ಸೋಮವಾರ, ಸೆಪ್ಟೆಂಬರ್ 27, 2021
21 °C

ಸತ್ಯಶೋಧನೆಯ ಶ್ರೀಕಂಠಯಾನ

ಎಸ್. ಸೂರ್ಯಪ್ರಕಾಶ ಪಂಡಿತ್ Updated:

ಅಕ್ಷರ ಗಾತ್ರ : | |

ಸತ್ಯಶೋಧನೆಯ ಶ್ರೀಕಂಠಯಾನ

ಭಾರತೀಯ ಇತಿಹಾಸವನ್ನು ನೋಡುತ್ತಿರುವ ದೃಷ್ಟಿಯಲ್ಲಿ ಇಂದು ಭಿನ್ನ ಭಿನ್ನ ನೋಟಗಳು ಎಚ್ಚರವಾಗಿವೆ. ಇಂಥ ಸಂದರ್ಭದಲ್ಲಿ ಶ್ರೀಕಂಠಶಾಸ್ತ್ರಿಗಳ ಸಂಶೋಧನ ಪ್ರಬಂಧಗಳು ಸಂಶೋಧಕರಿಗೂ ಇತಿಹಾಸತಜ್ಞರಿಗೂ ಸಮಾಜನಿರ್ಮಾತೃರಿಗೂ ಸಾಮಾನ್ಯರಿಗೂ ದಿಕ್ಸೂಚಿಗಳಾಗಬಲ್ಲಂಥವು.

ಇತಿಹಾಸ ಎಂದರೇನು? ಈ ಶಬ್ದದ ವ್ಯುತ್ಪತ್ತಿಯನ್ನು ಹೇಳಬಹುದೆ ಹೊರತು ಇತಿಹಾಸದ ಲಕ್ಷಣವನ್ನು ನಿರೂಪಿಸುವುದು ಸುಲಭವಲ್ಲ. ಹೀಗಿದ್ದರೂ ‘ಇತಿಹಾಸ’ ಎನ್ನುವುದು ವರ್ತಮಾನವನ್ನು ಪ್ರಭಾವಿಸುತ್ತಲೇ ಹೊಸದಾದ ಇತಿಹಾಸವನ್ನೂ ನಿರ್ಮಿಸುತ್ತಿರುತ್ತದೆ.

ಸಮಕಾಲೀನ ಜನಜೀವನವನ್ನು ಇತಿಹಾಸಪ್ರಜ್ಞೆ ಹಲವು ವಿಧದಲ್ಲಿ ಕಾಡುತ್ತಿರುವುದರಿಂದಲೇ ಇತಿಹಾಸಕಾರರ ಹೊಣೆಗಾರಿಕೆ ಮತ್ತು ಸಿದ್ಧತೆ–ಚಿಂತನೆಗಳು ಬಹಳ ಮುಖ್ಯವಾದ ವಿವರಗಳಾಗುತ್ತವೆ. ನಮ್ಮ ಕಾಲದ ಶ್ರೇಷ್ಠ ಇತಿಹಾಸತಜ್ಞ ಮತ್ತು ಚಿಂತಕ ವಿಲ್‌ ಡ್ಯುರಾಂಟ್, ಇತಿಹಾಸವನ್ನು ಕುರಿತು ಒಂದೆಡೆ ಹೀಗೆಂದಿದ್ದಾರೆ:‘ಇತಿಹಾಸಲೇಖನ ವಿಜ್ಞಾನವಲ್ಲ; ಅದೊಂದು ಉದ್ದಿಮೆ, ಕಲೆ ಮತ್ತು ತತ್ತ್ವಜ್ಞಾನ; ತಥ್ಯಾಂಶಗಳನ್ನು ಬಯಲಿಗೆ ತರುವುದರಲ್ಲಿ ಅದೊಂದು ಉದ್ದಿಮೆ, ಲಭ್ಯ ಮಾಹಿತಿಯ ಅಸ್ತವ್ಯಸ್ತಸ್ಥಿತಿಗೆ ಅರ್ಥವತ್ತಾದ ರೂಪವೊಂದನ್ನು ಕೊಡುವುದರಿಂದ ಅದೊಂದು ಕಲೆ, ದೃಷ್ಟಿಕೋನವನ್ನೂ ತಿಳಿವಳಿಕೆಯನ್ನೂ ಒದಗಿಸುವುದರಿಂದ ಅದು ತತ್ತ್ವಜ್ಞಾನ’.ಹೀಗೆ ಇತಿಹಾಸವನ್ನು ಉದ್ದಿಮೆ–ಕಲೆ–ತತ್ತ್ವಜ್ಞಾನವಾಗಿ ಅನುಸಂಧಾನಿಸಿದವರು ಶ್ರೀಕಂಠಶಾಸ್ತ್ರೀ.

ಒಬ್ಬ ಆದರ್ಶ ಇತಿಹಾತಜ್ಞನಿಗೆ ಇರಬೇಕಾದ ಅರ್ಹತೆಗಳನ್ನೆಲ್ಲ ರೂಢಿಸಿಕೊಂಡಿದ್ದವರು ಶ್ರೀಕಂಠಶಾಸ್ತ್ರೀ. ಎಳವೆಯಲ್ಲೇ ಎದುರಾದ ಶಾರೀರಿಕ ತೊಂದರೆಗಳಿಗೆ ಕುಗ್ಗದೆ, ಅಧ್ಯಯನಕ್ಕೇ ತಮ್ಮ ಜೀವನವನ್ನು ಅರ್ಪಿಸಿಕೊಂಡು ಶ್ರೇಷ್ಠ ಇತಿಹಾಸ ಸಂಶೋಧಕರಲ್ಲಿ ಒಬ್ಬರು ಎಂದು ಕೀರ್ತಿತರಾದರು.ಇತಿಹಾಸ ಎಂದರೆ ಕೇವಲ ವರ್ಷ, ರಾಜ್ಯ, ರಾಜ, ಯುದ್ಧ ಎಂಬಂಥ ಸೀಮಿತ ಚೌಕಟ್ಟಿಗೆ ಪಕ್ಕಾಗದೆ ಹಲವು ಜ್ಞಾನಶಾಖೆಗಳಲ್ಲಿ ಪರಿಣತಿಯನ್ನು ಸಂಪಾದಿಸಿದರು. ಇತಿಹಾಸದ ಜೊತೆಗೆ ಸಾಹಿತ್ಯ, ಸಂಗೀತ, ಚಿತ್ರಕಲೆ, ಶಾಸನಶಾಸ್ತ್ರ, ಪುರಾತತ್ವ,ಮೂರ್ತಿಶಿಲ್ಪ, ಅಲಂಕಾರಶಾಸ್ತ್ರ, ಧರ್ಮ, ಅಧ್ಯಾತ್ಮ  –  ಹೀಗೆ ಬೇರೆ ಬೇರೆ ಆಯಾಮಗಳಿಂದ ಇತಿಹಾಸದ ಸಂಶೋಧನೆಯನ್ನು ಮಾಡಿ, ಇತಿಹಾಸಕ್ಕೂ ಸಂಸ್ಕೃತಿಗೂ ಇರುವ ನಂಟನ್ನು ಗಟ್ಟಿ ಮಾಡಿದರು.

ಕನ್ನಡ, ಸಂಸ್ಕೃತ, ಇಂಗ್ಲಿಷ್‌, ತೆಲುಗುಭಾಷೆಗಳಲ್ಲದೆ, ಜರ್ಮನ್, ಫ್ರೆಂಚ್‌ಗಳಂಥವುಗಳನ್ನೂ ದಕ್ಕಿಸಿಕೊಂಡಿದ್ದರು. ಇತಿಹಾಸ, ಸಾಹಿತ್ಯ, ಸಂಸ್ಕೃತಿಗಳನ್ನು ಕುರಿತ ಅವರ ಇಂಗ್ಲಿಷ್ ಪ್ರಬಂಧಗಳು ಒಂದೆಡೆ ಸಿಕ್ಕುವಂತಿರಲಿಲ್ಲ.ಈಗ ಆ ಎಲ್ಲ ಲೇಖನಗಳನ್ನೂ ಎರಡು ಸಂಪುಟಗಳಲ್ಲಿ ಪ್ರಕಟಿಸಿ ‘ದಿ ಮಿಥಿಕ್ ಸೊಸೈಟಿ’ ಸ್ತುತ್ಯರ್ಹ ಕೆಲಸ ಮಾಡಿದೆ. ಅವರು ಕನ್ನಡದಲ್ಲಿ ಪ್ರಕಟಿಸಿದ್ದ ಸಂಶೋಧನ ಲೇಖನಗಳ ಸಂಗ್ರಹದ ಜೊತೆಗೆ ಅವರ ಪ್ರಮುಖ ಕನ್ನಡ ಪುಸ್ತಕಗಳೂ ಈಗ ಮರುಮುದ್ರಣಗೊಂಡಿವೆ.ಭಾರತೀಯ ಇತಿಹಾಸವನ್ನು ನೋಡುತ್ತಿರುವ ದೃಷ್ಟಿಯಲ್ಲಿ ಇಂದು ಭಿನ್ನ ಭಿನ್ನ ನೋಟಗಳು ಎಚ್ಚರವಾಗಿವೆ. ಇಂಥ ಸಂದರ್ಭದಲ್ಲಿ ಶ್ರೀಕಂಠಶಾಸ್ತ್ರಿಗಳ ಸಂಶೋಧನ ಪ್ರಬಂಧಗಳು ಸಂಶೋಧಕರಿಗೂ ಇತಿಹಾಸತಜ್ಞರಿಗೂ ಸಮಾಜನಿರ್ಮಾತೃಗಳಿಗೂ ಸಾಮಾನ್ಯರಿಗೂ ದಿಕ್ಸೂಚಿಗಳಾಗಬಲ್ಲಂಥವು. ಶ್ರೀಕಂಠಶಾಸ್ತ್ರಿಗಳ ಪೂರ್ವಿಕರು ಬೆಂಗಳೂರು ಸಮೀಪದ ನೆಲಮಂಗಲ ತಾಲೂಕಿನ ಸೊಂಡೆಕೊಪ್ಪ ಗ್ರಾಮವಾಸಿಗಳು. ಶಾಸ್ತ್ರಿಗಳು ಹುಟ್ಟಿದ್ದು ನಂಜನಗೂಡಿನಲ್ಲಿ, 1901ರ ನವೆಂಬರ್  ಐದರಂದು. ತಂದೆ ರಾಮಸ್ವಾಮಿಶಾಸ್ತ್ರೀ; ತಾಯಿ ಶೇಷಮ್ಮ. ಬಾಲ್ಯದಲ್ಲಿ ಶ್ರೀಕಂಠಶಾಸ್ತ್ರೀ ಸಿಡುಬುರೋಗಕ್ಕೆ ತುತ್ತಾಗಿ ಎಡಗಣ್ಣು ಮತ್ತು ಎಡಗಿವಿಗಳ ಶಕ್ತಿಯನ್ನು ಕಳೆದುಕೊಂಡರು.ಶಾಸ್ತ್ರಿಗಳದ್ದು ವಿದ್ವತ್ ಮನೆತನ; ಅವರ ಪೂರ್ವಿಕರಲ್ಲಿ ಅನೇಕರು ಸಂಸ್ಕೃತವಿದ್ವಾಂಸರಿದ್ದರು. ಕೋಲಾರದಲ್ಲಿ ಪ್ರೌಢಶಿಕ್ಷಣವನ್ನು ಮುಗಿಸಿದ ಶಾಸ್ತ್ರಿಗಳು ಮೈಸೂರಿನ  ಮಹಾರಾಜ ಕಾಲೇಜಿಗೆ ಉನ್ನತ ವಿದ್ಯಾಭ್ಯಾಸಕ್ಕೆಂದು ತೆರಳಿದರು. ಎನ್.ಎಸ್. ಸುಬ್ಬರಾವ್, ಎಚ್. ಕೃಷ್ಣರಾವ್, ಜೆ.ಸಿ. ರೋಲೋ, ಬಿ. ಕೃಷ್ಣಪ್ಪ. ಆರ್. ಶಾಮಶಾಸ್ತ್ರೀ, ಎಂ.ಎಚ್‌. ಕೃಷ್ಣ, ಎ.ಆರ್. ಕೃಷ್ಣಶಾಸ್ತ್ರಿ, ಬಿ.ಎಂ. ಶ್ರೀಕಂಠಯ್ಯ ಮುಂತಾದ ಶ್ರೇಷ್ಠ ಗುರುಗಳಲ್ಲಿ ಶಿಷ್ಯತ್ವ ಮಾಡಿದವರು ಶಾಸ್ತ್ರಿಗಳು. ಎಂ.ಎ. ವಿದ್ಯಾರ್ಥಿಯಾಗಿದ್ದಾಗಲೇ ಲಂಡನ್ನಿನ ಪ್ರತಿಷ್ಠಿತ ‘ರಾಯಲ್‌ ಏಷ್ಯಾಟಿಕ್ ಸೊಸೈಟಿ’ಯ ಪತ್ರಿಕೆಯಲ್ಲಿ ಪ್ರಬಂಧವೊಂದು ಪ್ರಕಟವಾಗಿ ಶಾಸ್ತ್ರಿಗಳ ಪ್ರತಿಭೆಯನ್ನು ಆರಂಭದಲ್ಲಿಯೇ ವಿದ್ವತ್‌ಲೋಕ ಗುರುತಿಸುವಂತಾಯಿತು.

‘ಕಾನ್‌ಕ್ವೆಸ್ಟ್‌ ಆಫ್ ಶಿಲಾದಿತ್ಯ ಇನ್‌ ದಿ ಸೌತ್‌’ ಎಂಬ ಪ್ರಬಂಧ ಪ್ರಕಟವಾದಾಗ ಅವರ ವಯಸ್ಸು ಕೇವಲ ಇಪ್ಪತ್ತು. ಕರ್ನಾಟಕ ಇತಿಹಾಸಕ್ಕೆ ಸಂಬಂಧಿಸಿದಂತೆ ಸಂಶೋಧನೆಯನ್ನು ಕೈಗೊಳ್ಳಲು ಅವರಿಗೆ ವಿದ್ಯಾರ್ಥಿವೇತನವೊಂದು ದೊರಕಿತು.ಅದನ್ನು ಉಪಯೋಗಿಸಿಕೊಂಡು ‘ಸೋರ್ಸಸ್‌ ಆಫ್‌ ಕರ್ನಾಟಕ ಹಿಸ್ಟರಿ’ ಎಂಬ ಪ್ರಬಂಧವನ್ನು ಸಿದ್ಧಪಡಿಸಿದರು. ಶಾಸ್ತ್ರಿಗಳು ೧೯೪೯ರಲ್ಲಿ ಡಿ.ಲಿಟ್. ಪದವಿಗಾಗಿ ಅದುವರೆಗೂ ಅವರು ಪ್ರಕಟಿಸಿದ್ದ ಸಂಶೋಧನಪ್ರಬಂಧಗಳನ್ನು ವಿಶ್ವವಿದ್ವಾಲಯಕ್ಕೆ ಸಲ್ಲಿಸಿದರು.ಪರೀಕ್ಷಕರಾಗಿದ್ದ ರಾಧಾ ಕುಮುದ ಮುಖರ್ಜಿ ‘ಇಷ್ಟು ದೊಡ್ಡ ಪ್ರಮಾಣದ ಸಂಶೋಧನಕಾರ್ಯಕ್ಕೆ ಡಿ.ಲಿಟ್.ನಂಥ ಪದವಿ ಅತ್ಯಲ್ಪ ಮಾತ್ರದ್ದಾಗುತ್ತದೆ’ ಎಂದು ಟಿಪ್ಪಣಿ ಬರೆದಿದ್ದರಂತೆ. 1965ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದಲ್ಲಿ ಅಧ್ಯಾಪಕರಾಗಿ ನೇಮಕಗೊಂಡರು.ಮುಂದೆ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾದರು. ಶಾಸ್ತ್ರಿಗಳು 1974ರ ಮೇ ಹತ್ತರಂದು ತೀರಿಕೊಂಡರು. ಹೆಚ್ಚು ಕಡಿಮೆ ಅಲ್ಲಿಯವರೆಗೂ ನಿರಂತರವಾಗಿ ಇತಿಹಾಸ ಸಂಶೋಧನೆಯನ್ನು ಮಾಡುತ್ತಲೇ ಇದ್ದರು.ಶಾಸ್ತ್ರಿಗಳು ಮಾಡಿದ ಸಂಶೋಧನೆಗಳು ಆ ಕಾಲದ ಎಷ್ಟೋ ಸ್ಥಾಪಿತ ನಿಲುವುಗಳನ್ನು ಬುಡಮೇಲು ಮಾಡುವಂಥದ್ದಾಗಿದ್ದವು. ಉದಾಹರಣೆಗೆ, ‘ಆರ್ಯರ ಆಕ್ರಮಣ’ ಸಿದ್ಧಾಂತವನ್ನು ಅವರು ಹಲವು ಸಾಕ್ಷ್ಯಗಳಿಂದ ತಿರಸ್ಕರಿಸಿದರು.ಅವರು ಪಾಠ ಮಾಡುವಾಗ ‘ಪರೀಕ್ಷೆಯಲ್ಲಿ ಮಾರ್ಕುಗಳನ್ನು ಪಡೆಯುವುದಕ್ಕಾಗಿ ಆರ್ಯರು ಹೊರಗಿನಿಂದ ಬಂದವರು ಎಂದು ಉತ್ತರ ಬರೆಯಿರಿ; ಆದರೆ ಆರ್ಯರು ಹೊರಗಿನಿಂದ ಬಂದವರು ಎಂದು ನೀವು ನಂಬಬೇಡಿ’ ಎಂದು ವಿದ್ಯಾರ್ಥಿಗಳಿಗೆ ಹೇಳುತ್ತಿದ್ದರಂತೆ. ಶಾಸ್ತ್ರಿಗಳು ಹತ್ತಾರು ಸಂಶೋಧನ ಗ್ರಂಥಗಳನ್ನೂ ನೂರಾರು ಪ್ರಬಂಧಗಳನ್ನೂ ಪ್ರಕಟಿಸಿದ್ದಾರೆ. ಈ ಒಂದೊಂದು ಬರಹಗಳಲ್ಲಿಯೂ ಅವರ ವಿದ್ವತ್ತು, ಅಧ್ಯಯನ, ಸ್ವತಂತ್ರಚಿಂತನೆ, ಅಪಾರಪರಿಶ್ರಮಗಳನ್ನು ಧಾರಾಳವಾಗಿಯೇ ಕಾಣಬಹುದು.ಅವರ ‘ಭಾರತೀಯ ಸಂಸ್ಕೃತಿ’ ಜನಪ್ರಿಯ ಶೈಲಿಯನ್ನೂ ಸಂಶೋಧನೆಯ ಶಿಸ್ತನ್ನೂ ಒಟ್ಟಾಗಿ ಮೇಳೈಸಿಕೊಂಡ ಅಪರೂಪದ ಕೃತಿ. ಅದು ಇಂದಿಗೂ ಭಾರತೀಯ ಸಂಸ್ಕೃತಿಯನ್ನು ಕುರಿತಂತೆ ಪ್ರಮುಖ ಆಕರಗ್ರಂಥವಾಗಿದೆ.‘ರೋಮನ್ ಚಕ್ರಾಧಿಪತ್ಯದ ಇತಿಹಾಸ’, ‘ಪ್ರಪಂಚ ಚರಿತ್ರೆಯ ರೂಪರೇಖೆಗಳು’, ‘ಪುರಾತತ್ವ ಶೋಧನೆ’, ‘ಹೊಯ್ಸಳ ವಾಸ್ತುಶಿಲ್ಪ’ – ಅವರ ಪ್ರಮುಖ ಕನ್ನಡ ಕೃತಿಗಳು.‘ಪ್ರೊಟೊ ಇಂಡಿಕ್ ರಿಲಿಜಿಯನ್’, ’ಐಕನಾಗ್ರಫಿ ಆಫ್ ವಿದ್ಯಾರ್ಣವತಂತ್ರ’, ‘ಅರ್ಲಿ ಗಂಗಾಸ್ ಆಫ್ ತಲಕಾಡ್’, ‘ಎವಲ್ಯೂಷನ್ ಆಫ್ ಗಂಢಬೇರುಂಢ’ – ಇವು ಪ್ರಮುಖ ಇಂಗ್ಲಿಷ್ ಕೃತಿಗಳು.ಅವರ ಮುನ್ನೂರಕ್ಕೂ ಹೆಚ್ಚು ಸಂಶೋಧನಪ್ರಬಂಧಗಳು ಜಗತ್ತಿನ ವಿವಿಧ ವಿದ್ವತ್ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ಈ ಬರಹಗಳು ಆರ್.ಸಿ. ಮಜುಂದಾರ್, ಪಿ.ಕೆ. ಗೋಡೆ, ಡಿ.ಸಿ. ಸರ್ಕಾರ್, ಆ.ನೇ. ಉಪಾಧ್ಯೇ ಮುಂತಾದ ಖ್ಯಾತನಾಮರ ಮೆಚ್ಚುಗೆಯನ್ನು ಪಡೆದಿವೆ.

ಜನಸಾಮಾನ್ಯರಿಗೂ ಇತಿಹಾಸ ಸಂಶೋಧನೆಯ ಫಲ ದಕ್ಕಬೇಕೆಂಬ ತುಡಿತದಿಂದ ಶಾಸ್ತ್ರಿಗಳು ಹಲವು ಲೇಖನಗಳನ್ನು, ಪುಸ್ತಕವಿಮರ್ಶೆಗಳನ್ನು ದಿನಪತ್ರಿಕೆಗಳಿಗೂ ಬರೆದರು. ಹೀಗೆ ಬರೆದ ಅತಿ ಹೆಚ್ಚು ಲೇಖನಗಳು ‘ಪ್ರಜಾವಾಣಿ’ಯಲ್ಲಿಯೇ ಪ್ರಕಟವಾದವು.೧೯೫೫–೬೬ರ ನಡುವೆ ‘ಪ್ರಜಾವಾಣಿ’ಯಲ್ಲಿ ಅವರ 70ಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿದ್ದವು. ಶಾಸ್ತ್ರಿಗಳು ಕನ್ನಡದಲ್ಲಿ ಬರೆದಿರುವ 112 ಸಂಶೋಧನ ಲೇಖನಗಳನ್ನು ಸೇರಿಸಿ ಒಂದು ಸಂಪುಟದಲ್ಲಿ ಮೈಸೂರು ವಿಶ್ವವಿದ್ಯಾನಿಲಯವು ಡಾ. ಬಾ.ರಾ. ಗೋಪಾಲ್ ಮತ್ತು ಡಾ. ಟಿ.ವಿ. ವೆಂಕಟಾಚಲಶಾಸ್ತ್ರೀ ಸಂಪಾದಕತ್ವದಲ್ಲಿ (1975) ಪ್ರಕಟಿಸಿದೆ. ಶಾಸ್ತ್ರಿಗಳ ಶಿಷ್ಯರೂ ಅಭಿಮಾನಿಗಳೂ ಅವರಿಗೆ ‘ಶ್ರೀಕಂಠಿಕಾ’ ಎಂಬ ಅಭಿನಂದನಗ್ರಂಥವನ್ನು 1973ರಲ್ಲಿ ಅರ್ಪಿಸಿದರು.ಇತಿಹಾಸಲೇಖನಗಳು ಊಹೆಗಳಿಂದಲೂ ಪೂರ್ವಗ್ರಹದಿಂದಲೂ ಮುಕ್ತವಾಗಿರಬೇಕು ಎಂಬ ಸಿದ್ಧಾಂತವನ್ನು ವ್ರತಬುದ್ಧಿಯಿಂದ ನಂಬಿ, ಅದರಂತೆ ನಡೆದವರು ಶಾಸ್ತ್ರಿಗಳು. ಇತಿಹಾಸದ ಸಂಶೋಧನೆಗಳು ಹಾದಿ ತಪ್ಪಿ ಹೇಗೆ ಹಾಸ್ಯಾಸ್ಪದವಾಗುತ್ತದೆ ಎನ್ನುವುದನ್ನು ‘ಇತಿಹಾಸದಲ್ಲಿ ಹಾಸ್ಯ’ ಎಂಬ ಲೇಖನದಲ್ಲಿ ನಿರೂಪಿಸಿದ್ದಾರೆ.1963ರ ‘ಪ್ರಜಾವಾಣಿ’ಯ ದೀಪಾವಳಿ ಸಂಚಿಕೆಯಲ್ಲಿ ಪ್ರಕಟವಾದ ಈ ಲೇಖನದ ಆರಂಭವೇ ಮಾರ್ಮಿಕವಾಗಿದೆ: ‘‘ಒಬ್ಬ ಈಜಿಪ್ಟ್ ಚರಿತ್ರೆಯಲ್ಲಿ ಪ್ರವೀಣನು ಅಸ್ಸೀರಿಯ ಚರಿತ್ರೆಯ ಪ್ರವೀಣನೊಡನೆ ಚರ್ಚೆ ಮಾಡುತ್ತಿದ್ದನು.

‘ಈಜಿಪ್ಟಿನ ಅವಶೇಷಗಳಲ್ಲಿ ತಾಮ್ರದ ತಂತಿಗಳು ಸಿಕ್ಕಿವೆ. ಇದರಿಂದ ಪ್ರಾಚೀನ ಈಜಿಪ್ಟಿನಲ್ಲಿ ಟೆಲಿಫೋನ್, ಟೆಲಿಗ್ರಾಮ್ ತಿಳಿದಿದ್ದವೆಂದು ಹೇಳಬಹುದು. ನಿಮ್ಮ ಅಸ್ಸೀರಿಯ ಸಂಸ್ಕೃತಿಗಿಂತ ಈಜಿಪ್ಟ್ ಮುಂದುವರೆದಿತ್ತು ಎಂದು ರುಜುವಾತಾಗುತ್ತದೆ’ ಎಂದು.ಆಗ ಅಸ್ಸಿರಿಯಾಲಜಿಸ್ಟ್ ಹೇಳಿದ, ‘ನಮ್ಮ ಅಸ್ಸೀರಿಯದೇಶದಲ್ಲಿ ಯಾವ ತಂತಿಗಳೂ ಸಿಕ್ಕಿಲ್ಲ. ಅದರಿಂದ ಅಸ್ಸೀರಿಯನ್ನರಿಗೆ ‘ವೈರ್‌ಲೆಸ್’ ತಿಳಿದಿದ್ದಿತೆಂದು ಸಿದ್ಧವಾಗುತ್ತದೆ’ ಎಂದು’’.ಶಾಸ್ತ್ರಿಗಳು ಯಾವ ಟೀಕೆಗೂ ಹೆದರದೆ ತಕ್ಕ ಸಾಕ್ಷ್ಯಗಳನ್ನು ಸಂಗ್ರಹಿಸಿ, ವಾದಗಳನ್ನು ಮಂಡಿಸುತ್ತಿದ್ದರು, ಇವು ಹಲವು ಸಂದರ್ಭಗಳಲ್ಲಿ ಟೀಕೆಟಿಪ್ಪಣಿಗಳಿಗೂ ಕೋಲಾಹಲಗಳಿಗೂ ಕಾರಣವಾದವು. ಆದರೆ ಶಾಸ್ತ್ರಿಗಳು ಆ ಸಂದರ್ಭಗಳಲ್ಲಿ ‘ನನ್ನ ಸಿದ್ಧಾಂತಕ್ಕೆ ತಳಪಾಯವಾದ ಸಾಕ್ಷ್ಯಗಳನ್ನು ನಾನು ಸಿದ್ಧವಾಗಿರಿಸಿಕೊಂಡಿದ್ದೇನೆ.ನಿಮ್ಮ ವಾದಕ್ಕೆ ಪೋಷಕವಾದ ಎವಿಡೆನ್ಸ್ ಏನಾದರೂ ಇದ್ದಲ್ಲಿ ನೀವು ಅದನ್ನು ಮುಂದೆ ತನ್ನಿ’ ಎನ್ನುತ್ತಿದ್ದರು. ಶಾಸ್ತ್ರಿಗಳ ಇಂಗ್ಲಿಷ್ ಪ್ರಬಂಧಗಳನ್ನು ‘ಶ್ರೀಕಂಠಯಾನ’ ಎಂಬ ಹೆಸರಿನಲ್ಲಿ ಡಾ. ಟಿ.ವಿ. ವೆಂಕಟಾಚಲಶಾಸ್ತ್ರೀ ಮತ್ತು ಡಾ. ಪಿ.ಎನ್‌. ನರಸಿಂಹಮೂರ್ತಿ ಸಂಪಾದಿಸಿದ್ದಾರೆ.

ಪ್ರಾಚೀನ ಇತಿಹಾಸ, ಪುರಾತತ್ವಶಾಸ್ತ್ರ, ಕರ್ನಾಟಕ ಇತಿಹಾಸ, ಧರ್ಮ ಮತ್ತು ತತ್ತ್ವಶಾಸ್ತ್ರ, ರಾಜ್ಯಶಾಸ್ತ್ರ, ಸಂಸ್ಕೃತಿ ಸಂಬಂಧಿತ ಹಾಗೂ ಮುನ್ನುಡಿಗಳು, ಪುಸ್ತಕವಿಮರ್ಶೆಗಳು ಸೇರಿ ಒಟ್ಟು 119 ಬರಹಗಳು ಇದರಲ್ಲಿವೆ. ಎಷ್ಟೋ ವಿಷಯಗಳ ಬಗ್ಗೆ ಶಾಸ್ತ್ರಿಗಳೇ ಮೊದಲ ಸಲ ಬೆಳಕನ್ನು ಚೆಲ್ಲಿದ್ದಾರೆ. ಆರ್ಯರ ಆಕ್ರಮಣದ ವಾದವನ್ನು ಹಲವು ಸಾಕ್ಷ್ಯಾಧಾರಗಳಿಂದ ನಿರಾಕರಿಸಿದ್ದಾರೆ.ಪ್ರಾಚೀನ ಲಿಪಿಗಳನ್ನು ಕುರಿತು ಹಲವು ಮಹತ್ವದ ಸಂಗತಿಗಳನ್ನು ತಿಳಿಸಿದ್ದಾರೆ. ತಂತ್ರಗಳ ವೇದಮೂಲ, ಪ್ರಾಚೀನ ವಿಶ್ವವಿದ್ಯಾಲಯ ತಕ್ಷಶಿಲಾ, ಕಲ್ಹಣನ ರಾಜತರಂಗಿಣಿ, ಶಾಲಿವಾಹನಶಕೆಯ ಬಗ್ಗೆ ಸಂಶೋಧನ ಪ್ರಬಂಧಗಳಿವೆ.

ಶಂಕರಾಚಾರ್ಯರ ಕಾಲವನ್ನು ಕುರಿತು ಶಾಸ್ತ್ರಿಗಳ ಶೋಧ ಮಹತ್ವ ಪಡೆದುಕೊಂಡಿದೆ. ಜೈನಧರ್ಮದ ಹಲವು ಆಯಾಮಗಳನ್ನು ಕುರಿತು ಹತ್ತು ಪ್ರಬಂಧಗಳನ್ನು ಅವರು ರಚಿಸಿದ್ದಾರೆ.ವಿದ್ಯಾರ್ಣವತಂತ್ರದ ಮೂರ್ತಿಶಿಲ್ಪವನ್ನು ಕುರಿತ ಪ್ರಬಂಧ ಆ ಕಾಲಕ್ಕೆ ತುಂಬ ಚರ್ಚೆಗೆ ಒಳಗಾಗಿತ್ತು. ಕರ್ನಾಟಕದ ಇತಿಹಾಸವನ್ನು ಕುರಿತಂತೆ ತಲಕಾಡಿನ ಗಂಗರು, ಕಿತ್ತೂರು ರಾಣಿ ಚೆನ್ನಮ್ಮ, ಹಂಪಿಯ ವಿಟ್ಠಲ ದೇವಸ್ಥಾನ, ಕದಂಬರು – ಹೀಗೆ ಹತ್ತೊಂಬತ್ತು ಪ್ರಬಂಧಗಳಿವೆ; ಇವುಗಳಲ್ಲಿ ಗಂಢಬೇರುಂಢದ ಕಲ್ಪನೆಯ ವಿಕಾಸವನ್ನು ಕುರಿತ ಲೇಖವೂ ಸೇರಿದೆ. ಇಂದು ಭಾರತದಲ್ಲಿ ಅಶೋಕನ ಬಗ್ಗೆ ಮತ್ತೆ ವಿಶ್ಲೇಷಣೆ ಆರಂಭವಾಗಿದೆ.ಭಾರತೀಯ ಕ್ಷಾತ್ರ ಪರಂಪರೆ ಅಶೋಕನ ಅಹಿಂಸಾವಾದದಿಂದ ಶಿಥಿಲಗೊಂಡಿತು ಎಂಬಂಥ ವಾದಗಳನ್ನು ಕೇಳುತ್ತಿರುತ್ತೇವೆ. ಶಾಸ್ತ್ರಿಗಳ ಪ್ರಬಂಧ ‘ದಿ ಧರ್ಮ ಆಫ್ ಅಶೋಕ ಅ್ಯಂಡ್ ಗೀತಾ’ – ಈ ದೃಷ್ಟಿಯಿಂದ ಸಾಕಷ್ಟು ಒಳನೋಟಗಳನ್ನು ನೀಡಬಲ್ಲದು. ‘ಕಾಂಗ್ರೆಸ್‌ನ ರಾಜಕೀಯ ಚಿಂತನೆಯ ಬೆಳವಣಿಗೆ’ ಮತ್ತು ‘ಇತಿಹಾಸಕಾರರಾಗಿ ನೆಹರು’ – ಶಾಸ್ತ್ರಿಗಳ ಈ ಮಾದರಿಯ ಬರಹಗಳೂ ಉಲ್ಲೇಖಾರ್ಹ.ಸದ್ಯದ ರಾಜಕೀಯ–ಸಾಮಾಜಿಕ ಸ್ಥಿತ್ಯಂತರಗಳ ಬಿರುಗಾಳಿಗೆ ಸಿಕ್ಕು ಇತಿಹಾಸದ ವಿವರಗಳು ಹಲವು ಬದಲಾವಣೆಗಳಿಗೆ ತುತ್ತಾಗುತ್ತಲೇ ಇರುತ್ತವೆ. ಇತಿಹಾಸವನ್ನು ವರ್ತಮಾನದ ಕಣ್ಣಿನಲ್ಲಿ ನೋಡುವಾಗ ವಿವೇಕದ ಬೆಳಕು ಅನಿವಾರ್ಯ. ‘ಸಾವಿರಾರು ವರ್ಷ ಹಿಂದಿನ ಸನ್ನಿವೇಶವನ್ನು ಮತ್ತೊಂದು ಕಾಲ, ದೇಶಕ್ಕೆ ವರ್ಗಾಯಿಸಿದರೆ ಹಾಸ್ಯಕ್ಕವಕಾಶ’. ಇದು ಶಾಸ್ತ್ರಿಗಳದ್ದೇ ಮಾತು.ಇಂದಿನ ವೈಜ್ಞಾನಿಕ ಸಾಧನೆಯೆಲ್ಲವನ್ನೂ ವೇದದಲ್ಲಿಯೇ ನೋಡುವಂಥ ಹಟಬದ್ಧಿ ಇರುವವರಿಗೆ ಈ ಮಾತು ಎಚ್ಚರಿಕೆಯಂತಿದೆ. ‘ಸತ್ಯವು ಒಂದೇ. ಚರಿತ್ರಕಾರನಿಗೆ ಅದೇ ಪವಿತ್ರ ವಸ್ತು.ತಾತ್ಕಾಲಿಕವಾಗಿ ನಡೆದುಹೋಗುವ ವ್ಯಭಿಚಾರಭಾವಗಳು ಸಾಮಾನ್ಯ ಜನಮನಗಳನ್ನು ತೃಪ್ತಿ ಪಡಿಸಿದರೂ, ಇತಿಹಾಸ ಸತ್ಯಕ್ಕೆ ದೂರ’. ಇಂಥ ಪ್ರಾಮಾಣಿಕ ಸತ್ಯಾನ್ವೇಷಣೆಯ ಅರಿವಿನ ಮನನಕ್ಕೆ ಶ್ರೀಕಂಠಶಾಸ್ತ್ರಿಗಳ ಬರಹಗಳು ದಿಕ್ಸೂಚಿಯಂತಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.