ಸತ್ಯವೂ ಸುಂದರವೂ...

7

ಸತ್ಯವೂ ಸುಂದರವೂ...

Published:
Updated:
ಸತ್ಯವೂ ಸುಂದರವೂ...

`ಸಂಜು ವೆಡ್ಸ್ ಗೀತಾ'ದಲ್ಲಿ ಛಾಯಾಗ್ರಾಹಕ ಸತ್ಯ ಹೆಗಡೆ ದೃಶ್ಯಕಾವ್ಯವೊಂದನ್ನು ಸೃಷ್ಟಿಸಿದ್ದರು. ಆ ಸಾಧನೆಗೆಂದೇ ರಾಜ್ಯ ಪ್ರಶಸ್ತಿಯನ್ನೂ ಪಡೆದಿದ್ದರು. ಸತ್ಯಕತೆ ಆಧಾರಿತ ಚಿತ್ರ `ಮೈನಾ'ದ ಕಣ್ಣು ಕೂಡ ಅವರೇ. `ಸಂಜು...' ನಿರ್ದೇಶಕ ನಾಗಶೇಖರ್ ಮೈನಾಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. `ಸಂಜು'ವಿನಲ್ಲಿ ಒಂದಾಗಿದ್ದ ಈ ಜೋಡಿ `ಮೈನಾ'ದಲ್ಲಿ ಮಾಡಿರುವ ಇಂದ್ರಜಾಲದ ಬಗ್ಗೆ ಅನೇಕರಿಗೆ ಕುತೂಹಲ.ಜೊತೆಗೆ `ಸಂಜು...' ಚಿತ್ರಕ್ಕಾಗಿ ಪಡೆದ ಪ್ರಶಸ್ತಿ ಸತ್ಯರ ಹೊಣೆಗಾರಿಕೆಯನ್ನು ಹೆಚ್ಚಿಸಿದೆಯಂತೆ. ಆ ಎಚ್ಚರದಲ್ಲಿಯೇ `ಮೈನಾ'ದಲ್ಲಿ ದೃಶ್ಯ ಪ್ರಯೋಗ ಮಾಡಿದ್ದಾರೆ. ಹಾಗೆಂದು ಅವುಗಳಿಗೆ ವೈಭವದ ಹಂಗಿಲ್ಲ. ಪ್ರತಿ ದೃಶ್ಯವೂ ನಿರಾಭರಣ ಸುಂದರಿ ಎನ್ನುವುದು `ಮೈನಾ' ಕುರಿತು ಅವರು ನೀಡುವ ವ್ಯಾಖ್ಯಾನ.ಎರಡೂ ಚಿತ್ರಗಳ ದೃಶ್ಯ ನಿರೂಪಣೆಯಲ್ಲಿ ಹಲವು ವ್ಯತ್ಯಾಸಗಳಿವೆಯಂತೆ. ಅಲ್ಲಿಯಂತೆ ಇಲ್ಲಿ ಮಳೆ ಪಾತ್ರವಹಿಸಿದ್ದರೂ ಅದು ಮುನ್ನೆಲೆಯಲ್ಲಿ ಕಾಣಿಸಿಕೊಳ್ಳದು. ಕತೆ ಭಿನ್ನವಾಗಿರುವುದರಿಂದ ಕ್ಯಾಮೆರಾ ಆಟ ಕೂಡ ಬೇರೊಂದು ಮಜಲಿನಲ್ಲಿದೆ. ಪೊಲೀಸ್ ಅಧಿಕಾರಿಯೊಬ್ಬರು ಹೇಳಿರುವ `ಸತ್ಯಕತೆ'ಯಲ್ಲಿ ಮಳೆ ಇಲ್ಲ. ಆದರೆ ಚಿತ್ರಕ್ಕೆಂದೇ ವರುಣ ಮಹಾಶಯ ದುಡಿದಿದ್ದಾನೆ.ಗೋವೆಯ ದೂದ್ ಸಾಗರ್ ಜಲಪಾತ ಚಿತ್ರವನ್ನು ಶ್ರಿಮಂತಗೊಳಿಸಿದೆ. ಹೆಲಿಕಾಪ್ಟರ್ ಮೂಲಕ ಏರಿಯಲ್ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ. ಚಿತ್ರೀಕರಣದ ವೇಳೆ ಸುರಿಯುತ್ತಿದ್ದ ಮಳೆ, ಅದರಿಂದಾಗಿ ದಿಗಿಲುಗೊಳ್ಳುತ್ತಿದ್ದ ಪೈಲಟ್ ಸತ್ಯ ಅವರ ನೆನಪಿನಲ್ಲಿ ಮೈನಾ ಅಜರಾಮರವಾಗಿ ಉಳಿಯುವಂತೆ ಮಾಡಿವೆ. ಚಿತ್ರದ ಮತ್ತೊಂದು ವಿಶೇಷ ಕುದುರೆಮುಖ. ಗಣಿಗಾರಿಕೆ ನಿಷೇಧ ಮತ್ತಿತರ ಕಾರಣಗಳಿಂದಾಗಿ ಕುದುರೆಮುಖದಲ್ಲಿ ಇದುವರೆಗೆ ಚಿತ್ರೀಕರಣ ನಿಷೇಧಿಸಲಾಗಿತ್ತು. ಆದರೆ ದೂದ್‌ಸಾಗರ್‌ನಂತೆ ಇಲ್ಲಿಯೂ ಚಿತ್ರೀಕರಣಕ್ಕೆ ದೊಡ್ಡಮಟ್ಟದ ಪ್ರಭಾವ ಬಳಸಿ ಅನುಮತಿ ಪಡೆಯಲಾಗಿತ್ತು. ವಿದೇಶದ ಸುಂದರ ದೃಶ್ಯಗಳಂತೆ ಕುದುರೆಮುಖದ ಹಸಿರು ಸಿರಿ ಮೂಡಿಬಂದಿದೆ. ಇಲ್ಲಿ ಹೆಲಿಕಾಪ್ಟರ್ ಬಳಸಲು ಅವಕಾಶವಿಲ್ಲದ ಕಾರಣ ವಿಶೇಷ ಕ್ರೇನ್‌ಗಳನ್ನು ಉಪಯೋಗಿಸಲಾಗಿದೆ. ಬೇಲೂರು, ಕ್ಷಿತಿಜ ಹಾಗೂ ಮರವಂತೆ ಹಿನ್ನೀರು ಪ್ರದೇಶ ಚಿತ್ರೀಕರಣಕ್ಕೆ ಆಯ್ಕೆ ಮಾಡಲಾದ ಇನ್ನಿತರ ಸುಂದರ ತಾಣಗಳು. `ಮುಂಗಾರು ಮಳೆ'ಯ ನಂತರ ಅನೇಕ ಕನ್ನಡ ಚಿತ್ರಗಳಲ್ಲಿ ಭರ್ತಿ ವರ್ಷಧಾರೆ! ಆದರೆ ಮಳೆಯಿಂದ ಮಾತ್ರ ದೃಶ್ಯ ಶ್ರೀಮಂತಿಕೆ ಸಾಧ್ಯ ಎನ್ನುವುದನ್ನು ಸತ್ಯ ಒಪ್ಪುವುದಿಲ್ಲ. ಅವರೇ ಚಿತ್ರೀಕರಿಸಿದ `ದುನಿಯಾ' ಕಚ್ಚಾ ದೃಶ್ಯಗಳ ತೆನೆಯಂತಿತ್ತು. ಕತೆ ಹಾಗೂ ನಿರ್ದೇಶಕರ ಕಾರಣಕ್ಕೆ ಮಳೆಯತ್ತ ಒಲವು ತೋರಿಸುವ ಅನಿವಾರ್ಯತೆ ಇದೆಯಂತೆ. ಆದರೆ ಮಳೆಯನ್ನೇ ಎಷ್ಟು ಭಿನ್ನವಾಗಿ ತೋರಬಹುದು ಎನ್ನುವುದಕ್ಕೆ `ಮೈನಾ'ದಲ್ಲಿ ಉತ್ತರವಿದೆ. ಕೃತಕ ದೃಶ್ಯಗಳಿಗೆ ತಿಲಾಂಜಲಿ ನೀಡಲಾಗಿದೆ. ತೇವದ ಅನುಭವದಲ್ಲಿ ಪ್ರೇಕ್ಷಕರನ್ನು ಮೀಯಿಸಲಾಗಿದೆ ಎನ್ನುತ್ತಾರೆ ಅವರು.ಮಲೆನಾಡು- ಕರಾವಳಿ ಸೀಮೆಯ ಹಳಿಯಾಳದವರು ಸತ್ಯ. ಬೆಂಗಳೂರಿನ ಎಸ್‌ಜೆ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸಿನಿಮಾಟೋಗ್ರಫಿ  ಡಿಪ್ಲೊಮಾ ಕೋರ್ಸ್ ತೆಗೆದುಕೊಂಡದ್ದು ಆಕಸ್ಮಿಕವಾಗಿ. ಮುಂದಿನ ವರ್ಷ ಡಿಪ್ಲೊಮಾ ವಿಷಯ ಬದಲಿಸಿದರಾಯಿತು ಎಂದು ಅಧ್ಯಯನದಲ್ಲಿ ತೊಡಗಿದರು. ಆದರೆ ದಿನ ಕಳೆದಂತೆ ಸಿನಿಮಾಟೋಗ್ರಫಿಯ ರುಚಿ ಹತ್ತತೊಡಗಿತು. ಥಿಯರಿಯಲ್ಲಿ ದೊರೆತದ್ದಕ್ಕಿಂತ ಹೆಚ್ಚು ತೃಪ್ತಿ ಸಿನಿಮಾರಂಗಕ್ಕಿಳಿದಾಗ ಸಿಕ್ಕಿತು. ಗೌರಿಶಂಕರ್, ಪಿ.ರಾಜನ್, ಎಚ್.ಸಿ. ವೇಣು ಅವರಂತಹ ದಿಗ್ಗಜರ ಬಳಿ ಕೆಲಸ ಕಲಿತರು. ಹಿರಿಯ ಛಾಯಾಗ್ರಾಹಕರ ಕೆಲಸ ಮೆಚ್ಚಿ ತಾವೇ ಸ್ವತಃ ಅವರ ಕೈಕೆಳಗೆ ದುಡಿಯತೊಡಗಿದರು.ಸಿನಿಮಾ ಹಾದಿ ತುಳಿದು `ಹಾಳಾಗಿ ಹೋದ' ಬಗ್ಗೆ ಕುಟುಂಬದಲ್ಲಿ ಮಾತುಕತೆಗಳಾದರೂ ಈಗ ಅದೆಲ್ಲಕ್ಕೂ ಉತ್ತರ ದೊರೆತಿದೆ. ರಾಜ್ಯ ಪ್ರಶಸ್ತಿಯ ಜತೆಗೆ ಪ್ರತಿಷ್ಠಿತ ಬಿ.ವಿ.ರಾಜಾರಾಂ ಪ್ರಶಸ್ತಿಯೂ ಅವರದಾಗಿದೆ.ಅಶೋಕ್ ಕಶ್ಯಪ್, ರಾಮಚಂದ್ರ ಐತಾಳ್, ಪಿ.ಜಿ. ಶ್ರೀರಾಂ ಹಾಗೂ ಸಂತೋಷ್ ಸಿವನ್ ಸತ್ಯರ ನೆಚ್ಚಿನ ಛಾಯಾಗ್ರಾಹಕರು. `ಒಂದು ಸಿನಿಮಾ ನಂತರ ಮತ್ತೊಂದು' ಎಂಬ ನೀತಿ ಪಾಲಿಸುತ್ತಿರುವ ಅವರ ಕೈಯಲ್ಲಿ ಸದ್ಯಕ್ಕೆ `ಗಜಪತಿ' ಹಾಗೂ `ರಾಟೆ' ಇವೆ.

ಮನೆಯ ಕೆಲಸದಾಳಿನ ಜತೆಗೂ ಕತೆಯನ್ನು ಚರ್ಚಿಸುವ ನಿರ್ದೇಶಕ ನಾಗಶೇಖರ್, ತಂತ್ರಜ್ಞರನ್ನು ಒಳಗೊಳ್ಳುವ ಪರಿಯನ್ನು ಸತ್ಯ ಸುದೀರ್ಘವಾಗಿ ವಿವರಿಸಿದರು. ನಿರ್ದೇಶಕರು ನೀಡಿದ ಸ್ವಾತಂತ್ರ್ಯದಿಂದಾಗಿ `ಮೈನಾ'ದಲ್ಲಿ ಹಲವು ಪ್ರಯೋಗಗಳು ಸಾಧ್ಯವಾಯಿತಂತೆ. ಸರಿ ತಪ್ಪುಗಳನ್ನು ನಿಖರವಾಗಿ ತೀರ್ಮಾನಿಸುವ ನಾಗಶೇಖರ್ ಅವರ ಚಿತ್ರದ ಹೆಗ್ಗುರುತುಗಳು ಕ್ಯಾಮೆರಾ ಕೆಲಸ ಹಾಗೂ ಹಾಡು. ಕತೆ ಬಲವಾಗಿರುವುದರಿಂದ ಇವೆರಡೂ ಚಿತ್ರದ ಮುಕುಟದಂತಿವೆಯಂತೆ.ತಮ್ಮಿಷ್ಟದ `ಲೋ ಆ್ಯಂಗಲ್' ಕುರಿತಂತೆಯೂ ಸತ್ಯರ ಮಾತು ಹೊರಳಿತು. ಚಿತ್ರತಂಡ ಬಯಸಿದ ದೃಶ್ಯಗಳನ್ನು ನೀಡಿದ ಮೇಲೆ ಇವರು ಲೋ ಆ್ಯಂಗಲ್‌ಗೆ ಹೊರಳುತ್ತಾರೆ. ಇದನ್ನು ಕೆಲವರು ಆಕ್ಷೇಪಿಸಿದ್ದೂ ಉಂಟು. `ಲೋ ಆ್ಯಂಗಲ್' ತಮ್ಮ ಬಲವೂ ಹೌದು, ದೌರ್ಬಲ್ಯವೂ ಹೌದು ಎನ್ನುವ ಸತ್ಯ, ದೃಶ್ಯದ ಗಹನತೆ ಹೆಚ್ಚಿಸಲು ಇದು ಸಹಕಾರಿ ಎಂದು ನಂಬಿದವರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry