ಸತ್ತವರು ಮೂವರು: ಮುಂದುವರಿದ ಗೊಂದಲ

7

ಸತ್ತವರು ಮೂವರು: ಮುಂದುವರಿದ ಗೊಂದಲ

Published:
Updated:
ಸತ್ತವರು ಮೂವರು: ಮುಂದುವರಿದ ಗೊಂದಲ

ಕೋಲಾರ: ಜಿಲ್ಲೆಯ ಮುಳಬಾಗಲು ಹೊರವಲಯದ ನರಸಿಂಹತೀರ್ಥ ಸಮೀಪ ಸೋಮವಾರ ರಾತ್ರಿ ಅನಿಲ ಟ್ಯಾಂಕರ್ ಸಿಡಿದು ಸಂಭವಿಸಿದ ಅಪಘಾತದಲ್ಲಿ ಸತ್ತವರ ಸಂಖ್ಯೆ ಎಷ್ಟು ಎಂಬ ಬಗ್ಗೆ ಈಗ ಗೊಂದಲ ಮೂಡಿದೆ.ಅಪಘಾತದ ಸ್ಥಳದಲ್ಲಿ ನಿಂತು ಹುಡುಕಾಟದಲ್ಲಿದ್ದ ಪೊಲೀಸರು, ಸತ್ತವರ ಸಂಖ್ಯೆ ನಾಲ್ಕು ಎಂದಿದ್ದರು. ಐದು ಎಂದಿದ್ದರು. ಆ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂಬ ಊಹೆಯನ್ನೂ ಮಾಡಿದ್ದರು. ಆದರೆ ಅಪಘಾತವಾದ ಮಾರನೇ ದಿನವಾದ ಮಂಗಳವಾರ ಸತ್ತವರ ಸಂಖ್ಯೆ ಮೂರು ಎಂದು ಮಾಹಿತಿ ನೀಡಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಮತ್ತೊಬ್ಬರು ನಗರದ ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದು ಅವರು ನೀಡಿರುವ ಮಾಹಿತಿ. ಆದರೆ ಸನ್ನಿವೇಶ ಗೊಂದಲಕಾರಿಯಾಗಿದೆ.ಅಪಘಾತದ ದಿನ ಆಸ್ಪತ್ರೆಯಲ್ಲಿ ನಾಲ್ಕು ಶವಗಳಿವೆ, ಮತ್ತೊಬ್ಬರು ಕರೆತರುವ ವೇಳೆಗೆ ಸಾವಿಗೀಡಾಗಿದ್ದರು ಎಂದು ಜಾಲಪ್ಪ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷ ಡಾ.ವಿ.ಲಕ್ಷ್ಮಯ್ಯ ತಿಳಿಸಿದ್ದರು. ಪೊಲೀಸರು ಮತ್ತು ವೈದ್ಯಾಧಿಕಾರಿ ಹೇಳಿಕೆ ಗೊಂದಲಕಾರಿಯಾಗಿರುವ ಕಡೆಗೆ ಗಮನ ಸೆಳೆದಾಗ, ಬೇರೆ ಬೇರೆ ಅಪಘಾತಗಳಲ್ಲಿ ಸಾವಿಗೀಡಾದವರ ಶವಗಳನ್ನೂ ರಾತ್ರಿಪಾಳಿ ವೈದ್ಯಸಿಬ್ಬಂದಿ ಲೆಕ್ಕ ಮಾಡಿರಬಹುದು. ಅಪಘಾತದಲ್ಲಿ ಸಾವಿಗೀಡಾದವರ ಸಂಖ್ಯೆ ಪೊಲೀಸರು ಹೇಳಿರುವಷ್ಟೇ ಆಗಿರುತ್ತದೆ ಎಂದು ಅವರು ಮಂಗಳವಾರ ತಿಳಿಸಿದ್ದಾರೆ.ಈ ಬಗ್ಗೆ `ಪ್ರಜಾವಾಣಿ'ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮನಿವಾಸ್ ಸಫೆಟ್, ಅಪಘಾತ ನಡೆದ ಸ್ಥಳದಲ್ಲಿ ಕತ್ತಲು ಆವರಿಸಿತ್ತು. ಜನ ಹೆಚ್ಚಿದ್ದರು. ಅಪಘಾತಕ್ಕೀಡಾದವರ ದೇಹ ಛಿದ್ರಗೊಂಡಿದ್ದರಿಂದ ಸತ್ತವರ ಸಂಖ್ಯೆಯನ್ನು ಅಂದಾಜು ಮಾಡುವುದು ಕಷ್ಟವಾಗಿತ್ತು. ಆದರೆ ತೀವ್ರ ಪರಿಶೀಲನೆ ಬಳಿಕ ಸತ್ತವರು ಮೂವರು ಮಾತ್ರ ಎಂದು ಸ್ಪಷ್ಟವಾಗಿದೆ ಎಂದು ನುಡಿದರು.ಅಪಘಾತದಲ್ಲಿ ಚೂರುಚೂರಾದ ಲಾರಿಯಲ್ಲಿದ್ದ ತಾಲ್ಲೂಕಿನ ಅಣ್ಣಿಹಳ್ಳಿ ಗ್ರಾಮದ ಕೇಶವ ಮತ್ತು ನಾರಾಯಣಪ್ಪ ಮತ್ತು ಟ್ಯಾಂಕರ್‌ನಲ್ಲಿದ್ದ ಸತೀಶ್ ಸಾವಿಗೀಡಾದವರು. ಲಾರಿಯಲ್ಲಿದ್ದ ಸುಬ್ರಮಣಿ ತೀವ್ರವಾಗಿ ಗಾಯಗೊಂಡಿದ್ದು, ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.ಕಾರಣ ಹುಡುಕಾಟ: ಟ್ಯಾಂಕರ್ ತಾಂತ್ರಿಕ ಕಾರಣಗಳಿಗಾಗಿ ಸಿಡಿದಿದೆ. ಆ ಬಗ್ಗೆ ತಜ್ಞರಷ್ಟೆ ಮಾತನಾಡಲು ಸಾಧ್ಯ. ಈ ನಿಟ್ಟಿನಲ್ಲಿ ಮಂಗಳೂರಿನಿಂದ ಜಾಯಿಂಟ್ ಚೀಫ್ ಕಂಟ್ರೋಲರ್ ಆಫರ್ ಎಕ್ಸ್‌ಪ್ಲೋಸಿವ್ ಅವರನ್ನು ಕರೆಸಲಾಗುತ್ತಿದೆ. ಅವರು ಬುಧವಾರ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.ವಿಶ್ಲೇಷಣೆ: ಅಪಘಾತ ಸತತವಾಗಿ ನಡೆಯುವ ಹೆದ್ದಾರಿಯಲ್ಲಿ ಸುರಕ್ಷತೆ ಬಗ್ಗೆ ಕ್ರಮ ವಹಿಸಲಾಗುವುದು. ಅಪಘಾತ ಸ್ಥಳಗಳನ್ನು ಗುರುತಿಸಲಾಗಿದೆ. ಯಾಕೆ ಅಲ್ಲಿ ಮತ್ತೆ ಮತ್ತೆ ಅಪಘಾತಗಳು ನಡೆಯುತ್ತಿವೆ ಎಂಬುದನ್ನು ವಿಶ್ಲೇಷಿಸಲಾಗುವುದು ಎಂದರು.

ಅಪಘಾತಗಳಿಂದ ಇನ್ನೂ ಪಾಠ ಕಲಿತಿಲ್ಲ

ಪ್ರಜಾವಾಣಿ ವಾರ್ತೆ

ಮುಳಬಾಗಲು: ಸೋಮವಾರ ಭೀಕರ ಅಪಘಾತಕ್ಕೆ ಸಾಕ್ಷಿಯಾದ ನರಸಿಂಹತೀರ್ಥ ಮುಂಭಾಗದ ರಸ್ತೆಗೆ ಸಮೀಪದಲ್ಲೇ 2011ರ ಡಿಸೆಂಬರ್‌ನಲ್ಲಿ ಎಲ್‌ಪಿಜಿ ಟ್ಯಾಂಕರ್ ಹಳ್ಳಕ್ಕೆಉರುಳಿ, ಅನಿಲ ಸೋರಿಕೆಯಾಗಿ ಮೂರು  ದಿನ ತೀವ್ರ ಆತಂಕ ಸೃಷ್ಟಿಸಿತ್ತು. ಮೂರು ದಿನವೂ ವಿದ್ಯುತ್ ಪೂರೈಕೆ ನಿಲ್ಲಿಸಲಾಗಿತ್ತು. ಆ ನೆನಪು ಇನ್ನೂ ಹಸಿರಾಗಿರುವಾಗಲೇ ಇಂಗಾಲ ಅನಿಲ ಸಾಗಿಸುತ್ತಿದ್ದ ಟ್ಯಾಂಕರ್ ಸಿಡಿದು ಮೂವರು ಮೃತಪಟ್ಟ ಘಟನೆ ನಡೆದಿದೆ. ಈ ಅಪಘಾತ ಪಟ್ಟಣ ಮತ್ತು ಗ್ರಾಮದ ಜನರನ್ನು ತಲ್ಲಣಗೊಳಿಸಿದೆ.ಹೆದ್ದಾರಿ ಬದಿಯ ಪೆಟ್ರೋಲ್ ಮತ್ತು ಡೀಸೆಲ್ ಕೇಂದ್ರಗಳು ಸುರಕ್ಷಿತವಲ್ಲ ಎಂಬ ಸಂಗತಿಯ ಕಡೆಗೂ ಈ ಅಪಘಾತ ಗಮನ ಸೆಳೆದಿದೆ. ಅನಿಲ ಸರಬರಾಜು ಮಾಡುವ ಟ್ಯಾಂಕರ್‌ಗಳು ಇದೇ ಹೆದ್ದಾರಿಯಲ್ಲಿ ಸಂಚರಿಸುತ್ತವೆ. ಅತಿ ವೇಗದಲ್ಲಿ ಬರುವ ವಾಹನಗಳು ಯಾವುದೇ ಸಮಯದಲ್ಲಿ ರಸ್ತೆ ಬದಿ ಬಿಟ್ಟು ಎಲ್ಲಿ ಬೇಕಾದರೂ ನುಗ್ಗಬಹುದಾದ ಪರಿಸ್ಥಿತಿ ಇಲ್ಲಿನದು ಎನ್ನುತ್ತಾರೆ ನರಸಿಂಹತೀರ್ಥದ ಮುಂಭಾಗದಲ್ಲಿರುವ ಡೀಸೆಲ್ ಪೂರೈಕೆ ಕೇಂದ್ರದ ಸತೀಶ್.ಸ್ಥಳದಲ್ಲಿ ಮರವಿಲ್ಲದಿದ್ದರೆ ನೇರವಾಗಿ ಡೀಸೆಲ್ ಕೇಂದ್ರದ ಮೇಲೆ ಟ್ಯಾಂಕರ್ ಬಿದ್ದು ಅತಿ ಹೆಚ್ಚಿನ ಪ್ರಮಾಣದ ಹಾನಿ ಉಂಟಾಗುತ್ತಿತ್ತು. ನಷ್ಟ ಊಹಿಸಲು ಸಾಧ್ಯವಾಗುತ್ತಿರಲಿಲ್ಲ ಎನ್ನುತ್ತಾರೆ ಅವರು.ಅಪಘಾತವಾದ ತಕ್ಷಣ ಕೇಂದ್ರದ ಕಾರ್ಯವನ್ನು ಸ್ಥಗಿತಗೊಳಿಸಲಾಯಿತು. ಕೇಂದ್ರ ಮುಂದಿನ ಸೂಚನ ಫಲಕ ಬಿಟ್ಟರೆ ಹೆಚ್ಚಿನ ಹಾನಿಯಾಗಿಲ್ಲ. ಟ್ಯಾಂಕರ್‌ಗಳ ಅತಿವೇಗದ ಸಂಚಾರಕ್ಕೆ ನಿಯಂತ್ರಣ ಹಾಕುವುದು ಅತ್ಯಗತ್ಯ. ಅಪಘಾತಗಳಿಂದ ಪಾಠ ಕಲಿಯದಿದ್ದರೆ ಇನ್ನಷ್ಟು ಸಾವು- ನೋವು ಸಂಭವಿಸುತ್ತದೆ ಎಂಬುದು ಅವರ ಆತಂಕದ ನುಡಿ.ಸಾಮಾನ್ಯವಾಗಿ ಪಟ್ಟಣದ ನೂರಾರು ಮಂದಿ ಇದೇ ರಸ್ತೆಯಲ್ಲಿ ಸಂಜೆ ವೇಳೆಯಲ್ಲಿ ವಾಯುವಿಹಾರಕ್ಕೆ ಹೋಗುವುದು ವಾಡಿಕೆ. ಅದರೊಂದಿಗೆ ನೂರಾರು ವಾಹನಗಳು, ದ್ವಿಚಕ್ರ ವಾಹನಗಳು ಸಂಚರಿಸುತ್ತವೆ. ಆದರೆ ಟ್ಯಾಂಕರ್, ಲಾರಿ ಅಪಘಾತ ನಡೆದ ವೇಳೆಯಲ್ಲಿ ಅದೃಷ್ಟವಶಾತ್ ಸೋಮವಾರ ಸಂಜೆ ಹೆಚ್ಚಿನ ಸಂಖ್ಯೆಯಲ್ಲಿ ಜನರಿರಲಿಲ್ಲ ಹಾಗೂ ಸನಿಹದಲ್ಲಿ ಶಾಲೆ ಸಹ ಇದ್ದು ಮಕ್ಕಳು ಇರಲಿಲ್ಲ. ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್, ತಹಶೀಲ್ದಾರ್ ಡಿ.ವಿ.ರಾಮಮೂರ್ತಿ ಸ್ಥಳಕ್ಕೆ ಭೇಟಿ ನೀಡಿದ್ದರು.

ಎಲ್ಲ ಅಯೋಮಯ..

ಸಂಜೆ 5.45ರ ವೇಳೆಗೆ ದೊಡ್ಡ ಸದ್ದು ಕೇಳಿಸಿತಷ್ಟೆ. ಕೂಡಲೆ ಹೊಗೆ ಕಾಣಿಸಿಕೊಂಡಿತು. ಭಯಭೀತರಾಗಿ ದೂರ ಓಡಿಹೋದೆವು. 15 ನಿಮಿಷ ಕಳೆದು ಬಂದಾಗ ವಾಹನಗಳು ಚೂರುಚೂರಾಗಿದ್ದವು. ಮಾಂಸದ ಮುದ್ದೆಗಳು ಕಾಣಿಸಿದವು. ಎಲ್ಲ ಭಯ ಹುಟ್ಟಿಸುವಂತಿತ್ತು ಎಂಬುದು ಅಪಘಾತ ನಡೆದ ಸ್ಥಳದಲ್ಲಿ ಟೀ ಅಂಗಡಿ ನಡೆಸುವ ಕೃಷ್ಣ ಅವರ ನುಡಿ.ಸಿಡಿದ ಸದ್ದು ಮತ್ತು ದಟ್ಟಹೊಗೆ ಬಿಟ್ಟರೆ ಬೇರೇನೋ ಗೊತ್ತಾಗಲಿಲ್ಲ. ಭಯಪಟ್ಟು ದೂರ ಓಡಿದೆವು. ಮತ್ತೆ ಬಂದಾಗ ಟ್ಯಾಂಕರ್ ನಮ್ಮ ಪೆಟ್ರೋಲ್ ಬಂಕ್ ಪಕ್ಕ ಬಿದ್ದಿತ್ತು ಎಂಬುದು ಕೆಲಸಗಾರ ಗೋಪಾಲ್ ನೆನಪು.ಇಡೀ ಸನ್ನಿವೇಶವನ್ನು ನಿಯಂತ್ರಣಕ್ಕೆ ತರುವ ಹೊತ್ತಿಗೆ ಬೆಳಗಿನ ಜಾವ 1 ಗಂಟೆಯಾಗಿತ್ತು. ಹೊಗೆ ಮತ್ತು ಜನದಟ್ಟಣೆ ನಡುವೆಯೇ ಕಾರ್ಯಾಚರಣೆ ನಡೆಸುವುದು ಕಷ್ಟಕರವಾಗಿತ್ತು ಎಂಬುದು ಪೊಲೀಸ್ ಅಧಿಕಾರಿಯೊಬ್ಬರ ನುಡಿ.

ಹೆದ್ದಾರಿ ವಿಸ್ತರಣೆ ಯಾವಾಗ?

ಸೋಮವಾರದ ಅಪಘಾತವು ನರಸಿಂಹತೀರ್ಥದಿಂದ ಮುಂದಕ್ಕೆ ರಾಷ್ಟ್ರೀಯ ಹೆದ್ದಾರಿ 4ರ ವಿಸ್ತರಣೆ ಯಾವಾಗ ಶುರುವಾಗುತ್ತದೆ ಎಂಬ ಪ್ರಶ್ನೆಯ ಹುಟ್ಟಿಗೂ ದಾರಿ ಮಾಡಿದೆ. ಮುಳಬಾಗಲು ಪಟ್ಟಣದ ಪ್ರವೇಶ ದ್ವಾರದವರೆಗೆ ಇರುವ ಚತುಷ್ಪಥದ ಹೆದ್ದಾರಿಯು ಬೈಪಾಸ್ ರಸ್ತೆಯಿಂದ ಕಿರಿದಾಗುತ್ತದೆ. ನರಸಿಂಹತೀರ್ಥದ ಮುಂದಕ್ಕೆ ಈ ಕಿರಿದಾದ ರಸ್ತೆಯಲ್ಲಿ ವಾಹನಗಳು ಅತಿ ವೇಗ ಮತ್ತು ಅಜಾಗರೂಕತೆಯಿಂದ ಸಂಚರಿಸುತ್ತಿವೆ. ಸನ್ನಿವೇಶ ಹೀಗಿದ್ದರೂ ಹೆದ್ದಾರಿ ವಿಸ್ತರಣೆ ಕಾಮಗಾರಿ ಇನ್ನೂ ಶುರುವಾಗಿಲ್ಲ ಎಂಬುದು ಸ್ಥಳೀಯರ ಅಸಮಾಧಾನ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry