ಮಂಗಳವಾರ, ಮೇ 11, 2021
26 °C

ಸತತ ಮಳೆ: ನಿಂಬೆ, ಕಿತ್ತಳೆಗೆ ಕಟ್ಟೆ ರೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಳಸ: ಮಲೆನಾಡಿಲ್ಲಿ ಮಳೆ ಹೆಚ್ಚಿದಂತೆಲ್ಲಾ ನೈಸರ್ಗಿಕ ಹಸಿರು ಹೊದಿಕೆ ದಟ್ಟವಾಗುತ್ತಾ ಹೋಗುತ್ತದೆ. ಚಳಿಗಾಲದಲ್ಲೂ ಎಲ್ಲೆಲ್ಲೂ ಹಚ್ಚಹಸಿರಿನ ದೃಶ್ಯಾವಳಿ ಕಂಡು ಬರುತ್ತವೆ. ಆದರೆ ಇದೇ ಮಳೆಯು ರೈತರು ನೆಟ್ಟು ಬೆಳೆಸಿದ ತೋಟಗಾರಿಕಾ ಸಸ್ಯಗಳಿಗೆ ಹಾನಿ ಮಾಡುತ್ತದೆ. ಇದಕ್ಕೊಂದು ನಿದರ್ಶನ ಸಿಟ್ರಸ್ ಜಾತಿಗೆ ಸೇರಿದ ನಿಂಬೆ ಮತ್ತು ಕಿತ್ತಳೆ ಗಿಡಗಳು.ಸೆಪ್ಟೆಂಬರ್‌ನಲ್ಲೂ ಬೆಂಬಿಡದ ಮಳೆಯ ಬಾಧೆಗೆ ಕಳಸ ಹೋಬಳಿಯ ನಿಂಬೆ ಮತ್ತು ಕಿತ್ತಳೆ ಗಿಡಗಳಲ್ಲಿ ಕಟ್ಟೆ ರೋಗ ವ್ಯಾಪಿಸಿದೆ. ಹಿಂದೆಲ್ಲಾ  ಮಳೆಗಾಲದ ಅಂತ್ಯದ ವೇಳೆಗೆ ಅಪರೂಪಕ್ಕೆ ಕಂಡು ಬರುತ್ತಿದ್ದ ಈ ರೋಗ ಈ ಬಾರಿ ತೋಟದಲ್ಲಿ ಇರುವ ಬಹುತೇಕ ಗಿಡಗಳನ್ನು ಬಾಧಿಸುತ್ತಿದೆ.  ನಿಂಬೆ, ಕಿತ್ತಳೆ ಗಿಡಗಳ ಎಲೆಗಳೆಲ್ಲಾ ಹಳದಿ ಬಣ್ಣಕ್ಕೆ ತಿರುಗಿದ್ದು ಉದುರಲಾರಂಭಿಸಿವೆ. ಗಿಡಗಳಲ್ಲಿ ಕಡ್ಡಿ ಮಾತ್ರ ಉಳಿದು ಅವುಗಳ ಅಂತ್ಯಕಾಲದ ಬಗ್ಗೆ ಸುಳಿವು ನೀಡುತ್ತಿದೆ. ಹಿಂದೆಲ್ಲಾ ದೊಡ್ಡ ಗಿಡಗಳನ್ನು ಬಾಧಿಸುತ್ತಿದ್ದ ಈ ರೋಗ ಈಗ ಎಳೆ ಗಿಡಗಳನ್ನೂ ಆಹುತಿ ತೆಗೆದುಕೊಳ್ಳುತ್ತಿದೆ. ಶಿಲೀಂಧ್ರದ ಉಪಟಳದಿಂದಾಗಿ ಈ ರೋಗ ಉಲ್ಬಣಿಸುತ್ತಿದೆ. ಆದರೆ ರೋಗದ ನಿಯಂತ್ರಣಕ್ಕೆ ರೈತರಿಗೆ ಯಾವುದೇ ಪರಿಹಾ ರೋಪಾಯಗಳು ಕಂಡು ಬರುತ್ತಿಲ್ಲ.

`ನಿಂಬೆ, ಕಿತ್ತಳೆಗೆ ಕಟ್ಟೆ ಬಂದ್ರೆ ಅವು ಸತ್ತಂಗೆ. ಹೊಸ ಗಿಡ ನೆಡುವುದಲ್ಲದೆ ಬೇರೆ ಉಪಾಯ ಇಲ್ಲ~ ಎಂಬುದು ಕೃಷಿಕರು ಕಂಡುಕೊಂಡಿರುವ ಪರಿಹಾರ. ತೋಟದಲ್ಲಿ ನಾಲ್ಕು ನಿಂಬೆ ಗಿಡ ಇದ್ದರೆ ಸಾವಿರಾರು ನಿಂಬೆಕಾಯಿ ಸಿಗುತ್ತದೆ. ಸಣ್ಣ ಕೃಷಿಕರಿಗೆ ಉಪ ಆದಾಯ ತರುವಲ್ಲಿ ನಿಂಬೆಯ ಪಾತ್ರ ದೊಡ್ಡದು. ಜೊತೆಗೆ ಕಿತ್ತಳೆ ಕೂಡ ಅಷ್ಟಿಷ್ಟು ಆರ್ಥಿಕ ಚೇತನವನ್ನು ಬೆಳೆಗಾರರಲ್ಲಿ ತುಂಬುತ್ತದೆ. ಈ ಹಿನ್ನೆಲೆಯಲ್ಲಿ ರೋಗದ ನಿಯಂತ್ರಣಕ್ಕೆ ವಿಜ್ಞಾನಿಗಳು ಸೂಕ್ತ ಮಾರ್ಗದರ್ಶನ ನೀಡುವ ಅಗತ್ಯ ಇದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.