ಸದಸ್ಯರ ಅನರ್ಹತೆಗೆ ಜಿಲ್ಲಾಡಳಿತ ಹಿಂದೇಟು

ಮಂಗಳವಾರ, ಜೂಲೈ 23, 2019
26 °C
ಸತತ ಮೂರು ಸಭೆಗೆ ಗ್ರಾ.ಪಂ. ಸದಸ್ಯರು ಗೈರು

ಸದಸ್ಯರ ಅನರ್ಹತೆಗೆ ಜಿಲ್ಲಾಡಳಿತ ಹಿಂದೇಟು

Published:
Updated:

ಗಂಗಾವತಿ: ತಾಲ್ಲೂಕಿನ ಮಲ್ಲಾಪುರ ಗ್ರಾಮ ಪಂಚಾಯಿತಿಯ ಕೆಲವು ಸದಸ್ಯರು ಪಂಚಾಯಿತಿಯಲ್ಲಿ ನಡೆದ ಮೂರು ಮಾಸಿಕ ಸಭೆಗಳಿಗೆ ಸತತ ಗೈರು ಹಾಜರಾಗುವ ಮೂಲಕ ಇದೀಗ ಅನರ್ಹತೆಯ ತೂಗುಗತ್ತಿಗೆ ಸಿಲುಕಿರುವ ಪ್ರಕರಣ ಬಯಲಾಗಿದೆ.ಈ ಕುರಿತಾದ ಮಾಹಿತಿಯನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿ ಲಿಖಿತ ಪೂರ್ವಕ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗೆ ಸಲ್ಲಿಸಿದ್ದಾರೆ. ತಾ.ಪಂ. ಇಒ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಸಲ್ಲಿಸಿ ಕೈತೊಳದುಕೊಂಡಿದ್ದಾರೆ.ಆದರೆ ವರದಿ ಸಹಿತ ಅಧಿಕಾರಿಗಳು ಮಾಹಿತಿ ಸಲ್ಲಿಸಿ ಈಗಾಗಲೆ ಹತ್ತು ತಿಂಗಳಾದರೂ ಸದಸ್ಯರ ಮೇಲೆ  ಜಿಲ್ಲಾಡಳಿತ ಯಾವ ಕ್ರಮ ಕೈಗೊಂಡಿಲ್ಲ ಎಂದು ದೂರಿರುವ ಗ್ರಾಮ ಪಂಚಾಯಿತಿಯ ಇನ್ನುಳಿದ ಕೆಲ ಸದಸ್ಯರು ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.ಮಲ್ಲಾಪುರ ಪಂಚಾಯಿತಿಯಲ್ಲಿ 2012ರ ಜೂನ್ 22 ಕರೆದ ಮಾಸಿಕ ಸಾಮಾನ್ಯ ಸಭೆಗೆ ಯಾವ ಸದಸ್ಯರು ಹಾಜರಾಗಿರಲಿಲ್ಲ. ಪಂಚಾಯಿತಿ ಕಾಯ್ದೆ ಪ್ರಕಾರ ಸಭೆ ಮೂಂದೂಡಿ ಕಾರ್ಯದರ್ಶಿ ಪಂಚಾಯಿತಿಯ ಪ್ರೊಸಿಡಿಂಗ್ ಬುಕ್‌ನಲ್ಲಿ ನಮೂದಿಸಿದರು.2012ರ ಜುಲೈ 16ರಂದು ಮತ್ತೆ ಕರೆದ ಸಭೆಗೆ ಬೆರಳೆಣಿಕೆಯಷ್ಟು ಸದಸ್ಯರ ಮಾತ್ರ ಹಾಜರಿದ್ದರು.  ಸದಸ್ಯರ ಗೈರು ಹಾಜರಿಯಿಂದಾಗಿ ಏರ್ಪಟ್ಟ ಕೋರಂ ಕೊರತೆಯಿಂದ ಮತ್ತೆ ಕಾರ್ಯದರ್ಶಿ ಸಭೆಯನ್ನು ಮುಂದೂಡಿ ಮಾಹಿತಿಯನ್ನು ಮೇಲಧಿಕಾರಿಗೆ ರವಾನಿಸಿದರು. 2012ರ ಆಗಸ್ಟ್ 13ರಂದು ಕರೆದ ಸಭೆಯಲ್ಲೂ ಕೇವಲ ಆರು ಸದಸ್ಯರು ಭಾಗವಹಿಸಿದ್ದರಿಂದ ಮತ್ತೆ ಕೋರಂ ಕೊರೆತೆಯಾಗಿತ್ತು.ಸದಸ್ಯರ ಈ ವರ್ತನೆಯಿಂದ ಸಾರ್ವಜನಿಕ ಅಭಿವೃದ್ಧಿ ಕಾರ್ಯಕ್ಕೆ ತೊಂದರೆ ಆಗುತ್ತದೆ. ಸೂಕ್ತಕ್ರಮ ಕೈಗೊಳ್ಳಿ ಎಂದು ಕಾರ್ಯದರ್ಶಿ, ಮೇಲಧಿಕಾರಿಗೆ ವರದಿ ಸಲ್ಲಿಸಿದ್ದರು.ಕರ್ನಾಟಕ ಪಂಚಾಯತ್ ರಾಜ್‌ನ 1993ರ ಕಾಯ್ದೆಯ ಪ್ರಕಾರ ಸತತ ಮೂರು ಸಾಮಾನ್ಯಸಭೆಗೆ ಗೈರು ಹಾಜರಾಗುವ ಸ್ಥಳೀಯ ಪಂಚಾಯಿತಿ ಸದಸ್ಯರ ಸದಸ್ಯತ್ವ ರದ್ದು ಶಿಕ್ಷೆಗೆ ತುತ್ತಾಗುತ್ತಾರೆ. ಆದರೆ ವರದಿ ಸಲ್ಲಿಸಿ ಹತ್ತು ತಿಂಗಳಾದರೂ ಯಾವ ಕ್ರಮ ಕೈಗೊಳ್ಳದಿರುವುದು ಅಚ್ಚರಿಗೆ ಕಾರಣವಾಗಿದೆ.ಮೇಲಧಿಕಾರಿಗೆ ಸಲ್ಲಿಕೆ: ತಾಲ್ಲೂಕಿನ ಮಲ್ಲಾಪುರ ಗ್ರಾಮ ಪಂಚಾಯಿತಿಯ ಕೆಲ ಸದಸ್ಯರು ಸತತ ಮೂರು ಸಭೆಗೆ ಗೈರಾದ ಬಗ್ಗೆ ತಮಗೆ ಲಭಿಸಿರುವ ಮಾಹಿತಿ ಪ್ರಕಾರ ಮೇಲಧಿಕಾರಿಗೆ ವರದಿ ಮಾಡಿದ್ದೇನೆ ಎಂದು ತಾ.ಪಂ. ಇಒ ಎಸ್.ಎನ್. ಮಠ ತಿಳಿಸಿದ್ದಾರೆ.ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಠ, ಪಂಚಾಯಿತಿ ಕಾರ್ಯದರ್ಶಿ ಸಲ್ಲಿಸಿದ ವರದಿಯನ್ನು ಯಥಾವತ್ತಾಗಿ ಜಿ.ಪಂ.ನ ಸಿಇಓ ಅವರಿಗೆ ಸಲ್ಲಿಸಲಾಗಿದೆ. ಆದರೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುವುದರ ಬಗ್ಗೆ ಇನ್ನೂ ಮಾಹಿತಿ ಲಭಿಸಿಲ್ಲ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry