ಸೋಮವಾರ, ಮಾರ್ಚ್ 8, 2021
31 °C

ಸತುವಿಲ್ಲದಿದ್ದರೆ ಭತ್ತ ಸತ್ತಂತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸತುವಿಲ್ಲದಿದ್ದರೆ ಭತ್ತ ಸತ್ತಂತೆ

ರಾಜ್ಯದ ನೀರಾವರಿ ಪ್ರದೇಶದಲ್ಲಿ ಭತ್ತವು ಪ್ರಮುಖ ಆಹಾರ ಬೆಳೆ. ಆದರೆ ಇತ್ತೀಚಿನ ದಿನಗಳಲ್ಲಿ ಭತ್ತ ಬೆಳೆಯುವ ಬಹುತೇಕ ಪ್ರದೇಶಗಳಲ್ಲಿ ಸತುವಿನ ಪೋಷಕಾಂಶದ ಕೊರತೆ ಕಂಡು ಬರುತ್ತಿದೆ. ಇದರಿಂದ ಬೆಳೆಯ ಬೆಳವಣಿಗೆ ಕುಂಠಿತಗೊಂಡು ಇಳುವರಿ ಕಡಿಮೆಯಾಗುತ್ತಿರುವುದು ಕಂಡುಬಂದಿದೆ. ಆದ್ದರಿಂದ ರೈತರು ಭತ್ತದ ಬೆಳೆಯಲ್ಲಿ ಸತುವಿನ ಮಹತ್ವವನ್ನು ಮನಗಾಣಬೇಕಿದೆ.ಸತುವಿನ ಕೊರತೆ ಲಕ್ಷಣ

1. ಸತುವಿನ ಕೊರತೆಯು ನಾಟಿ ಮಾಡಿದ ಒಂದರಿಂದ ಐದು ವಾರದ ವರೆಗೂ ಹೆಚ್ಚಾಗಿ ಕಂಡು ಬರುತ್ತದೆ.2. ಸಾಮಾನ್ಯವಾಗಿ ಕೆಳಭಾಗದ ಹಳೆಯ ಎಲೆಗಳ ಮಧ್ಯ ಭಾಗದಲ್ಲಿ ತಿಳಿ ಬೆಳ್ಳನೆಯ ಗೀರುಗಳು ಕಾಣಿಸಿಕೊಳ್ಳುತ್ತವೆ. ನಂತರ ಕಂದು ಬಣ್ಣದ ಚುಕ್ಕಿಗಳು ಬಲಿತ ಎಲೆಗಳ ಮೇಲ್ಭಾಗದಲ್ಲಿ ಕಾಣಿಸಿಕೊಂಡು ದೊಡ್ಡದಾಗುತ್ತಾ ಪೂರ್ತಿ ಎಲೆಯನ್ನೇ ಆವರಿಸುತ್ತವೆ.3. ಕಪ್ಪು ಮಣ್ಣಿನಲ್ಲಿ ಬಲಿತ ಎಲೆಗಳು ಹಳದಿಯಾಗಿ ಕಂಡರೆ, ಕೆಂಪು ಮಣ್ಣಿನಲ್ಲಿ ಕೊರತೆಯ ಲಕ್ಷಣಗಳು ತುಕ್ಕು ಹಿಡಿದ ಹಾಗೆ ಕಾಣುತ್ತವೆ.4. ಎಲೆಗಳನ್ನು ಕಿತ್ತರೆ ಸುಲಭವಾಗಿ ತುಂಡಾಗುತ್ತವೆ.5. ಹೊಸದಾಗಿ ಚಿಗುರಿದ ಎಲೆಗಳು ಬಹಳ ಸಣ್ಣದಾಗಿದ್ದು ತೆಂಡೆ ಒಡೆಯುವುದು ಕ್ಷೀಣಿಸುತ್ತದೆ. ಬೆಳೆಯ ಬೆಳವಣಿಗೆ ಕುಂಠಿತಗೊಳ್ಳುತ್ತದೆ.6. ಭತ್ತದ ಬೆಳವಣಿಗೆ ಸಮನಾಗಿರುವುದಿಲ್ಲ, ತೆನೆ ಏಕಕಾಲಕ್ಕೆ ಮಾಗುವುದಿಲ್ಲ.7. ಇಳುವರಿ ಕನಿಷ್ಠ ಶೇಕಡ 20-30 ರಷ್ಟು ಕುಂಠಿತಗೊಳ್ಳುತ್ತದೆ.

ಉಪಯೋಗಗಳು

1. ಸತುವು ಎಲೆಗಳಲ್ಲಿ ಹರಿತ್ತನ್ನು ಉತ್ಪತ್ತಿ ಮಾಡುವ ಗುಣ ಹೊಂದಿದ್ದು, ದ್ಯುತಿಸಂಶ್ಲೇಷಣೆ ಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.2. ಸಸ್ಯದಲ್ಲಿ ಪ್ರೋಟೀನ್ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.3. ಸಾರಜನಕವನ್ನು ಮಣ್ಣಿನಿಂದ ಹೆಚ್ಚಿನ ಪ್ರಮಾಣದಲ್ಲಿ ಹೀರಲು ಸಹಾಯ ಮಾಡುತ್ತದೆ ಮತ್ತು ಸಸಾರಜನಕ ಸಂಶ್ಲೇಷಣೆಯನ್ನು ಹೆಚ್ಚಿಸುತ್ತದೆ.4. ಹಲವಾರು ಪ್ರಮುಖ ಕಿಣ್ವಗಳ ಕಾರ್ಯ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತದೆ.5. ಸತುವು ಇಂಡೋಲ್ ಅಸಿಟಿಕ್ ಆಮ್ಲ ಎಂಬ ಸಸ್ಯ ಹಾರ್ಮೋನ್ ಉತ್ಪತ್ತಿ ಮಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.6. ಹೂ ಬಿಡುವ ಕಾರ್ಯದಲ್ಲಿ ಸಹಾಯ ಮಾಡುತ್ತದೆ.7. ಬೀಜ ಮತ್ತು ಕಾಳು ಬಲಿಯುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.ನಿವಾರಣೆ

* ಸಾಕಷ್ಟು ಪ್ರಮಾಣದಲ್ಲಿ ಸಾವಯವ / ಹಸಿರೆಲೆ ಗೊಬ್ಬರಗಳ ಬಳಕೆ* ನಾಟಿಗೆ ಮುಂಚಿತವಾಗಿ ಸಾಧಾರಣ ಮಣ್ಣಾಗಿದ್ದಲ್ಲಿ ಎಕರೆಗೆ 8 ಕಿಲೊ ಹಾಗೂ ಚೌಳು ಮಣ್ಣಾಗಿದ್ದಲ್ಲಿ ಎಕರೆಗೆ 16 ಕಿಲೊ ಸತುವಿನ ಸಲ್ಫೇಟನ್ನು ಮಣ್ಣಿನಲ್ಲಿ ಸೇರಿಸುವುದು.* ನಾಟಿ ಮಾಡಿದ ನಂತರ ಸತುವಿನ ಕೊರತೆಯ ಲಕ್ಷಣಗಳು ಕಂಡುಬಂದಲ್ಲಿ ಶೇ 0.5ರ (100 ಲೀಟರ್ ಗೆ 500 ಗ್ರಾಂ.) ಸತುವಿನ ಸಲ್ಫೇಟ ದ್ರಾವಣವನ್ನು ಎಕರೆಗೆ ಸುಮಾರು 250-300 ಲೀ ಸಿಂಪಡಿಸುವುದು.ದ್ರಾವಣ ತಯಾರಿಸುವಾಗ ಅಷ್ಟೇ ಪ್ರಮಾಣದಲ್ಲಿ ಸುಣ್ಣವನ್ನು ಮಿಶ್ರಣ ಮಾಡಿ ನಂತರ ಸಿಂಪಡಿಸುವುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.