ಬುಧವಾರ, ಅಕ್ಟೋಬರ್ 23, 2019
23 °C

ಸದಸ್ಯರಿಂದ ಗದ್ದಲ: ಶೇ 35ರಷ್ಟು ಕಲಾಪ ವ್ಯರ್ಥ

Published:
Updated:

ನವದೆಹಲಿ (ಪಿಟಿಐ): ಸದಸ್ಯರ ಗದ್ದಲದಿಂದಾಗಿ ಈ ಸಾಲಿನಲ್ಲಿ ಸಂಸತ್ ಕಲಾಪದ ಶೇ 35ರಷ್ಟು ಸಮಯ ವ್ಯರ್ಥವಾಗಿದೆ ಎಂದು ಪಿಆರ್‌ಎಸ್ ಶಾಸಕಾಂಗ ನಡೆಸಿದ ಸಂಶೋಧನೆಯಿಂದ ತಿಳಿದು ಬಂದಿದೆ.ಕಳೆದ ಸಾಲಿನಲ್ಲಿ ಸಂಸತ್ತಿನ ಒಟ್ಟು ಮೂರು ಅಧಿವೇಶನಗಳು ನಡೆದಿವೆ. 73 ದಿನ ಕಲಾಪ ನಡೆದಿತ್ತು. ಇದರಲ್ಲಿ ಒಟ್ಟು 803 ಗಂಟೆಗಳ ಪೈಕಿ ಕೇವಲ 258 ಗಂಟೆ ಕಲಾಪ ನಡೆದಿದೆ. ಬೆಲೆ ಏರಿಕೆ, ಭ್ರಷ್ಟಾಚಾರಕ್ಕೆ  ವಿವಿಧ ಪಕ್ಷಗಳ ಸದಸ್ಯರು ಗದ್ದಲ ನಡೆಸಿದ್ದರಿಂದ ಕಲಾಪದ ಮಹತ್ವದ ಸಮಯ ವ್ಯರ್ಥವಾಗಿದೆ ಎಂದು ಸಂಸ್ಥೆ ಗುರುತಿಸಿದೆ.ಒಂದು ದಿನದಲ್ಲಿ ಲೋಕಸಭೆಯ ಕಲಾಪ 6 ಗಂಟೆ ನಡೆದರೆ, ರಾಜ್ಯಸಭೆ 5 ಗಂಟೆ ನಡೆಯುತ್ತದೆ. ಹೀಗಾಗಿ ಒಟ್ಟು ಕೆಳಮನೆಯಲ್ಲಿ 438 ಗಂಟೆ ಮತ್ತು ಮೇಲ್ಮನೆಯ ಕಲಾಪ 365 ಗಂಟೆ ನಡೆಯಬೇಕಿತ್ತು. ಆದರೆ, ಲೋಕಸಭೆಯಲ್ಲಿ ಶೇ 30 ಮತ್ತು ರಾಜ್ಯಸಭೆಯಲ್ಲಿ ಶೇ 35ರಷ್ಟು ಸಮಯ ಪೋಲಾಗಿದೆ.

 

2010ನೇ ಸಾಲಿಗೆ ಹೋಲಿಸಿದರೆ 2011ನೇ ಸಾಲಿನಲ್ಲಿ ಸಂಸತ್ತಿನ ಕಲಾಪ ಉತ್ತಮವಾಗಿ ನಡೆದಿದೆ. 2010ನೇ ಸಾಲಿನಲ್ಲಿ ಒಂದು ಅಧಿವೇಶನದಲ್ಲಂತೂ ಒಂದು ದಿನವೂ ಕಲಾಪ ನಡೆಯದಿರುವುದು ವಿಶೇಷ.2010ನೇ ಸಾಲಿನಲ್ಲಿ ಶೇ 57ರಷ್ಟು ಸಂಸತ್ ಕಲಾಪ ನಡೆದರೆ, 2011ರಲ್ಲಿ ಈ ಪ್ರಮಾಣ ಶೇ 70ರಷ್ಟು ನಡೆದಿದೆ. ಒಟ್ಟು 54 ಮಸೂದೆಗಳನ್ನು ಪಟ್ಟಿ ಮಾಡಿ ಅವುಗಳನ್ನು ಮಂಡಿಸಬೇಕಿತ್ತು. ಆದರೆ, ಅಂತಿಮವಾಗಿ 28 ಮಸೂದೆಗಳನ್ನು ಅಂಗೀಕರಿಸಲಾಯಿತು. ವಿಶಿಷ್ಟವಾದ ಅಂಶವೆಂದರೆ ಕೇವಲ 5 ನಿಮಿಷಗಳಲ್ಲಿ 18 ಮಸೂದೆಗಳನ್ನು ಅಂಗೀಕರಿಸಲಾಯಿತು. ಲೆಕ್ಕಪತ್ರ ಪರಿಶೋಧನೆ ತಿದ್ದುಪಡಿ ಮಸೂದೆ, ಕೇಂದ್ರಾಡಳಿತ ಪ್ರದೇಶ ದೆಹಲಿ ಕಾಯ್ದೆ ಮಸೂದೆ-2011 ಇದರಲ್ಲಿ ಸೇರಿವೆ.ಸದ್ಯ 97 ಮಸೂದೆಗಳು ಸಂಸತ್ತಿನ ಅಂಗೀಕಾರಕ್ಕಾಗಿ ಕಾದಿವೆ. ಇವುಗಳಲ್ಲಿ ಬಹುಚರ್ಚಿತ ಲೋಕಪಾಲ, ನ್ಯಾಯಾಂಗ ಹೊಣೆಗಾರಿಕೆ, ಭೂ ಸ್ವಾಧೀನ, ನೇರ ತೆರಿಗೆ ಸೂಚಕ, ಯುಐಡಿ ಇನ್ನಿತರ ಮಸೂದೆಗಳು ಸೇರಿವೆ.

ಸದಸ್ಯರ ಗದ್ದಲದಿಂದಾಗಿ ಪ್ರಶ್ನೋತ್ತರ ಅವಧಿಗೆ ನಿಗದಿಪಡಿಸಲಾಗಿದ್ದ ಸಮಯ ಕೂಡ ವ್ಯರ್ಥವಾಗಿ ಕಳೆದು ಹೋಗಿದೆ.ವೇಳೆ ಹಾಳಾಗದಂತೆ ತಡೆಯಲು ರಾಜ್ಯಸಭೆಯ ಪ್ರಶ್ನೋತ್ತರ ಅವಧಿಯನ್ನು ಮಧ್ಯಾಹ್ನ 2 ಗಂಟೆಗೆ ಬದಲಾಯಿಸಲಾಯಿತಾದರೂ ಯಾವುದೇ ಸುಧಾರಣೆ ಕಂಡು ಬರದಿದ್ದರಿಂದ ಮತ್ತೆ ಮೊದಲಿನಂತೆ ಅದನ್ನು ಬೆಳಿಗ್ಗೆ 11 ಗಂಟೆಗೆ ನಿಗದಿಪಡಿಸಲಾಯಿತು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)