ಸದಸ್ಯರ ವಿರೋಧ: ಸಭೆ ಮುಂದೂಡಿಕೆ

7

ಸದಸ್ಯರ ವಿರೋಧ: ಸಭೆ ಮುಂದೂಡಿಕೆ

Published:
Updated:

ಚಳ್ಳಕೆರೆ:  ಪಟ್ಟಣದ ಪುರಸಭೆಯಲ್ಲಿ ಸೋಮವಾರ ಕರೆಯಲಾಗಿದ್ದ ತುರ್ತು ಸಾಮಾನ್ಯ ಸಭೆಯಲ್ಲಿ ಸದಸ್ಯರ ಸಂಖ್ಯೆ ಕಡಿಮೆ ಇದ್ದ ಕಾರಣ ಸಭೆಯನ್ನು ನಡೆಸದಂತೆ ವಿರೋಧಿ ಸದಸ್ಯರು ಮಾಡಿದ ಮನವಿಯನ್ನು ಮುಖ್ಯಾಧಿಕಾರಿಗಳು ಅಂಗೀಕರಿಸಿ ಸಭೆ ಮುಂದೂಡಿದರು.ಕಳೆದ ಒಂದು ವರ್ಷದಿಂದ ಪುರಸಭೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಪಿ. ಶಂಷಾದ್ ಮತ್ತು ಇನ್ನಿತರರ ಮೇಲೆ ರಾಜ್ಯ ಹೈಕೋರ್ಟಿನಲ್ಲಿ ಪಕ್ಷದ ವಿಫ್ ಉಲ್ಲಂಘನೆ ಕುರಿತ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಈಗಾಗಲೇ ಅಧ್ಯಕ್ಷರು ಸಭೆ ಕರೆಯುವುದನ್ನು ಹೈಕೋರ್ಟ್ ನಿರ್ಬಂಧಿಸಿದೆ.

 

ಇಂದು ಸಭೆಯನ್ನು ಕರೆಯುವುದರ ಮೂಲಕ ಹೈಕೋರ್ಟಿನ ಆದೇಶವನ್ನು ಅಧ್ಯಕ್ಷರು ಉಲ್ಲಂಘನೆ ಮಾಡಿದ್ದಾರೆ ಎಂದು ದೂರಿದ ವಿರೋಧಿ ಸದಸ್ಯರು ಸಭೆಯನ್ನು ರದ್ದುಪಡಿಸುವಂತೆ ಪತ್ರ ನೀಡಿದ್ದರಿಂದ ಮುಖ್ಯಾಧಿಕಾರಿ ಐ. ಬಸವರಾಜು ಸಭೆಯನ್ನು ತಾತ್ಕಾಲಿಕವಾಗಿ ಮುಂದೂಡಿದ್ದಾರೆ.ಕಾಂಗ್ರೆಸ್ ಬೆಂಬಲಿತ ಸದಸ್ಯ ಎಸ್. ಮುಜೀಬುಲ್ಲಾ, ಕೆ.ಜೆ. ಸತ್ಯನಾರಾಯಣ, ಯು. ವಿಮಲಾಕ್ಷಿ, ಬಿ.ಗೌರಮ್ಮ, ಎಸ್.ಟಿ. ವಿಜಯ್, ಎಚ್.ವಿ. ಪ್ರಸನ್ನಕುಮಾರ್, ಎಂ.ಶಿವಮೂರ್ತಿ, ಪೊಲೀಸ್ ವೀರಣ್ಣ, ಸಿ. ವೀರಭದ್ರಬಾಬು ಪಿ. ತಿಪ್ಪೇಸ್ವಾಮಿ, ಇ. ವಿಜಯಲಕ್ಷ್ಮೀ,  ಜಿ. ಹೊನ್ನೂರಪ್ಪ, ಆರ್. ಪಾಪಣ್ಣ ಮತ್ತು ಎನ್.ಎಂ. ಮಲ್ಲಿಕಾರ್ಜುನ ಆಕ್ಷೇಪ ವ್ಯಕ್ತಪಡಿಸಿ ಮುಖ್ಯಾಧಿಕಾರಿಗಳಿಗೆ ಸಭೆ ರದ್ದುಪಡಿಸುವಂತೆ ಮನವಿ ಮಾಡಿದರು.ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ವಿರುದ್ದ ಅವಿಶ್ವಾಸ ನಿರ್ಣಯವನ್ನು ಮಂಡಿಸಿ ಒಂದು ವಾರದ ಕೆಳಗೆ ಪತ್ರ ನೀಡಿದ್ದು, ಆ ಬಗ್ಗೆ ಕ್ರಮ ಕೈಗೊಳ್ಳಬೇಕು. ಅಧ್ಯಕ್ಷರು ಯಾವುದೇ ಕಾರಣಕ್ಕೂ ಸಭೆ ನಡೆಸುವಂತಿಲ್ಲ ಎಂದು ಒತ್ತಾಯಿಸಿದರು.ಸಭೆಯ ಪ್ರಾರಂಭದಲ್ಲಿ ಹೆಚ್ಚಿನ ಸದಸ್ಯರು ಗೈರು ಹಾಜರಾಗಿದ್ದರು. ವಿಶೇಷವಾಗಿ ಅಧ್ಯಕ್ಷರ ಬೆಂಬಲಕ್ಕೆ ನಿಂತಿದ್ದ ಸದಸ್ಯರು ಸುಳಿಯಲೇ ಇಲ್ಲ. ಅಧ್ಯಕ್ಷೆ ಶಂಷಾದ್ ಉಪಾಧ್ಯಕ್ಷೆ ಕೆ.ಜಿ. ಶೋಭಾ ಸದಸ್ಯರಾದ ಪಾರ್ವತಮ್ಮ ಎಸ್. ಜಯಣ್ಣ ಇದ್ದರು.ನಾಮನಿರ್ದೇಶನ ಸದಸ್ಯರಾದ ಡಿ.ಎಂ.ತಿಪ್ಪೇಸ್ವಾಮಿ, ಅಲ್ಲಾಭಕ್ಷಿ, ಸಿ.ಎ.ಈಶ್ವರಾಚಾರ್, ಮತ್ತು ಪದ್ಮಾವತಿ ಜಯಣ್ಣ ಸಭೆಯಲ್ಲಿ ಹಾಜರಿದ್ದು ಉಳಿದ ಸದಸ್ಯರ ಆಗಮನ ಕಾಯುತ್ತಿದ್ದರು.ಖಂಡನೆ


ಸಭೆಯನ್ನು ಮುಂದೂಡಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅಧ್ಯಕ್ಷೆ ಪಿ. ಶಂಷಾದ್ ಹಲವಾರು ವರ್ಷಗಳಿಂದ ಅಭಿವೃದ್ಧಿ ಕಾರ್ಯಗಳು ನೆನೆಗುದಿಗೆ ಬಿದ್ದಿವೆ. ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಹೊರಟ ಅಲ್ಪಸಂಖ್ಯಾತ ಮಹಿಳೆಯನ್ನು ವಿರೋಧಿಸುತ್ತಲೇ ಬರುತ್ತಿದ್ದಾರೆ ಎಂದು ವಿರೋಧಿ ಸದಸ್ಯರ ವಿರುದ್ಧ ಬೇಸರ ವ್ಯಕ್ತಪಡಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry