ಸೋಮವಾರ, ಅಕ್ಟೋಬರ್ 14, 2019
24 °C

ಸದಾನಂದಗೌಡರಿಗೆ ಸಹಕಾರ: ಬದಲಾದ ಯಡಿಯೂರಪ್ಪ

Published:
Updated:

ಬೆಂಗಳೂರು: `ಪಕ್ಷದಲ್ಲಿನ ಗೊಂದಲಗಳನ್ನು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರೇ ಬಗೆಹರಿಸಲಿ, ಇದಕ್ಕೆ ಬೇಕಾದ ಸಹಕಾರ ನೀಡಲು ಸಿದ್ಧನಿದ್ದೇನೆ~ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳವಾರ ಇಲ್ಲಿ ತಿಳಿಸಿದರು.ನಗರದ ಕುಮಾರಕೃಪಾ ಬಳಿ ಇರುವ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಕಷ್ಟ ಕಾರ್ಪಣ್ಯಗಳು ನಿವಾರಣೆಯಾಗಿ ಒಳ್ಳೆಯ ಕಾಲ ಬರಲಿ, ಜನರ ಸೇವೆ ಮಾಡುವ ಶಕ್ತಿ ಕೊಡಲಿ, ಸರ್ಕಾರ ಪೂರ್ಣ ಅವಧಿ ಪೂರೈಸಿ ಮತ್ತೆ ಬಿಜೆಪಿಯೇ ಅಧಿಕಾರಕ್ಕೆ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ~ ಎಂದರು.`ಪಕ್ಷದಲ್ಲಿನ ಗೊಂದಲಗಳು, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಮತ್ತು ಸದಾನಂದಗೌಡ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ರಾಜ್ಯದ ಅಭಿವೃದ್ಧಿ ಮತ್ತು ಪಕ್ಷವನ್ನು ಬಲಪಡಿಸುವ ದೃಷ್ಟಿಯಿಂದ ಪ್ರವಾಸ ಹಮ್ಮಿಕೊಂಡಿದ್ದು, ಅದನ್ನು ಮುಂದುವರಿಸುತ್ತೇನೆ~ ಎಂಬುದಾಗಿ ಹೇಳಿದರು.ವರಿಷ್ಠರ ಜವಾಬ್ದಾರಿ: `ಪಕ್ಷದಲ್ಲಿ ಉಂಟಾಗಿರುವ ಗೊಂದಲವನ್ನು ಪರಿಹರಿಸುವುದು ಪಕ್ಷದ ವರಿಷ್ಠರ ಜವಾಬ್ದಾರಿಯಾಗಿದ್ದು, ಅವರು ಕೈಗೊಳ್ಳುವ ತೀರ್ಮಾನಕ್ಕೆ ತಾವು ಬದ್ಧ~ ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ಅವರು ಹೇಳಿದರು.ಮಂಗಳವಾರ ವಿಧಾನಸೌಧದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, `ಬಿಜೆಪಿ ಒಂದು ಕುಟುಂಬವಿದ್ದಂತೆ. ಕುಟುಂಬದೊಳಗೆ ಭಿನ್ನಾಭಿಪ್ರಾಯ ಸಹಜ. ಕೇಂದ್ರದ ವರಿಷ್ಠರು ಬೆಂಗಳೂರಿಗೆ ಬಂದು ಅಥವಾ ಇಲ್ಲಿನ ನಾಯಕರನ್ನು ದೆಹಲಿಗೆ ಕರೆಸಿಕೊಂಡು ಸಮಸ್ಯೆ ಪರಿಹರಿಸಬೇಕು~ ಎಂದರು.ಈ ಮಧ್ಯೆ, ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಂ.ಪಿ.ರೇಣುಕಾಚಾರ್ಯ, `ಮುಖ್ಯಮಂತ್ರಿ ಸದಾನಂದಗೌಡರು ಕೊಟ್ಟ ಮಾತಿಗೆ ತಪ್ಪದಿರಲಿ~ ಎಂದು ಪುನರುಚ್ಚರಿಸಿದ್ದಾರೆ.ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ `ಮುಖ್ಯಮಂತ್ರಿ ಬಗ್ಗೆ ಸಚಿವರು ಮಾಧ್ಯಮಗಳಲ್ಲಿ ಹೇಳಿಕೆ ನೀಡುವ ಬದಲು ಪಕ್ಷದ ವೇದಿಕೆಯಲ್ಲಿ ಚರ್ಚಿಸಬೇಕು. ಈ ಹೇಳಿಕೆ ಪಕ್ಷಕ್ಕೆ, ಸಂಘಟನೆಗೆ ಮುಜುಗರ ಉಂಟುಮಾಡುತ್ತದೆ. ಬಹಿರಂಗ ಹೇಳಿಕೆ ನೀಡಿ ಗೊಂದಲ ಉಂಟುಮಾಡಬಾರದು~ ಎಂದಿದ್ದಾರೆ.30ರಿಂದಲೇ ಅಧಿವೇಶನ


ಜ. 30ರಿಂದ ವಿಧಾನ ಮಂಡಲದ ಅಧಿವೇಶನ ಆರಂಭವಾಗಲಿದ್ದು, ಶುಕ್ರವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಅಧಿಕೃತವಾಗಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ.

Post Comments (+)