ಸತ್ವಯುತವಾಗಿ ಬರೆಯಲು ಸಲಹೆ

ಮಂಗಳವಾರ, ಜೂಲೈ 23, 2019
20 °C

ಸತ್ವಯುತವಾಗಿ ಬರೆಯಲು ಸಲಹೆ

Published:
Updated:

ಬೆಳಗಾವಿ: `ಎಷ್ಟು ಬರೆದಿದ್ದೇವೆ ಎನ್ನುವುದು ಮುಖ್ಯವಲ್ಲ, ಏನು ಬರೆದಿದ್ದೇವೆ ಎನ್ನುವುದು ಮುಖ್ಯ. ಕಡಿಮೆ ಬರೆದರೂ ಸತ್ವಯುತವಾದದ್ದನ್ನು ಬರೆಯಬೇಕು. ಆಗಲೇ ಬರವಣಿಗೆ ಸಾರ್ಥಕತೆ ಕಾಣುತ್ತದೆ~ ಎಂದು ಹಿರಿಯ ಸಾಹಿತಿ ಚಂದ್ರಕಾಂತ ಪೋಕಳೆ ಸಲಹೆ ನೀಡಿದರು.ನಗರದಲ್ಲಿ ಭಾನುವಾರ ಉತ್ತರ ಕರ್ನಾಟಕ ಲೇಖಕಿಯರ ಸಂಘ ಹಾಗೂ ಬೆಳಗಾವಿ ಲೇಖಕಿಯರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ `ಆಧುನಿಕೋತ್ತರ ಕನ್ನಡ ಮರಾಠಿ ಮಹಿಳಾ ಸಾಹಿತ್ಯ~ ಕುರಿತು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.`ವ್ಯವಸ್ಥೆಯ ಮೂಲವನ್ನು ಅಲುಗಾಡಿಸಿದಾಗ ಮಾತ್ರ ಸತ್ಯ ಹೊರಬರುತ್ತದೆ. ಸತ್ಯದಿಂದ ಕೂಡಿದ ಬರವಣಿಗೆ ಶಾಶ್ವತವಾಗಿರುತ್ತದೆ. ಅಧ್ಯಯನಶೀಲ ಬರವಣಿಗೆ ಇಂದಿನ ಅವಶ್ಯವಾಗಿದೆ~ ಎಂದು ಅವರು ತಿಳಿಸಿದರು.

`ಬೆಳಗಾವಿ ಲೇಖಕಿಯರಿಗೆ ಸರಿಯಾದ ವೇದಿಕೆ ಸಿಗುತ್ತಿಲ್ಲ. ವಿಮರ್ಶೆಯೂ ಆಗುತ್ತಿಲ್ಲ. ಅವರ ಕೃತಿಗಳ ಪ್ರಾಮಾಣಿಕ ವಿಮರ್ಶೆಯಾಗಬೇಕಿದೆ~ ಎಂದು ಅವರು ಅಭಿಪ್ರಾಯಪಟ್ಟರು.ಇತ್ತೀಚಿನ ವರ್ಷಗಳಲ್ಲಿ ಕನ್ನಡ ಹಾಗೂ ಮರಾಠಿಯಲ್ಲಿ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿರುವ ಮಹಿಳಾ ಸಾಹಿತಿಗಳು ಹಾಗೂ ಅವರು ರಚಿಸಿದ ಕೃತಿಗಳ ಬಗೆಗೆ ಅವರು ಸವಿಸ್ತಾರವಾಗಿ ವಿವರಿಸಿದರು.`ಮರಾಠಿಯಲ್ಲಿ ಲೇಖಕಿಯರು ಆತ್ಮಕಥೆಗಳನ್ನು ಬರೆದಿದ್ದಾರೆ. ಆದರೆ ಕನ್ನಡದಲ್ಲಿ ಅಂತಹ ಕೃತಿಗಳ ಕೊರತೆ ಇದೆ. ಕನ್ನಡದಲ್ಲಿ ದಲಿತ ಮಹಿಳೆಯರ ಸಂವೇದನೆ ಬಿಂಬಿಸುವ ಕಥೆ-ಕಾದಂಬರಿಗಳು ಬಂದಿಲ್ಲ. ಇವುಗಳ ಬಗೆಗೆ ಲೇಖಕಿಯರು ಗಮನ ಹರಿಸಬೇಕಿದೆ~ ಎಂದು ಅವರು ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿ ಮಾಜಿ ಸಚಿವೆ ಲೀಲಾದೇವಿ ಪ್ರಸಾದ, `ಪುರುಷ ಪ್ರಧಾನ ಸಮಾಜದಲ್ಲಿ ಲೇಖಕಿಯರಿಗೆ ಸಿಗಬೇಕಾದಷ್ಟು ಮಾನ್ಯತೆ ಸಿಕ್ಕಿಲ್ಲ~ ಎಂದು ವಿಷಾದ ವ್ಯಕ್ತಪಡಿಸಿದರು.`ಲೇಖಕಿಯರಿಗೆ ಇಲ್ಲಿಯವರೆಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿಲ್ಲ. ಯೋಗ್ಯ ಲೇಖಕಿಯರು ಇಲ್ಲವೇ ? ಲಾಬಿಗೆ ಮಾತ್ರ ಪ್ರಶಸ್ತಿ ಸಿಗುತ್ತದೆಯೇ~ ಎಂದು ಅವರು ಪ್ರಶ್ನಿಸಿದರು.`ಇಲ್ಲಿಯವರೆಗೂ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನ ಮಹಿಳೆಯರಿಗೆ ಸಿಕ್ಕಿಲ್ಲ. ಈ ಕೊರಗು ಲೇಖಕಿಯರನ್ನು ಕಾಡುತ್ತಿದೆ. ಈ ಬಗೆಗೆ ಯಾರೂ ಏಕೆ ಚಿಂತನೆ ಮಾಡುತ್ತಿಲ್ಲ. ಕೇಳದ ಹೊರತು ಯಾರೂ ಕೊಡುವುದಿಲ್ಲ.  ಲೇಖಕಿಯರು ಸಂಘಟಿತರಾಗಬೇಕು~ ಎಂದು ಅವರು ಕರೆ ನೀಡಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಸಾಹಿತಿ ಡಾ. ಹನುಮಾಕ್ಷಿ ಗೋಗಿ, `ಲೇಖಕಿಯರು ಸಂಘಟಿತರಾಗಿ ಕೆಲಸ ಮಾಡಬೇಕು. ವಿಚಾರ ಹಾಗೂ ಸಾಹಿತ್ಯದಲ್ಲಿ ಮರಾಠಿ ಲೇಖಕಿಯರು ನಮಗಿಂತ ಮುಂದೆ ಇದ್ದಾರೆ ಎಂಬುದನ್ನು ಒಪ್ಪಿಕೊಳ್ಳಬೇಕು~ ಎಂದರು. ಸಂಘದ ಅಧ್ಯಕ್ಷೆ ನೀಲಗಂಗಾ ಚರಂತಿಮಠ ಅಧ್ಯಕ್ಷತೆ ವಹಿಸಿದ್ದರು. ಸರಿತಾ ಕುಲಕರ್ಣಿ, ಸುಮಾ ಕಿತ್ತೂರು, ರಂಜನಾ ನಾಯಕ, ದೀಪಿಕಾ ಚಾಟೆ ಮತ್ತಿತರರು ಹಾಜರಿದ್ದರು. ನಯನಾ ಗಿರಿಗೌಡರ ಪ್ರಾರ್ಥಿಸಿದರು. ಪದ್ಮಾ ಕುಲಕರ್ಣಿ ಪರಿಚಯಿಸಿದರು. ಡಾ.ಗುರುದೇವಿ ಹುಲೆಪ್ಪನವರಮಠ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry