ಸೋಮವಾರ, ಆಗಸ್ಟ್ 19, 2019
28 °C

ಸಣ್ಣ ಹರಳಿನ ಯೂರಿಯಾ ಕೊರತೆ: ದೂರು

Published:
Updated:

ವಿಜಾಪುರ: `ಜಿಲ್ಲೆಯಲ್ಲಿ ಜೈ ಕಿಸಾನ್ ಕಂಪನಿಯ ಯೂರಿಯಾ ಗೊಬ್ಬರದ ಕೊರತೆ ಉಂಟಾಗಿದೆ' ಎಂದು ರೈತರು ದೂರುತ್ತಿದ್ದಾರೆ.

`ನಗರದ ತುಂಬೆಲ್ಲ ಅಲೆದಾಡಿದರೂ ನಮಗೆ ಬೇಕಾದ ಸಣ್ಣ ಹರಳಿನ ಯೂರಿಯಾ ಗೊಬ್ಬರ ಸಿಗುತ್ತಿಲ್ಲ. ಎರಡು ವಾರದಿಂದ ಅಭಾವ ಉಂಟಾಗಿದೆ. ಇನ್ನೂ 15 ದಿನ ಕಾಯಿರಿ, ತರಿಸಿಕೊಡುತ್ತೇವೆ ಎಂದು ರಸಗೊಬ್ಬರ ವಿತರಕರು ಹೇಳುತ್ತಿದ್ದಾರೆ. ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿಯೂ ಈ ಗೊಬ್ಬರ ಲಭಿಸುತ್ತಿಲ್ಲ. ಇದರಿಂದಾಗಿ ಮುಂಗಾರು ಹಂಗಾಮಿನ ಬಿತ್ತನೆ ಮತ್ತಷ್ಟು ವಿಳಂಬವಾಗುವ ಭೀತಿ ಎದುರಾಗಿದೆ' ಎಂದು ತಾಲ್ಲೂಕಿನ ಗುಣಕಿ ಗ್ರಾಮದ ರೈತ ಅಶೋಕ ಯಲ್ಲಪ್ಪ ಬುದ್ನಿ ದೂರಿದರು.`ನಮ್ಮಲ್ಲಿ ಯೂರಿಯಾ ಹೊರತುಪಡಿಸಿ ಎಲ್ಲ ತರಹದ ಗೊಬ್ಬರ ಸಿಗುತ್ತದೆ. ಹೆಚ್ಚು ರೈತರು ಕೇವಲ ಜೈಕಿಸಾನ್ ಯೂರಿಯಾ ಗೊಬ್ಬರ ಕೇಳುತ್ತಿದ್ದಾರೆ. ಬೇಡಿಕೆಗೆ ತಕ್ಕಷ್ಟು ಗೊಬ್ಬರವನ್ನು ಕಂಪನಿಯವರು ಪೂರೈಸುತ್ತಿಲ್ಲ' ಎಂದು ರಸಗೊಬ್ಬರ ವಿತರಕರೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.`ನಮ್ಮಲ್ಲಿ ದಪ್ಪ ಹರಳಿನ ಇಫ್ಕೊ ಕಂಪನಿಯ ಯೂರಿಯಾ ಗೊಬ್ಬರ ದಾಸ್ತಾನಿದೆ. ಆದರೆ, ರೈತರು ತಮಗೆ ಸಣ್ಣ ಹರಳಿನ ಯೂರಿಯಾ ಗೊಬ್ಬರವೇ ಬೇಕು ಎಂದು ಅದನ್ನು ಖರೀದಿಸುತ್ತಿಲ್ಲ' ಎಂದು ಮತ್ತೊಬ್ಬ ವರ್ತಕರು ಹೇಳಿದರು.`ಯೂರಿಯಾ ಗೊಬ್ಬರ ಪೆಟ್ರೋಲಿಯಂನ ಉಪ ಉತ್ಪನ್ನ. ಕೊಲ್ಲಿ ರಾಷ್ಟ್ರಗಳಿಂದ ಆಮದು ಮಾಡಿಕೊಂಡು ಕೇಂದ್ರ ಸರ್ಕಾರವೇ ನಮಗೆ ಹಂಚಿಕೆ ಮಾಡುತ್ತದೆ. ಜಿಲ್ಲೆಯ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ಯೂರಿಯಾ ಗೊಬ್ಬರ ಸಾಕಷ್ಟು ದಾಸ್ತಾನಿದ್ದು, ರೈತರಿಂದ ಎತ್ತುವಳಿ ಕಡಿಮೆ ಇದೆ' ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕ ಸಂಜಯ ಪಾಟೀಲ (ಕನಮಡಿ) ಹೇಳಿದರು.`ಎಲ್ಲ ಕಂಪನಿಯ ಯೂರಿಯಾ ಗೊಬ್ಬರ ಒಂದೇ ತೆರನಾಗಿರುತ್ತದೆ. ಆ ಬಗ್ಗೆ ರೈತರಿಗೆ ತಿಳಿವಳಿಕೆ ಇಲ್ಲದಿರುವುದು ಮತ್ತು ಕೆಲವರು ತಪ್ಪು ಮಾಹಿತಿ ನೀಡಿದ ಕಾರಣ ತಮಗೆ ಜೈ ಕಿಸಾನ್ ಕಂಪನಿಯ ಸಣ್ಣ ಹರಳಿನ ಯೂರಿಯಾ ಗೊಬ್ಬರವೇ ಬೇಕು ಎಂದು ಕೆಲ ರೈತರು ಕೇಳುತ್ತಿದ್ದಾರೆ. ಈ ಬಗ್ಗೆ ರೈತರಿಗೆ ಮಾಹಿತಿ ನೀಡುವ ಕೆಲಸವೂ ನಡೆಯುತ್ತಿದೆ' ಎನ್ನುತ್ತಾರೆ ಅವರು.`ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗಾಗಿ 8,500 ಮೆಟ್ರಿಕ್ ಟನ್ ಯೂರಿಯಾ, 8,500 ಮೆಟ್ರಿಕ್ ಟನ್ ಡಿಎಪಿ, 22,200 ಮೆಟ್ರಿಕ್ ಟನ್ ಇತರ ಮಾದರಿಯ ರಸಗೊಬ್ಬರ ದಾಸ್ತಾನಿದೆ. ಜಿಲ್ಲೆಯಲ್ಲಿ  ಈ ವರೆಗೆ ಯಾವುದೇ ರೀತಿಯ ರಸಗೊಬ್ಬರದ ಅಭಾವವಾಗಿರುವ ಮಾಹಿತಿ ಲಭಿಸಿಲ್ಲ' ಎಂಬುದು ಜಂಟಿ ಕೃಷಿ ನಿರ್ದೇಶಕ ಲಿಂಗಮೂರ್ತಿ ಅವರ ವಿವರಣೆ.`ನಾವು ಸಣ್ಣ ಹರಳಿನ ಯೂರಿಯಾ ಬಳಸುತ್ತ ಬಂದಿದ್ದೇವೆ. ಈಗ ದೊಡ್ಡ ಹರಳಿನ ಯೂರಿಯಾ ಬಳಸಿದರೆ ಅದು ಫಲನೀಡುತ್ತದೆಯೇ ಎಂಬ ಭಯವೂ ಇದೆ. ಇನ್ನು 50 ಕೆ.ಜಿ. ಚೀಲದ ಯೂರಿಯಾ ಬೆಲೆ ರೂ.282.74ರಿಂದ ರೂ.286 ವರೆಗೆ ಇದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಕೆಲ ಅಂಗಡಿಯವರು ಈ ಬೆಲೆ ನಿಯಮ ಪಾಲನೆ ಮಾಡುತ್ತಿಲ್ಲ' ಎಂದು ರೈತರೊಬ್ಬರ ಆರೋಪ.

Post Comments (+)