ಸದಸ್ಯರು ಗೈರು; ನಡೆದ ಸಭೆ !

7

ಸದಸ್ಯರು ಗೈರು; ನಡೆದ ಸಭೆ !

Published:
Updated:

ಶ್ರೀನಿವಾಸಪುರ: ತಾಲ್ಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ವಿರೋಧ ಪಕ್ಷದ ಸದಸ್ಯರ ಗೈರು ಹಾಜರಿಯಲ್ಲಿ ಬುಧವಾರ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ ನಡೆಯಿತು.ಈಚೆಗೆ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ವೈದ್ಯಂ ವೆಂಕಟರೆಡ್ಡಿ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಕಾಂಗ್ರೆಸ್ ಸದಸ್ಯರೊಂದಿಗೆ ಮನವಿ ಪತ್ರಕ್ಕೆ ಸಹಿ ಹಾಕಿದ್ದ ಆಡಳಿತ ಪಕ್ಷದ ಸದಸ್ಯರಾದ ಕೃಷ್ಣಾರೆಡ್ಡಿ ಹಾಗೂ ಸುಭಾಷಿಣಿ ಸಭೆಗೆ ಹಾಜರಾಗಿದ್ದು ವಿಶೇಷವಾಗಿತ್ತು. ಕಾಂಗ್ರೆಸ್ ಸದಸ್ಯರು ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡಿಸಲು ಅವಕಾಶವಾಗದ ಪರಿಣಾಮವಾಗಿ ಸಭೆಯಿಂದ ದೂರ ಉಳಿದರು.  ಕೊನೆಗೆ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ ಅಧ್ಯಕ್ಷ ವೈದ್ಯಂ ವೆಂಕಟರೆಡ್ಡಿ ಅಧ್ಯಕ್ಷತೆಯಲ್ಲಿ ನಡೆಯಿತು. ಇದರಲ್ಲಿ ಇಲಾಖಾವಾರು ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯಿತು. ಬಿಸಿಎಂ, ಸಮಾಜ ಕಲ್ಯಾಣ ಹಾಗೂ ಬೆಸ್ಕಾಂ ಅಧಿಕಾರಿಗಳು ಸಭೆಗೆ ಹಾಜರಾಗದೇ ಇದ್ದುದು ಸದಸ್ಯರ ಅಸಮಾಧಾನಕ್ಕೆ ಕಾರಣವಾಯಿತು. ಗೈರುಹಾಜರಾದ ಅಧಿಕಾರಿಗಳಿಗೆ ನೋಟಿಸ್ ನೀಡಲು ತೀರ್ಮಾನಿಸಲಾಯಿತು. ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಚರ್ಚೆ ನಡೆದಾಗ ಅಗತ್ಯ ಹಣ ಬಿಡುಗಡೆ ಆಗದಿರುವುದರಿಂದ ಆಸ್ಪತ್ರೆಗಳಲ್ಲಿ ಸೌರಶಕ್ತಿಯ ದೀಪಗಳನ್ನು ಅಳವಡಿಸಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.ಕೃಷಿ ಇಲಾಖೆ ಅಧಿಕಾರಿಗಳು ಮುಂದಿನ ತಿಂಗಳಿನಿಂದ ಸುವರ್ಣ ಭೂಮಿ ಯೋಜನೆಗೆ ಅರ್ಜಿಗಳನ್ನು ಕರೆಯಲಾಗುತ್ತದೆ ಎಂಬ ಮಾಹಿತಿ ನೀಡಿ, ಕಳೆದ ಸಾಲಿನಲ್ಲಿ ಮೊದಲ ಕಂತಾಗಿ 2521 ಫಲಾನುಭವಿಗಳಿಗೆ ರೂ.85 ಲಕ್ಷ ನೆರವನ್ನು ವಿತರಿಸಲಾಗಿದೆ. ಹಾಗೆಯೇ ಎರಡನೇ ಕಂತಿನಲ್ಲಿ ರೂ. 84 ಲಕ್ಷ ನೀಡಲಾಗಿದೆ. ರೂ.15 ಲಕ್ಷ  ಬಾಕಿ ಇದ್ದು ಅದನ್ನು ಮುಂದಿನ ತಿಂಗಳು ವಿತರಿಸಲಾಗುವುದು ಎಂದು ತಿಳಿಸಿದರು.ತೋಟಗಾರಿಕೆ ಇಲಾಖೆಯಿಂದ 45 ಮಂದಿ ಪರಿಶಿಷ್ಟ ಜಾತಿ, 10 ಮಂದಿ ಪರಿಶಿಷ್ಟ ವರ್ಗದವರಿಗೆ ವಿಶೇಷ ಘಟಕ ಯೋಜನೆಯಡಿ ತರಕಾರಿ ಬೀಜಗಳನ್ನು ವಿತರಿಸಲಾಗಿದೆ.ಫಲಾನುಭವಿಗಳನ್ನು ತಾಲ್ಲೂಕು ಪಂಚಾಯಿತಿ ಸದಸ್ಯರ ಶಿಫಾರಸ್ಸಿನಂತೆ ಆಯ್ಕೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.ಶಾಲೆಗಳಲ್ಲಿ ಕುಡಿಯುವ ನೀರಿನ ಯೋಜನೆಗೆ 2012-13ನೇ ಸಾಲಿಗಾಗಿ ಸುಮಾರು ರೂ.10 ಕೋಟಿ ಕ್ರಿಯಾಯೋಜನೆಯನ್ನು ತಯಾರಿಸಲಾಗಿದೆ. ಕೊಳವೆ ಬಾವಿ ಕೊರೆಸಲು ರೂ.1.5 ಕೋಟಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಹಾಯಕ  ಎಂಜಿನಿಯರ್ ಬೈರಾರೆಡ್ಡಿ ತಿಳಿಸಿದರು.  ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಬಸವರಾಜಪ್ಪ, ಉಪಾಧ್ಯಕ್ಷ ಆಂಜಿ, ಸದಸ್ಯರಾದ ಕೆ.ಪಿ.ನಾಗೇಶ್, ಬಿ.ವಿ.ಕಷ್ಣಾರೆಡ್ಡಿ, ಗಂಗಾಧರಪ್ಪ, ಸುಭಾಷಿಣಿ, ಚಂದ್ರಕಳಾ, ಗಂಗುಲಮ್ಮ, ಇ.ಶಾರದ, ಜಿ.ಪುಷ್ಪಮ್ಮ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry