ಸದನದಲ್ಲಿ ಸೋನಿಯಾ `ಆಕ್ರಮಣ'

7
ಲೋಕಸಭೆಯಲ್ಲಿ ಎಸ್‌ಸಿ, ಎಸ್‌ಟಿ ಬಡ್ತಿ ಮೀಸಲು ಮಸೂದೆ ಮಂಡನೆ

ಸದನದಲ್ಲಿ ಸೋನಿಯಾ `ಆಕ್ರಮಣ'

Published:
Updated:

ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ಕಲ್ಪಿಸುವ ಮಸೂದೆಯನ್ನು ಸಚಿವರಿಂದ ಕಸಿದುಕೊಂಡು ಹರಿಯಲು ಯತ್ನಿಸಿದ ಸಮಾಜವಾದಿ ಪಕ್ಷದ ಸದಸ್ಯನ ಮೇಲೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಅವರ ಪಕ್ಷದ ಕೆಲವು ಸದಸ್ಯರು ಎರಗಿದ ಅನಿರೀಕ್ಷಿತ ಘಟನೆ ಲೋಕಸಭೆಯಲ್ಲಿ ಬುಧವಾರ ಮಧ್ಯಾಹ್ನ ನಡೆಯಿತು. ಇದರಿಂದ ಇಡೀ ಸದನ ಬೆರಗಾಯಿತು.ಸಚಿವ ನಾರಾಯಣಸ್ವಾಮಿ ಬುಧವಾರ ಸದನದಲ್ಲಿ ಬಡ್ತಿ ಮೀಸಲು ಮಸೂದೆ ಮಂಡಿಸುವ ವೇಳೆಯಲ್ಲಿ ಅವರತ್ತ ದಿಢೀರನೆ ನುಗ್ಗಿದ ಸಮಾಜವಾದಿ ಪಕ್ಷದ ಸದಸ್ಯ ಯಶವೀರ್‌ಸಿಂಗ್ ಮಸೂದೆ ಪ್ರತಿ ಕಿತ್ತುಕೊಂಡು ಸ್ಪೀಕರ್ ಪೀಠದ ಮುಂದಿನ ಆವರಣಕ್ಕೆ ನುಗ್ಗಿದರು. ಆಡಳಿತ ಪಕ್ಷದ ಕಡೆ ಮುಂದಿನ ಸಾಲಿನಲ್ಲಿ ಕುಳಿತಿದ್ದ ಸೋನಿಯಾ ಗಾಂಧಿ ತಮ್ಮ ಸ್ಥಾನದಿಂದ ಜಿಗಿದು ಸಮಾಜವಾದಿ ಪಕ್ಷದ ಸದಸ್ಯನ ಕೈಹಿಡಿದು ಪ್ರತಿಯನ್ನು ಮರಳಿ ಕಿತ್ತುಕೊಳ್ಳಲು ಮುಂದಾದರು. ಕಾಂಗ್ರೆಸ್‌ನ ಕೆಲ ಸದಸ್ಯರು ತಮ್ಮ ನಾಯಕಿ ಬೆಂಬಲಕ್ಕೆ ನಿಂತರು. ಇದರಿಂದ ಸದನದಲ್ಲಿ ಕೈಕೈ ಮಿಲಾಯಿಸಿದ ಪ್ರಸಂಗ ನಡೆಯಿತು.ಯಶವೀರ್‌ಸಿಂಗ್ ತಕ್ಷಣ ಮಸೂದೆ ಪ್ರತಿಯನ್ನು ತಮ್ಮ ಸಹೊದ್ಯೋಗಿ ನೀರಜ್ ಶೇಖರ್ ಅವರಿಗೆ ಹಸ್ತಾಂತರಿಸುವಾಗ ಕೈತಪ್ಪಿ ಅದು ಕೆಳಗೆ ಬಿತ್ತು. ಸಾಮಾನ್ಯವಾಗಿ ಮೊದಲ ಸಾಲಿನಲ್ಲಿ ಕೂರುವ ಸೋನಿಯಾ ಸದನದಲ್ಲಿ ಏನೇ ಗದ್ದಲ- ಪ್ರತಿಭಟನೆ ನಡೆದರೂ ಸಂಯಮದಿಂದ ನಡೆದುಕೊಳ್ಳುತ್ತಾರೆ. ಆದರೆ, ಬುಧವಾರ ಸ್ವಲ್ಪ ಭಿನ್ನವಾಗಿ ನಡೆದುಕೊಂಡರು. ಆಕ್ರಮಣಕಾರಿಯಾಗಿ ವರ್ತಿಸಿದರು. ಕಾಂಗ್ರೆಸ್ ಸದಸ್ಯರಾದ ಕೆ.ಬಪ್ಪಿರಾಜು ಮತ್ತು ವಿಲಾಸ್ ಮುತ್ತೆಂವಾರ್ ತಮ್ಮ ನಾಯಕಿಗೆ ಸಾಥ್ ನೀಡಿದರು.ಈ ಘಟನೆ ನಡೆದಾಗ ಮುಲಾಯಂಸಿಂಗ್ ನೇತೃತ್ವದಲ್ಲಿ ಸಮಾಜವಾದಿ ಪಕ್ಷದ ಸದಸ್ಯರು ಸ್ಪೀಕರ್ ಪೀಠದ ಮುಂದಿನ ಆವರಣದಲ್ಲಿ ಬಡ್ತಿ ಮೀಸಲು ಮಸೂದೆ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸುತ್ತಿದ್ದರು. ಅನಿರೀಕ್ಷಿತ ಘಟನೆ ಕಾಂಗ್ರೆಸ್ ಹಾಗೂ ಎಸ್‌ಪಿ ಸದಸ್ಯರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು. ಆತಂಕಕ್ಕೊಳಗಾದ ಸ್ಪೀಕರ್ ಮೀರಾ ಕುಮಾರ್ ಕಲಾಪವನ್ನು ಗುರುವಾರಕ್ಕೆ ಮುಂದೂಡಿದರು.ಅಪಮಾನ: ಅತ್ಯಂತ ಸಂಕಷ್ಟದ ಸಂದರ್ಭಗಳಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಬೆಂಬಲಕ್ಕೆ ನಿಂತಿರುವ ಸಮಾಜವಾದಿ ಪಕ್ಷ ಮೊದಲ ಸಲ ಸಂಸತ್ತಿನ ಹೊರಗೆ ಮಿತ್ರ ಪಕ್ಷದ ಮೇಲೆ ಕೆಂಡ ಕಾರಿತು. ತಮ್ಮ ಪಕ್ಷದ ಸದಸ್ಯನ ಮೇಲೆ ಹಲ್ಲೆ ಮಾಡಿ ಅಪಮಾನ ಮಾಡಲಾಗಿದೆ ಎಂದು ಮುಲಾಯಂಸಿಂಗ್ ಯಾದವ್ ಆರೋಪಿಸಿದರು. `ಬಡ್ತಿ ಮೀಸಲು ಮಸೂದೆ ಪ್ರತಿ ಕಿತ್ತುಕೊಳ್ಳಲು ಎಸ್‌ಪಿ ದಲಿತ ಸಂಸದನನ್ನು ಬಳಸಿಕೊಂಡಿದೆ. ಇಡೀ ಘಟನೆ ಪೂರ್ವ ಯೋಜಿತ' ಎಂದು ಕಾಂಗ್ರೆಸ್ ಪ್ರತಿಯಾಗಿ ದೂರಿತು. ಆದರೆ, ತಮ್ಮ ಮೇಲಿನ ಆರೋಪ ನಿರಾಧಾರ ಎಂದು ಮುಲಾಯಂ ಸಿಂಗ್ ನಿರಾಕರಿಸಿದರು.ಬಡ್ತಿ ಮೀಸಲು ಮಸೂದೆ ವಿರುದ್ಧ ಹೋರಾಟ ಮುಂದುವರಿಯಲಿದೆ. ಇದೊಂದು ಸಂವಿಧಾನ ವಿರೋಧಿ ಮಸೂದೆಯಾಗಿದ್ದು, ಕಾಂಗ್ರೆಸ್ ಬಲವಂತವಾಗಿ ಅಂಗೀಕರಿಸಲು ಹೊರಟಿದೆ. ಕಾಂಗ್ರೆಸ್ ತಮ್ಮ ಮೇಲೆ ಎಲ್ಲ ರೀತಿಯ ಒತ್ತಡ ಹಾಕಲು ಪ್ರಯತ್ನಿಸುತ್ತಿದೆ. ಯಾವುದೇ ಒತ್ತಡಕ್ಕೂ ಮಣಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಕಾಂಗ್ರೆಸ್ ಜನರ ಬಳಿ ಹೋದಾಗ ಇದರ ಪರಿಣಾಮಗಳೇನು ಎಂದು ಅರಿವಾಗಲಿದೆ ಎಂದು ಎಚ್ಚರಿಸಿದರು.ಸಮಾಜವಾದಿ ಪಕ್ಷದ ಸದಸ್ಯ ಯಶವೀರಸಿಂಗ್ ಘಟನೆ ಕುರಿತು ಏನನ್ನೂ ಹೇಳಲು ಬಯಸಲಿಲ್ಲ. ಆದರೆ, ಸದನದೊಳಗೆ ಹಿಂಸಾಚಾರ ನಡೆಯಿತು ಎಂದರು. ವಿಲಾಸ್ ಮುತ್ತೆಂವಾರ್ ಅವರು ಯಶವೀರ್‌ಸಿಂಗ್ ಮೇಲೆ ಹಲ್ಲೆ ಮಾಡಿದರು ಎನ್ನುವ ಸಂಗತಿಯನ್ನು ನಿರಾಕರಿಸಿದರು.ಶಿರೋಮಣಿ ಅಕಾಲಿದಳದ ಸದಸ್ಯೆ ಹರಸಿಮ್ರತ್ ಕೌರ್ ಘಟನೆಯನ್ನು ಖಂಡಿಸಿದರು. ಕಾಂಗ್ರೆಸ್ ಅಧ್ಯಕ್ಷರು ಸಮಾಜವಾದಿ ಪಕ್ಷದ ಸದಸ್ಯನ ಜತೆ ಹಾಗೆ ವರ್ತಿಸಬಾರದಿತ್ತು ಎಂದರು. `ಒಬ್ಬರು ಮತ್ತೊಬ್ಬ ಸದಸ್ಯರ ಕಾಲರ್ ಹಿಡಿದಿದ್ದು, ಇನ್ನೊಬ್ಬರು ಅವರಿಗೆ ಗುದ್ದುವುದನ್ನು ನಾನು ಮೊದಲ ಸಲ ಸದನದಲ್ಲಿ ನೋಡಿದೆ. ಈ ದೃಶ್ಯಕ್ಕೆ ಚಾನಲ್‌ನಲ್ಲಿ ಕತ್ತರಿ ಹಾಕಲಾಗಿದೆ' ಎಂದು ಕೌರ್ ಆರೋಪಿಸಿದರು.ಕಾಂಗ್ರೆಸ್ ಸದಸ್ಯ ಹಾಗೂ ಪರಿಶಿಷ್ಟ ಜಾತಿ ಆಯೋಗದ ಅಧ್ಯಕ್ಷ ಪಿ.ಎಲ್. ಪುನಿಯ, ಸಮಾಜವಾದಿ ಪಕ್ಷವನ್ನು ದಲಿತ ವಿರೋಧಿ ಎಂದು ಕರೆದರು. ಇದೊಂದು ನಾಚಿಕೆಗೇಡಿನ ಸಂಗತಿ. ಪೂರ್ವಯೋಜಿತ ಸಂಚು ಎಂದು ಜರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry