ಸತ್ಯನಾರಾಯಣ ನೂತನ ಬಿಬಿಎಂಪಿ ಮೇಯರ್?

7
ಕಾಂಗ್ರೆಸ್‌ನ ಇಂದಿರಾ ಉಪಮೇಯರ್

ಸತ್ಯನಾರಾಯಣ ನೂತನ ಬಿಬಿಎಂಪಿ ಮೇಯರ್?

Published:
Updated:

ಬೆಂಗಳೂರು: ಬಿಬಿಎಂಪಿ ಮೇಯರ್ ಮತ್ತು ಉಪಮೇಯರ್ ಹುದ್ದೆಗೆ ನಾಲ್ಕು ತಿಂಗಳು ವಿಳಂಬವಾಗಿ ಬುಧವಾರ ಚುನಾವಣೆ ನಡೆಯಲಿದ್ದು, ಆ ಹುದ್ದೆಗಳಿಗೆ ಕ್ರಮವಾಗಿ ಬಿಜೆಪಿಯ ಬಸವನಗುಡಿ ಸದಸ್ಯ ಬಿ.ಎಸ್. ಸತ್ಯನಾರಾಯಣ (ಕಟ್ಟೆ ಸತ್ಯ) ಮತ್ತು ಕಾಂಗ್ರೆಸ್‌ನ ಬ್ಯಾಟರಾಯನಪುರ ಸದಸ್ಯೆ ಇಂದಿರಾ ಆಯ್ಕೆಯಾಗುವುದು ಖಚಿತವಾಗಿದೆ.ಏಪ್ರಿಲ್ ಕೊನೆಯ ವಾರದಲ್ಲೇ ನಡೆಯಬೇಕಿದ್ದ ಈ ಹುದ್ದೆಗಳ ಆಯ್ಕೆ ಪ್ರಕ್ರಿಯೆ, ರಾಜ್ಯ ವಿಧಾನಸಭಾ ಚುನಾವಣೆ ಮತ್ತು ಮೀಸಲಾತಿ ವಿವಾದದ ಹಿನ್ನೆಲೆಯಲ್ಲಿ ಮುಂದಕ್ಕೆ ಹೋಗಿತ್ತು. ಮೇಯರ್ ಸ್ಥಾನವನ್ನು ಸಾಮಾನ್ಯ ವರ್ಗ ಹಾಗೂ ಉಪಮೇಯರ್ ಸ್ಥಾನವನ್ನು ಪರಿಶಿಷ್ಟ ಪಂಗಡದ ಮಹಿಳೆಗೆ ಮೀಸಲಿಟ್ಟು ಹೈಕೋರ್ಟ್ ತೀರ್ಪು ನೀಡಿತ್ತು. ಹೈಕೋರ್ಟ್ ತೀರ್ಪಿನಂತೆ ರಾಜ್ಯ ಸರ್ಕಾರ ಸಹ ಮೀಸಲಾತಿ ಮರು ನಿಗದಿಮಾಡಿ ಅಧಿಸೂಚನೆ ಹೊರಡಿಸಿತ್ತು.ಒಟ್ಟಾರೆ 198 ಸದಸ್ಯರಿರುವ ಬಿಬಿಎಂಪಿಯಲ್ಲಿ ಬಿಜೆಪಿ 112 ಸ್ಥಾನಗಳನ್ನು ಹೊಂದಿದೆ. ಇಂದಿರಾ ಅವರು ಕಾಂಗ್ರೆಸ್ ಸದಸ್ಯೆಯಾಗಿದ್ದರೂ ಬಿಜೆಪಿಯಲ್ಲಿ ಪರಿಶಿಷ್ಟ ಪಂಗಡದ ಮಹಿಳಾ ಸದಸ್ಯರೊಬ್ಬರೂ ಇಲ್ಲದ ಕಾರಣ ಅವರ ಅದೃಷ್ಟ ಖುಲಾಯಿಸಿದೆ.ಸ್ವಾತಂತ್ರ್ಯ ಹೋರಾಟಗಾರರಾಗಿ `ಭಾರತ ಬಿಟ್ಟು ತೊಲಗಿ' ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸೆರೆಮನೆ ವಾಸವನ್ನೂ ಅನುಭವಿಸಿದ್ದ ಎನ್.ಮುತ್ತಪ್ಪ ಅವರ ಮರಿ ಮೊಮ್ಮಗಳು ಇಂದಿರಾ. ಅವರ ತಾಯಿ ಜಯಮ್ಮ ಸಹ ಗ್ರಾ.ಪಂ. ಸದಸ್ಯರಾಗಿದ್ದರು.`ನಮ್ಮ ಸಮುದಾಯಕ್ಕೆ ಉಪ ಮೇಯರ್ ಹುದ್ದೆಯನ್ನು ಮೀಸಲಿಡುವ ಮೂಲಕ ಹೈಕೋರ್ಟ್ ಸಾಮಾಜಿಕ ನ್ಯಾಯ ಒದಗಿಸಿದೆ. ಬಿಜೆಪಿ ಆಡಳಿತವಿದ್ದರೂ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ನಾನು ಉಪಮೇಯರ್ ಆಗುವ ಮೂಲಕ ವಿಶಿಷ್ಟ ದಾಖಲೆ ಸೃಷ್ಟಿಸುತ್ತಿದ್ದೇನೆ. ಜನರಿಗೆ ನನ್ನಿಂದ ಸಾಧ್ಯವಾದ ಸಹಾಯ ಮಾಡುತ್ತೇನೆ' ಎಂದು ಖುಷಿಯಿಂದ ಹೇಳಿದರು ಇಂದಿರಾ.`ಈಗಿನ ಉಪ ಮೇಯರ್ ಎಲ್. ಶ್ರೀನಿವಾಸ್ ಅವರಿಗೆ ಆಡಳಿತ ವರದಿಯನ್ನು ಮಂಡಿಸಲು ಆಗಿಲ್ಲ. ಆ ಕೊರತೆಯನ್ನು ನಾನು ನೀಗಿಸಲಿದ್ದೇನೆ. ಪಕ್ಷ ಬೇರೆಯಾದರೂ ಮೇಯರ್‌ಗೆ ಅಗತ್ಯ ಸಹಕಾರ ನೀಡಲಿದ್ದೇನೆ' ಎಂದು ಅವರು ತಿಳಿಸಿದರು.ಮೇಯರ್ ಹುದ್ದೆಗೆ ಜೆ.ಪಿ.ನಗರ ಸದಸ್ಯ ಬಿ.ಆರ್. ನಂಜುಂಡಪ್ಪ, ವಿಜಯನಗರ ಸದಸ್ಯ ಎಚ್. ರವೀಂದ್ರ, ಪಟ್ಟಾಭಿರಾಮನಗರ  ಸದಸ್ಯ ಸಿ.ಕೆ. ರಾಮಮೂರ್ತಿ ಮತ್ತು ಡಾ. ರಾಜಕುಮಾರ್ ವಾರ್ಡ್ ಸದಸ್ಯ ಗಂಗಬೈರಯ್ಯ ಅವರ ಹೆಸರುಗಳೂ ಕೇಳಿಬಂದಿದ್ದವು.ಆದರೆ, ಅವರನ್ನೆಲ್ಲ ಹಿಂದೆ ಹಾಕುವ ಮೂಲಕ ಸತ್ಯನಾರಾಯಣ ಮೇಯರ್ ಗೌನು ತೊಡಲು ಸಜ್ಜಾಗಿದ್ದಾರೆ.ದಕ್ಷಿಣ ಮತ್ತು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದ ಸದಸ್ಯರು ಈಗಾಗಲೇ ಮೇಯರ್ ಆಗಿದ್ದು, ಸೆಂಟ್ರಲ್ ಕ್ಷೇತ್ರದ ಸದಸ್ಯರಿಗೆ ಒಂದು ಅವಕಾಶ ಕೊಡಬೇಕು ಎನ್ನುವ ಒತ್ತಾಯವೂ ಕೇಳಿ ಬಂದಿತ್ತು. `ಮೇಯರ್ ಹುದ್ದೆಯನ್ನು ದಕ್ಷಿಣ ಕ್ಷೇತ್ರದ ಸದಸ್ಯರಿಗೆ ಜಹಗೀರು ಬರೆದು ಕೊಡಲಾಗಿದೆಯೇನು' ಎಂಬ ಆಕ್ರೋಶವೂ ವ್ಯಕ್ತವಾಗಿತ್ತು.`ಎಲ್ಲ ಅಡೆ-ತಡೆಗಳು ಈಗ ನಿವಾರಣೆಯಾಗಿದ್ದು, ಮೇಯರ್ ಹುದ್ದೆಯು ಸಾಮಾನ್ಯ ವರ್ಗದ ಕೈತಪ್ಪದಂತೆ ಹೈಕೋರ್ಟ್‌ನಲ್ಲೂ ಪ್ರಕರಣ ದಾಖಲಿಸಿ, ಹೋರಾಡಿದ್ದ ಸತ್ಯನಾರಾಯಣ ಅವರಿಗೆ ಅದರ ಫಲ ಸಿಕ್ಕಿದೆ. ಪಕ್ಷದಿಂದ ಅವರೊಬ್ಬರೇ ನಾಮಪತ್ರ ಸಲ್ಲಿಸಲಿದ್ದು, ಅವರನ್ನು ಬೆಂಬಲಿಸುವಂತೆ ವಿಪ್ ಸಹ ಜಾರಿ ಮಾಡಲಾಗುತ್ತದೆ' ಎಂದು ಬಿಜೆಪಿ ಹಿರಿಯ ಮುಖಂಡರೊಬ್ಬರು `ಪ್ರಜಾವಾಣಿ'ಗೆ ಮಾಹಿತಿ ನೀಡಿದರು.`ಸಂಸದ ಅನಂತಕುಮಾರ್ ಮತ್ತು ಶಾಸಕ ಆರ್. ಅಶೋಕ ಅವರ ಬೆಂಬಲ ಪಡೆಯುವಲ್ಲಿ ಯಶಸ್ವಿಯಾದ ಸತ್ಯನಾರಾಯಣ, ಸಂಘ ಪರಿವಾರದ ಮುಖಂಡರ ಅಭಯವನ್ನೂ ಹೊಂದಿದ್ದಾರೆ' ಎಂದು ಅವರು ಹೇಳಿದರು.

`ಅಶೋಕ ಅವರ ಮುಂದಾಳತ್ವದಲ್ಲಿ ಸದಸ್ಯರ ಅಭಿಪ್ರಾಯ ಸಂಗ್ರಹಿಸಿದಾಗ ಸತ್ಯನಾರಾಯಣ ಅವರಿಗೆ ಹೆಚ್ಚಿನ ಬೆಂಬಲ ವ್ಯಕ್ತವಾಯಿತು. ಆಕಾಂಕ್ಷಿತರಲ್ಲಿ ಮುಂಚೂಣಿಯಲ್ಲಿದ್ದ ಕೆಲವರು ಪೈಪೋಟಿಯಿಂದ ಹಿಂದೆ ಸರಿದರು. ಇದರಿಂದ ನಾಲ್ಕನೇ ಸಲ ಸದಸ್ಯರಾಗಿ ಆಯ್ಕೆಯಾಗಿರುವ ಸತ್ಯನಾರಾಯಣ ಅವರ ದಾರಿ ಸುಗಮವಾಯಿತು' ಎಂದು ವಿವರಿಸಿದರು.ಸದ್ಯದ ಮಾಹಿತಿ ಪ್ರಕಾರ, ಬುಧವಾರ ಬೆಳಿಗ್ಗೆ 8.30ಕ್ಕೆ ಬಿಜೆಪಿ ಮುಖಂಡರು ಮೇಯರ್ ಹುದ್ದೆಗೆ ಸ್ಪರ್ಧಿಸಲು ಸತ್ಯನಾರಾಯಣ ಅವರ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ. ಬಳಿಕ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ನಡೆಯಲಿದೆ. ಆ ಹುದ್ದೆಯ ಆಕಾಂಕ್ಷಿತ ಸದಸ್ಯರು ಸಹ ಜತೆಯಲ್ಲಿ ಇರಲಿದ್ದಾರೆ. ಮೇಯರ್ ಹುದ್ದೆ ದೊರೆಯದೆ ಅಸಮಾಧಾನಗೊಂಡ ಕೆಲವು ಹಿರಿಯ ಸದಸ್ಯರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನವನ್ನು ನೀಡಲಾಗುತ್ತದೆ ಎಂದು ಹೇಳಲಾಗಿದೆ.ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆ ಪ್ರಕ್ರಿಯೆಯನ್ನು ಮುಂದೂಡಲಾಗುತ್ತದೆ ಎಂದು ತಿಳಿದುಬಂದಿದೆ.ಒಕ್ಕಲಿಗ ಸಮುದಾಯಕ್ಕೆ

ಒಕ್ಕಲಿಗ ಸಮುದಾಯಕ್ಕೆ ಸೇರಿದ ಸದಸ್ಯರಿಗೆ ಆಡಳಿತ ಪಕ್ಷದ ಹುದ್ದೆಯನ್ನು ಮೀಸಲಿಡಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ. ವಿಜಯನಗರ ಸದಸ್ಯ ಎಚ್. ರವೀಂದ್ರ, ಮತ್ತು ಡಾ. ರಾಜ ಕುಮಾರ್ ವಾರ್ಡ್ ಸದಸ್ಯ ಗಂಗ ಬೈರಯ್ಯ ಅವರಲ್ಲಿ ಒಬ್ಬರು ಈ ಹುದ್ದೆಗೆ ಆಯ್ಕೆಯಾಗುವ ಸಾಧ್ಯತೆ ಎಂದು ಮೂಲಗಳು ತಿಳಿಸಿವೆ. ಈ ಇಬ್ಬರೂ ಸದಸ್ಯರು ಮೇಯರ್ ಹುದ್ದೆಗೆ ಪ್ರಬಲ ಆಕಾಂಕ್ಷಿಯಾಗಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry