ಸದ್ದಿನ ದೆವ್ವ!

ಗುರುವಾರ , ಜೂನ್ 27, 2019
22 °C
ಚಿತ್ರ : ‘ಶ್... ಎಚ್ಚರಿಕೆ’

ಸದ್ದಿನ ದೆವ್ವ!

Published:
Updated:

ನಿರ್ಮಾಪಕರು:ಮಾರುತಿ ಸೂರ್ಯ, ಜೈಗಣೇಶ್‌, ಅಜಿತ್‌, ಸ್ಟೀಫನ್ ಅರುಣ್‌ರಾಜ್

ನಿರ್ದೇಶಕ: ನಾಗರಾಜ್‌ ಕಂದಗಲ್‌

ತಾರಾಗಣ: ಮಾರುತಿ ಸೂರ್ಯ, ಅಕ್ಷತಾ, ಬೇಬಿ ಶ್ರೇಯಾ, ಕ್ರಿಷ್ ಇತರರು
ಆರಂಭದ ಕೆಲವು ನಿಮಿಷಗಳಲ್ಲೇ ಆತ್ಮಹತ್ಯೆಯೂ, ಅಪಘಾತದಲ್ಲಿ ಇಬ್ಬರ ಸಾವೂ ಸಂಭವಿಸುತ್ತದೆ. ಆ ಪೈಕಿ ಆತ್ಮಹತ್ಯೆ ಹಿನ್ನೆಲೆಯಲ್ಲಿ ತೆರೆದುಕೊಳ್ಳುವ ದೆವ್ವದ ಕಥೆಯು ಇಡೀ ಚಿತ್ರವನ್ನು ಆವರಿಸಿಕೊಳ್ಳುತ್ತ ಸಾಗುತ್ತದೆ. ಪಿಶಾಚಿ ಪೀಡೆಗೆ ಮಂತ್ರವಾದಿಯಿಂದ ಮುಕ್ತಿ ಸಿಕ್ಕಿತು ಎಂದು ಪ್ರೇಕ್ಷಕ ನಿಟ್ಟುಸಿರು ಬಿಡುವ ಹೊತ್ತಿಗೆ, ಅಪಘಾತದಲ್ಲಿ ಸತ್ತವರ ಆತ್ಮಗಳು ಧುತ್ತೆಂದು ಎದ್ದು ನಿಲ್ಲುತ್ತವೆ. ಅಲ್ಲಿಗೆ, ಅತೃಪ್ತ ಆತ್ಮಗಳೂ ಅವುಗಳ ಕಾಟವೂ ನಿರಂತರ ಎಂಬುದು ಮತ್ತೊಮ್ಮೆ ಸಾಬೀತಾದಂತೆ!

ದೆವ್ವ– ಭೂತ, ಪಿಶಾಚಿಗಳನ್ನು ಸಿನಿಮಾಕ್ಕೆ ತರುವ ಜಾಯಮಾನ ಈಗಿನದೇನಲ್ಲ. ಕೆಲವು ಹಾರರ್‌ ಸಿನಿಮಾಗಳಲ್ಲಿ ದೆವ್ವಗಳು ಪ್ರೇಕ್ಷಕನ ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದ್ದೂ ಉಂಟು. ಆದರೆ ‘ಶ್... ಎಚ್ಚರಿಕೆ’ ಚಿತ್ರದಲ್ಲಿ ವಿನಾಕಾರಣ ಪೀಡಿಸುವ ಗುಣ ಈ ದೆವ್ವಗಳದು.‘ದೇಹ ಬಿಟ್ಟರೂ ನಮ್ಮ ಮನೆಯನ್ನು ಬಿಡುವುದಿಲ್ಲ’ ಎಂದು ಪಟ್ಟಾಗಿ ಕೂತಿರುವ ಮೂರು ದೆವ್ವಗಳು, ಅಲ್ಲಿಗೆ ಬಂದ ಕುಟುಂಬವನ್ನು ಕಾಡುತ್ತವೆ. ಇದರಿಂದ ಕಂಗಾಲಾಗುವ ನಾಯಕ, ಹಳೇ ಸಿನಿಮಾ ನೆನಪಿಸುವಂತೆ ಯಥಾಪ್ರಕಾರ ಮಂತ್ರವಾದಿಯನ್ನು ಕರೆಸಿ ಪರಿಹಾರ ಕಂಡುಕೊಳ್ಳುತ್ತಾನೆ.ಪ್ರೇಕ್ಷಕರನ್ನು ಹೆದರಿಸುವ ಉದ್ದೇಶದಿಂದ ಹೆಣೆಯಲಾದ ಚಿತ್ರ ವಿಚಿತ್ರ ಘಟನೆಗಳು ಸಾಕಷ್ಟಿವೆ. ಆದರೆ ಮೊದಲಾರ್ಧದಲ್ಲಿನ ಅಂಥ ಘಟನೆಗಳಿಗೆ ಗಂಭೀರ ಸ್ವರೂಪವೇನೂ ಇಲ್ಲ. ಅದರಿಂದಾಗಿ ನೋಡುವವರು ನಕ್ಕೂ ನಕ್ಕೂ ಸುಸ್ತಾಗುತ್ತಾರೆ.ದ್ವಿತೀಯಾರ್ಧದಲ್ಲಿ ನಿಜವಾದ ದೆವ್ವ ಕಾಣಿಸಿಕೊಂಡ ಬಳಿಕವಷ್ಟೇ ಕಥೆ ರಂಗೇರುತ್ತದೆ. ಪಿಶಾಚಿ ಪ್ರಕರಣಕ್ಕೆ ಏನಾದರೂ ವೈಜ್ಞಾನಿಕ ಹಿನ್ನೆಲೆ ಇರಬಹುದು ಎಂಬ ಪ್ರೇಕ್ಷಕನ ನಂಬಿಕೆಯನ್ನು ಸುಳ್ಳಾಗಿಸುವ ನಿರ್ದೇಶಕ ನಾಗರಾಜ ಕಂದಗಲ್, ಮಂತ್ರವಾದಿಯಿಂದ ಪರಿಹಾರ ಕೊಡಿಸಿ ಎಲ್ಲವನ್ನೂ ‘ಶುಭಂ’ ಮಾಡಿಬಿಡುತ್ತಾರೆ. ಹಳೆಯ ಪರಿಧಿಯನ್ನು ದಾಟಿ ಹೋಗುವ ಪ್ರಯತ್ನವನ್ನೇ ನಿರ್ದೇಶಕರು ಮಾಡಿಲ್ಲ.ನಾಯಕ, ನಾಯಕಿ ಸೇರಿದಂತೆ ಯಾವುದೇ ಕಲಾವಿದರ ಅಭಿನಯ ಹೇಳಿಕೊಳ್ಳುವಂತಿಲ್ಲ. ದೆವ್ವದ ಭಯಾನಕ ಮುಖ ನೋಡಿದರೂ ಹೆದರದ ಪ್ರೇಕ್ಷಕನನ್ನು, ದಿಢೀರೆಂದು ಸದ್ದುಗಳ ಮೂಲಕ ಬೆಚ್ಚಿ ಬೀಳಿಸುವ ಸಂಗೀತ ನಿರ್ದೇಶಕ ಗೌತಮ್ ಶ್ರೀವತ್ಸ ಸಿನಿಮಾದ ಹೀರೊ. ಇದಕ್ಕೆ ಪೂರಕವಾಗಿ ರಮೇಶ್ ಛೆಬ್ಬಿನಾಡ ಕ್ಯಾಮೆರಾ ಕೈಚಳಕ ಕೂಡ ಕೆಲಸ ಮಾಡಿದೆ.‘ಶ್... ಎಚ್ಚರಿಕೆ’ ಸಿನಿಮಾದಲ್ಲಿ ಅತೃಪ್ತ ಆತ್ಮಗಳು ನಾಯಕನ ಕುಟುಂಬಕ್ಕೆ ಕೊಡುವ ಕಾಟಕ್ಕೆ ಹೋಲಿಸಿದಾಗ, ಅವು ನಡೆಸುವ ಕುಚೇಷ್ಟೆಯೇ ಹೆಚ್ಚೆಚ್ಚು ಖುಷಿ ಕೊಡುತ್ತದೆ. ಹೀಗಾಗಿ, ಹಾರರ್ ಸಿನಿಮಾಗಳನ್ನು ನೋಡಬಯಸುವವರಿಗೆ ಈ ಚಿತ್ರ ಸಾಧಾರಣ ಗುಣಮಟ್ಟದ ಪ್ಯಾಕೇಜ್, ಅಷ್ಟೇ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry