ಸದುದ್ದೇಶಕ್ಕೆ ವರ್ಣ ಲೇಪ

7

ಸದುದ್ದೇಶಕ್ಕೆ ವರ್ಣ ಲೇಪ

Published:
Updated:
ಸದುದ್ದೇಶಕ್ಕೆ ವರ್ಣ ಲೇಪ

ಮದೀನಾ ಮುನಾವರ್‌ಗೆ (14) ಬಣ್ಣಗಳೆಂದರೆ ಅಷ್ಟಕ್ಕಷ್ಟೆ. ಕೈಗೆ ಮೈಗೆಲ್ಲ ಮೆತ್ತಿಕೊಳ್ಳುವ ಪರಿ ರೇಜಿಗೆ ಹುಟ್ಟಿಸುತ್ತಿತ್ತು. ಆದರೆ ಈಗ ಚಿತ್ರಕಲೆಯೂ ಇಷ್ಟ, ಬಣ್ಣಗಳೂ ಅಷ್ಟೆ. ಇದಕ್ಕೆಲ್ಲ ಕಾರಣ ‘ಮಾನಸಿ ಅಕ್ಕ’. ಸರ್ಕಾರಿ ಶಾಲೆಯ ವಿದ್ಯಾರ್ಥಿ ರಫಿಗಂತೂ ಚಿತ್ರ ಮೊದಲೇ ಇಷ್ಟ. ಶಾಲೆಯ ನಂತರ ಅಕ್ಷರ ಫೌಂಡೇಶನ್‌ನ ಲೈಬ್ರರಿಗೆ ಹೋದರೆ ಅಲ್ಲಿ ಮೆಚ್ಚಿನ ಚಿತ್ರಕಲೆ ಕಲಿಯುವ ಆನಂದ. ಸುಮಾರು ಎರಡು ಗಂಟೆ ಎಲ್ಲ ಮರೆತು ಮೆಚ್ಚಿನ ಅಕ್ಕ ಮಾನಸಿಯ ನೆರವಿನಿಂದ ಚಿತ್ರಕಲೆಯ ಪಲಕುಗಳಲ್ಲಿ ಮಿಂದೇಳುವ ಪುಳಕ.ಹತ್ತರಿಂದ ಹದಿಮೂರು ವರ್ಷದ ಮಕ್ಕಳ ಪುಟ್ಟ ಕೈಗಳಲ್ಲಿ ಮೂಡಿದ ಚಾರ್‌ಕೋಲ್, ಕೊಲಾಜ್, ವ್ಯಕ್ತಿಚಿತ್ರ, ರೇಖಾಚಿತ್ರಗಳ ಚಿತ್ತಾರಗಳೇ ಕಟ್ಟು ಹಾಕಿಸಿಕೊಂಡು ಇನ್‌ಫೆಂಟ್ರಿ ರಸ್ತೆಯ ಕಿಂಕಿಣಿ ಕಲಾ ಗ್ಯಾಲರಿಯಲ್ಲಿ ಪ್ರದರ್ಶನ ಕಂಡವು.ಈ ಚಿತ್ರಗಳನ್ನು ಗಣ್ಯರೆಲ್ಲ ಗಮನವಿಟ್ಟು ನೋಡಿ ಮೆಚ್ಚುಗೆ ವಿಸ್ಮಯದಿಂದ ಮುಗುಳ್ನಗುತ್ತಿದ್ದರೆ ಮಕ್ಕಳ ಮುಖದಲ್ಲಿ ಸಂಕೋಚ, ನಾಚಿಕೆ ಬೆರೆತ ಮುಚ್ಚಿಟ್ಟುಕೊಳ್ಳಲಾಗದ ಖುಷಿ. 

 

ಅಲ್ಲಿ ಈ ಕಲಾಕೃತಿಗಳು ಒಂದರಿಂದ ಐದು ಸಾವಿರದವರೆಗೆ ಬಿಕರಿಯಾದವು. ಬಂದ ಹಣವೆಲ್ಲ ಬಡ ಮಕ್ಕಳ ಶಿಕ್ಷಣದಲ್ಲಿ ತೊಡಗಿಸಿಕೊಂಡ ಅಕ್ಷರ ಫೌಂಡೇಶನ್ನಿಗೆ ನೀಡಲಾಯಿತು.ವರ್ಣಗಳೊಂದಿಗೆ ಕಾಳಜಿ: ಈ ಇಡೀ ಕಾರ್ಯದ ರೂವಾರಿ 21 ವರ್ಷದ ಮಾನಸಿ ಕಿರ್ಲೋಸ್ಕರ್. ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್‌ ಉಪಾಧ್ಯಕ್ಷ ವಿಕ್ರಮ್ ಕಿರ್ಲೋಸ್ಕರ್ ಮತ್ತು ದಿ ಇಂಡಿಯಾ ಜಪಾನ್ ಇನೀಷಿಯೇಟಿವ್ ಅಧ್ಯಕ್ಷೆ ಗೀತಾಂಜಲಿ ಕಿರ್ಲೋಸ್ಕರ್ ಅವರ ಮಗಳು.ಮಾನಸಿ ಪೆಂಟಿಂಗ್ ಕಲಾವಿದೆ. ಅಮೆರಿಕದ ಡಿಸೈನ್ ಸ್ಕೂಲೊಂದರ ವಿದ್ಯಾರ್ಥಿ. ಮೊದಲಿನಿಂದ ಶಾಸ್ತ್ರೀಯವಾಗಿ ಚಿತ್ರಕಲೆ ಅಭ್ಯಾಸ ಮಾಡಿದವರಲ್ಲ. ಒಂಬತ್ತು ವರ್ಷದ ಬಾಲಕಿಯಾಗಿದ್ದಾಗಿನಿಂದಲೇ ಕೈಗೆ ಸಿಕ್ಕ ವಸ್ತುವಿನ ಮೇಲೆಲ್ಲ ಗೀಚಿ ತನ್ನ ಚಿತ್ರಪ್ರೀತಿ ವ್ಯಕ್ತಪಡಿಸುತ್ತಿದ್ದರು. ಈಗ ಆ ಜ್ಞಾನವನ್ನು ಸೌಲಭ್ಯ ವಂಚಿತ ಮಕ್ಕಳಿಗೆ ಧಾರೆ ಎರೆಯುತ್ತಿದ್ದಾರೆ. ಆ ಮಕ್ಕಳು ಬಿಡಿಸಿದ ಚಿತ್ರಗಳೇ ಪ್ರದರ್ಶನ ಕಂಡು ಬಿಕರಿಯಾಗಿದ್ದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry