ಭಾನುವಾರ, ನವೆಂಬರ್ 17, 2019
28 °C

ಸದಾನಂದ ಗೌಡರ `ಚೀಟಿ' ವ್ಯವಹಾರ

Published:
Updated:
ಸದಾನಂದ ಗೌಡರ `ಚೀಟಿ' ವ್ಯವಹಾರ

ಹುಬ್ಬಳ್ಳಿ:  `ಈಗಾಗಲೇ ನಿಮ್ಮಂದಿಗೆ  ಚರ್ಚಿಸಿರುವಂತೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಿಗೆ ರೂ. 5 ಕೋಟಿ ಉಳಿಕೆ ಹಣ ನೀಡಿ' ಎಂಬ ಸಂದೇಶದ ಚೀಟಿಯನ್ನು ಡಿ.ವಿ.ಸದಾನಂದಗೌಡರು ಮುಖ್ಯಮಂತ್ರಿಗಳಾಗಿದ್ದಾಗ ಸಚಿವ ಆರ್. ಅಶೋಕ್‌ಗೆ  ಕಳುಹಿಸಿದ್ದರು' ಎಂದು  ಕೆಜೆಪಿ ಉಪಾಧ್ಯಕ್ಷ ವಿಜಯ ಸಂಕೇಶ್ವರ ಗುರುವಾರ ಇಲ್ಲಿ  ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.ತಮ್ಮ ಆರೋಪಕ್ಕೆ ಪೂರಕವಾಗಿ ಸಂಕೇಶ್ವರ ಅವರು, ಚೀಟಿಯ ಜೆರಾಕ್ಸ್ ಪ್ರತಿಯನ್ನು ಬಿಡುಗಡೆ ಮಾಡಿದರು.

`ನನಗೆ ಸಿಕ್ಕ ಮಾಹಿತಿ ಕೊಟ್ಟಿದ್ದೇನೆ. ಇದು ಯಾವುದಕ್ಕೆ ಸೇರಿದ್ದು ಎಂಬುದನ್ನು ನೀವೇ ಪತ್ತೆಹಚ್ಚಿ' ಎಂದು ಹೇಳಿದರು.ಮುನ್ಸೂಚನೆ: `ನೋಡ್ತಾ ಇರಿ, ಈಗಿನ ಮುಖ್ಯಮಂತ್ರಿಗಳ ಹಗರಣವೂ ಇನ್ನು ಕೆಲವೇ ದಿನದಲ್ಲಿ ಹೊರಬರಲಿದೆ' ಎಂದು ಮುನ್ಸೂಚನೆಯನ್ನೂ ನೀಡಿದರು.`9 ತಿಂಗಳಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದೇವೆ' ಎಂದು ಜಗದೀಶ ಶೆಟ್ಟರ್ ಮತ್ತು `ಭ್ರಷ್ಟಾಚಾರಿಗಳನ್ನು ಹೊರಹಾಕಿ ನಾವೀಗ ಪರಿಶುದ್ಧರಾಗಿದ್ದೇವೆ' ಎಂದು ಪ್ರಹ್ಲಾದ್ ಜೋಶಿ ಸತ್ಯ ಹರಿಶ್ಚಂದ್ರನ ಮೊಮ್ಮಕ್ಕಳಂತೆ ಹೇಳುತ್ತಿದ್ದಾರೆ. ಆದರೆ ಬಿಜೆಪಿಯವರ ಭ್ರಷ್ಟಾಚಾರಗಳಿಗೆ ಸಾವಿರಾರು ನಿದರ್ಶನಗಳು ನಮ್ಮ ಮುಂದಿವೆ' ಎಂದು ತಿಳಿಸಿದರು. `ಯಡಿಯೂರಪ್ಪ ಅವರಿಗಿಂತ ಬಿಜೆಪಿ  ರಾಷ್ಟ್ರೀಯ ನಾಯಕರುಗಳಾದ ಬಂಗಾರು ಲಕ್ಷ್ಮಣ್, ನಿತಿನ್ ಗಡ್ಕರಿ, ಅನಂತಕುಮಾರ್ ಹೆಚ್ಚು ಭ್ರಷ್ಟರು. ಯಡಿಯೂರಪ್ಪ ವಿರುದ್ಧ ಕೇವಲ ಆರೋಪವಿದೆ, ಅದನ್ನು ನ್ಯಾಯಾಲಯ ತೀರ್ಮಾನಿಸುತ್ತದೆ. ಹೀಗಾಗಿ ಅವರನ್ನು ಭ್ರಷ್ಟ ಎಂದು ನಾನಂತೂ  ಒಪ್ಪಿಕೊಳ್ಳುವುದಿಲ್ಲ' ಎಂದು ಅವರು ಸಮರ್ಥಿಸಿ  ಕೊಂಡರು.`ಕಾಂಗ್ರೆಸ್ ಪಕ್ಷ ದೇಶದ ಭ್ರಷ್ಟಾಚಾರದ  ಪಿತಾಮಹ. ಯುಪಿಎ ಅವಧಿಯಲ್ಲಿ ಲಕ್ಷಾಂತರ ಕೋಟಿಯ ಹಗರಣಗಳಾಗಿರುವಾಗ `ನಾವೇ ಸಾಚಾ' ಎಂದು ಕಾಂಗ್ರೆಸ್ ಮುಖಂಡರು ರಾಜ್ಯದಲ್ಲಿ ಪ್ರಚಾರ ಮಾಡುತ್ತಿದ್ದಾರೆ' ಎಂದು ಟೀಕಿಸಿದರು.

ಪ್ರತಿಕ್ರಿಯಿಸಿ (+)