ಸದೃಢ ವೈಮಾನಿಕ ಎಂಜಿನ್ನಿಗೆ ‘ಸೂಪರ್‌ ಅಲಾಯ್‌’!

7
ವಿಜ್ಞಾನ ಲೋಕದಿಂದ

ಸದೃಢ ವೈಮಾನಿಕ ಎಂಜಿನ್ನಿಗೆ ‘ಸೂಪರ್‌ ಅಲಾಯ್‌’!

Published:
Updated:

ವೈಮಾನಿಕ ಎಂಜಿನ್ನುಗಳು ಅಗ್ಗದ ಇಂಧನದಿಂದ ಕಾರ್ಯ­ನಿರ್ವ­ಹಿಸುವ ಸಾಧ್ಯತೆಯನ್ನು ತೆರೆದಿಡುವ ಮೂಲ­ವಸ್ತುವೊಂದನ್ನು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಸಂಶೋ­ಧಕರು ಅಭಿವೃದ್ಧಿ­ಪಡಿಸಿದ್ದಾರೆ. ಈ ವಸ್ತುವು  ಕೋಬಾಲ್ಟ್ ಎಂಬ ಮೂಲ ಧಾತುವನ್ನು ಆಧರಿಸಿದೆ. ಇದು ಪ್ರತಿ­ಕೂಲ ಪರಿಸ್ಥಿತಿಗಳಲ್ಲೂ ತನ್ನ ಸದೃಢತೆ­ಯನ್ನು ಕಾಯ್ದುಕೊಳ್ಳು­ವುದಲ್ಲದೇ ತುಕ್ಕು ಹಿಡಿಯುವ ಪ್ರಕ್ರಿಯೆ­ಯನ್ನೂ ಪ್ರತಿರೋ­ಧಿಸುವ ಗುಣವನ್ನು ಈ ವಸ್ತು ಹೊಂದಿದೆ. ದೈತ್ಯಗಾತ್ರದ ವಿಮಾನಗಳು, ಭಾರಿ ಹಡಗುಗಳು ಹಾಗೂ ಬೃಹತ್ ಶಕ್ತಿ ಸ್ಥಾವರದಲ್ಲಿ ಯಂತ್ರಗಳನ್ನು ‘ಸೂಪರ್ ಅಲಾಯ್’ ಎಂಬ ವಿಶೇಷ ಗುಣ ಹೊಂದಿದ ವಿಶಿಷ್ಟ ಮಿಶ್ರಲೋಹದಿಂದ ತಯಾರಿಸ­ಲಾಗುತ್ತದೆ. ಈ ಮೂಲವಸ್ತು ೧,೫೦೦ ಡಿಗ್ರಿ ಸೆಂಟಿಗ್ರೇಡ್ ತಾಪಮಾನ­ದಂತಹ ಪ್ರತಿಕೂಲ ವಾತಾವರಣದಲ್ಲೂ ತನ್ನ ಸದೃಢತೆಯನ್ನು ಕಾಯ್ದುಕೊಳ್ಳುವ ಸಾಮರ್ಥ್ಯ ಹೊಂದಿರುತ್ತದೆ.ಆದರೆ ಕೆಲವು ರಾಸಾಯನಿಕ ಕ್ರಿಯೆಗಳು ಈ ‘ಸೂಪರ್ ಅಲಾಯ್’ಗಳ ಸಾಮರ್ಥ್ಯಕ್ಕೆ ಕುಂದು ತರಬಲ್ಲವು. ಉದಾಹರಣೆಗೆ, ಪ್ರಸ್ತುತ ಹೆಚ್ಚಾಗಿ ಬಳಸುವ ನಿಕ್ಕಲ್ ಧಾತುವನ್ನು ಆಧರಿಸಿದ ‘ಸೂಪರ್ ಅಲಾಯ್’ಗಳು ಗಂಧಕಯುಕ್ತ ವಾತಾ­ವರಣಕ್ಕೆ ತೆರೆದುಕೊಂಡಾಗ ಕ್ರಮೇಣ ತಮ್ಮ ವಿಶಿಷ್ಟ ಗುಣ ಕಳೆದು­ಕೊಳ್ಳಲು ಆರಂಭಿಸುತ್ತವೆ. ಇನ್ನೊಂದು ಹೆಚ್ಚು ಬೆಲೆಯ ಇಂಧನದ ಬೇಡಿಕೆ­ಯಿಂದಾಗಿ ವಿಮಾನಯಾನ ಉದ್ಯಮ ಕೆಳದರ್ಜೆಯ ಇಂಧನವನ್ನು ಬಳ­ಸುವುದು ಅನಿ­ವಾರ್ಯ ಸ್ಥಿತಿ ನಿರ್ಮಾ­ಣವಾಗುತ್ತಿದೆ.ಕೋಬಾಲ್ಟ್ ಆಧರಿತ ವಸ್ತುವನ್ನು ವೈಮಾನಿಕ ಇಂಜಿನ್ನುಗಳ ಪ್ರಮುಖ ಭಾಗಗಳ ತಯಾರಿಕೆಗೆ ಬಳಸಿಕೊಳ್ಳುವ ಸಾಧ್ಯತೆಯ ಬಗೆಗೆ ಅನೇಕ ವರ್ಷ­ಗಳಿಂದಲೂ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಲೇ ಇದ್ದಾರೆ. ಕೋಬಾಲ್ಟ್ ರಾಸಾಯನಿಕವಾಗಿ ಗಂಧಕದೊಂದಿಗೆ ಬೆರೆಯದೇ ಇದ್ದರೂ ಹೆಚ್ಚಿನ ತಾಪ­ಮಾನಗಳಲ್ಲಿ ತನ್ನ ದೃಢತೆಯನ್ನು ಕಳೆದು­ಕೊಂಡುಬಿಡು­ತ್ತದೆ.ಹೆಚ್ಚಿನ ತಾಪಮಾನ­ಗಳಲ್ಲೂ ಸದೃಢವಾಗಿ ಉಳಿಯಬಲ್ಲ ಕೋಬಾಲ್ಟ್ ಆಧರಿಸಿದ ಸೂಪರ್ ಅಲಾಯ್‌ಅನ್ನು ೨೦೦೬ರಲ್ಲಿ ಜಪಾನಿನ ತಂಡವೊಂದು ಅಭಿವೃದ್ಧಿಪಡಿಸಿತ್ತು. ಆದರೆ, ಅದರಲ್ಲಿ ಭಾರದ ಲೋಹಗಳ­ಲ್ಲೊಂದಾದ ಟಂಗ್‌ಸ್ಟನ್ ಕೂಡ ಸೇರಿತ್ತು. ತೂಕದ ದೃಷ್ಟಿಯಿಂದ ವೈಮಾನಿಕ ಕ್ಷೇತ್ರದಲ್ಲಿ ಬಳಸಲು ಅದು ತಕ್ಕದಾಗಿರಲಿಲ್ಲ.ಭಾರತೀಯ ವಿಜ್ಞಾನ ಸಂಸ್ಥೆಯ ಸಂಶೋಧಕರು ಅಭಿವೃದ್ಧಿಪಡಿಸಿರುವ ಕೋಬಾಲ್ಟ್ ಆಧರಿತ ‘ಸೂಪರ್ ಅಲಾಯ್‌’ಗಳು ಹೆಚ್ಚಿನ ತಾಪಮಾನ­ಗಳಲ್ಲಿಯೂ ನಿಕ್ಕಲ್ ಆಧರಿತ ‘ಸೂಪರ್ ಅಲಾಯ್‌’ಗಳಷ್ಟೇ ಸದೃಢವಾಗಿದ್ದು ಗಂಧಕಯುಕ್ತ ರಾಸಾಯನಿಕಗಳಿಗೂ ಪ್ರತಿರೋಧ ಒಡ್ಡುವ ಗುಣ ಹೊಂದಿದೆ. ಅಲ್ಲದೇ ಟಂಗ್‌ಸ್ಟನ್ ಲೋಹದ ಅಂಶ­ಗಳಿಂದಲೂ ಸಂಪೂರ್ಣ ಮುಕ್ತವಾಗಿದೆ.ಈ ಸಂಶೋಧನೆಯು ಭಾರತದಲ್ಲಿ ಇಲ್ಲಿಯ­ವರೆಗೆ ‘ಸೂಪರ್ ಅಲಾಯ್‌’­ಗಳನ್ನು ಅಭಿವೃದ್ಧಿಪಡಿಸಿದ ಗುರುತರ ಹೆಜ್ಜೆಯಾಗಿದೆ.

‘ಈ ವರ್ಗದ ‘ಸೂಪರ್ ಅಲಾಯ್‌’­ಗಳು ಪ್ರಸ್ತುತ ಲಭ್ಯವಿರುವ ‘ಸೂಪರ್ ಅಲಾಯ್‌’ಗಳಿಗೆ ಉತ್ತಮ ಪೈಪೋಟಿ ನೀಡಬಲ್ಲವು. ಸಧೃಡತೆ, ಮೃದುತ್ವ, ಗಂಧಕ ಹಾಗೂ ತುಕ್ಕು ಪ್ರತಿರೋದಕ ಗುಣಗಳಲ್ಲಿ ಇವು ಉಳಿದವುಗಳಿಗಿಂತ ಒಟ್ಟು ತುಲನೆಯಲ್ಲಿ ಉತ್ತಮವಾಗಿವೆ.೧೯೮೦ರ ಅರೆಸ್ಫಟಿಕ (quasicrystal) ಬಗೆಗಿನ ಸಂಶೋಧ­ನೆಯ ನಂತರ ಅತ್ಯಂತ ಹರ್ಷಕೊಟ್ಟ ಸಂಶೋಧನೆ ಇದಾಗಿದೆ’ ಎಂದು ಸಂಶೋಧಕರ ತಂಡದ ಮುಖ್ಯಸ್ಥ ಪ್ರೊ. ಕೆ. ಚಟ್ಟೋಪಾಧ್ಯಾಯರು ಪುಳಕಿತರಾಗಿ ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry