ಸತ್ಯ ಹೇಳಲು ಯಾರಲ್ಲೂ ಭಯ ಬೇಡ

7
ಅಭಿನಂದನಾ ಸಮಾರಂಭದಲ್ಲಿ ಸುಮಿತ್ರಾಗಾಂಧಿ ಕುಲಕರ್ಣಿ ಅಭಿಮತ

ಸತ್ಯ ಹೇಳಲು ಯಾರಲ್ಲೂ ಭಯ ಬೇಡ

Published:
Updated:

ಚಿತ್ರದುರ್ಗ: ಸತ್ಯ ಮತ್ತು ಅಹಿಂಸೆಯನ್ನು ಕ್ಲಿಷ್ಟ ಭಾವನೆಯಿಂದ ನೋಡಬೇಡಿ, ಸದಾ ಪ್ರಯತ್ನವಾದಿ ಆಗಿರಬೇಕು, ಶಿಸ್ತಿನಿಂದ ಬದುಕು ಸಾಗಿಸಬೇಕು, ಸಮಾಜದ ಬಗ್ಗೆ ಸದಾ ಜಾಗೃತರಾಗಿ ಚಿಂತನೆ ಮಾಡಬೇಕು...- ಇವು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಮೊಮ್ಮಗಳು ಸುಮಿತ್ರಾ ಗಾಂಧಿ ಕುಲಕರ್ಣಿ ನೀಡಿದ ಸಂದೇಶಗಳು.ನಗರದಲ್ಲಿ ಬುಧವಾರ ಬಸವಕೇಂದ್ರ ಮತ್ತು ಮುರುಘಾಮಠದ ವತಿಯಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಸತ್ಯ ಸದಾ ಕಠೋರ. ಆದರೆ ಸತ್ಯ ಹೇಳುವುದು ಕಠಿಣ ಅಲ್ಲ. ಸತ್ಯ ಹೇಳುವಾಗ ಭಯ ಬೇಡ ಎಂದು ಸಲಹೆ ನೀಡಿದರು.83 ವರ್ಷದ ಹಿರಿಯ ಜೀವ ಸುಮಿತ್ರಾ ಗಾಂಧಿ ಕುಲಕರ್ಣಿ ತಮ್ಮ ಅಭಿನಂದನಾ ಭಾಷಣದಲ್ಲಿ ಗಾಂಧೀಜಿಯ ಸಂದೇಶಗಳನ್ನು ಯುವಪೀಳಿಗೆಗೆ ನೀಡುವ ಮೂಲಕ ದೇಶ ಕಟ್ಟುವ ಚಿಂತನೆಯನ್ನು ಮುಂದಿಟ್ಟರು.ತಪ್ಪು ಮಾಡುವುದು ಸಹಜ. ಆದರೆ ಅದನ್ನು ಮುಚ್ಚಿಟ್ಟುಕೊಳ್ಳುವುದು ಇನ್ನೂ ದೊಡ್ಡ ತಪ್ಪು. ತಪ್ಪು ಮಾಡಿ ಮುಚ್ಚಿಟ್ಟುಕೊಳ್ಳುವುದು ಸಮಾಜಕ್ಕೆ ದ್ರೋಹ ಮಾಡಿದಂತೆ. ಮಾಡಿದ ತಪ್ಪುಗಳನ್ನು ಮುಚ್ಚಿಟ್ಟುಕೊಳ್ಳುತ್ತಾ ಹೋಗುವುದರಿಂದ ದೌರ್ಬಲ್ಯಕ್ಕೆ ಒಳಗಾಗಿ ಹೃದಯದಲ್ಲಿ ಭಯ ಮನೆ ಮಾಡುತ್ತದೆ. ಈ ಮಾತುಗಳನ್ನೇ ಮಹಾತ್ಮಾ ಗಾಂಧೀಜಿ ಹೇಳಿದ್ದರು ಎಂದು ನುಡಿದರು.ಯಾರು ಮನಸ್ಸಿನಿಂದ, ಹೃದಯದಿಂದ, ಬುದ್ಧಿಪೂರ್ವಕವಾಗಿ ಸಮಾಜ ಸೇವೆ ಮಾಡುತ್ತಾರೋ ಅವರೇ ವಾಸ್ತವವಾಗಿ ಗಾಂಧೀಜಿಯ ಉತ್ತರಾಧಿಕಾರಿಯಾಗುತ್ತಾರೆ. ಕೇವಲ ಘೋಷಣೆಗಳಿಂದ ಗಾಂಧಿವಾದ ಉಳಿಯುವುದಿಲ್ಲ. ಗಾಂಧೀಜಿ ಪ್ರತಿಪಾದಿಸಿದ ಸತ್ಯ, ಅಹಿಂಸೆ, ಸೇವೆ ಉದಾತ್ತ ಧ್ಯೇಯಗಳ ಪಾಲನೆಯಿಂದ ಮಾತ್ರ ಗಾಂಧಿವಾದ ಉಳಿಸಲು ಸಾಧ್ಯ ಎಂದು ಪ್ರತಿಪಾದಿಸಿದರು.ಸೀತಾರಾಮ ಕೇಸರಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ನಾನು ಕಾಂಗ್ರೆಸ್‌ನಲ್ಲಿದ್ದೆ. ಆಗ ಸೀತಾರಾಮ ಕೇಸರಿ ಅವರು, ಭಾಷಣ, ಘೋಷಣೆಗಳಿಂದ ಗಾಂಧಿವಾದ ಉಳಿಸಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದರು. ದೆಹಲಿ ರಾಜಕೀಯ, ರಾಜಕಾರಣಿಗಳು ಮತ್ತು ಅವರ ರಾಜನೀತಿಗಳು ಏನೇ ಅಗಿರಲಿ. ಜನರು ಜಾಗೃತರಾದಾಗ ಅವರಿಂದ ಸಮಾಜವನ್ನು ತಪ್ಪುದಾರಿಗೆ ಎಳೆಯಲು ಸಾಧ್ಯವಿಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ಪ್ರಯತ್ನವಾದಿ ಆಗಿರಬೇಕು ಎಂದು ಹೇಳಿದರು.ಮನೆಯಲ್ಲಿ ಗಾಂಧೀಜಿಯನ್ನು ಎಲ್ಲರೂ ಬಾಪೂ ಎಂದು ಕರೆಯುತ್ತಿದ್ದರು. ಮೊಮ್ಮಕ್ಕಳಾದ ನಾವು ಬಾಪೂಜಿ ಎಂದು ಕರೆಯುತ್ತಿದ್ದೆವು. ಈಗ ಇಡೀ ದೇಶ ಅವರನ್ನು ಬಾಪೂಜಿ ಎನ್ನುತ್ತಿದೆ. ಜಗತ್ತು ಅವರನ್ನು ಆರಾಧಿಸುತ್ತದೆ. ಇಂದು ಚಿತ್ರದುರ್ಗದಲ್ಲಿ ತಾವು ಗಾಂಧೀಜಿ ಪ್ರತಿಬಿಂಬ ಕಾಣುತ್ತಿದ್ದೇವೆ. ದಕ್ಷಿಣ ಭಾರತ ಸಾಂಸ್ಕೃತಿಕವಾಗಿ ಗಟ್ಟಿಯಾದ ನೆಲ. ಇಲ್ಲಿ ಆಡಂಬರ ಇಲ್ಲ. ಆದರೆ, ಉತ್ತರ ಭಾರತದಲ್ಲಿ  ತೋರಿಕೆಯೇ ಹೆಚ್ಚು ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು.ಅಧ್ಯಕ್ಷತೆ ವಹಿಸಿದ್ದ ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಗಾಂಧೀಜಿ ಮೊಮ್ಮಗಳು ಸುಮಿತ್ರಾ ಕುಲಕರ್ಣಿ ಮತ್ತು ಮಕ್ಕಳು ಸರಳ ಜೀವನ ನಡೆಸುತ್ತಿದ್ದಾರೆ. ಗಾಂಧಿವಾದ ಎನ್ನುವ ಸಮುದ್ರದಲ್ಲಿ ಅವರ ಮೊಮ್ಮಗಳು ಸುಮಿತ್ರಾಗಾಂಧಿ  ಒಂದು ನದಿಯಾಗಿ, ಅಲೆಯಾಗಿ, ಶಕ್ತಿಯಾಗಿ ನಮ್ಮ ನಡುವೆ ಇದ್ದಾರೆ. ಗಾಂಧಿವಾದವನ್ನು ಎಂದೂ ತಮ್ಮ ವೈಯಕ್ತಿಕ ಪ್ರಗತಿಗೆ ಬಳಸಿಕೊಂಡಿಲ್ಲ ಎಂದು ನುಡಿದರು.ಸುಮಿತ್ರಾ ಅವರು ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಸುಮಿತ್ರಾ ಅವರ ಮಗ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದುರೂ1 ಕೋಟಿ ಸಂಬಳ ಪಡೆಯುತ್ತಿದ್ದಾರೆ. ಜತೆಗೆ, ಸೊಸೆಯೂರೂ 25 ಲಕ್ಷ ಸಂಬಳ ಪಡೆಯುವ ಉದ್ಯೋಗದಲ್ಲಿದ್ದಾರೆ. ಆದರೆ, ಯಾವುದೇ ಆಡಂಬರವಿಲ್ಲದೆ ಸರಳವಾಗಿ ಬದುಕು ಕಟ್ಟಿಕೊಂಡಿರುವುದನ್ನು ನೋಡಿದರೆ ಇಂತವರು ಜಗತ್ತಿನಲ್ಲಿ ಇದ್ದಾರೆಯೇ ಎನಿಸುತ್ತದೆ ಎಂದು ಬಣ್ಣಿಸಿದರು.ಇವರು ಸದಾ ಹಸನ್ಮುಖಿ,  ಮಾತೃ ಹೃದಯಿ. ತಾಯಿ ಪ್ರೀತಿಯಿಂದ ವಂಚಿತನಾದ ನನಗೆ ಅವರಿಂದ ತಾಯಿ ಪ್ರೀತಿ ದೊರೆತಿದ್ದು ಇದು ನನ್ನ ಸೌಭಾಗ್ಯ ಎಂದರು.ಮುರುಘಾಮಠದಲ್ಲಿರುವ ಅನಾಥ ಮಕ್ಕಳನ್ನು ಪ್ರತಿ ವರ್ಷ ಪ್ರವಾಸ ಕರೆದುಕೊಂಡು ಹೋಗುತ್ತೇವೆ. ಈ ಬಾರಿ ಕೇರಳ ಪ್ರವಾಸ ಆಯೋಜಿಸಿರುವ ವಿಷಯ ತಿಳಿದ ಸುಮತ್ರಾಗಾಂಧಿ  ಅವರು ಅನಾಥ ಮಕ್ಕಳ ಪ್ರವಾಸಕ್ಕಾಗಿ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.ಎಸ್‌ಜೆಎಂ ವಿದ್ಯಾಪೀಠ ಕಾರ್ಯದರ್ಶಿ ಪ್ರೊ.ಎಸ್.ಎಚ್. ಪಟೇಲ್, ಎಸ್‌ಜೆಎಂ ವಿದ್ಯಾಪೀಠ ಜಂಟಿ ಕಾರ್ಯದರ್ಶಿ ಕೆ.ವಿ. ಪ್ರಭಾಕರ್, ರಾಚಪ್ಪ ಹೋಳೂರು, ನಗರಸಭೆ ಅಧ್ಯಕ್ಷೆ ಸುನೀತಾ ಮಲ್ಲಿಕಾರ್ಜುನ್,  ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ, ಪ್ರೊ. ಚಿತ್ರಶೇಖರ್ ಉಪಸ್ಥಿತರಿದ್ದರು. ಕೆ. ವೆಂಕಣ್ಣಾಚಾರ್ ಕಾರ್ಯಕ್ರಮ ನಿರೂಪಿಸಿದರು.ಶಿವಮೂರ್ತಿ ಮುರುಘಾ ಶರಣರು ರಚಿಸಿದ ಭಾವೈಕ್ಯತೆಯ ನೃತ್ಯರೂಪಕವನ್ನು ಎಸ್‌ಜೆಎಂ ವಿದ್ಯಾಪೀಠದ ಮಕ್ಕಳು ಸಭೆಯಲ್ಲಿ ಪ್ರದರ್ಶಿಸಿದ್ದು  ಗಮನ ಸೆಳೆಯಿತು.ಎಲ್ಲರಂತೆ ನಮ್ಮಜ್ಜ

ಎಲ್ಲ ಅಜ್ಜಂದಿರು ಹೇಗಿದ್ದರು ಹಾಗೆಯೇ ನನ್ನ ಅಜ್ಜ ಗಾಂಧೀಜಿ ಇದ್ದರು. ಇದರಲ್ಲಿ ವಿಶೇಷವೇನು ಇಲ್ಲ. ನಮಗೆ ಎಲ್ಲ ರೀತಿಯ ಸಂಸ್ಕಾರ ನೀಡಿದರು ಎಂದು ಸುಮಿತ್ರಾಗಾಂಧಿ ಕುಲಕರ್ಣಿ ನುಡಿದರು.ಅಭಿನಂದನೆ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಗಾಂಧೀಜಿ ಜತೆಗೆ ಕಳೆದ ನೆನಪುಗಳನ್ನು ಹಂಚಿಕೊಂಡರು.

ರಾಷ್ಟ್ರದ ಕೆಲಸ ಕಾರ್ಯಗಳ ನಡುವೆ ಮಕ್ಕಳು, ಮೊಮ್ಮಕ್ಕಳ ಬಗ್ಗೆ ಗಾಂಧೀಜಿ ಅಪಾರ ಕಾಳಜಿವಹಿಸುತ್ತಿದ್ದರು. ಊಟವಾದ ಮೇಲೆ ಕೈತೊಳೆಯುವುದು ಸೇರಿದಂತೆ ಪ್ರತಿಯೊಂದು ವಿಷಯಗಳ ಬಗ್ಗೆ ಮುತುವರ್ಜಿ ವಹಿಸುತ್ತಿದ್ದರು. ನಡೆ, ನುಡಿಗಳ ಬಗ್ಗೆ ಸದಾ ಎಚ್ಚರಿಕೆ ಮಾತುಗಳನ್ನು ಹೇಳುತ್ತಿದ್ದರು ಎಂದು ತಾತ ಗಾಂಧೀಜಿ ಬಗ್ಗೆ ನೆನಪಿನ ಸುರುಳಿಯನ್ನು ಬಿಚ್ಚಿಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry