ಸತ್ಯ ಬಿಚ್ಚಿಟ್ಟ `ಕ್ಯಾಲೆಂಡರ್ ಕರ್ಮಕಥೆ'

7

ಸತ್ಯ ಬಿಚ್ಚಿಟ್ಟ `ಕ್ಯಾಲೆಂಡರ್ ಕರ್ಮಕಥೆ'

Published:
Updated:

 


ಹಾವೇರಿ: ಪ್ರಳಯ. ಪ್ರಳಯ.. ಪ್ರಳಯ...! ಇಡೀ ಜಗತ್ತಿನಾದ್ಯಂತ ಈ ಪ್ರಳಯದ ಕುರಿತು ಪರ, ವಿರೋಧ ಚರ್ಚೆ, ಸಂವಾದ ನಡೆಯುತ್ತಲೇ ಇವೆ. ಜ್ಯೋತಿಷಿಗಳು ಪ್ರಳಯವಾಗುತ್ತದೆ ಎಂದು ಹೇಳಿದರೆ, ವಿಜ್ಞಾನಿಗಳು ಅದಕ್ಕೆ ಯಾವುದೇ ಪುರಾವೆ ಇಲ್ಲ. ಇದೊಂದು ಬುರುಡೆ ಎನ್ನುತ್ತಿದ್ದಾರೆ.

 

ಆದರೂ, ಪ್ರಳಯ ಕುರಿತು ಜನರಲ್ಲಿ ಉಂಟಾಗಿರುವ ಭಯವನ್ನು ಪೂರ್ಣ ಪ್ರಮಾಣದಲ್ಲಿ ಹೊಡದೋಡಿಸುವುದು ಸಾಧ್ಯವಾಗಿಲ್ಲ. ಒಳಗೊಳಗೆ ಭಯ ಇದ್ದರೂ ಭಂಡ ಧೈರ್ಯದೊಂದಿಗೆ ಡಿ. 21 ಬರುವುದನ್ನು ಕಾಯುತ್ತಾ ಕುಳಿತಿದ್ದಾರೆ. 

 

ನಗರದ ಕಲಾವಿದರ ತಂಡವು ಗುರುವಾರ ನಗರದ ಗಾಂಧಿ ವೃತ್ತದಲ್ಲಿ ` ಕ್ಯಾಲೆಂಡರ್ ಕರ್ಮಕಥೆ' ನಾಟಕವನ್ನು ಪ್ರದರ್ಶಿಸಿತಲ್ಲದೇ, `ಪ್ರಳಯ ಎಂಬುದು ಅವೈಜ್ಞಾನಿಕ ಸಂಗತಿ. ಆ ಬಗ್ಗೆ ಇರುವ ಭಯ ಬಿಟ್ಟು ಬಿಡಿ, ನೆಮ್ಮದಿಯಾಗಿ ಜೀವನ ಸಾಗಿಸಿ' ಎಂಬ ಸಂದೇಶವನ್ನು ಸಾರುವಲ್ಲಿ ಯಶಸ್ವಿಯಾಯಿತು.

 

2013 ರ ಕ್ಯಾಲೆಂಡರುಗಳನ್ನು ಒಬ್ಬ ಸಾಮಾನ್ಯ ಜನರ ಮಧ್ಯ ಮಾರುತ್ತ ಬರುವ ದೃಶ್ಯದೊಂದಿಗೆ  ಆರಂಭವಾದ ನಾಟಕದಲ್ಲಿ ಪಾತ್ರದಾರಿಯೊಬ್ಬ `ಜಗತ್ ಹಾಳಾಕೈತಿ 2013 ಕ್ಯಾಲೆಂಡರ್ ಯಾರಿಗೆ ಬೇಕು?' ಎಂದು ಗೇಲಿ ಮಾಡುತ್ತಾನೆ. ಅದೇ ಹೊತ್ತಿಗೆ ಕ್ಯಾಲೆಂಡರ್ ಬೇಕೆನ್ರಿ ಕ್ಯಾಲೆಂಡರ್ ಎಂದು ಮತ್ತೊಬ್ಬ ಮಾಯಾವಿ ಕ್ಯಾಲೆಂಡರ್ ಮಾರಲು ಬರುತ್ತಾನೆ. ಜನ ಸಹಜವಾಗಿ ಕುತೂಹಲದಿಂದ ಕೇಳುತ್ತಾರೆ, ರಷ್ಯಾದಿಂದ ಈ ಕ್ಯಾಲೆಂಡರ್ ಝರಾಕ್ಸ್ ಮಾಡಿ ತಂದೇನಿ. ಇದಕ್ಕೆ 5000 ರೂಪಾಯಿ ಎಂದು ಹೇಳುತ್ತಾನೆ. ಕೂಡಲೆ ಬಾಯಿಗೆ ಬಾಯಿ ಹತ್ತಿ ಪ್ರಳಯಾ ಸುಳ್ಳು ಎಂದು ಹೇಳಿದಾಗ ಮಾಯಾವಿ ಕ್ಯಾಲೆಂಡರ್ ಮಾರಾಟಗಾರ `ನಾಳೆ ಇದೇ ಟೈಮನಾಗ ಇದ ಸ್ಥಳಕ್ಕ ಬರುವೆ ಗ್ಯಾರೆಂಟಿ ಪ್ರಳಯ ಆಕೈತಿ' ಎಂದು ಸವಾಲು ಹಾಕುತ್ತಾನೆ. ಜನ ಸವಾಲು ಸ್ವೀಕರಿಸುತ್ತಾರೆ. 

 

ನಂತರದಲ್ಲಿ ಖಾಸಗಿ ಟಿವಿ ವಾಹಿನಿಯೊಂದು ಖ್ಯಾತ ಜ್ಯೋತಿಷಿ ಮುತ್ತುರಾಜ ಶಾಸ್ತ್ರಿಗಳ ಸಂದರ್ಶನವನ್ನು ನೇರ ಪ್ರಸಾರ ಮಾಡುತ್ತದೆ. ಶಾಸ್ತ್ರಿಗಳು ಶನಿ, ಶುಕ್ರ, ಗುರು, ಮಂಗಳ, ಚಂದ್ರ, ಸೂರ್ಯ ಗ್ರಹಗತಿಗಳು ಸುಮಾರಾಗಿದ್ದು, ನಾಳೆ ಪ್ರಳಯವಾಗುತ್ತದೆ ಎಂದು ಹೇಳುತ್ತಾರೆ. ನಿರೂಪಕಿ ಲೈವ್ ಟೆಲಿಕಾಸ್ಟ್ ಮೂಲಕ ನೇರ ಪ್ರಶ್ನೆಗಳಿಗೆ ಶಾಸ್ತ್ರಿಗಳಿಂದ ಉತ್ತರ ಪಡೆಯುತ್ತಾರೆ. ಒಬ್ಬ ನನ್ನ ಮದುವೆಯಾಗಿ ಎರಡು ತಿಂಗಳಾಗೈತ್ರಿ ಇನ್ನೂ ಹನಿಮೂನಿಗೆ ಹೋಗಿಲ್ಲ. ಪ್ರಳಯಾಗೊದು ಗ್ಯಾರೆಂಟಿ ಏನ್ರಿ ಶಾಸ್ತ್ರಿಗಳೆ ಎಂದು ಕೇಳಿದರೆ, ಮತ್ತೊಬ್ಬ ನನಗೆ ಎಂಎಲ್‌ಎ ಟೀಕೇಟ್ ಸಿಗೋದೈತ್ರಿ ಹೆಂಗ ಮಾಡಲಿ ಎಂದು ಕೇಳುತ್ತಾನೆ. ಮಗದೊಬ್ಬ ನಾನು ಕೆಇಬಿ ನೌಕರ ಎಲ್ಲಾ ಕಂಬ ಬಿಳುತ್ತಾವೆನ್ರಿ ಎಂದು ಕೇಳುತ್ತಾನೆ. ಇದಕ್ಕೆ ಹಾಸ್ಯ ರೂಪದಲ್ಲಿ ಪಂಡಿತರು ಉತ್ತರಿಸುತ್ತಾರೆ. 

ಕೊನೆಯ ದೃಶ್ಯದಲ್ಲಿ ಊರ ಜನ ಒಂದು ಕೂಟ್‌ನಲ್ಲಿ ಬಂದು ಸೇರುತ್ತಾರೆ. ಮಾಯಾವಿ ಕ್ಯಾಲೆಂಡರ್ ಮಾರುವವನು ಕೂಡ ಬಂದು ಎಲ್ಲಾರು ದೇವರಿಗೆ ಬೇಡ್ಕೊಳ್ಳರಿ ಎಂದು ಹೇಳುತ್ತಾನೆ.

 

`ಎಪ್ಪ ಚೊಲೋ ಮಾಡದಿ ಬಾಳ ಸಾಲಾಮಾಡಿದ್ದೆ, ಲಗೂನ ಪ್ರಳಯ ಮಾಡು ಎಂದರೆ, ಕುಡುಕನೊಬ್ಬ ಮ್ಯಾಗೂ ವ್ಯವಸ್ಥಾ ಮಾಡಬೇಕಪ್ಪಾ ದೇವಾ ಎಂದು ಬಾಟಲಿ ಹಿಡಿದು ಆಕಾಶಕ್ಕೆ ಕೇಳುತ್ತಾನೆ. ಇದರ ನಡುವೇಯೇ `ಎಣ್ಣಾ ಅಣ್ಣಿಗೆರಿ ಬುರುಡಿ ಹ್ಯಾಂಗ ಬಂದವು' ಎಂದು ಕೇಳುತ್ತಾನೆ. ಇದಕ್ಕೆ ಪ್ರತಿಯಾಗಿ ನಮ್ಮ ಬುರುಡಿನ ಹೊಂಟಾವ ಆ ಬುರಡಿ ಬಗ್ಗೆ ವಿಚಾರ ಮಾಡಕತ್ತಿಯಲ್ಲೆ ಎಂದೆನ್ನುತ್ತಾನೆ.

 

ಕೊನೆಗೆ ಎಲ್ಲರೂ ಓಂ ಅಸತೋಮ .. ಶಾಂತಿ ಶಾಂತಿ ಎಂದು ನೆಲದ ಮೇಲೆ ಮಲಗುವಾಗ ಒಬ್ಬ ಚಾದರ ಹೊತ್ತು ಮಲಗುತ್ತಾನೆ. ಮತ್ತೊಬ್ಬ ರೊಟ್ಟಿ ಗಂಟು ತಂದಿರುತ್ತಾನೆ. ನಿಗದಿತ ಸಮಯ ಮುಗಿದ ಮೇಲೆ ಯಾರು ಏಳುವುದಿಲ್ಲ. ಆದರೆ ಕುಡುಕ ಎದ್ದು ನಾನೊಬ್ಬ ಉಳಿದೇನೆ ಎಂದು ತೂರಾಡುವಾಗ ಅವರಿವರ ಕಾಲು ತುಳಿದಾಗ ಎಲ್ಲರೂ ಎದ್ದು ನಿಲ್ಲುತ್ತಾರೆ. ಭೂಕಂಪ, ಗಿಕಂಪ ಏನೂ ಆಗಿಲ್ಲ ಎಂದು ಎಲ್ಲರೂ ಕೂಗುತ್ತಾರೆ. ಮಾಯಾವಿ ಕ್ಯಾಲೆಂಡ ಮಾರುವವನ್ನು ಎಲ್ಲರೂ ಕೂಡಿ ಗದರಿಸುತ್ತಾರೆ. 

 

`ಎಲ್ಲಿವರೆಗೆ ಮೂರ್ಖರಿರುತ್ತಾರೋ ಅಲ್ಲಿತನಕ ನಾವು ಇಂತಹ ಕ್ಯಾಲೆಂಡರ್ ಮಾರುತ್ತೇವೆ. ಹೊಸ ಕ್ಯಾಲೆಂಡರ್ ಬಂದ್ರ ಅದನ್ನು ಮಾರಾಟ ಮಾಡ್ತೇವಿ' ಎಂದು ಮಾಯಾವಿ ಕ್ಯಾಲೆಂಡರ್ ಮಾರುವವನು ಹೇಳುತ್ತಾನೆ. ಆಗ ವಿಜ್ಞಾನಿ ಅಮೆರಿಕದ ನಾಸಾ ವಿಜ್ಞಾನ ಕೇಂದ್ರ ಹೇಳಿದ ಎಲ್ಲ ವಿಚಾರಗಳನ್ನು ಹಾಗೂ ವೈಜ್ಞಾನಿಕ ಸತ್ಯಗಳನ್ನು ಜನರಿಗೆ ತಿಳಿಸುತ್ತಾನೆ. 

 

ನಾಟಕದ ಮುಕ್ತಾಯಕ್ಕೆ ನಿರೂಪಕ ಬಂದು `ನಮಗೆ ಸಿಕ್ಕಿರುವ ಬದುಕೊಂದೆ ಸುಮೂರ್ಹತ ಇದನ್ನು ಉತ್ಸಾಹದಿಂದ, ಶ್ರದ್ಧೆಯಿಂದ ಕಳೆಯಬೇಕೆಂಬ' ಕುವೆಂಪು ಸಂದೇಶವನ್ನು ಜನರಿಗೆ ತಿಳಿಸಿದಾಗ ನಾಟಕ ಮುಕ್ತಾಯವಾಗುತ್ತದೆ. ಸಾಹಿತಿ ಸತೀಶ ಕುಲಕರ್ಣಿ ರಚಿಸಿದ ನಾಟಕವನ್ನು ಕಲಾ ಬಳಗದ ಕಲಾವಿದರು ಉತ್ತಮವಾಗಿ ಅಭಿನಯಿಸಿದರು. ಕೆ.ಆರ್.ಹಿರೇಮಠ ನಿರ್ದೇಶನ ಮಾಡಿದ್ದರು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry