ಶನಿವಾರ, ಜೂನ್ 19, 2021
27 °C

ಸದನ ಸ್ವಾರಸ್ಯ....

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಮದುವೆಯಾಗದ ಹೆಂಗಸರು...~

ಬೆಂಗಳೂರು: `ಮದುವೆಯಾಗದ ಹೆಂಗಸರೇ ಹಾಗೆ.... ಬೇಕಾದರೆ ಮಮತಾ ಬ್ಯಾನರ್ಜಿ, ಮಾಯಾವತಿ ಅವರನ್ನೇ ನೋಡಿ~- ಹೀಗೆ ಹೇಳಿದ್ದು ಸಣ್ಣ ನೀರಾವರಿ ಸಚಿವ ಗೋವಿಂದ ಕಾರಜೋಳ.ವಿಧಾನಸಭೆಯಲ್ಲಿ ಕಾವೇರಿ ನದಿ ನೀರು ಹಂಚಿಕೆ ಕುರಿತು ತಮಿಳುನಾಡಿನ ಇತ್ತೀಚಿನ ತಗಾದೆ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಆ ರಾಜ್ಯದ ಮುಖ್ಯಮಂತ್ರಿ ಜಯಲಲಿತಾ ವಿರುದ್ಧ ಸೋಮವಾರ ವಾಗ್ದಾಳಿ ನಡೆಸಿದರು.ಆ ಸಂದರ್ಭದಲ್ಲಿ ಮಧ್ಯ ಪ್ರವೇಶ ಮಾಡಿದ ಗೋವಿಂದ ಕಾರಜೋಳ ಅವರು `ಮದುವೆಯಾಗದ ಹೆಂಗಸರೇ ಹಾಗೆ. ಅವರು ಒಂದು ರೀತಿ ಹಟ ಸಾಧಿಸುತ್ತಾರೆ. ವಿನಾಕಾರಣ ತಗಾದೆ ತೆಗೆಯುತ್ತಾರೆ. ಅಂತಹವರ ಸಾಲಿನಲ್ಲಿ ಜಯಲಲಿತಾ ಮಾತ್ರವಲ್ಲ, ಮಮತಾ ಬ್ಯಾನರ್ಜಿ, ಮಾಯಾವತಿ ಕೂಡ ಸೇರುತ್ತಾರೆ~ ಎಂದು ಚಟಾಕಿ ಹಾರಿಸಿದರು.ಇದಕ್ಕೆ ಧ್ವನಿಗೂಡಿಸಿದ ಸಿದ್ದರಾಮಯ್ಯ `ಜಯಲಲಿತಾ ಅವರ ವರ್ತನೆ ನೋಡಿದರೆ ನನಗೂ ಹಾಗೆ ಅನಿಸುತ್ತದೆ. ಅವರು ಯಾವುದೋ ರೋಗದಿಂದ ಬಳಲುತ್ತಿರಬಹುದು ಎಂದು ಅನಿಸುತ್ತದೆ~ ಎಂದರು.`ಜಯಲಲಿತಾ ಕರ್ನಾಟಕದವರೇ ಆದರೂ ತಾವು ತಮಿಳುನಾಡಿಗೆ ಹೆಚ್ಚು ನಿಷ್ಠರು ಎಂಬುದನ್ನು ತೋರಿಸುವ ಸಲುವಾಗಿ ಅವರು ಈ ರೀತಿ ಮಾಡುತ್ತಾರೆ. ಅವರು ಮುಖ್ಯಮಂತ್ರಿಯಾದ ತಕ್ಷಣ ಕಾವೇರಿ ವಿವಾದವನ್ನು ದೊಡ್ಡದು ಮಾಡುತ್ತಾರೆ. ಕರ್ನಾಟಕದ ಜತೆ ಜಗಳಕ್ಕೆ ನಿಲ್ಲುತ್ತಾರೆ. ನಮ್ಮ ನೀರನ್ನು ನಾವೇ ಬಳಸದಂತೆ ನಿರ್ಬಂಧ ಹೇರಬೇಕೆಂದು ಅವರು ಸುಪ್ರೀಂಕೋರ್ಟ್ ಮೊರೆ ಹೋಗುತ್ತಾರೆ. ಇವರದು ಒಂದು ರೀತಿ ಸರ್ವಾಧಿಕಾರಿ ಧೋರಣೆ....~ ಎಂದು ಸಿದ್ದರಾಮಯ್ಯ ಕಿಡಿ ಕಾರಿದರು.ಪೇಚಿಗೆ ಸಿಲುಕಿದ ಹೊರಟ್ಟಿ

`ನನ್ನ ಕಂಪೆನಿಯ ಬಸ್‌ಗಳನ್ನು ಸರ್ಕಾರದ ವಶಕ್ಕೆ ಪಡೆಯಿರಿ. ಹಾಗೆಯೇ ಬಸವರಾಜ ಹೊರಟ್ಟಿಯವರ ಶಿಕ್ಷಣ ಸಂಸ್ಥೆಗಳನ್ನೂ ಸರ್ಕಾರದ ವಶಕ್ಕೆ ಪಡೆಯಿರಿ~ ಎಂದು ಬಿಜೆಪಿ ಸದಸ್ಯ ವಿಜಯ ಸಂಕೇಶ್ವರ ಅವರು ಸರ್ಕಾರವನ್ನು ಒತ್ತಾಯಿಸಿದ ಘಟನೆ ಸೋಮವಾರ ವಿಧಾನ ಪರಿಷತ್‌ನಲ್ಲಿ ನಡೆಯಿತು.ಹುಬ್ಬಳ್ಳಿಯಲ್ಲಿ ಕಾನೂನುಬಾಹಿರವಾಗಿ ಖಾಸಗಿ ಬಸ್‌ಗಳು ಸಂಚರಿಸುತ್ತಿವೆ ಎಂದು ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ಸದಸ್ಯ ಹೊರಟ್ಟಿ ಅವರು ಸಾರಿಗೆ ಸಚಿವ ಆರ್.ಅಶೋಕ ಅವರಿಗೆ ಕೇಳಿದರು. ಸಚಿವರ ಉತ್ತರದಿಂದ ಸಮಾಧಾನಗೊಳ್ಳದ ಹೊರಟ್ಟಿ, ಸಂಕೇಶ್ವರ ಅವರ ಕಂಪೆನಿಯ ಬಸ್‌ಗಳ ಸಂಚಾರವನ್ನೂ ಪ್ರಸ್ತಾಪಿಸಿ, `ಖಾಸಗಿ ಬಸ್‌ಗಳು ಲಾಭದಲ್ಲಿವೆ. ಸರ್ಕಾರಿ ಬಸ್‌ಗಳು ಅವುಗಳ ಹಿಂದೆ ಖಾಲಿ ಹೋಗುತ್ತಿರುತ್ತವೆ~ ಎಂದರು.

ತಮ್ಮ ಹೆಸರು ಪ್ರಸ್ತಾಪವಾದುದಕ್ಕೆ ಎದ್ದುನಿಂತ ಸಂಕೇಶ್ವರ ಅವರು, `ಎಲ್ಲವನ್ನೂ ಸರ್ಕಾರವೇ ಮಾಡಲು ಸಾಧ್ಯವಿಲ್ಲ. ನಮ್ಮ ಕಂಪೆನಿ ಸ್ಪರ್ಧೆಗೆ ಇಳಿದ ಬಳಿಕ ಸರ್ಕಾರಿ ಬಸ್‌ಗಳ ಗುಣಮಟ್ಟವೂ ಹೆಚ್ಚಿದೆ. ನಮ್ಮ ಬಸ್‌ಗಳನ್ನು ಸರ್ಕಾರ ವಶಕ್ಕೆ ಪಡೆಯಲಿ. ಆದರೆ, ಹೊರಟ್ಟಿಯವರ ಶಿಕ್ಷಣ ಸಂಸ್ಥೆಗಳನ್ನೂ ಸರ್ಕಾರ ಸ್ವಾಧೀನಕ್ಕೆ ತೆಗೆದುಕೊಳ್ಳಲಿ~ ಎಂದು ಒತ್ತಾಯಿಸಿದರು.

ಸಂಕೇಶ್ವರ ಅವರ ಬೇಡಿಕೆಯಿಂದ ಕಕ್ಕಾಬಿಕ್ಕಿಯಾದ ಹೊರಟ್ಟಿ, ತಾವು ಸಂಕೇಶ್ವರರ ವಿರುದ್ಧ ಆರೋಪಿಸಿಲ್ಲ. ಅವರ ಕಂಪೆನಿಯ ಬಸ್ ನಿಲ್ದಾಣದ ಬಗ್ಗೆ ಮಾತ್ರವೇ ಪ್ರಸ್ತಾಪಿಸಿದ್ದು ಎಂದು ಸಮಜಾಯಿಷಿ ನೀಡಿ ಚರ್ಚೆಗೆ ತೆರೆ ಎಳೆದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.