ಮಂಗಳವಾರ, ನವೆಂಬರ್ 12, 2019
28 °C
ಐ ಲೀಗ್ ಫುಟ್‌ಬಾಲ್ ಎರಡನೇ ಡಿವಿಷನ್: ಟೈಗರ್ಸ್‌ಗೆ ನಿರಾಸೆ

ಸದರ್ನ್ ಸಮಿತಿಗೆ ಮೊದಲ ಜಯ

Published:
Updated:

ಬೆಂಗಳೂರು: ಸದರ್ನ್ ಸಮಿತಿ ತಂಡದವರು ಐ ಲೀಗ್ ಫುಟ್‌ಬಾಲ್ ಟೂರ್ನಿಯ ಎರಡನೇ ಡಿವಿಷನ್ ಅಂತಿಮ ಲೆಗ್‌ನ ಮಂಗಳವಾರದ ಪಂದ್ಯದಲ್ಲಿ 2-1ಗೋಲುಗಳಿಂದ ಮುಂಬೈ ಟೈಗರ್ಸ್ ಎದುರು ಗೆಲುವು ಸಾಧಿಸಿದರು. ಈ ಲೆಗ್‌ನಲ್ಲಿ ಸದರ್ನ್ ತಂಡ ಪಡೆದ ಮೊದಲ ಗೆಲುವು ಇದಾಗಿದೆ.

  

ಅಶೋಕನಗರದಲ್ಲಿರುವ ರಾಜ್ಯ ಫುಟ್‌ಬಾಲ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಿಜಯಿ ತಂಡದ ಫ್ರಾನ್ಸಿಸ್ಕ್ ಒನೆಯೆಮಾ ಗಮನಾರ್ಹ ಪ್ರದರ್ಶನ ತೋರಿದರು. ಈ ಆಟಗಾರ ಪಂದ್ಯದ ಮೊದಲ ನಿಮಿಷದಲ್ಲಿಯೇ ಗೋಲು ಗಳಿಸಿ ಮುನ್ನಡೆ ತಂದುಕೊಟ್ಟರು. ಸದರ್ನ್ ಸಮಿತಿಯ ಚುರುಕಿನ ಆಟಕ್ಕೆ ತೀವ್ರ ಪ್ರತಿರೋಧ ಒಡ್ಡಿದ ಟೈಗರ್ಸ್ ತಂಡದ ಸುನಿಲ್ ಕುಮಾರ್ 28ನೇ ನಿಮಿಷದಲ್ಲಿ ಗೋಲು ತಂದಿತ್ತು, 1-1ಗೋಲುಗಳಿಂದ ಸಮಬಲ ಸಾಧಿಸಿದರು. ಆದರೆ, ಒನೆಯೆಮಾ 65ನೇ ನಿಮಿಷದಲ್ಲಿ ಎರಡನೇ ಗೋಲು ಗಳಿಸಿ ಸದರ್ನ್ ತಂಡದ ಗೆಲುವಿನ ರೂವಾರಿ ಎನಿಸಿದರು. ಈ ತಂಡ ತನ್ನ ಹಿಂದಿನ ಎರಡೂ ಪಂದ್ಯಗಳಲ್ಲಿ ಡ್ರಾ ಸಾಧಿಸಿತ್ತು.ಸದರ್ನ್ ತಂಡ ಮೊದಲ ಲೆಗ್‌ನಲ್ಲಿ ಎರಡು ಪಂದ್ಯಗಳಲ್ಲಿ ಡ್ರಾ ಸಾಧಿಸಿ, ಮೂರು ಪಂದ್ಯಗಳಲ್ಲಿ ಸೋಲು ಕಂಡಿತ್ತು. ಆದ್ದರಿಂದ ಈ ತಂಡ ಎರಡು ಅಂಕಗಳನ್ನಷ್ಟೇ ಕಲೆ ಹಾಕಿತ್ತು. ಎರಡನೇ ಲೆಗ್‌ನಲ್ಲಿ ಮೊದಲ ಜಯ ಸಾಧಿಸುವ ಮೂಲಕ ತನ್ನ ಪಾಯಿಂಟ್‌ಗಳ ಸಂಖ್ಯೆಯನ್ನು ಐದಕ್ಕೇರಿಸಿಕೊಂಡಿತು.

ಎರಡನೇ ಲೆಗ್‌ನಲ್ಲಿ ಮೊದಲ ಪಂದ್ಯವನ್ನಾಡಿದ ಟೈಗರ್ಸ್ ತಂಡ ಒಟ್ಟು 9 ಪಾಯಿಂಟ್‌ಗಳನ್ನು ಹೊಂದಿದೆ. ಅಂತಿಮ ಲೆಗ್‌ನಲ್ಲಿ ಎಲ್ಲಾ ತಂಡಗಳು ತಲಾ ಐದು ಪಂದ್ಯಗಳನ್ನು ಆಡಬೇಕಿದೆ.

ಮೊದಲ ಹಾಗೂ ಎರಡನೇ ಲೆಗ್‌ನಲ್ಲಿ ಗಳಿಸಿದ ಒಟ್ಟು ಅಂಕಗಳನ್ನು ಪರಿಗಣನೆಗೆ ತಗೆದುಕೊಂಡು, ಅಗ್ರಸ್ಥಾನ ಪಡೆದ ಮೊದಲ ಎರಡು ತಂಡಗಳು ಐ ಲೀಗ್ ಮೊದಲ ಡಿವಿಷನ್‌ಗೆ ಅರ್ಹತೆ ಪಡೆದುಕೊಳ್ಳಲಿವೆ. ಬುಧವಾರ ಪಂದ್ಯಗಳು ನಡೆಯುವುದಿಲ್ಲ.

ಗುರುವಾರದ ಪಂದ್ಯಗಳಲ್ಲಿ ಮಹಮ್ಮಡನ್ ಸ್ಪೋರ್ಟಿಂಗ್-ಸದರ್ನ್ ಸಮಿತಿ ಮತ್ತು ಕೋಲ್ಕತ್ತದ ಭಾವನಿಪುರೆ ಕ್ಲಬ್-ಲ್ಯಾಂಗ್‌ಸ್ನಿಂಗ್ ತಂಡಗಳು ಪೈಪೋಟಿ ನಡೆಸಲಿವೆ.

ಪ್ರತಿಕ್ರಿಯಿಸಿ (+)