ಸದ್ದಿಲ್ಲದೆ ಸಾಗಿದೆ ವನ್ಯಜೀವಿಗಳ ಕಳ್ಳ ಬೇಟೆ

7

ಸದ್ದಿಲ್ಲದೆ ಸಾಗಿದೆ ವನ್ಯಜೀವಿಗಳ ಕಳ್ಳ ಬೇಟೆ

Published:
Updated:

ನಾಗರಿಕತೆ ಬೆಳೆದಂತೆ ಲೋಹಗಳ ಆವಿಷ್ಕಾರವಾಯಿತು. ಲೋಹಗಳಿಂದ ಆಯುಧಗಳ ತಯಾರಿಕೆ ಪ್ರಾರಂಭವಾಯಿತು. ಅವನ್ನು ಬಳಸಿ ಪ್ರಾಣಿಗಳನ್ನು ಬೇಟೆಯಾಡಲು ಮಾನವ ಆರಂಭಿಸಿದ. ನಮ್ಮ ಧಾರ್ಮಿಕ ನಂಬಿಕೆಗಳೂ ಬೇಟೆಗೆ ಪ್ರೇರಣೆ ನೀಡಿವೆ. ಮೈಸೂರು ಸಮೀಪದ ಉದ್ದೂರಿನಲ್ಲಿ ಇಂತಹ ಧಾರ್ಮಿಕ ಆಚರಣೆ ನಡೆಯುತ್ತಿತ್ತು. ಪ್ರತಿ ವರ್ಷ ಸಂಕ್ರಾಂತಿ ದಿನ ಊರ ಜನ ಕಾಡಿಗೆ ಹೋಗಿ ನರಿಗಳನ್ನು ಬೇಟೆಯಾಡಿ ನಂತರ ಊರ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಿದ್ದರು. ಅದು ಆ ಊರಿನ ಜನರ ಧಾರ್ಮಿಕ ನಂಬಿಕೆ ಮತ್ತು ಆಚರಣೆಯಾಗಿತ್ತು. ಧಾರ್ಮಿಕ ಆಚರಣೆಯ ಜೊತೆಗೆ ಜನರ ಮೌಢ್ಯತೆ ಮತ್ತು ಅನಕ್ಷರತೆಯೂ ಬೇಟೆಗೆ ಕಾರಣವಾಗಿದೆ. ಪ್ರಾಣಿಗಳ ಹೃದಯದಲ್ಲಿರುವ ರಕ್ತವನ್ನು ಕುಡಿದರೆ ಧೈರ್ಯ ಮತ್ತು ಶಕ್ತಿ ಹೆಚ್ಚಾಗುತ್ತದೆ ಎನ್ನುವ ಮೌಢ್ಯದಿಂದ ಅವುಗಳನ್ನು ಬೇಟೆಯಾಡುತ್ತಿದ್ದರು.ಬಂದೂಕುಗಳನ್ನು ಬಳಸಿ ಬೇಟೆಯಾಡುವ ಪದ್ಧತಿ ಆರಂಭವಾದದ್ದು ಬ್ರಿಟಿಷರ ಕಾಲದಲ್ಲಿ. ಬಂದೂಕು ಬಳಸಿ ಛತ್ತೀಸಗಢದ ಸರ್‌ಗುಜದ ರಾಜ ರಾಮಾನುಜ ಸರಣ್ ಸಿಂಘದೇವ್ ತಮ್ಮ ಜೀವಿತಾವಧಿಯಲ್ಲಿ 1100 ಹುಲಿಗಳು ಹಾಗೂ 2000 ಚಿರತೆಗಳನ್ನು ಬೇಟೆಯಾಡಿದ್ದರೆಂಬ ಮಾಹಿತಿ ಇದೆ. ಮೀನುಗಳನ್ನು ಬೇಟೆಯಾಡಲು ನೀರಿನಲ್ಲಿ ಸಿಡಿಮದ್ದು ಸಿಡಿಸುವುದು, ಹಂದಿಗಳನ್ನು ಬೇಟೆಯಾಡಲು ಸಿಡಿಮದ್ದಿಗೆ ಕುರಿಯ ಕರುಳನ್ನು ಸುತ್ತಿ ಅವು ತಿರುಗಾಡುವ ಜಾಗದಲ್ಲಿ ಇಡುತ್ತಾರೆ. ಹಂದಿ ಅದನ್ನು ಕಚ್ಚಿ ಅಗಿದ ತಕ್ಷಣ ಸಿಡಿಮದ್ದು ಸಿಡಿದು ಸಾಯುತ್ತದೆ. ಇದು ಕಾಡುಹಂದಿಯನ್ನು ಬೇಟೆಯಾಡುವ ಕ್ರೂರ ಪದ್ಧತಿ. ಹಣದ ಆಸೆಗಾಗಿ ಹುಲಿ, ಚಿರತೆ, ಆನೆ, ಜಿಂಕೆಗಳಂತಹ ಪ್ರಾಣಿಗಳನ್ನು ಕೊಂದು ಅವುಗಳ ಚರ್ಮ, ಉಗುರು, ಮೂಳೆಗಳ ಮತ್ತು ಕೊಂಬುಗಳನ್ನು ಮಾರಾಟ ಮಾಡುವುದು ಎಲ್ಲರಿಗೂ ತಿಳಿದಿರುವ ವಿಚಾರ.ಬಂದೂಕುಗಳನ್ನು ಬಳಸಿ ಬೇಟೆಯಾಡುವುದರಿಂದ ಅದು ಹೊಮ್ಮಿಸುವ ಶಬ್ದದಿಂದ ತಮಗೆ ಅಪಾಯವಿದೆ ಎಂದು ತಿಳಿದ ಬೇಟೆಗಾರರು ನಿಶ್ಯಬ್ದ ವಿಧಾನಗಳನ್ನು ಅನುಸರಿಸಲು ಪ್ರಾರಂಭಿಸಿದರು. ಹುಲಿಗಳು ಓಡಾಡುವ ಹಾದಿಯಲ್ಲಿ ಜಾಟ್ರಾಪ್ (ತಂತಿಗಳಿಂದ ಮಾಡಿದ ಉರುಳು)ಗಳನ್ನು ಬಳಸುವುದು, ಸತ್ತ ದನದ ದೇಹಕ್ಕೆ ವಿಷ ಸೇರಿಸಿ ಅವನ್ನು ತಿನ್ನುವ ಪ್ರಾಣಿಗಳನ್ನು ಕೊಲ್ಲುವುದು ಇತ್ಯಾದಿ ಸದ್ದಿಲ್ಲದ ಬೇಟೆ ವಿಧಾನಗಳು.ಮೊಲಗಳಂತಹ ಪ್ರಾಣಿಗಳನ್ನು ಬೇಟೆಯಾಡಲು ಸಣ್ಣ ತಂತಿಗಳಿಂದ ಮಾಡಿದ ಹಲವಾರು ಉರುಳುಗಳನ್ನು ಒಂದರ ಪಕ್ಕದಲ್ಲಿ ಮತ್ತೊಂದು ಬರುವಂತೆ ಸಾಲಾಗಿ ಕಟ್ಟಿ ಕಾಡಿನ ದಾರಿಯಲ್ಲಿ ಇಟ್ಟು ಬೇಟೆಯಾಡುತ್ತಾರೆ. ಓಡುವ ಮೊಲಕ್ಕೆ ಬ್ಯಾಟರಿ ಬೆಳಕು ಬಿಟ್ಟು ಅದು ಚಲಿಸದೆ ಒಂದೇ ಕಡೆ ಕೂತಾಗ ಕೋಲುಗಳಿಂದ ಹೊಡೆದು ಬೇಟೆಯಾಡುವುದು ಮತ್ತೊಂದು ವಿಧಾನ. ನಾನು ಚಿಕ್ಕವನಿದ್ದಾಗ ನಡೆದ ಒಂದು ಘಟನೆ ಹೀಗಿದೆ.ಗುಂಡ್ಲುಪೇಟೆಯಿಂದ ತಾಲ್ಲೂಕಿನ ಬೀರಂಬಾಡಿಗೆ ವ್ಯಾಪಾರಕ್ಕಾಗಿ ಹೋಗುವ ಕೆಲವರು ಅಲ್ಲಿಂದ ಒಣಗಿದ ಕಡವೆ ಮಾಂಸವನ್ನು ತಂದು ಗುಂಡ್ಲುಪೇಟೆಯ ರಸ್ತೆ ಬದಿಯಲ್ಲಿ ಹೆಚ್ಚಿನ ಬೆಲೆಗೆ ಮಾರುತ್ತಿದ್ದರು. ಹಾಗೆಯೇ ಗುಂಡ್ಲುಪೇಟೆಯ ಕೆಲವರು ನಾಡ ಬಂದೂಕಿನಿಂದ ಗೋಪಾಲಸ್ವಾಮಿ ಬೆಟ್ಟದಲ್ಲಿ ಕಡವೆಯನ್ನು ಕೊಂದು ಅದರ ಮಾಂಸ ಮುಗಿಯುವವರೆಗೂ ಕಾಡಿನಲ್ಲೇ ಬಿಡಾರ ಹೂಡಿ ನಂತರ ಹಿಂದಕ್ಕೆ ಮರಳಿ ಜನರ ಬಳಿ ಅದನ್ನು ಹೆಮ್ಮೆಯಿಂದ ಹೇಳುತ್ತಿದ್ದದ್ದು ನೆನಪಿದೆ.ಬಂಡೀಪುರದ (ಮದ್ದೂರಿನ) ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೇರಳದ ನಾಲ್ವರು ಒಂದು ಜಿಂಕೆಯನ್ನು ಬಂದೂಕಿನಿಂದ ಕೊಂದು ಅದರ ತಲೆ, ಕಾಲುಗಳನ್ನು ತುಂಡರಿಸಿ ಅಲ್ಲೇ ಬಿಸಾಡಿ, ದೇಹ ಮಾತ್ರವನ್ನು ಕಾರಿನ ಡಿಕ್ಕಿಯಲ್ಲಿ ಹಾಕಿಕೊಂಡು ಕೇರಳದ ಸುಲ್ತಾನ್ ಬತೇರಿಗೆ ಸಾಗಿಸಿದ್ದರು. ಮಾಂಸವನ್ನು ಹಂಚಿಕೊಳ್ಳುವಾಗ ಅಲ್ಲಿನ ಅರಣ್ಯಾಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದರು. ವಿಚಾರಣೆ ವೇಳೆ ಮದ್ದೂರಿನ ಸಮೀಪ ಬೇಟೆಯಾಡಿರುವುದಾಗಿ ಒಪ್ಪಿಕೊಂಡಿದ್ದರು.ಹೀಗೆ ಹಲವಾರು ವಿಧಾನಗಳಿಂದ ಮೋಜಿಗಾಗಿ, ಮಾಂಸಕ್ಕಾಗಿ ಬೇಟೆಯಾಡುವವರು ಒಂದೆಡೆಯಾದರೆ, ಹಣದಾಸೆಗಾಗಿ ಬೇಟೆಯಾಡುವವರ ದೊಡ್ಡ ಜಾಲವೇ ಇದೆ. 1927ರಲ್ಲಿ ಭಾರತದಲ್ಲಿ ಬೇಟೆಯನ್ನು ಕಾನೂನುಬಾಹಿರ ಕೃತ್ಯವೆಂದು ಘೋಷಿಸಲಾಯಿತು. ಆದರೂ ಇಂದಿಗೂ ಕಳ್ಳ ಬೇಟೆ ನಡೆಯುತ್ತಲೇ ಇದೆ. 1972 ರ ವನ್ಯಜೀವಿ ಸಂರಕ್ಷಣಾ ಕಾಯಿದೆ ಮತ್ತು ಅರಣ್ಯ ಕಾಯಿದೆಗಳನ್ನು ಕಟ್ಟುನಿಟ್ಟಾಗಿ ಪಾಲಿಸದೇ ಇರುವುದು ಇದಕ್ಕೆ ಮುಖ್ಯ ಕಾರಣ. ಅರಣ್ಯ ಇಲಾಖೆಯಲ್ಲಿ ಕೆಳ ಹಂತದ ನೌಕರರ ಕೊರತೆ ಇರುವುದೂ ಕಳ್ಳಬೇಟೆಗೆ ಕಾರಣವೆನ್ನಬಹುದು. ಏಕೆಂದರೆ ಕೆಳ ಹಂತದ ನೌಕರರು ಕಾಲ್ನಡಿಗೆಯಲ್ಲಿ  ಕಾಡು ಸುತ್ತುವುದರಿಂದ ಬೇಟೆಗೆ ಅವಕಾಶವಾಗದಂತೆ ಎಚ್ಚರವಹಿಸಲು ಸಾಧ್ಯವಿದೆ. ಹಾಗೆಯೇ ಇತ್ತೀಚೆಗೆ ಕಾಲ್ದಳದ ಗಸ್ತು ಕಡಿಮೆಯಾಗಿರುವುದು ಕೂಡ ಕಳ್ಳಬೇಟೆ ಹೆಚ್ಚಳಕ್ಕೆ ಕಾರಣವಾಗಿದೆ.ಸಸ್ಯಾಹಾರಿ ಪ್ರಾಣಿಗಳನ್ನು ಬೇಟೆಯಾಡುವುದರಿಂದ ಮಾಂಸಾಹಾರಿ ಪ್ರಾಣಿಗಳ ಮೇಲೆ ಭೀಕರ ಪರಿಣಾಮ ಉಂಟಾಗುತ್ತದೆ. ಏಕೆಂದರೆ ಮಾಂಸಾಹಾರಿ ಪ್ರಾಣಿಗಳು ಸಸ್ಯಾಹಾರಿ ಪ್ರಾಣಿಗಳ ಮೇಲೆ ಅವಲಂಬಿತವಾಗಿವೆ. ಸಸ್ಯಾಹಾರಿ ಪ್ರಾಣಿಗಳ ನಾಶ ಮಾಂಸಾಹಾರಿ ಪ್ರಾಣಿಗಳ ನಾಶಕ್ಕೂ ಕಾರಣವಾಗುತ್ತದೆ. ಇದರಿಂದ ಕಾಡಿನ ಜೀವಿಗಳ ಜೀವನ ಚಕ್ರದ ಸಮತೋಲನದ ಮೇಲೆ ವ್ಯತಿರಿಕ್ತ ಪರಿಣಾಮ ಆಗುತ್ತದೆ.ಕಳ್ಳಬೇಟೆಯನ್ನು ತಡೆಯಲು ವನ್ಯಜೀವಿ ಸಂರಕ್ಷಣಾ ಕಾಯಿದೆ ಮತ್ತು ಅರಣ್ಯ ಕಾಯಿದೆಗಳನ್ನು ಸೂಕ್ತವಾಗಿ ಬಳಸುವ ಅವಶ್ಯಕತೆ ಇದೆ. ಅರಣ್ಯ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ಮುಖ್ಯವಾಗಿ ಕೆಳ ಹಂತದ ನೌಕರರನ್ನು ಭರ್ತಿ ಮಾಡಿಕೊಳ್ಳುವುದರ ಜೊತೆಗೆ ಅವರಿಗೆ ಸಕಾಲದಲ್ಲಿ ಸಂಬಳ, ಸಮವಸ್ತ್ರ, ಪಾದರಕ್ಷೆ ಮತ್ತು ನಿಸ್ತಂತು ಉಪಕರಣಗಳನ್ನು ಒದಗಿಸುವುದರಿಂದ ಕಳ್ಳಬೇಟೆ ತಡೆಯಬಹುದು.

ಕಳ್ಳಬೇಟೆ ಹೀಗೆಯೇ ಮುಂದುವರಿದರೆ ಅಪರೂಪದ ವನ್ಯಜೀವಿಗಳನ್ನು ಕಳೆದುಕೊಳ್ಳುವುದರ ಜೊತೆಗೆ ಪ್ರಕೃತಿಯಲ್ಲಿ ವೈಪರೀತ್ಯ ಉಂಟಾಗುವ ಸಾಧ್ಯತೆ ಇದೆ.ಪ್ರತಿಯೊಬ್ಬರೂ ಸಹ ವನ್ಯಜೀವಿ ಸಂರಕ್ಷಣೆಯಲ್ಲಿ ತಮಗೆ ಸಾಧ್ಯವಾದ ಮಟ್ಟಿಗೆ ಕಾರ್ಯೋನ್ಮುಖರಾಗಬೇಕು. ಎಲ್ಲರೂ ಕಾಡಿಗೆ ಬಂದು ಸಂರಕ್ಷಣಾ ಕಾರ್ಯದಲ್ಲಿ ತೊಡಗಬೇಕೆಂದಿಲ್ಲ. ಬೇಟೆಗೆ ಹೋಗುವವರ ಮತ್ತು ಅರಣ್ಯ ನಾಶ ಮಾಡುವವರ ಮಾಹಿತಿ ಇದ್ದರೆ ಅದನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸುವ ಮೂಲಕ ವನ್ಯಜೀವಿ ಸಂರಕ್ಷಣೆಗೆ ನೆರವಾಗಬಹುದು. ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry