ಗುರುವಾರ , ಆಗಸ್ಟ್ 22, 2019
23 °C

ಸದ್ಭಾವನೆಯ `ಅಮ್ಜದ್'

Published:
Updated:

ತಾಯಿ- ಮಗು ನಡುವಿನ ಬಾಂಧವ್ಯ ವರ್ಣನೆಗೆ ನಿಲುಕದ್ದು. ಈ ಅನುಬಂಧವನ್ನು ಸಂಗೀತದೊಂದಿಗೆ ಬೆಸೆಯುತ್ತಾ ಹೊಸ ರಾಗಗಳನ್ನು, ಪ್ರಯೋಗಗಳನ್ನು ಮಾಡುತ್ತಾ ಬಂದು ವಿಶ್ವವಿಖ್ಯಾತರಾದವರು ಸರೋದ್ ವಾದಕ ಉಸ್ತಾದ್ ಅಮ್ಜದ್ ಅಲಿ ಖಾನ್.`ಹೊಸ ರಾಗ ಎಂದರೆ ಅದು ಆಗ ತಾನೇ ಹುಟ್ಟಿದ ಮಗುವಿಗೆ ಸಮ. ನಾನು ಸೃಷ್ಟಿಸುವ ರಾಗವನ್ನು ನನ್ನ ಸ್ವಂತ ಮಗುವಿನಂತೆ ಕಾಣುತ್ತೇನೆ. ಅದನ್ನು ಅಷ್ಟೇ ಪ್ರೀತಿಸುತ್ತೇನೆ' ಎನ್ನುವ ಅವರಿಗೆ ರಾಜೀವ್‌ಗಾಂಧಿ ರಾಷ್ಟ್ರೀಯ ಸದ್ಭಾವನಾ ಶಾಂತಿ ಪ್ರಶಸ್ತಿ ಒಲಿದಿದೆ.ಕಳೆದ 50 ವರ್ಷಗಳಿಂದ ಸಂಗೀತ ತಪಸ್ಸು ಎಂದು ಭಾವಿಸಿದವರು ಈ ಅಪ್ರತಿಮ ಸರೋದ್ ವಾದಕ. ಸಂಗೀತದ ಒಳ ಹೊರಗುಗಳನ್ನು, ವಿವಿಧ ಆಯಾಮಗಳನ್ನು, ಭಾವನಾತ್ಮಕ ಸಂವೇದನೆಗಳನ್ನು ಅಭಿವ್ಯಕ್ತಿಸಲು ಅವರು ಕಂಡುಕೊಂಡ ಮಾಧ್ಯಮ ಸರೋದ್ ಮಾತ್ರವಲ್ಲ, ಅಂಕಣ ಬರಹ ಕೂಡ.

ಸರೋದ್‌ನಲ್ಲಿ ಪ್ರಯೋಗಶೀಲ ಗುಣ ಮೈಗೂಡಿಸಿಕೊಂಡ ಅಮ್ಜದ್, `ಮನೆ'ಗಳೇ ಇಲ್ಲದ ಈ ತಂತಿ ವಾದ್ಯದಲ್ಲಿ ಮಗುವಿಗೆ ಜೋಗುಳ ಹಾಡುವ ಹಾಗೆಯೂ ನಾದ ತರುತ್ತಾರೆ; ಪ್ರೇಯಸಿಯ ಪಿಸುಮಾತು ಕೂಡ ಇವರ ತಂತಿಯ ಮೀಟಿನಲ್ಲಿ ಪಡಿಮೂಡುತ್ತದೆ.ಅಮ್ಜದ್ ಅಲಿ ಖಾನ್ ಸರೋದ್ ಕಛೇರಿ ಎಂದರೆ ಅದೊಂದು ಅದ್ಭುತ ರಸಪಾಕ. ಸರೋದ್ ವಾದ್ಯವನ್ನು ಕೈಗೆ ತೆಗೆದುಕೊಂಡು ಉಗುರಿನಿಂದ ಮೀಟು ಆರಂಭಿಸಿದರೆ ಆ ಜೋಡ್ ಜಾಲ್ ಆಲಾಪ ಆರಂಭದಲ್ಲೇ ಸಂಗೀತ ಲೋಕದಲ್ಲಿ ಕಟ್ಟಿಹಾಕುತ್ತದೆ. ವಿಲಂಬಿತ್ ತೀನ್ ತಾಲ್‌ನಲ್ಲಿ `ಗತ್' ಪ್ರಸ್ತುತಪಡಿಸುವ ರೀತಿಯಂತೂ ಇನ್ನೂ ಅದ್ಭುತ. ವಿಲಂಬಿತ್ ನಂತರ ದೃತ್‌ಗೆ ಬರುವಾಗ ಮೀಟುಗಳು ಪಡೆದುಕೊಳ್ಳುವ ವೇಗ ಮತ್ತು ಆ ನಾದ ನಿಜಕ್ಕೂ ಕೇಳುಗರ ಹೃದಯ ತಟ್ಟುತ್ತದೆ. ದೃತ್ ತೀನ್‌ತಾಲ್‌ನಲ್ಲಿ ನುಡಿಸುವ `ಗತ್' ಕೂಡ ಶಬ್ದಗಳಲ್ಲಿ ವರ್ಣನೆಗೂ ನಿಲುಕದ್ದು.

 

ಸರೋದ್‌ನಲ್ಲಿ ಭಾವೈಕ್ಯ ನಾದ

ರಾಷ್ಟ್ರೀಯ ಭಾವೈಕ್ಯ ಮತ್ತು ಕೋಮುಸೌಹಾರ್ದಗಳ ಅನೇಕ ವೇದಿಕೆಗಳಲ್ಲಿ ಅಮ್ಜದ್ ಸರೋದ್ ನಾದ ಅನುರಣಿಸಿದೆ. ಭಾವೈಕ್ಯ, ಕೋಮು ಸೌಹಾರ್ದಗಳನ್ನು ಬಿಂಬಿಸುವ ಅನೇಕ ರಾಗಗಳು ಅವರ ಸರೋದ್‌ನಲ್ಲಿ ನಾದ ತರಂಗ ಎಬ್ಬಿಸಿ ರಸವತ್ತಾಗಿ ಅರಳಿವೆ. ಸಂಗೀತದ ಈ ವಿಭಿನ್ನ ಪ್ರಯೋಗಗಳಿಂದಾಗಿ ಅಮ್ಜದ್ ಖ್ಯಾತರಾದರು. ಹಿಂದೂಸ್ತಾನಿ ರಾಗಗಳು ಮಾತ್ರವಲ್ಲದೆ ಅಸ್ಸಾಮಿ ಜನಪದ ಗೀತೆಯನ್ನೂ ಅಪೂರ್ವವಾಗಿ ನುಡಿಸುತ್ತಾರೆ ಅಮ್ಜದ್.

ಪ್ರಮುಖ ಪ್ರಶಸ್ತಿಗಳು

ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ 1989

ಪದ್ಮಶ್ರೀ 1975

ಪದ್ಮಭೂಷಣ 1991

ಪದ್ಮವಿಭೂಷಣ 2001

ಜಪಾನ್ ಫುಕೋವ ಏಷ್ಯನ್ ಕಲ್ಚರ್ ಪ್ರಶಸ್ತಿ 2004

ಮಲ್ಲಿಕಾರ್ಜುನ ಮನ್ಸೂರ ಸ್ಮಾರಕ ಪ್ರಶಸ್ತಿ 2011

ರಾಜೀವಗಾಂಧಿ ರಾಷ್ಟ್ರೀಯ ಸದ್ಭಾವನಾ ಶಾಂತಿ ಪ್ರಶಸ್ತಿ 2013.

ವಿಶ್ವವೇದಿಕೆಗಳಲ್ಲಿ ಅಮ್ಜದ್ ಲೆಕ್ಕವಿಲ್ಲದಷ್ಟು ಕಛೇರಿ ಕೊಟ್ಟಿದ್ದಾರೆ. ಎಲ್ಲವೂ ಒಂದಕ್ಕಿಂತ ಒಂದು ವಿಭಿನ್ನ. 1963ರಲ್ಲಿ ಅವರ ಮೊದಲ ವಿದೇಶ ಸಂಗೀತ ಕಛೇರಿ ನಡೆದದ್ದು ಅಮೆರಿಕದಲ್ಲಿ. ಹಾಂಕಾಂಗ್‌ನ `ಫಿಲ್ ಹಾರ್ಮೋನಿಕಾ' ಬಳಗದೊಂದಿಗೆ ವಿಶೇಷ ನಂಟು ಇಟ್ಟುಕೊಂಡಿರುವ ಅಮ್ಜದ್, ಇದೇ ವೇದಿಕೆಯಡಿಯಲ್ಲಿ ನೂರಾರು ಕೋಮು ಸೌಹಾರ್ದ ಕಾರ್ಯಕ್ರಮಗಳಲ್ಲಿ ಸರೋದ್ ನುಡಿಸಿದ್ದಾರೆ. ಸುಮಾರು ಐದು ದಶಕಗಳ ಕಾಲ ಸರೋದ್ ಸಾಮ್ರಾಜ್ಯದಲ್ಲಿ ಮೆರೆದು `ಸರೋದ್ ಎಂದರೆ ಅಮ್ಜದ್' ಎಂಬಂತಾದರು.ನ್ಯೂಜಿಲೆಂಡ್‌ನ ವೊಮಾಡ್ ಉತ್ಸವ, ಎಡಿನ್‌ಬರ್ಗ್‌ನ ವಿಶ್ವ ಸಂಗೀತ ಉತ್ಸವ, ಬ್ರಿಟನ್‌ನ ಸಮ್ಮರ್ ಆರ್ಟ್ ಫೆಸ್ಟಿವಲ್, ರೋಮ್‌ನ ಇಂಟರ್‌ನ್ಯಾಷನಲ್ ಆರ್ಟ್ ಫೆಸ್ಟಿವಲ್, ಹಾಂಕಾಂಗ್‌ನ ಆರ್ಟ್ ಫೆಸ್ಟಿವಲ್, ಅಡಿಲೈಡ್, ಫ್ರಾಂಕ್‌ಫರ್ಟ್, ವಿಯೆನ್ನಾ ಸಂಗೀತೋತ್ಸವಗಳಲ್ಲಿ ಅಮ್ಜದ್ ಅವರ ಪ್ರಯೋಗಾತ್ಮಕ ನುಡಿಸಾಣಿಕೆ ಸರೋದ್ ಇತಿಹಾಸದಲ್ಲೇ ಮೈಲುಗಲ್ಲುಗಳಾಗಿವೆ.ಅವರ ಪ್ರಯೋಗಶೀಲ ಮನಸ್ಸಿನಿಂದಾಗಿ ಹಲವು ಸುಮಧುರ ರಾಗಗಳ ಸೃಷ್ಟಿಯಾಗಿದೆ. ಇವುಗಳಲ್ಲಿ ತುಂಬ ವಿಶೇಷವಾದ ರಾಗವೆಂದರೆ `ರಾಗ್ ಬಾಪು ಕೌನ್ಸ್. ಗಾಂಧೀಜಿ ಅವರ ಮೇಲಿನ ಅತೀವ ಪ್ರೀತಿ `ಬಾಪು ಕೌನ್ಸ್' ರಾಗ ಸೃಷ್ಟಿಗೆ ಕಾರಣವಾಗಿದೆ. 1997ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 50 ವರ್ಷವಾದ ಸಂದರ್ಭದಲ್ಲಿ ಬಿಬಿಸಿ ಆಯೋಜಿಸಿದ್ದ ವಿಶ್ವಸಂಗೀತ ಸಮ್ಮೇಳನದಲ್ಲಿ ಅಮ್ಜದ್ ನುಡಿಸಿದ್ದು `ಬಾಪು ಕೌನ್ಸ್' ರಾಗವನ್ನು. ಮಕ್ಕಳಲ್ಲಿ ಸದ್ಭಾವನೆ, ಸಂಗೀತ ಸಂಸ್ಕೃತಿ ಮೂಡಿಸುವಲ್ಲಿ ಅಮ್ಜದ್ ಸದಾ ಮುಂದು. ಮಕ್ಕಳನ್ನು ಸೆಳೆಯಲೆಂದೇ ಅಮ್ಜದ್ ಮಕ್ಕಳಿಗಾಗಿ ವಿಶಿಷ್ಟ ರೀತಿಯಲ್ಲಿ ಸಂಗೀತವನ್ನು ರೂಪಿಸಿದರು. ಮಕ್ಕಳಿಗಾಗಿಯೇ `ಏಕ್ತಾ ಸೆ ಶಾಂತಿ' ಎಂಬ ಕಾರ್ಯಕ್ರಮ ರೂಪಿಸಿದರು. ಒಂದು ಆರ್ಕೆಸ್ಟ್ರಾ ಬಳಗ ನಿರ್ಮಿಸಿದರು. ಅಂಗವಿಕಲ ಮಕ್ಕಳಿಗೂ ವಿಶೇಷ ಕಾರ್ಯಕ್ರಮ ರೂಪಿಸಿ ಅದನ್ನು ವಿವಿಧ ವೇದಿಕೆಗಳನ್ನು ನುಡಿಸುತ್ತಾ ಬಂದರು.ತಂದೆಯ ಹಾದಿಯಲ್ಲಿ ಅಮಾನ್, ಅಯಾನ್:

ಅಮ್ಜದ್ ಅವರ ನಿಜವಾದ ಹೆಸರು ಮಸೂಮ್ ಅಲಿ ಖಾನ್. ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ 1945 ಅಕ್ಟೋಬರ್ 9ರಂದು ಹುಟ್ಟಿದ ಅಮ್ಜದ್ ಅವರ ತಾಯಿ ರಹತ್ ಜಹಾನ್; ತಂದೆ ಹಫೀಜ್ ಅಲಿ ಖಾನ್. ತಂದೆಯೂ ಸರೋದ್ ವಾದಕರೇ. 1976ರಲ್ಲಿ ಶುಭಲಕ್ಷ್ಮಿ ಎಂಬ ಭರತನಾಟ್ಯ ಕಲಾವಿದೆಯ ಕೈಹಿಡಿದ ಅಮ್ಜದ್ ಅವರಿಗೆ ಅಮಾನ್ ಖಾನ್ ಮತ್ತು ಅಯಾನ್ ಖಾನ್ ಎಂಬ ಇಬ್ಬರು ಮಕ್ಕಳು. ಇಬ್ಬರೂ ತಂದೆಯ ಹಾದಿಯಲ್ಲೇ ಸಾಗಿ ಬಂದಿದ್ದಾರೆ.

ಅಮ್ಜದ್‌ಗೆ ತಂದೆಯೇ ಮೊದಲ ಸರೋದ್ ಗುರು. ಆರು ವರ್ಷದ ಬಾಲಕನಿರುವಾಗಲೇ ಸರೋದ್ ನುಡಿಸಾಣಿಕೆ ಆರಂಭಿಸಿದ. ಸಣ್ಣಪುಟ್ಟ ಸಮಾರಂಭಗಳಲ್ಲಿ ಬಾಲಕನ ಸರೋದ್ ಮೀಟುಗಳು ಕೇಳುಗರಲ್ಲಿ ಸಂಚಲನ ಮೂಡಿಸಲಾರಂಭಿಸಿದವು.

ಬಹುಬೇಗ ಅಮ್ಜದ್ ಹೆಸರುವಾಸಿಯಾದರು. ಖ್ಯಾತಿ ಹೆಚ್ಚಾದಂತೆ ಪ್ರಶಸ್ತಿಗಳೂ ಒಲಿದು ಬರಲಾರಂಭಿಸಿತು. ಅಮೆರಿಕದ ಮೆಸಾಚ್ಯುಸೆಟ್‌ನಲ್ಲಿ ಏಪ್ರಿಲ್ 20ನೇ ದಿನಾಂಕವನ್ನು `ಅಮ್ಜದ್ ಅಲಿ ಖಾನ್ ದಿನ'ವನ್ನಾಗಿ ಆಚರಿಸುವುದು ಅವರ ಸಂಗೀತ ಸಾಧನೆಯ ಹೆಮ್ಮೆಗೆ ಮತ್ತೊಂದು ಗರಿ. ಯಾವುದೇ ಸಂಗೀತಗಾರನ ಹೆಸರಿನಲ್ಲಿ `ದಿನ' ಆಚರಿಸುವ ಉದಾಹರಣೆ ನಮ್ಮಲ್ಲಿ ಯಾವುದೂ ಇಲ್ಲ. ಹೀಗಾಗಿ ಅಮ್ಜದ್ ಉಳಿದ ಸಂಗೀತಗಾರರಿಗಿಂತ ವಿಭಿನ್ನವಾಗಿ ನಿಲ್ಲುತ್ತಾರೆ. 1976ರಿಂದ 1985ರವರೆಗೆ ಅಮ್ಜದ್ ಮತ್ತು ಹಿರಿಯ ಪಿಟೀಲು ವಿದ್ವಾಂಸರಾಗಿದ್ದ ಲಾಲ್‌ಗುಡಿ ಜಯರಾಮನ್ ಅವರು ಸರೋದ್-ಪಿಟೀಲು ಜುಗಲ್‌ಬಂದಿಯನ್ನು ವಿಶ್ವದ ಅನೇಕ ಪ್ರತಿಷ್ಠಿತ ವೇದಿಕೆಗಳಲ್ಲಿ ನೀಡಿದ್ದರು. ಇವರಿಬ್ಬರ ಜುಗಲ್‌ಬಂದಿ ಆಲ್ಬಂ `ನಾರ್ತ್ ಮೀಟ್ಸ್ ಸೌತ್' 1983ರಲ್ಲಿ ಹೊರಬಂದಿದ್ದು, ಎರಡೂ ಪ್ರಕಾರಗಳ ಸಂಗೀತಾಭಿಮಾನಿಗಳನ್ನು ಸೆಳೆದಿದೆ.ಈಗ ಬಂದಿರುವ ರಾಜೀವ್‌ಗಾಂಧಿ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ ಆಗಸ್ಟ್ 20ರಂದು ರಾಜೀವ್‌ಗಾಂಧಿ ಅವರ ಜನ್ಮದಿನದಂದು ನವದೆಹಲಿಯಲ್ಲಿ ಅಮ್ಜದ್ ಮುಡಿಗೇರಲಿದೆ.

-ಉಮಾ ಅನಂತ್ .

Post Comments (+)