ಸೋಮವಾರ, ನವೆಂಬರ್ 18, 2019
23 °C

ಸದ್ದಿಲ್ಲದೆ ಸಿಪಿಎಂ ಚುನಾವಣೆ ಪ್ರಚಾರ

Published:
Updated:

ಚಿಕ್ಕಬಳ್ಳಾಪುರ: ಕಾಂಗ್ರೆಸ್ ಕೋಟೆಯಾಗಿರುವ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರವನ್ನು ಮತ್ತೆ ಕೆಂಪು ಕೋಟೆಯಾಗಿಸಬೇಕು ಎಂಬ ಗುರಿಯಿಟ್ಟುಕೊಂಡಿರುವ ಸಿಪಿಎಂ ಸದ್ದಿಲ್ಲದೆ ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲ್ಲೂಕುಗಳಲ್ಲಿ ಪ್ರಚಾರ ನಡೆಸಿದೆ.ಪಟ್ಟಣ ಪ್ರದೇಶ ಮಾತ್ರವಲ್ಲ, ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರನ್ನು ಸೆಳೆಯಲು ಶತಪ್ರಯತ್ನ ನಡೆಸಿರುವ ಸಿಪಿಎಂ ಚುನಾವಣೆ ಪ್ರಚಾರ ಕಾರ್ಯವನ್ನು ತನ್ನದೇ ಆದ ರೀತಿಯಲ್ಲಿ ಕೈಗೊಂಡಿದೆ. ಬಾಗೇಪಲ್ಲಿ ಕ್ಷೇತ್ರದಿಂದ ಸಿಪಿಎಂ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಜಿ.ವಿ.ಶ್ರೀರಾಮರೆಡ್ಡಿ ಪರ ಮತ ಯಾಚಿಸುತ್ತಿರುವ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಈಗಾಗಲೇ ಹಲವು ಸುತ್ತಿನ ಪ್ರಚಾರ ಕಾರ್ಯ ಪೂರ್ಣಗೊಳಿಸಿದ್ದಾರೆ.ಪ್ರಮುಖ ಗ್ರಾಮಗಳಲ್ಲಿ ಮತ್ತು ಹೋಬಳಿಗಳಲ್ಲಿ ಸಿಪಿಎಂ ಬಹಿರಂಗ ಸಭೆಗಳನ್ನು ನಡೆಯುತ್ತಿದ್ದು, ಆಯಾ ಗ್ರಾಮೀಣ ಪ್ರದೇಶದ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು, ಗ್ರಾಮಸ್ಥರು ಕೂಡ ಭಾಗವಹಿಸು ತ್ತಿದ್ದಾರೆ. ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಗೊಳಿಸುವುದು, ಹಿಂದುಳಿದ ಪ್ರದೇಶಗಳ ಪಟ್ಟಿಗೆ ಸೇರ್ಪಡೆಯಾಗಿರುವ ಬಾಗೇಪಲ್ಲಿ ಕ್ಷೇತ್ರವನ್ನು ಅಭಿವೃದ್ಧಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡುತ್ತಿರುವ ಪಕ್ಷದ ಅಭ್ಯರ್ಥಿ ಜಿ.ವಿ.ಶ್ರೀರಾಮರೆಡ್ಡಿಯವರು ಗ್ರಾಮೀಣ ಪ್ರದೇಶದ ಜನರೊಂದಿಗೆ ಸಂವಾದ ನಡೆಸುವ ಜೊತೆ ಸಮಸ್ಯೆಗಳನ್ನೂ ಆಲಿಸುತ್ತಿದ್ದಾರೆ.`2008ರ ವಿಧಾನಸಭೆ ಚುನಾವಣೆಯಲ್ಲಿ ಮೊದಲು ನಾವು ಗೆದ್ದ ಫಲಿತಾಂಶ ಹೊರಬಂದರೆ, ನಂತರ ಸೋತೆವು ಎಂಬ ಫಲಿತಾಂಶವೂ ಹೊರಬಿತ್ತು. ಕೇವಲ 938 ಮತಗಳ ಅಂತರದಿಂದ ಸೋಲು ಅನುಭವಿಸಬೇಕಾಯಿತು. ಆದರೆ 2013ರ ಚುನಾವಣೆಯಲ್ಲಿ ಹಿಂದಿನ ಫಲಿತಾಂಶವು ಪುನರಾವರ್ತನೆ ಆಗಬಾರದೆಂದೇ ನಾವು ನಾಲ್ಕು ವರ್ಷಗಳ ಹಿಂದಿನಿಂದಲೇ ಜನರ ಪರ ಹೋರಾಟ ಆರಂಭಿಸಿದೆವು. ಕ್ಷೇತ್ರದ ಅಭಿವೃದ್ಧಿ ಮತ್ತು ಜನರ ಸಮಸ್ಯೆಗಾಗಿ ನಿರಂತರ ಚಳವಳಿ ನಡೆಸಿದ ನಾವು ಚಿಕ್ಕಬಳ್ಳಾಪುರದಲ್ಲಿ ಪಕ್ಷದ ರಾಜ್ಯ ಸಮ್ಮೇಳನವನ್ನು ಮೂರು ದಿನಗಳ ಕಾಲ ನಡೆಸಿದೆವು' ಎಂದು ಸಿಪಿಎಂ ಜಿಲ್ಲಾ ಘಟಕದ ಕಾರ್ಯದರ್ಶಿ ಎಂ.ಪಿ.ಮುನಿವೆಂಕಟಪ್ಪ `ಪ್ರಜಾವಾಣಿ'ಗೆ ತಿಳಿಸಿದರು.

`ಗ್ರಾಮೀಣ ಪ್ರದೇಶದಲ್ಲಿ ನಮ್ಮ ಪಕ್ಷದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪಕ್ಷವು ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಹೋರಾಟಗಳನ್ನು ಗಮನಿಸುತ್ತ ಬಂದಿರುವ ಜನರು ನಮಗೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಇತರ ಎಲ್ಲ ವಿಧಾನಸಭಾ ಕ್ಷೇತ್ರಗಳಿಗಿಂತ ಭಿನ್ನವಾದ ಭೌಗೋಳಿಕ ಮತ್ತು ಜನಜೀವನ ಶೈಲಿ ಹೊಂದಿರುವ ಬಾಗೇಪಲ್ಲಿ ಮತ್ತು ಗುಡಿಬಂಡೆಯಲ್ಲಿ ಹಲವಾರು ಕುಗ್ರಾಮಗಳು ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿಭಾಗದಲ್ಲಿವೆ. ಹಲವಾರು ಗ್ರಾಮಗಳು ಮೂಲಸೌಕರ್ಯಗಳಿಂದ ವಂಚಿತವಾಗಿದ್ದು, ಅಲ್ಲಿನ ಗ್ರಾಮಸ್ಥರ ಸಮಸ್ಯೆಗಳನ್ನು ಅರಿತುಕೊಳ್ಳಲು ಪ್ರಯತ್ನಿಸಲಾಗುತ್ತಿದೆ' ಎಂದು ಅವರು ತಿಳಿಸಿದರು.

ಪ್ರತಿಕ್ರಿಯಿಸಿ (+)