ಶುಕ್ರವಾರ, ನವೆಂಬರ್ 15, 2019
20 °C

`ಸತ್ಯ ಮಾರ್ಗದ ಸಂಪತ್ತು ಶಾಶ್ವತ'

Published:
Updated:

ವಿಟ್ಲ: `ಮಹಿಳಾ ವಿಕಾಸದಿಂದ ಜಗತ್ತು ಪರಿವರ್ತನೆ ಸಾಧ್ಯ. ಮಕ್ಕಳಿಗೆ ಸಂಸ್ಕಾರ, ರಾಷ್ಟ್ರಪ್ರಜ್ಞೆ ಬೆಳೆಸಿ ಅವರನ್ನು ಯೋಗ್ಯ ಸತ್ಪ್ರಜೆಗಳನ್ನಾಗಿ ರೂಪಿಸುವ ನಿಟ್ಟಿನಲ್ಲಿ ಮಾತೆಯರ ಜವಾಬ್ದಾರಿ  ಮಹತ್ವದ್ದು. ಮಾತೃ ಪ್ರಧಾನ ದೇಶವಾದ ಭಾರತದ ಶ್ರೇಷ್ಠ ಸಂಸ್ಕೃತಿಗೆ ಸ್ತ್ರೀ ಮೂಲವೇ ಕಾರಣ' ಎಂದು ಒಡಿಯೂರು ಕ್ಷೇತ್ರದ ಗುರುದೇವಾನಂದ ಸ್ವಾಮೀಜಿ ಹೇಳಿದರು.ಒಡಿಯೂರು ಕ್ಷೇತ್ರದ ಜ್ಞಾನ ಮಂದಿರದಲ್ಲಿ ಭಾನುವಾರ ಶ್ರೀವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ 15ನೇ ವಾರ್ಷಿಕೋತ್ಸವದ ಅಂಗವಾಗಿ ಗುರುದೇವದತ್ತ ಸಂಸ್ಥಾನದ ವತಿಯಿಂದ ನಡೆದ ಸಾಮೂಹಿಕ ಶ್ರೀ ಸತ್ಯದತ್ತವ್ರತ ಪೂಜೆಯ ಬಳಿಕ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.`ಸತ್ಯ ಮಾರ್ಗದಿಂದ ಗಳಿಸಿದ ಸಂಪತ್ತು ಮಾತ್ರ ಶಾಶ್ವತವಾಗಿರುತ್ತದೆ. ಆಧುನಿಕ ತಂತ್ರಜ್ಞಾನ ನಮ್ಮ ಅಸ್ತಿತ್ವದ ಮೇಲೆ ದುಷ್ಪರಿಣಾಮ ತರುವ ಅಪಾಯವಿದೆ' ಎಂದು ತಿಳಿಸಿದರು.ಸದಾನಂದ ಪೆರ್ಲ ಮಾತನಾಡಿ, `ಮಹಿಳೆಯರಿಗೆ ಶಕ್ತಿ ನೀಡಿದರೆ ರಾಷ್ಟ್ರಶಕ್ತಿಯಾಗುತ್ತದೆ. ಮಹಿಳಾ ಸಬಲೀಕರಣದಿಂದ ದೇಶ ವಿಕಾಸ ಸಾಧ್ಯ, ರಾಷ್ಟ್ರಧರ್ಮ ಮತ್ತು ದೇಶೀಯತೆ ಉಳಿದು ಬೆಳೆಯುವ ನಿಟ್ಟಿನಲ್ಲಿ ಮಹಿಳೆಯರಿಗೆ ಹೊಣೆಯಿದೆ. ತಂತ್ರಜ್ಞಾನದ ನೆಪದಲ್ಲಿ ಪರಂಪರಾಗತ ಜೀವನ ಪದ್ಧತಿ ಮರೆಯಾಗಬಾರದು' ಎಂದು ತಿಳಿಸಿದರು.`ಮನೆಯಲ್ಲಿ ಮಹಿಳೆಯರು ಎಲ್ಲಾ ವಿಧದಲ್ಲಿ ಸಮರ್ಪಕವಾಗಿದ್ದರೆ ಆ ಮನೆ ಬೆಳಗುತ್ತದೆ. ಮಾತೆಯರು ತಮ್ಮ ಜೀವನ ಪಥದ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ರಾಷ್ಟ್ರ ಸೇವಿಕಾ ಸಮಿತಿಯ ದಕ್ಷಿಣ ಪ್ರಾಂತ ಸಂಪರ್ಕ ಪ್ರಮುಖ್ ಡಾ. ಕಮಲಾ ಪ್ರಭಾಕರ್ ಭಟ್ ಕಲ್ಲಡ್ಕ, ಸಾಧ್ವಿ ಮಾತಾನಂದಮಯೀ, ಶ್ರೀ ಗುರುದೇವ ಗ್ರಾಮವಿಕಾಸ ಯೋಜನೆಯ ಪ್ರಧಾನ ಸಂಚಾಲಕ ಟಿ. ತಾರಾನಾಥ ಕೊಟ್ಟಾರಿ ಭಾಗವಹಿಸಿದ್ದರು. ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಸರ್ವಾಣಿ ಶೆಟ್ಟಿ ಉಪಸ್ಥಿತರಿದ್ದರು.ರೇಣುಕಾ ಎಸ್.ರೈ ಪ್ರಾರ್ಥನೆ ಹಾಡಿದರು. ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಸಾಯೀಶ್ವರಿ ಸ್ವಾಗತಿಸಿದರು. ಶ್ರೀಲತಾ ಶೆಟ್ಟಿ ವರದಿ ಮಂಡಿಸಿದರು. ಲಕ್ಷ್ಮೀ ಎಸ್.ಭಟ್ ವಂದಿಸಿದರು. ಕಾರ್ಯಕ್ರಮವನ್ನು ಆಶಾ ಭಾಸ್ಕರ ಶೆಟ್ಟಿ ನಿರೂಪಿಸಿದರು.

ಪ್ರತಿಕ್ರಿಯಿಸಿ (+)