ಬುಧವಾರ, ಅಕ್ಟೋಬರ್ 23, 2019
27 °C

ಸಣ್ಣ, ಸುಂದರ ಅಡುಗೆ ಕೋಣೆ

Published:
Updated:

ಇರಲಿಕ್ಕೊಂದು ಮನೆ. ಆ ಮನೆ ಹಾಗೆ- ಹೀಗಿದ್ದರೆ ಸಾಲದು. ಅದು ಅಂದ- ಚೆಂದವಾಗಿದ್ದು ಉಳಿದವರ ಕಣ್ಣು ಕುಕ್ಕುವಂತಿರಬೇಕು. ಎಲ್ಲವೂ ಇತ್ತೀಚಿನ ವಿನ್ಯಾಸಗಳು. ಆ ವಿನ್ಯಾಸಗಳಿಗೆ ಹೊಂದುವಂತಹ ವರ್ಣಗಳ ಹೊಂದಾಣಿಕೆ. ಅವುಗಳನ್ನು ಹೊಂದಿಸಲು ಮನೆ ಕಟ್ಟಿಸುವ ಯಜಮಾನ ಗುದ್ದಾಡುತ್ತಿದ್ದರೆ, ಯಜಮಾನತಿಗೆ ಗೆಳತಿಯರ ಮನದಲ್ಲಿ ಅಸೂಯೆ ಹುಟ್ಟಿಸುವಂತಹ ಅಡುಗೆ ಕೋಣೆಯ ವಿನ್ಯಾಸದ ಕನಸು.ಅದು ಮಾಡ್ಯುಲರ್ ಕಿಚನ್ ಆಗಿರಬೇಕು. ಅದೂ ಬ್ರ್ಯಾಂಡೆಡ್.ಅದರಲ್ಲಿ ಎಲ್ಲಾ ಆಧುನಿಕ ವ್ಯವಸ್ಥೆಗಳಿರಬೇಕು. ಡಿಷ್ ವಾಷರ್, ಕೇವಲ ಡಬಲ್ ಡೋರ್ ಅಲ್ಲ, ಎಲ್ಲೆಡೆ ಪ್ರತ್ಯೇಕ ಬಾಗಿಲುಗಳುಳ್ಳ ಫ್ರಿಡ್ಜ್, ಮೈಕ್ರೋವೇವ್ ಓವನ್, ಬ್ಲೆಂಡರ್- ಮಿಕ್ಸರ್, ಹೊಳೆಯುವ ಚಿಮಣಿ, ಫಳ ಫಳ ಎನ್ನುವ ಅಡುಗೆ ಕಟ್ಟೆ, ಒಂದೇ ಒಂದೂ ಡಬ್ಬಗಳು ಕಾಣಿಸದ ಹಾಗೆ ಎಲ್ಲಾ ಕಡೆ ಬಾಗಿಲು ಮುಚ್ಚುವಂತಹ ಕಪಾಟುಗಳು.. ಆದರೆ, ಎಲ್ಲವನ್ನೂ ಹೊಂದಿಸಲು ಬೆಂಗಳೂರೆಂಬ ಮಹಾನಗರದ 30್ಡ40ರ ನಿವೇಶನದಲ್ಲಿ ಅಡುಗೆ ಕೋಣೆಗೆ ಜಾಗ ಬೇಕಲ್ಲ. ಇದಕ್ಕೆಂದೇ ಸಣ್ಣ ಜಾಗದಲ್ಲೂ ಅಂದದ ಅಡುಗೆ ಕೋಣೆ ಅದೂ ಸಕಲ ಸೌಲಭ್ಯವಿರುವ ಅಡುಗೆ ಕೋಣೆ ವಿನ್ಯಾಸ ಮಾಡುವವರಿದ್ದಾರೆ.ಸಣ್ಣ ಅಡುಗೆ ಕೋಣೆಯಲ್ಲಿ ಜಾಗ ಕಡಿಮೆಯಿದ್ದು ಎಲ್ಲವನ್ನೂ ಸರಿದೂಗಿಸುವುದು ಕಷ್ಟ. ಆದರೂ ವಿಶೇಷ ಬಗೆಯ ಸ್ಟೋರೇಜ್ ವ್ಯವಸ್ಥೆ, ನೈಸರ್ಗಿಕ ಹಾಗೂ ಕೃತಕ ಬೆಳಕು, ಅಡುಗೆ ಸಲಕರಣೆಗಳು ಇವುಗಳನ್ನೆಲ್ಲ ಹುಷಾರಾಗಿ ಬಳಸಿಕೊಂಡರೆ ಚಿಕ್ಕ ಜಾಗವನ್ನೇ ಅತ್ಯಂತ ಸೂಕ್ತವಾಗಿ ಬಳಸಬಹುದು.ಎಲ್ಲೆಲ್ಲಿ ಏನೇನನ್ನು ಹೊಂದಿಸಬೇಕು ಎಂಬ ವಿಷಯ ಬಂದಾಗ ಇದಕ್ಕೆಂದೇ ವಿವಿಧ ರೀತಿಯ ಕ್ಯಾಬಿನೆಟ್ ಅಂದರೆ ಕಪಾಟಿನ ವಿನ್ಯಾಸಗಳು ನಿಮ್ಮ ಮುಂದಿವೆ. ಒಟ್ಟಾರೆ ಅಡುಗೆ ಕೋಣೆಯ ವಿನ್ಯಾಸವೂ ಇಲ್ಲಿ ಬಹು ಮುಖ್ಯ. ಇನ್ನೂ ಮಹತ್ವದ ಸಂಗತಿ ಏನೆಂದರೆ ಸ್ಟೋರೇಜ್, ಬೆಳಕು ಮತ್ತು ಸಲಕರಣೆಗಳನ್ನು ಗಮನದಲ್ಲಿಇಟ್ಟುಕೊಳ್ಳಬೇಕಾಗುತ್ತದೆ. ಜೊತೆಗೆ ಅಂದ- ಚೆಂದ, ಬಳಕೆಯೂ ಅಷ್ಟೇ ಪ್ರಮುಖವಾದದ್ದು. ಸಣ್ಣ ಬಜೆಟ್‌ನಲ್ಲಿ ಕೂಡಾ ನಿಮ್ಮ ಅಗತ್ಯಗಳಿಗೆ ತಕ್ಕಂತೆ ಇದನ್ನು ಹೊಂದಿಸಿಕೊಳ್ಳಬಹುದು.ಉಪಯುಕ್ತವಾದ ಅಡುಗೆಕೋಣೆಯೆಂದರೆ ಸರಾಗವಾಗಿ ಓಡಾಡುವಂತಿರಬೇಕು. ಆಚೆ- ಈಚೆ ಡಿಕ್ಕಿ ಹೊಡೆಸಿಕೊಳ್ಳದೆ, ಅಡುಗೆ ಸಲಕರಣೆಗಳನ್ನು ಬೀಳಿಸಿಕೊಳ್ಳದೆ ವಿರಾಮವಾಗಿ ಅಡುಗೆ ಮಾಡುವಂತಿರಬೇಕು. ಅಂದರೆ ಸಿಂಕ್, ಅಡುಗೆ ತಯಾರಿಸುವ, ತರಕಾರಿ- ಮಾಂಸ ಹೆಚ್ಚುವ ಕೌಂಟರ್ ಅಥವಾ ಕಟ್ಟೆಗೆ ಸಾಕಷ್ಟು ಸ್ಥಳಾವಕಾಶ ಕಲ್ಪಿಸುವುದು ವಿನ್ಯಾಸಕಾರನ ಸವಾಲಾಗಿರುತ್ತದೆ.ಅಡುಗೆ ಕೋಣೆಯು ಗ್ಯಾಲಿ ಆಕಾರ, ಎಲ್ ಆಕಾರ, ಅಥವಾ ಯು ಆಕಾರದಲ್ಲಿದ್ದರೆ ಸಣ್ಣ ಜಾಗದಲ್ಲೂ ಅಂದವಾಗಿ ಕಾಣುತ್ತದೆ. ಸಂಪೂರ್ಣ ಬಳಕೆಗೆ ಸಿಗುತ್ತದೆ.ಗ್ಯಾಲಿ ಅಡುಗೆ ಕೋಣೆ ಎಂದರೆ ಅಡುಗೆ ತಯಾರಿಸುವ, ತರಕಾರಿ ಹೆಚ್ಚುವ, ರುಬ್ಬುವ ಜಾಗ ಅಕ್ಕಪಕ್ಕದಲ್ಲೇ ಇರುತ್ತದೆ. ಸ್ಟೋರೇಜ್‌ಗೆ ಅವಕಾಶ ಕಡಿಮೆ. ಆದರೆ, ಓಡಾಟಕ್ಕೆ ಸಾಕಷ್ಟು ಜಾಗವಿರುತ್ತದೆ.ಎಲ್ ಆಕಾರದಲ್ಲಿರುವ- ಅಡುಗೆ ಕೋಣೆಯಲ್ಲಿ ಸ್ಟೋರೇಜ್‌ಗೆ ಸಾಕಷ್ಟು ಅವಕಾಶಇರುತ್ತದೆ. ಆದರೆ, ಓಡಾಟದ ಜಾಗ ಕಡಿಮೆ. ಮೂಲೆಯಲ್ಲಿ ಬೇಕಿದ್ದರೆ ಊಟ ಮಾಡುವ ಸಣ್ಣ ಮೇಜನ್ನು ಇಟ್ಟುಕೊಳ್ಳಬಹುದು.ಯು ಆಕಾರವಿದ್ದರೆ- ಅಡುಗೆ ತಯಾರಿಸಲು, ಸ್ಟೋರೇಜ್‌ಗೆ ಸಾಕಷ್ಟು ಜಾಗವಿರುತ್ತದೆ. ಆದರೆ ನೆಲದ ಮೇಲೆ ಅಷ್ಟು ಜಾಗ ಸಿಗಲಾರದು. ಒಂದು ಕಡೆ ಕಟ್ಟೆಯನ್ನು ಬೆಳಗಿನ ತುರ್ತು ಉಪಾಹಾರ ಸೇವಿಸಲೂ ಬಳಸಬಹುದು.ಈ ರೀತಿಯ ಆಕಾರಗಳಲ್ಲಿ ಒಂದನ್ನು ನಿರ್ಧರಿಸಿದ ಮೇಲೆ ಸಿಂಕ್ ಎಲ್ಲಿ ಕೂಡ್ರಿಸಬಹುದು, ಫ್ರಿಡ್ಜ್ ಎಲ್ಲಿಡಬಹುದು, ಕೊಳಾಯಿ, ವಿದ್ಯುತ್, ಅನಿಲದ ಪಾಯಿಂಟ್‌ಗಳು ಎಲ್ಲಿರಬೇಕು ಎಂಬುದರ ಬಗ್ಗೆ ಯೋಜನೆ ರೂಪಿಸುವುದು ಸುಲಭ. ಜೊತೆಗೆ ಗಾಳಿಯಾಡಲು, ಬೆಳಕಿಗೆ ಜಾಗ ಮಾಡಿಕೊಡಲು ವ್ಯವಸ್ಥೆ ಮಾಡಬೇಕು.ಸಣ್ಣ ಅಡುಗೆ ಕೋಣೆಗೆ ತಕ್ಕಂತೆ ಉಪಕರಣಗಳನ್ನೂ ವಿನ್ಯಾಸ ಮಾಡಲಾಗಿದೆ. ಅಗಲ, ದಪ್ಪ ಕಡಿಮೆಯಿರುವ ಎತ್ತರವಾದ ಫ್ರಿಡ್ಜ್, ಕ್ಯಾಬಿನೆಟ್ ಕೆಳಗೆ ಜೋಡಿಸುವಂತಿರುವ ಮೈಕ್ರೋವೇವ್ ಓವನ್ ಬಂದಿವೆ. ವಿದ್ಯುತ್ ದೀಪಗಳಿಂದ ಅಡುಗೆ ಕೋಣೆ ದೊಡ್ಡದಾಗಿ ಕಾಣುವಂತೆ ಭ್ರಮೆ ಹುಟ್ಟಿಸಬಹುದು. ಗಾಜಿನ ಬಾಗಿಲುಗಳುಳ್ಳ ಕ್ಯಾಬಿನೆಟ್ ಜೋಡಿಸಬಹುದು. ಅದರಲ್ಲೂ ತೆಳು ವರ್ಣದ ಕ್ಯಾಬಿನೆಟ್ ಒಳಿತು.ಕೌಂಟರ್‌ಗಳ ಕೆಳಗೆ ಹೆಚ್ಚು ಜಾಗ, ಅಂದರೆ ಕೌಂಟರ್ ಸ್ವಲ್ಪ ಎತ್ತರವಾಗಿದ್ದರೆ ಕೆಳಗಡೆ ಉಪಕರಣಗಳನ್ನು ಜಾಸ್ತಿ ಜೋಡಿಸಬಹುದು. ಇದರಿಂದ ಅಡುಗೆ ತಯಾರಿ ಕೆಲಸಕ್ಕೆ ಹೆಚ್ಚು ಜಾಗ ಸಿಗುತ್ತದೆ.ನೆಲಕ್ಕೆ ಟೈಲ್‌ಗಳನ್ನು ಓರೆಯಾಗಿ ಜೋಡಿಸಬಹುದು. ಇದರಿಂದ ನೆಲ ವಿಶಾಲವಾಗಿ ಕಾಣುತ್ತದೆ. ಪಾತ್ರೆಗಳಿಗೆ ಕ್ಯಾಬಿನೆಟ್ ಮಾಡಲು ಜಾಗವಿಲ್ಲದಿದ್ದರೆ ನೇತಾಡಿಸಬಹುದು.ಇದು ಒಂದು ರೀತಿಯ ಶೋಭೆಯನ್ನು ಅಡುಗೆಕೋಣೆಗೆ ತಂದು ಕೊಡುತ್ತದೆ. ಕ್ಯಾಬಿನೆಟ್ ಬಾಗಿಲ ಒಳಭಾಗದಲ್ಲೂ ನಿತ್ಯ ಬಳಸುವ ಕೆಲವು ಪಾತ್ರೆ, ಸೌಟು, ಓವನ್ ಡಬ್ಬಗಳನ್ನು ನೇತಾಡಿಸಬಹುದು. ಸೀಲಿಂಗ್‌ನವರೆಗೂ ಕ್ಯಾಬಿನೆಟ್ ಮಾಡಿಸಿ ಅಪರೂಪಕ್ಕೆ ಬಳಸುವ ಪಾತ್ರೆಗಳನ್ನು ಇಡಬಹುದು. ಸಿಂಕ್ ಅಗಲವಾಗಿರಲಿ. ಪಕ್ಕಕ್ಕೆ ಜರುಗಿಸುವ ಅಥವಾ ಮಡಚುವ ಬಾಗಿಲಿರಲಿ. ಸಾಮಾನ್ಯ ಬಾಗಿಲಿದ್ದರೆ ಇದನ್ನು ತೆರೆದಿಟ್ಟಾಗ ಹೆಚ್ಚು ಜಾಗ ತಿನ್ನುತ್ತದೆ. ಇಡೀ ಅಡುಗೆಕೋಣೆ ಗೋಡೆಗೆ ಬಿಳಿ ಅಥವಾ ಕಣ್ಣಿಗೆ ತಂಪೆನಿಸುವ ಬಣ್ಣ ಇರಲಿ. ಇದರಿಂದ ಜಾಗ ದೊಡ್ಡದಾಗಿ ಕಾಣುತ್ತದೆ. 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)