಶುಕ್ರವಾರ, ನವೆಂಬರ್ 22, 2019
27 °C
ಬೇಸಿಗೆಯ ಕರಾಳ ಮುಖ, ಕರಗಿದ ಕೃಷ್ಣೆಯ ಒಡಲು, ಆಹಾರ ಹುಡುಕುತ್ತಾ ಬಂದ ಹಕ್ಕಿಗಳು

ಸಣ್ಣ ಮೀನುಗಳ ಮಾರಣ ಹೋಮ

Published:
Updated:

ಆಲಮಟ್ಟಿ: ಕೃಷ್ಣೆಯ ಹಿನ್ನೀರು ಖಾಲಿಯಾಗತೊಡಗಿದ್ದು, ನೀರಿನ ಕೊರತೆ ಹಾಗೂ ಬೇಸಿಗೆ ಬಿಸಲಿನ ಪ್ರಖರತೆಯಿಂದಾಗಿ ಕೃಷ್ಣಾ ನದಿ ದಂಡೆಯಲ್ಲಿ  ಸಹಸ್ರಾರು ಸಣ್ಣ ಮೀನುಗಳು ಸತ್ತು ಬಿದ್ದಿರುವ ದೃಶ್ಯ ಕಂಡುಬರುತ್ತಿದೆ.ಮಾರ್ಚ್ ಅಂತ್ಯಕ್ಕೆ ಜಲಾಶಯಕ್ಕೆ ನೀರಿನ ಕೊರತೆ ಉಂಟಾಗಿದ್ದು, ಬಿಸಿಲಿನ ಝಳಕ್ಕೆ ಹಾಗೂ ಆಮ್ಲಜನಕದ ಕೊರತೆಯಿಂದ ಮೀನುಗಳ ಮಾರಣ ಹೋಮವೇ ನಡೆಯುತ್ತಿದೆ.ಪ್ರತಿನಿತ್ಯವೂ ಆಲಮಟ್ಟಿ ಜಲಾಶಯದ ಹಿನ್ನೀರಿನ ಕೃಷ್ಣಾ ನದಿ ಎರಡು ದಂಡೆಯಲ್ಲಿ ಸಾಲಾಗಿ ಚಿಕ್ಕ ಚಿಕ್ಕ ಮೀನುಗಳು ಸತ್ತಿವೆ. ಕೆಲವೆಡೆ ದೊಡ್ಡ ಮೀನುಗಳೂ ಸತ್ತು ಬಿದ್ದಿರುವ ದೃಶ್ಯಗಳು ಕಾಣುತ್ತಿವೆ. ಈ ಬಾರಿ ಬೇಸಿಗೆಯ ಕರಾಳ ಹಸ್ತ ಪ್ರಾರಂಭವಾಗಿದ್ದು, ರಾಶಿ, ರಾಶಿಯಾಗಿ ಸತ್ತ ಮೀನುಗಳ ಕೆಟ್ಟ ವಾಸನೆ ಹಾಗೂ ಅವುಗಳನ್ನು ತಿನ್ನಲು ಬರುವ ಪಕ್ಷಿಗಳು, ಹಾರಾಡುತ್ತಿರುವ ಪಕ್ಷಿಗಳು ಎಲ್ಲೆಡೆಯೂ ಕಂಡು ಬರುತ್ತಿದೆ. ನಾಯಿ ಸೇರಿದಂತೆ ಇನ್ನಿತರ ಪ್ರಾಣಿಗಳು ಹೆಚ್ಚಾಗಿ ಇಲ್ಲಿಯೇ ಠಿಕಾಣಿ ಹೂಡಿವೆ.ಪಕ್ಷಿಗಳಿಗೆ ಭೂರಿ ಭೋಜನ: ಇತ್ತ ಮೀನುಗಳ ಸಾಯುತ್ತಿದ್ದರೇ, ಅತ್ತ ನದಿಯಲ್ಲಿನ ಸತ್ತು ಮೀನುಗಳನ್ನು ತಿನ್ನಲು ಸಾವಿರಾರು ಪಕ್ಷಿಗಳು ಆಕಾಶದಲ್ಲಿ ಹಾರಾಡುತ್ತಾ, ಸದ್ದು ಮಾಡುತ್ತಾ ಭೂರಿ ಭೋಜನ ಸಿಕ್ಕ ಸಂತಸದಲ್ಲಿ ಹಾರಾಡುತ್ತಿವೆ.  ದಡದಲ್ಲಿ ನಿಂತು ಆಕಾಶದ ಕಡೆ ನೋಡಿದರೆ ನೆಲದತ್ತ ಗುರಿಯಿಟ್ಟ ಹುಡುಕುತ್ತಿರುವ ಹಕ್ಕಿಗಳ ಹಾರಾಟ ಕಾಣುತ್ತದೆ.

`ಬಿಸಲಿನ ಝಳಕ್ಕ ಮಾರ್ಚ್‌ನ್ಯಾಗ ಸಾಕಷ್ಟ ಮೀನ ಸಾಯಕತ್ತಾವ್ರಿ, ಸಣ್ಣ ಮೀನ ಮಾತ್ರ ಜಾಸ್ತಿ ಸಾಯಕತ್ತಾವ್ರಿ, ದೊಡ್ಡ ಮೀನು ಕೂಡ ಅಲ್ಲಲ್ಲಿ ಮಾತ್ರ ಸಾಯುತ್ತಾವ್ರಿ, ನದಿ ದಂಡೆಗುಂಟ ನಾಲ್ಕೈದು ಕಿ.ಮೀ ಉದ್ದವಾಗಿ ಮೀನ ಸತ್ತಾವ್ರಿ, ಸತ್ತ ಮೀನ ದಂಡಿಗೆ ಬಂದ ತೇಲಾಕತ್ತಾವ್ರೀ' ಎಂದು ನದಿ ದಂಡೆಯಲ್ಲಿ ಮೀನು ಹಿಡಿಯುವ ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದರು.ಸಹಸ್ರಾರು ಮೀನು ಸಾಯುವ ಪ್ರಮಾಣ ಹೆಚ್ಚಿದ್ದರಿಂದ ಆಲಮಟ್ಟಿ ನದಿ ಹಿನ್ನೀರಿನಲ್ಲಿ ಒಂದು ರೀತಿಯ ಗಬ್ಬು ವಾಸನೆ ಹೆಚ್ಚಿದೆ.

ಪ್ರತಿಕ್ರಿಯಿಸಿ (+)