ಶುಕ್ರವಾರ, ಮೇ 7, 2021
24 °C

ಸದ್ಭಾವನೆ ಬೆಳೆಸಿಕೊಳ್ಳಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ : ಭಾವಗೀತೆಗಳ ಗಾಯನವು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಸದ್ಭಾವನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಯಶಸ್ವಿಯಾಗುತ್ತವೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕಲ್ಪನಾ ಮಲ್ಲಿಕಾರ್ಜುನೇಗೌಡ ತಿಳಿಸಿದರು.ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಪದವಿಪೂರ್ವ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಭಾವಗೀತೆ ಗಾಯನ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕವಿಗಳು ತಮ್ಮ ಮನದಾಳದಲ್ಲಿ ಹುಟ್ಟುವ ಸದ್ಭಾವನೆಗಳ ಸಂದೇಶಗಳನ್ನು ಭಾವ ಗೀತೆಗಳ ರಚನೆಯ ಮುಖಾಂತರ ಅಭಿವ್ಯಕ್ತಿಸುತ್ತಾರೆ. ಗಾಯಕರು ವಿಶಿಷ್ಟ ರಾಗ ಸಂಯೋಜಿಸಿ, ತಮ್ಮ ಸುಮಧುರ ಕಂಠದಿಂದ ಹಾಡುವ ಮೂಲಕ ಅತ್ಯುತ್ತಮ ಭಾವನೆಗಳನ್ನು ಜನರ ಮನದಲ್ಲಿ ಬೆಳೆಸುವ ಕಾರ್ಯವನ್ನು ಮಾಡುತ್ತಾರೆ ಎಂದರು.ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ರಾಷ್ಟ್ರ ಕವಿ ಕುವೆಂಪು, ದ.ರಾ.ಬೇಂದ್ರೆ, ಜಿ.ಎಸ್.ಶಿವರುದ್ರಪ್ಪ ಮುಂತಾದ ಕವಿಗಳು ರಚಿಸಿರುವ ಭಾವಗೀತೆಗಳು ಹಲವು ತಲೆಮಾರಿನ ಜನರ ಮನಸ್ಸನ್ನು ಸೂರೆಗೊಳಿಸಿವೆ. ಅವರು ರಚಿಸಿರುವ ಭಾವಗೀತೆಗಳನ್ನು ಸ್ಪರ್ಧೆಗಳಲ್ಲಿ ಹಾಡುವ ಮೂಲಕ ವಿದ್ಯಾರ್ಥಿಗಳು ಸದ್ಭಾವನೆಗಳನ್ನು ಬೆಳೆಸಿಕೊಳ್ಳುವುದರ ಜೊತೆಗೆ ಮುಂದಿನ ತಲೆಮಾರಿಗೂ ವರ್ಗಾವಣೆ ಮಾಡುವ ಸತ್ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.ಪದವಿಪೂರ್ವ ಶಿಕ್ಷಣ ಇಲಾಖೆಯ ಪ್ರಭಾರಿ ಉಪನಿರ್ದೇಶಕ ಸಿರಾಜ್ ಉರ್ ರೆಹಮಾನ್ ಮಾತನಾಡಿ ಭಾವಗೀತೆಗಳನ್ನು ಹಾಡುವ ವಿದ್ಯಾರ್ಥಿಗಳು ಜಾಣರಾಗಿರುತ್ತಾರೆ. ಅಧ್ಯಯನದ ಏಕತಾನತೆಯನ್ನು ಮರೆಯಲು ಸಂಗೀತ ಸಂಯೋಜಿಸಿ ಭಾವಗೀತೆಗಳನ್ನು ಹಾಡುವುದರಿಂದ ಮನಸ್ಸು ಉಲ್ಲಾಸಗೊಳ್ಳುತ್ತದೆ. ಪರೀಕ್ಷೆಯ ಒತ್ತಡದಿಂದ ಹೊರಬರಲು ವಿದ್ಯಾರ್ಥಿಗಳು ಉತ್ತಮ ಸಂದೇಶಗಳನ್ನು ಹೊಂದಿರುವ ಭಾವಗೀತೆಗಳನ್ನು ಆಗಾಗ ಹಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ನಗರಸಭೆ ಉಪಾಧ್ಯಕ್ಷ ಬಿ.ಉಮೇಶ್ ಮಾತನಾಡಿ ಕನ್ನಡ ಸಾಹಿತ್ಯವನ್ನು ಉಳಿಸಿ ಬೆಳೆಸುವಲ್ಲಿ ಭಾವಗೀತೆಗಳು ಪ್ರಮುಖ ಪಾತ್ರ ವಹಿಸುತ್ತವೆ. ವಿದ್ಯಾರ್ಥಿಗಳು ಸೋಲು ಗೆಲುವುಗಳನ್ನು ಪರಿಗಣಿಸದೆ ಸ್ಪರ್ಧೆಯಲ್ಲಿ ಭಾಗವಹಿಸಿಸುವುದು ಮುಖ್ಯ.ಭಾವಗೀತೆ ಹಾಗೂ ಜನಪದ ಗೀತೆಗಳ ಸ್ಪರ್ಧೆಗಳನ್ನು ಆಯೋಜಿಸಲು ನಗರಸಭೆ ವತಿಯಿಂದ ಅನುದಾನ ಬಿಡುಗಡೆ ಮಾಡಲು ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನಿಸುವುದಾಗಿ ಭರವಸೆ ನೀಡಿದರು.ತಾ.ಪಂ. ಅಧ್ಯಕ್ಷೆ ಸುಜಾತಾ ಶಿವಲಿಂಗಯ್ಯ, ನಗರಸಭೆ ಅಧ್ಯಕ್ಷ ಸಾಬಾನ್ ಸಾಬ್, ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ.ಚಿಕ್ಕಪುಟ್ಟೇಗೌಡ, ಶಿಕ್ಷಣ ಸಂಯೋಜಕ ಮುನಿಕೆಂಪೇಗೌಡ, ಕಸಾಪ ಗೌರವ ಕಾರ್ಯದರ್ಶಿ ಪಾದ್ರಳ್ಳಿ ರಾಜು, ಸಂಚಾಲಕರುಗಳಾದ ಎಚ್.ಪಿ.ನಂಜೇಗೌಡ, ನಂ.ಶಿವಲಿಂಗಯ್ಯ, ಎಚ್.ಶಿವರಾಮಯ್ಯ, ಸಾಂಸ್ಕೃತಿ ಸಮಿತಿ ಸಂಚಾಲಕ ಸಿ.ಎ.ಶಾಂತಕುಮಾರ್ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.