ಸತ್ತ ಕನ್ನಡ ಶಾಲೆಗಳ ಮೇಲೆ ಭುವನೇಶ್ವರಿ ಪ್ರತಿಮೆ

7

ಸತ್ತ ಕನ್ನಡ ಶಾಲೆಗಳ ಮೇಲೆ ಭುವನೇಶ್ವರಿ ಪ್ರತಿಮೆ

Published:
Updated:

ಬೆಂಗಳೂರು:  ‘ಸತ್ತು ಹೋದ ಕನ್ನಡ ಶಾಲೆಗಳ ಕಳೇಬರದ ಮೇಲೆ 25 ಕೋಟಿ ರೂಪಾಯಿ ವೆಚ್ಚ ಮಾಡಿ ಕನ್ನಡ ಭುವನೇಶ್ವರಿಯ ವಿಗ್ರಹ ಸ್ಥಾಪಿಸುವುದರಲ್ಲಿ ಅರ್ಥವಿಲ್ಲ. ಕನಿಷ್ಠ ಸರ್ಕಾರಿ ನೌಕರರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗೆ ಕಳುಹಿಸುವಂತೆ ಮಾಡಲು ಒಂದು ಶಾಸನವನ್ನು ರೂಪಿಸುವ ಅಗತ್ಯ ಇಂದಿನದ್ದು’ ಎಂದು ಲೇಖಕ, ಕವಿ ಕೃಷ್ಣಮೂರ್ತಿ ಬಿಳಿಗೆರೆ ಅಭಿಪ್ರಾಯಪಟ್ಟರು.ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ‘ಮಕ್ಕಳ ಸಾಹಿತ್ಯ’ ಗೋಷ್ಠಿಯಲ್ಲಿ ‘ಇಂದಿನ ಮಕ್ಕಳ ಸಾಹಿತ್ಯದ ನೆಲೆ-ಬೆಲೆ’ ವಿಷಯದ ಕುರಿತು ಮಾತನಾಡಿದ ಅವರು ‘ವಿದ್ಯಾರ್ಥಿಗಳಿಲ್ಲದ ಸರ್ಕಾರಿ ಶಾಲೆಗಳಲ್ಲಿ ಕಲಿಕೆಯ ಹೊಸ ವಿಧಾನಗಳನ್ನು ಅಳವಡಿಸುವ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತಿವೆ. ಇದರಿಂದ ಯಾವ ಪ್ರಯೋಜನವೂ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕನ್ನಡದಲ್ಲಿ ಮಕ್ಕಳ ಸಾಹಿತ್ಯದ ಹೆಸರಿನಲ್ಲಿ ಭಾರೀ ಪ್ರಮಾಣದ ಕಸ ಉತ್ಪಾದನೆಯಾಗುತ್ತಿದೆ ಎಂಬುದು ನಿಜ. ಕನ್ನಡ ಶಾಲೆಗಳೇ ಇಲ್ಲದ ಸ್ಥಿತಿಯಲ್ಲಿ ಉತ್ತಮ ಮಕ್ಕಳ ಸಾಹಿತ್ಯ ಸೃಷ್ಟಿಯಾಗುವುದಾದರೂ ಹೇಗೆ’ ಎಂದು ಪ್ರಶ್ನಿಸಿದ ಅವರು ‘ಬೀದಿ ಬೀದಿಗಳಲ್ಲಿ ಸಿಬಿಎಸ್‌ಇ ಶಾಲೆಗಳನ್ನು ತೆರೆಯಲು ಅನುಮತಿ ನೀಡಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿ ಪಾಲಕರು ಮಕ್ಕಳನ್ನು ಕನ್ನಡ ಶಾಲೆಗಳಿಗೆ ಕಳುಹಿಸುತ್ತಿಲ್ಲ ಎಂದು ದೂರುವುದರಲ್ಲಿ ಅರ್ಥವಿಲ್ಲ. ಇವೆಲ್ಲಾ ಸಮಸ್ಯೆಯ ಮೂಲವನ್ನು ಅರಿಯದ ವಾದಗಳು’ ಎಂದರು.‘ಕನ್ನಡವನ್ನು ಉಳಿಸುವುದಕ್ಕಾಗಿ ಇರುವಷ್ಟು ಸರ್ಕಾರಿ ಸಂಸ್ಥೆಗಳು ಮತ್ತು ಸರ್ಕಾರೇತರ ಸಂಘಟನೆಗಳು ಬೇರೆ ಯಾವ ಭಾಷೆಗೂ ಇಲ್ಲ. ಇವರೆಲ್ಲರಿಗೂ ಕನ್ನಡವೆಂಬುದು ನಿರಂತರವಾಗಿ ಹಾಲುಕೊಡುವ ಹಸುವಿನಂತೆ. ಕನ್ನಡಕ್ಕೆ, ಕನ್ನಡ ಪುಸ್ತಕಕ್ಕೆ ಇರುವ ಪ್ರಾಧಿಕಾರಗಳು, ಕನ್ನಡದ ಅಧ್ಯಯನಕ್ಕಾಗಿ ಹುಟ್ಟಿಕೊಂಡಿರುವ ಸಂಶೋಧನಾ ಕೇಂದ್ರಗಳೆಲ್ಲವನ್ನೂ ಕಟಕಟೆಯಲ್ಲಿ ನಿಲ್ಲಿಸಿ ಪ್ರಶ್ನಿಸಬೇಕಾಗಿದೆ’ ಎಂದು ಅವರು ನುಡಿದರು.‘ನವೋದಯ ಕಾಲಘಟ್ಟದ ಕಾಲದ ಬರೆಹಗಾರರನ್ನು ಹೊರತು ಪಡಿಸಿದರೆ ಮುಂದಿನ ತಲೆಮಾರಿನ ಪ್ರಮುಖ ಕನ್ನಡ ಬರಹಗಾರರ್ಯಾರೂ ಮಕ್ಕಳಿಗಾಗಿ ಬರೆಯಲಿಲ್ಲ. ಇದಕ್ಕೆ ಮುಖ್ಯ ಕಾರಣ ಅವರ ಮಕ್ಕಳು, ಮೊಮ್ಮಕ್ಕಳು ಇಂಗ್ಲಿಷ್ ಮಾಧ್ಯಮ ಶಾಲೆಗೆ ಹೋಗಿದ್ದು. ಅವರ ಆತ್ಮಸಾಕ್ಷಿಯನ್ನು ಇದು ಚುಚ್ಚುತ್ತಾ ಇದ್ದುದರಿಂದ ಅವರು ಕನ್ನಡದ ಮಕ್ಕಳಿಗಾಗಿ ಬರೆಯಲಿಲ್ಲ. ಅಷ್ಟೇ ಆಗಿದ್ದರೆ ತೊಂದರೆ ಇರಲಿಲ್ಲ, ಅವರ ಈ ವರ್ತನೆ ಮಕ್ಕಳಿಗಾಗಿ ಬರೆಯುವುದು ಕೆಳಮಟ್ಟದ ಬರಹ ಎಂಬ ಮನೋಭಾವವನ್ನೂ ಹರಡುವುದಕ್ಕೆ ಕಾರಣವಾಯಿತು’ ಕೃಷ್ಣಮೂರ್ತಿ ವಿಷಾದಿಸಿದರು.

‘ಸಮೂಹ ಮಾಧ್ಯಮಗಳು ಮತ್ತು ಮಕ್ಕಳ ಮನಸ್ಸು’ ವಿಷಯದ ಕುರಿತು ಮಾತನಾಡಿದ ಕಂನಾಡಿಗಾ ನಾರಾಯಣ ಅವರು ‘ಆಧುನಿಕ ಮಾಧ್ಯಮಗಳು ಜಾಹೀರಾತುಗಳನ್ನೂ ಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪಿಸುತ್ತವೆ. ಆದರೆ ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಮಾತ್ರ ಯಾರೂ ರೂಪಿಸುತ್ತಿಲ್ಲ. ಕನ್ನಡದ ದೃಶ್ಯ ಮಾಧ್ಯಮ ಈ ನಿಟ್ಟಿನಲ್ಲಿ ಮಾಡಬೇಕಾಗಿರುವ ಕೆಲಸಗಳು ಇನ್ನೂ ಬಹಳಷ್ಟಿವೆ’ ಎಂದರು.ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ನಾ.ಡಿಸೋಜಾ ಅವರು ‘ಕನ್ನಡದ ಜಾನಪದ ಪರಂಪರೆ ಇತಿಹಾಸವನ್ನೂ ಕೂಡಾ ಶಿಶು ಪ್ರಾಸಗಳಲ್ಲಿ, ಮಕ್ಕಳ ಹಾಡುಗಳಲ್ಲಿ ತಲೆಮಾರಿನಿಂದ ತಲೆಮಾರಿಗೆ ಕೊಂಡೊಯ್ಯುತ್ತಿತ್ತು. ವರ್ತಮಾನದ ಸಾಹಿತ್ಯ ಕ್ಷೇತ್ರದ ಮಹಾಪ್ರತಿಭೆಗಳು ಮಕ್ಕಳಿಗಾಗಿ ಏನನ್ನೂ ನೀಡದಿರುವುದು ವಿಷಾದದ ಸಂಗತಿ’ ಎಂದರು.‘ಆನೆಬಂತೊಂದಾನೆ, ಯಾವ ಊರಿನ ಆನೆ, ಬಿಜಾಪುರದ ಆನೆ...’ ಎಂದು ಸಾಗುವ ಶಿಶು ಪ್ರಾಸವೊಂದನ್ನು ಉಲ್ಲೇಖಿಸಿದ ಅವರು ‘ಬಿಜಾಪುರದ ಮೇಲೆ ಆದಿಲ್‌ಶಾಹಿಗಳ ದಾಳಿ ನಡೆದಾಗ ವಿಜಯನಗರ ಸಾಮ್ರಾಜ್ಯದ ಅರಸರು ತಮ್ಮ ಸಕಲ ಸಂಪತ್ತನ್ನು ಆನೆಗಳ ಮೇಲೆ ಹೇರಿ ಕಾಡಿಗೆ ಓಡಿಸಿದ್ದರು. ಆ ಆನೆಗಳು ಎಲ್ಲೆಲ್ಲೋ ತಿರುಗಾಡಿ ತಮ್ಮ ಬೆನ್ನಮೇಲೆ ಹೇರಿದ್ದ ಚಿನ್ನದ ನಾಣ್ಯಗಳನ್ನು ಬೀಳಿಸಿಕೊಂಡು ನಡೆದಾಗ ಅವುಗಳನ್ನು ಮಕ್ಕಳು ಸಂಗ್ರಹಿಸುತ್ತಿದ್ದರು. ಇದೊಂದು ಶಿಶು ಪ್ರಾಸದ ರೂಪದಲ್ಲಿದೆ’ ಎಂದು ವಿಶ್ಲೇಷಿಸಿದರು.‘ಧಾರವಾಡ ಪ್ರದೇಶದಲ್ಲಿ ಜೂಟಾಟವಾಡುವಾಗ ‘ಮುಟ್ಟಕ್ಕೆ ಬಾರಾ ಮೂಲಂಗಿ ದೊರೆಯೇ ಕಹಳೆ ಸಿಂಗನ ಮೊಮ್ಮಗನಾ...?’ ಎಂದು ಹಾಡುತ್ತಾರೆ. ಇದರ ಹಿಂದೆಯೂ ಐತಿಹಾಸಿಕ ಕಥನವೊಂದಿದೆ’ ಎಂದು ವಿವರಿಸಿದ ಅವರು ‘ಧಾರವಾಡದ ಕೋಟೆಯ ಮೇಲೆ ದಾಳಿ ಮಾಡಿದ ಜಾನ್ ಮುಲಂಗ್ ಎಂಬ ಬ್ರಿಟಿಷನ ವಿರುದ್ಧ ಹೋರಾಡಿದ ಕಹಳೆಯೂದಿದ ಸಿಂಗನ ಕಥೆ ಇದರಲ್ಲಿದೆ. ಜಾನ್ ಮುಲಂಗ್ ಇಲ್ಲಿ ಮೂಲಂಗಿ ದೊರೆಯಾಗಿದ್ದಾನೆ’ ಎಂದರು.‘ಬಾಲ ಸಾಹಿತ್ಯ ಅಕಾಡೆಮಿಯನ್ನು ಬಾಲ ವಿಕಾಸ ಅಕಾಡೆಮಿಯಾಗಿಸಿ ಯಾವುದೋ ಒಂದು ಇಲಾಖೆಯ ಬಾಲವನ್ನಾಗಿ ಅಂಟಿಸಲಾಗಿದೆ’ ಎಂದು ಕಿಡಿಕಾರಿದ ಅವರು ‘ಮಕ್ಕಳ ಸಾಹಿತ್ಯಕ್ಕೆ ಅಗತ್ಯವಿರುವಷ್ಟು ಮಹತ್ವ ದೊರೆತಿಲ್ಲ. ಇದು ನಮ್ಮ ಸಂಸ್ಕೃತಿಯ ಪ್ರಗತಿಗೇ ಮಾರಕ’ ಎಂದರು. ಡಾ.ಕುಮಾರ ಚಲ್ಯ ಆಶಯ ನುಡಿಗಳನ್ನಾಡಿದರು. ಎಂ. ಪ್ರಕಾಶಮೂರ್ತಿ ಕಾರ್ಯಕ್ರಮ ನಿರ್ವಹಿಸಿದರು. ನಾ, ಶ್ರೀಧರ್ ಸ್ವಾಗತಿಸಿದರು, ವಿಜಯಕುಮಾರ್ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry